ಶಿರಸಿ: ಅಡಿಕೆ ತೋಟದಲ್ಲಿ ಕೊನೆ ಕೊಯ್ಯುವುದು ಅಂದ್ರೆ ಅದು ಸಾಹಸದ ಕೆಲಸ. ನೂರಾರು ಅಡಿ ಎತ್ತರಕ್ಕೆ ಮರ ಹತ್ತಿ ಕೊನೆ ಇಳಿಸೋದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ 13 ವರ್ಷದ ಬಾಲಕನೋರ್ವ ಅಡಿಕೆ ಮರ ಏರಿ ಕೊನೆ ಕೊಯ್ಯುತ್ತಾನೆ. ಅಷ್ಟಕ್ಕೂ ಬಾಲಕ ಈ ಸಾಹಸಕ್ಕೆ ಕೈಹಾಕಿದ್ದಾದರೂ ಏಕೆ ಅಂತೀರಾ?
ಒಂದು ಕೈಯಲ್ಲಿ ಕತ್ತಿ ಹಿಡಿದು ಮತ್ತೊಂದು ಕೈಯಲ್ಲಿ ಹಗ್ಗವನ್ನು ಹಿಡಿದು ತೋಟಕ್ಕೆ ತೆರಳುತ್ತಿರುವ ಬಾಲಕ. ಮೂವತ್ತು ಅಡಿಗೂ ಎತ್ತರದ ಮರ ಏರಿ ಅಡಕೆ ಕೊಯ್ಯುತ್ತಾ ಒಂದು ಮರದಿಂದ ಮತ್ತೊಂದು ಮರ ಏರೋ ಈ ಬಾಲಕನ ಹೆಸರು ಸಚೇತ ದಿವಸ್ಪತಿ ಹೆಗಡೆ ಅಂತ. ಯಲ್ಲಾಪುರ ತಾಲೂಕಿನ ಉಮ್ಮಚಗಿಯ ನಿವಾಸಿ. ಮಕ್ಕಳೊಂದಿಗೆ ಆಟ ಆಡಿಕೊಂಡು ಇರಬೇಕಾಗಿದ್ದ ಈ ಬಾಲಕ ತೋಟದಲ್ಲಿ ಅಡಿಕೆ ಕೊನೆ ಕೊಯ್ಯುತಿದ್ದಾನೆ. ಹೌದು.. ಕೊರೊನಾ, ಲಾಕ್ಡೌನ್ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಮಲೆನಾಡಿನಲ್ಲಿ ಅಡಿಕೆ ಸುಗ್ಗಿ ಬಂದರೂ ಕೊನೆ ಕೊಯ್ಯುವವರಿಲ್ಲದೆ ಅಡಿಕೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಹೀಗಿರುವಾಗ ತಮ್ಮ ತೋಟದಲ್ಲಿ ಲಕ್ಷಾಂತರ ರೂಪಾಯಿ ಅಡಿಕೆ ನಷ್ಟವಾಗುತ್ತಿರುವುದನ್ನು ನೋಡಿದ ಈ ಪೋರ ತಾನೇ ಸ್ವತಃ ಅಡಿಕೆ ಮರ ಏರಲು ಸಿದ್ಧವಾದ. ಇದಕ್ಕಾಗಿ ಆತನೇನೂ ತರಬೇತಿ ಪಡೆದಿಲ್ಲ. ಹಿಂದೆ ಕೊನೆ ಕೊಯ್ಯುವುದನ್ನು ನೋಡಿದ ಈತ ಅವರು ಉಪಯೋಗಿಸುವ ವಸ್ತುಗಳನ್ನು ತಾನೂ ಸಿದ್ದಪಡಿಸಿಕೊಂಡು 20 ರಿಂದ 50 ಅಡಿ ಎತ್ತರದ ಮರ ಏರಿ ಕೊನೆ ಕೊಯ್ದು ನೇಣು ಬಿಡುತ್ತಾನೆ. ಇವರ ಅಜ್ಜ ನೇಣು ಹಿಡಿದು ಅಡಿಕೆ ಕೊನೆ ಸಂಗ್ರಹಿಸುತ್ತಾರೆ. ಹೀಗೆ ಈತ ಕ್ವಿಂಟಾಲ್ ಗಟ್ಟಲೇ ಅಡಿಕೆ ಕೊಯ್ಯುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ಯಲ್ಲಾಪುರದ ಜಾಜಿ ಮನೆಯ ದಿವಸ್ಪತಿ ಹೆಗಡೆರವರಿಗೆ ಮೂರು ಎಕರೆ ಅಡಿಕೆ ತೋಟವಿದೆ. ಜನವರಿ ಕೊನೆಯ ತಿಂಗಳಲ್ಲಿ ಫಸಲು ಬಲಿತು ಕೊಯ್ಲಿಗೆ ಬರುತ್ತದೆ. ಈ ಸಂದರ್ಭದಲ್ಲಿ ಅಡಿಕೆ ಕೊಯ್ಯದಿದ್ದರೆ ಒಣಗಿ ಬಿದ್ದು ನಷ್ಟವಾಗುತ್ತದೆ. ಇನ್ನು ಅಡಿಕೆ ಮರ ಏರಿ ಅಡಿಕೆ ಕೊಯ್ಯಲು ಒಬ್ಬ ವ್ಯಕ್ತಿ 3000 ದಿನಕ್ಕೆ ಕೂಲಿ ತೆಗೆದುಕೊಳ್ಳುತ್ತಾರೆ. ದುಬಾರಿ ಕೂಲಿ ಕೊಟ್ಟರೂ ಕೊನೆ ಕೊಯ್ಯಲು ಕೆಲಸದವರು ಸಿಗುವುದಿಲ್ಲ. ಹೀಗಾಗಿ ಪ್ರತಿ ವರ್ಷ ಕೆಲಸದವರಿಗಾಗಿ ಕಾದು ನಷ್ಟ ಅನುಭವಿಸಬೇಕು.ಇನ್ನು ಕೊರೊನಾದಿಂದಾಗಿ ಕೆಲಸದವರು ಸಹ ಸಿಗದೆ ನಷ್ಟವಾಗಿದ್ದರಿಂದ ಈ ಬಾಲಕ ಕೊನೆ ಕೊಯ್ಯುತ್ತಿರೋದು ಮನೆಯವರಿಗೂ ಸಹಕಾರಿಯಾಗಿದೆ. ತಮ್ಮ ಮಗನ ಈ ಕಾರ್ಯಕ್ಕೆ ಕುಟುಂಬದವರು ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸುತ್ತಿದ್ದಾರೆ ಅಂತಾರೆ ಬಾಲಕನ ತಾಯಿ.
ಇಂದಿನ ತಲೆಮಾರಿನ ಜನ ಕೃಷಿಯಿಂದ ವಿಮುಖರಾಗುತ್ತಿರುವಾಗ ಈ ಪುಟ್ಟ ಬಾಲಕ ಕೃಷಿಯ ಬಗ್ಗೆ ಆಸಕ್ತಿ ತೋರಿಸಿ ಕ್ಲಿಷ್ಟಕರವಾದ ಕೆಲಸ ಮಾಡುತ್ತಿರೋದು ನಿಜವಾಗಿಯೂ ಶ್ಲಾಘನೀಯ. ಕೈ ಕೆಸರಾದರೇ ಬಾಯಿ ಮೊಸರು ಅನ್ನೋವಂತೆ ಕಷ್ಟ ಪಟ್ಟರೇ ಎಂತದ್ದನ್ನೂ ಸಾಧಿಸಬಹುದು ಅನ್ನೋದಕ್ಕೆ ಈ ಬಾಲಕ ಮಾದರಿಯಾಗಿದ್ದಾನೆ.
ವಿಶೇಷ ವರದಿ: ಶ್ರೀಧರ್ ಜಿ.ಎಚ್, ನ್ಯೂಸ್ ಫಸ್ಟ್, ಶಿರಸಿ