ಈಡೇರುತ್ತಿದೆ ಕನಸು: ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಟೆಂಡರ್; ಬಿವೈ ರಾಘವೇಂದ್ರ | Tender for Shikaripura Ranebennur Railway Line Project will be Executed Soon Announces BY Raghavendra


ಈ ಕಾಮಗಾರಿಯ ವೆಚ್ಚದ ಮೊತ್ತ ₹ 532 ಕೋಟಿ. ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ 30 ಹಳ್ಳಿಗಳಲ್ಲಿ, 48 ಕಿಮೀ ಮಾರ್ಗದಲ್ಲಿ ರೈಲುಹಳಿಗಳನ್ನು ಅಳವಡಿಸಲಾಗುವುದು.

ಈಡೇರುತ್ತಿದೆ ಕನಸು: ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಟೆಂಡರ್; ಬಿವೈ ರಾಘವೇಂದ್ರ

ಸಂಸದ ಬಿ.ವೈ.ರಾಘವೇಂದ್ರ (ಸಂಗ್ರಹ ಚಿತ್ರ)

ಶಿವಮೊಗ್ಗ: ಬೀರೂರು-ತಾಳಗುಪ್ಪ ರೈಲ್ವೆ ಮಾರ್ಗ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿರುವುದನ್ನು ಕೇಂದ್ರ ಸರ್ಕಾರವು ಪರಿಗಣಿಸಿದ್ದು, ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಟೆಂಡರ್ ಕರೆದಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಈ ಕಾಮಗಾರಿಯ ವೆಚ್ಚದ ಮೊತ್ತ ₹ 532 ಕೋಟಿ. ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ 30 ಹಳ್ಳಿಗಳಲ್ಲಿ, 48 ಕಿಮೀ ಮಾರ್ಗದಲ್ಲಿ ರೈಲುಹಳಿಗಳನ್ನು ಅಳವಡಿಸಲಾಗುವುದು. ಭೂಸ್ವಾಧೀನಕ್ಕೆ ₹ 130 ಕೋಟಿ ವೆಚ್ಚ ಮಾಡಲಾಗುವುದು. 555 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯು ಈಗಾಗಲೇ ಶೇ 90ರಷ್ಟು ಮುಗಿದಿದೆ. ನವೆಂಬರ್ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಳ್ಳಲಿದ್ದು, ಒಟ್ಟಾರೆ ಕಾಮಗಾರಿಯನ್ನು ಪೂರ್ಣಗೊಳಿಸಲು 30 ತಿಂಗಳ ಕಾಲಮಿತಿ ವಿಧಿಸಲಾಗಿದೆ ಎಂದು ಅವರು ವಿವರಿಸಿದರು.

ಮಹತ್ವಾಕಾಂಕ್ಷಿ ಯೋಜನೆ

ಈ ರೈಲು ಮಾರ್ಗವು ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳನ್ನು ಬೆಸೆಯುತ್ತದೆ. ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಯ ಒಟ್ಟು ಅಂದಾಜು ವೆಚ್ಚ ₹ 994 ಕೋಟಿ. ಡಿಸೆಂಬರ್ 2021ರಿಂದಲೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಭೂ ಸ್ವಾಧೀನ ಪ್ರಕ್ರಿಯೆಯ ಗೊಂದಲದಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಎರಡೂ ಹಂತಗಳಲ್ಲಿ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಜಾರಿಯಾದಾಗ ಇದು ಒಟ್ಟು 90 ಕಿಮೀ ಅಂತರ ಹೊಂದಿರುತ್ತದೆ.

ಶಿಕಾರಿಪುರದ ಶಾಸಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಯೋಜನೆ ಇದು. 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಜೊತೆಗೆ ಚರ್ಚಿಸಿ ಯೋಜನೆಗೆ ಒಪ್ಪಿಗೆ ನೀಡಿದ್ದರು. ನಂತರದ ದಿನಗಳಲ್ಲಿ ಸುರೇಶ್ ಅಂಗಡಿ ಸಹ ನಿಧನರಾದರು. ಕೊವಿಡ್ ಮತ್ತು ಲಾಕ್​ಡೌನ್ ಕಾರಣಗಳಿಂದಾಗಿ ಯೋಜನೆಯ ಜಾರಿ ಪ್ರಕ್ರಿಯೆ ವಿಳಂಬವಾಯಿತು. ಭೂ ಸ್ವಾಧೀನದ ಸಮಸ್ಯೆಗಳು ಮುಂದುವರಿದವು.

ರೈಲ್ವೆ ಕಾಮಗಾರಿಗಾಗಿ ವಶಪಡಿಸಿಕೊಳ್ಳುವ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಪ್ರತಿ ಎಕರೆ ಖುಷ್ಕಿ ಜಮೀನಿಗೆ ₹ 1.5 ಕೋಟಿ, ಪ್ರತಿ ಎಕರೆ ಅಡಿಕೆ ತೋಟಕ್ಕೆ ₹ 2.5 ಕೋಟಿ ಪರಿಹಾರ, ನಿರಾಶ್ರಿತ ರೈತರ ಕುಟುಂಬಕ್ಕೆ ಸರ್ಕಾರವೇ ಉದ್ಯೋಗ ಕೊಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಎರಡೂ ಹಂತಗಳ ಯೋಜನೆಗೆ ಒಟ್ಟು 1,431.29 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಈ ಮಾರ್ಗದಲ್ಲಿ 12 ರೈಲು ನಿಲ್ದಾಣಗಳು, 22 ಮೇಜರ್ ಮತ್ತು 48 ಚಿಕ್ಕ ಸೇತುವೆಗಳು ಇರಲಿವೆ.

ಯೋಜನಾ ವರದಿಯ ಪ್ರಕಾರ ಶಿವಮೊಗ್ಗ-ರಾಣೆಬೆನ್ನೂರು ಮಾರ್ಗವನ್ನು ಎರಡು ಹಂತದಲ್ಲಿ ಜಾರಿಗೊಳಿಸಲಾಗುತ್ತದೆ. ಕೋಟೆಗಂಗೂರು-ಶಿಕಾರಿಪುರ ಸೆಕ್ಷನ್​ನಲ್ಲಿ ಮೊದಲ ಹಂತದ ಕಾಮಗಾರಿ, ಎರಡನೇ ಹಂತದಲ್ಲಿ ಶಿಕಾರಿಪುರ-ರಾಣೆಬೆನ್ನೂರು ಸೆಕ್ಷನ್ ಕಾಮಗಾರಿ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

TV9 Kannada


Leave a Reply

Your email address will not be published. Required fields are marked *