ಶಿವಮೊಗ್ಗ: ದೇಶದಲ್ಲಿ ಅತೀ ದೊಡ್ಡ ಸಫಾರಿಯಾಗಿ ಗುರುತಿಸಿಕೊಂಡಿರುವ ತ್ಯಾವರೆಕೊಪ್ಪ ಹುಲಿಸಿಂಹಧಾಮಕ್ಕೆ ಹೊಸ ವನ್ಯ ಪ್ರಾಣಿ, ಸಸ್ತನಿ ಸರಿಸೃಪ, ಹಕ್ಕಿ, ಪಕ್ಷಿಗಳ ಆಗಮನವಾಗುತ್ತಿದೆ. ಸಿಂಹಧಾಮ ದೊಡ್ಡದಾಗಿ ವಿಸ್ತರಣೆಯಾದ ನಂತರ ನೀರು ಕುದುರೆಯನ್ನು(ಹಿಪೋ) ಅತಿಥಿಯಾಗಿ ತರಿಸಿಕೊಳ್ಳಬೇಕೆಂಬ ಉದ್ದೇಶವಿತ್ತು. ಅದೀಗ ಈಡೇರಿದ್ದು ಮೈಸೂರು ಮೃಗಾಲಯದಿಂದ ನೀರು ಕುದುರೆಯನ್ನು ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಇಂದು ಕಳಿಸಿಕೊಡಲಾಗಿದೆ.
ಅತಿಥಿಯಾಗಿ ಬಂದ ನೀರು ಕುದುರೆಯನ್ನು ನೈಸರ್ಗಿಕ ಕಾಡಿನಂತೆ ಸೃಷ್ಟಿಸಿರುವ ನೀರಿನ ಕೊಳದಲ್ಲಿ ಬಿಡಲಾಗಿದೆ. ಮೈಸೂರು ಮೃಗಾಲಯದಿಂದ ಬಂದ ಹಿಪೋ ಭಾರ 1200 ಕೆ.ಜಿ. ಇದ್ದು ಆರೋಗ್ಯವಾಗಿದೆ. ಸಾಮಾನ್ಯವಾಗಿ ಹಿಪೋ ಗಳು ನೀರು ಹಾಗು ಕೆಸರಿನಲ್ಲಿ ಜೀವಿಸುತ್ತವೆ. ಇವು ನೈಸರ್ಗಿಕ ಕಾಡಿನಲ್ಲಿದ್ದರೆ ಅತೀ ಹೆಚ್ಚು ಅಕ್ರಮಣಶೀಲವಾಗಿರುತ್ತವೆ. ಹಿಪೋಗಳಿದ್ದ ನೀರಿನ ಕೊಳಕ್ಕೆ ಆನೆ, ಸಿಂಹ, ಹುಲಿಯಂತ ಕ್ರೂರ ಪ್ರಾಣಿಗಳು ಬಂದರೆ ಅವುಗಳ ಮೇಲೆರಗಿ ಆಕ್ರಮಣ ಮಾಡುವಷ್ಟು ಹಿಪೋ ಬಲಿಷ್ಠವಾಗಿರುತ್ತವೆ. ಇವು ಅನಾರೋಗ್ಯಕ್ಕೆ ಒಳಗಾಗುವುದು ಅಪರೂಪದಲ್ಲಿ ಅಪರೂಪ.
ಸಸ್ಯಾಹಾರಿಯಾಗಿರುವ ಹಿಪೋ ಸುಮಾರು 40 ವರ್ಷ ಜೀವಿಸಬಲ್ಲದು. ಹುಟ್ಟಿದ ಪ್ರಾಣಿ ಸಾಯುವುದು ಕೂಡ ಅಪರೂಪ. ಕಾಡಿನಲ್ಲಿರುವ ಈ ಹಿಪೋ ಸೋಷಿಯಲೈಷನ್ ಗೆ ಒಳಪಟ್ಟಾಗ ಅದು ಸೌಮ್ಯ ಸ್ವಭಾವಕ್ಕೆ ಮರಳುತ್ತದೆ. ಏಕೆಂದರೆ ಹಿಪೋ ಹ್ಯೂಮನ್ ಟಚ್ ಗೆ ಬಂದ ನಂತರ ವೈಲ್ಡ್ ಕ್ಯಾರೆಕ್ಟರ್ ನಿಂದ ಮೈಲ್ಡ್ ಕ್ಯಾರೆಕ್ಟರ್ ಗೆ ಪರಿವರ್ತನೆಯಾಗುವುದು ಸಾಮಾನ್ಯ. ಈಗ ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಅತಿಥಿಯಾಗಿ ಆಗಮಿಸಿರುವ ಹಿಪೋಗೆ ನೈಸರ್ಗಿಕ ಕಾಡಿನಲ್ಲಿರುವಂತಯೇ ಆವರಣ ನಿರ್ಮಿಸಲಾಗಿದೆ.