ಈತ ವೃತ್ತಿಯಲ್ಲಿ ಇಂಜಿನಿಯರ್​​.. ಮಾಡಿದ್ದು ಬ್ಯಾಂಕ್​​ ರಾಬ್ರಿ.. ಈ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ?


ಅವನೊಬ್ಬ ಸ್ವಾಫ್ಟ್​ವೇರ್ ಇಂಜಿನಿಯರ್. ಕೈ ತುಂಬಾ ಸಂಬಳ ಬರುವ ಕೆಲಸ ಅವನಿಗಿತ್ತು. ಆದ್ರೆ, ಅವನಿಗೆ ಬರ್ತಿದ್ದ ಸಂಬಳ ಸಾಕಾಗ್ತಿರಲಿಲ್ಲ ಅನ್ಸುತ್ತೆ. ವೇಗವಾಗಿ ದುಡ್ಡ ಮಾಡಬೇಕೆಂಬ ಆಸೆ ಇದ್ದವನು ಬೇಡದ ಆದಾಯದ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೊರಟಿದ್ದ. ಅದಕ್ಕೆ ಅಂತಾನೇ, ತನ್ನ ತಾಯಿಯ ಚಿನ್ನಾಭರಣ ಅಡಿವಿಟ್ಟ.. ಬ್ಯಾಂಕ್​ ಸಾಲ ಮಾಡಿ ಆನ್​ಲೈನಲ್ಲಿ ಟ್ರೇಡಿಂಗ್ ಶುರು ಮಾಡಿದ್ದ. ಬಟ್​ ಏನೋ ಮಾಡಲು ಹೋಗಿ ಏನೋ ಆಯ್ತು ಅಂತಾರಲ್ಲ, ಹಂಗಾಗಿದೆ ಅವನ ಕಥೆ.. ದುಡ್ಡು ಮಾಡೋಕೆ ಹೋಗಿ ಸಾಲದಲ್ಲಿ ತಗ್ಲಾಕ್ಕೊಂಡವನು, ಕೊನೆಗೆ ಕಳ್ಳನಾಗಿ ಹೋಗಿದ್ದಾನೆ.

ಜನವರಿ 14ನೇ ತಾರೀಖು ಎಲ್ಲರೂ ಸಂಕ್ರಾತಿ ಹಬ್ಬದ ಸಡಗರದಲ್ಲಿದ್ರೆ, ಇದೊಂದು ಬ್ಯಾಂಕ್​ ಸಿಬ್ಬಂದಿ ಮಾತ್ರ ದಂಗಾಗಿ ಹೋಗಿದ್ರು. ಯಾಕಂದ್ರೆ, ರಾತ್ರಿ ಕಳೆದು ಬೆಳಗಾಗುವುದೊರಳಗೆ ಬೆಂಗಳೂರಿನ ಮಡಿವಾಳದ ಎಸ್​.ಬಿ.ಐ ಬ್ಯಾಂಕ್​ನಲ್ಲಿ ಹಣ, ಚಿನ್ನಾಭರಣ ಮಂಗ ಮಾಯವಾಗಿತ್ತು. ಹಬ್ಬದ ದಿನ ಇದೇನ್​ ಗ್ರಹಚಾರ ಅಂತಾ ತಲೆಮೇಲೆ ಕೈ ಇಟ್ಟು ಕುಳಿತ ಬ್ಯಾಂಕ್​ ಸಿಬ್ಬಂದಿ ಕಡೆಗೆ ಮಡಿವಾಳ ಪೊಲೀಸರಿಗೆ ವಿಷ್ಯಾ ಮುಟ್ಟಿಸಿದ್ರು. ಅದಾದ್ಮೇಲೆ ನೋಡಿ ಅಸಲಿ ಆಟ ಶುರುವಾಗಿದ್ದು.

ಇಲ್ನೋಡಿ ಅದ್ಹೇಗೆ ಕಳ್ಳ ಬೆಕ್ಕು ಬ್ಯಾಂಕ್​ಗೆ ಎಂಟ್ರಿಯಾಗಿ, ಕೈ ಚಳಕ ತೋರಿಸ್ತಿದೆ ಅಂತಾ. ನೋಡ ನೋಡ್ತಿದ್ದಂಗೆ ಅಲ್ಲಿದ್ದ ದುಡ್ಡು, ಚಿನ್ನಾಭರಣಗಳೆಲ್ಲಾ ಗಾಯಬ್.. ಬ್ಯಾಂಕ್​ ಸಿಬ್ಬಂದಿಗೇ ಧಮ್ಕಿ ಹಾಕಿ ಕೂಡ ಚಿನ್ನಾಭರಣ ದೋಚ್ತಾನೆ ಖತರ್ನಾಕ್​. ಹಬ್ಬದ ದಿನ ಹೀಗೆ ಬ್ಯಾಂಕ್ ರಾಬರಿಗಿಳಿದಿದ್ದ ಪ್ರಳಯಾಂತಕ ಯಾರಿರಬಹುದು ಅನ್ನೋದು ನಿಮ್ಮೆಲ್ಲರ ಪ್ರಶ್ನೆ ಅಲ್ವಾ? ಇಲ್ಲೊಂದು ಫೋಟೋ ತೋರಿಸ್ತೀವಿ ನೋಡ್ಕೋಬಿಡಿ..

ಅರೆರೇ! ಏನ್​ ಟಿಪ್​ಟಾಪಾಗಿ ಸಾಫ್ಟವೇರ್​ ಇಂಜಿನಿಯರ್ ಥರಾ ಕಾಣ್ತಿದ್ದಾನೆ ಅಂತಾ ಕೇಳ್ತಿದ್ದೀರಾ? ಸಾಫ್ಟ್​ವೇರ್ ಇಂಜಿನಿಯರ್ ಥರಾ ಅಲ್ಲ ಸಾರ್.. ಇವ್ನು ಸಾಫ್ಟ್​ವೇರ್​ ಇಂಜಿನಿಯರೇ… ಟೈಮ್ ಖರಾಬ್ ಆಗಿ ಕಳ್ಳ ಆಗ್ಬಿಟ್ಟಿದ್ದಾನೆ .. ಅಷ್ಟಕ್ಕೂ ಇವನ ಹೆಸರು ಧೀರಜ್ ಅಂತಾ

ಇಂಜಿನಿಯರ್​ ಆಗಿರುವ ಧೀರಜ್​ನಿಂದ ಬ್ಯಾಂಕ್​ ರಾಬರಿ!

ಈ ಧೀರಜ್​ ಸಾಫ್ಟ್​​ವೇರ್​ ಇಂಜಿನಿಯರ್​. ತಿಂಗಳಿಗೆ 30 ಸಾವಿರ ರೂಪಾಯಿ ದುಡೀತಿದ್ದ. ಆದ್ರೆ ಬೇಗ ದುಡ್ಡು ಮಾಡ್ಬೇಕು ಅನ್ನೋ ಆಸೆಗೆ ಬಿದ್ದವನು ಮಾಡಿದ್ದು ಮಣ್ಣು ತಿನ್ನೋ ಕೆಲಸ. ಹೇಗಾದ್ರು ಮಾಡಿ ಹಣ ಸಂಪಾದಿಸಬೇಕೆಂಬ ಹಠಕ್ಕೆ ಬಿದ್ದವನು, ಅದಕ್ಕೆ ಅಂತಾ ಮಾಡಿದ್ದು ಆನ್​ಲೈನ್​ ಟ್ರೇಡಿಂಗ್. ಅಮೆರಿಕಾ ಮೂಲದ OLYMP ಎಂಬ ಆನ್​ಲೈನ್​ ಟ್ರೇಡಿಂಗ್ ಶುರು ಮಾಡ್ಕೊಂಡಿದ್ದ. ಇಲ್ಲಿ ಹಣವನ್ನ ಹೂಡಿಕೆ ಮಾಡಲು ತಾಯಿಯ ಚಿನ್ನಾಭರಣವನ್ನ ಕೂಡ ಮಾರಿದ್ದ. ದುಡ್ಡು ಸಾಕಾಗದೆ ಇದ್ದಾಗ ಬ್ಯಾಂಕ್​ನಿಂದ ₹35 ಲಕ್ಷ ಸಾಲ ಪಡೆದು ಇನ್ವೆಸ್ಟ್​ ಮಾಡಿದ್ದ. ಆದ್ರೆ, ಹಣ ಸಾಲದೇ ಇದ್ದಾಗ ಸ್ನೇಹಿತರ ಬಳಿ ಕೂಡ ಕೈಚಾಚಿದ್ದ

ಆನ್​ಲೈನ್​ ಟ್ರೇಡಿಂಗ್​ನಲ್ಲಿ ಧೀರಜ್​ಗೆ ಫುಲ್​​ ಲಾಸ್!
ಸಾಲಗಾರರ ಕರೆಯಿಂದ ಬೇಸತ್ತು ಹೋಗಿದ್ದ ಧೀರಜ್

ಹೀಗೆ ಬ್ಯಾಂಕ್, ಸ್ನೇಹಿತರ ಬಳಿ ಸೇರಿ ಎಲ್ಲೆಂದರಲ್ಲಿ ಲಕ್ಷ ಲಕ್ಷ ಹಣ ಸಾಲ ಮಾಡಿ, ಆನ್​ಲೈನ್​ ಟ್ರೇಡಿಂಗ್ ಮಾಡಿದ್ದ ಧೀರಜ್​. ಆದ್ರೆ, ಇವ್ನ ದುರಾದೃಷ್ಟಕ್ಕ್ಕೆ ಎಲ್ಲಾ ಸಂಪೂರ್ಣ ಲಾಸ್​ ಆಗಿ ಹೋಗಿದೆ. ಆದ್ರೆ, ಸಾಲ ಕೊಟ್ಟವರು ಸುಮ್ನೆ ಇರ್ತಾರೆಯೇ? ಮೇಲಿಂದ ಮೇಲೆ ಧೀರಜ್​ಗೆ ಕಾಲ್​ ಮಾಡಿ, ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಮನೆ ಕಡೆ ಬಂದು ಗಲಾಟೆ ಮಾಡಿದ್ದಾರೆ. ಒಂದು ಕಡೆ ಬಿಸಿನೆಸ್​ನಲ್ಲಿ ಲಾಸ್​ ಆದ ಟೆನ್ಷನ್, ಮತ್ತೊಂದು ಕಡೆ ಸಾಲಗಾರರ ಟಾರ್ಚರ್..ಹೀಗೆ ಎರಡೆರಡು ಸಮಸ್ಯೆಗಳ ವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಧೀರಜ್, ದಾರಿ ಕಾಣದೇ ಮನೆಯಲ್ಲಿ ಕೂತಿದ್ದ. ಹೀಗೆ, ಟೆನ್ಷನಲ್ಲಿ ಕೂತಿದ್ದ ಸಂದರ್ಭದಲ್ಲಿ ಅದೊಂದು ರಾಬರಿ ಸುದ್ದಿ ಈತನ ಕಣ್ಣಿಗೆ ಬೀಳುತ್ತೆ. ಸುದ್ದಿ ಕಣ್ಣಿಗೆ ಬೀಳ್ತಿದ್ದಂಗೆ ಈತ ಕೂಡ ಅದೇ ಕೆಲಸಕ್ಕೆ ಕೈ ಹಾಕಲು ನಿರ್ಧಾರ ಮಾಡ್ತಾನೆ. ಅಂದು ಆನ್​ಲೈನ್​ಲ್ಲಿ ಟ್ರೇಡಿಂಗ್​ಗೆ ಇಳಿದು ಬಿಟ್ಟವನು, ನಂತರ ಅದೇ ಆನ್​ಲೈನ್​ನಲ್ಲಿ ನೋಡಿ ರಾಬರಿಗೂ ಇಳಿದು ಬಿಟ್ಟಿದ್ದ.

ಯೂಟ್ಯೂಬ್​ ನೋಡಿ ರಾಬರಿ
ಉತ್ತರ ಭಾರತದ ಬ್ಯಾಂಕ್​ ರಾಬರಿ ಸುದ್ದಿ ಓದಿದ್ದ ಧೀರಜ್
ಪೇಪರ್​ನಲ್ಲಿ ಬಂದಿದ್ದ ಬ್ಯಾಂಕ್ ರಾಬರಿ ಸುದ್ದಿ ನೋಡಿ ಪ್ಲಾನ್
ಗೂಗಲ್ & ಯೂಟ್ಯೂಬ್​ನಲ್ಲಿ ರಾಬರಿ ಬಗ್ಗೆ ಸರ್ಚ್ ಮಾಡಿದ್ದ
ಹೇಗೆ ರಾಬರಿ ಮಾಡ್ಬೇಕು ಅನ್ನೋದರ ಮಾಹಿತಿ ಕಲೆಹಾಕಿದ್ದ

ಹೀಗೆ ಮನೆಯಲ್ಲಿ ಟೆನ್ಷನ್​ನಲ್ಲಿಯೇ ಕೂತಿದ್ದ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ನಡೆದ ಅದೊಂದು ರಾಬರಿ ಸುದ್ದಿ ಧೀರಜ್​ ಕಣ್ಣಿಗೆ ಬಿದ್ದಿತ್ತು. ಪೇಪರ್​ನಲ್ಲಿ ಬಂದಿದ್ದ ಬ್ಯಾಂಕ್ ರಾಬರಿ ಸುದ್ದಿ ನೋಡಿ, ನಾನು ಕೂಡ ಯಾಕೆ ರಾಬರಿ ಮಾಡ್ಬಾರ್ದು ಅಂತಾ ಆಲೋಚನೆ ಮಾಡ್ತಾನೆ ಧೀರಜ್​, ಗೂಗಲ್ & ಯುಟ್ಯೂಬ್​ನಲ್ಲಿ ರಾಬರಿ ಬಗ್ಗೆ ಸರ್ಚ್ ಮಾಡಿದ್ದ ಅವನು. ಆನ್​ಲೈನ್​ನಲ್ಲಿಯೇ ಹೇಗೆ ರಾಬರಿ ಮಾಡ್ಬೇಕು ಅನ್ನೋದರ ಮಾಹಿತಿ ಕಲೆಹಾಕಿದ್ದ.

ರಾಬರಿ ಮಾಡಿ ತನ್ನ ಸಾಲ ತೀರಿಸಬೇಕೆಂದು ನಿರ್ಧರಿಸಿದ ಧೀರಜ್​ ಮುಂದೆ ಬೆಂಗಳೂರು ರೌಂಡ್ಸ್​ ಹಾಕ್ತಾನೆ. ಒಂದು ವಾರಗಳ ಕಾಲ ನಗರವನ್ನ ಸುತ್ತಾಡಿ, ನಗರದಲ್ಲಿರುವ ಬ್ಯಾಂಕ್​ಗಳ ಬಗ್ಗೆ ಮಾಹಿತಿ ಕಲೆ ಹಾಕ್ತಾನೆ. ಯಾವ ಬ್ಯಾಂಕ್​ನಲ್ಲಿ ಎಷ್ಟು ವ್ಯವಹಾರ ನಡೆಯುತ್ತೆ, ಎಲ್ಲಿ ಸೆಕ್ಯೂರಿಟಿ ಕಡಿಮೆ ಇರುತ್ತೆ.. ಹೀಗೆ ಒಂದರ ಹಿಂದೆ ಒಂದರಂತೆ ಇನ್​ಫರ್​​ಮೇಷನ್ ಕಲೆ ಹಾಕ್ತಾನೆ. ಈ ವೇಳೆ ಆತನಿಗೆ ಮಡಿವಾಳ ಎಸ್​.ಬಿ.ಐ ಬ್ಯಾಂಕ್​ನಲ್ಲಿ ಸೆಕ್ಯೂರಿಟಿ ಕಡಿಮೆ ಇರ್ತಾರೆ ಅನ್ನೋದು ಗೊತ್ತಾಗುತ್ತೆ. ಅದರಂತೆ 3 ದಿನಗಳ ಕಾಲ ಈ ಎಸ್​.ಬಿ.ಐ ಬ್ಯಾಂಕ್​ನ್ನ ಅಬ್​ಸರ್ವ್​ ಮಾಡ್ತಾನೆ. ಬ್ಯಾಂಕ್ ಗೆ ಸಿಬ್ಬಂದಿಗಳು ಎಷ್ಟೊತ್ತಿಗೆ ಬರ್ತಾರೆ, ಎಷ್ಟೊತ್ತಿಗೆ ಸಿಬ್ಬಂದಿ ಮನೆಗೆ ಹೋಗ್ತಾರೆ ಅನ್ನೋದನ್ನ ಕೂಡ ಗಮನಿಸಿದ್ದ.. ಒಂದು ದಿನ ಬ್ಯಾಂಕ್​ ಬಳಿ ನಿಂತು ನಂತರ ಒಳಗಡೆ ಹೋಗಿ ಚಲನ್ ಬರೆಯೋ ನೆಪದಲ್ಲಿ ಅಲ್ಲಿರುವ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸ್ತಾನೆ. ಎಲ್ಲಾ ಪಕ್ಕಾ ಆಗುತ್ತಿದ್ದಂಗೆ ಜನವರಿ 14 ರಂದು ಮಡಿವಾಳ ಠಾಣ ವ್ಯಾಪ್ತಿಯಲ್ಲಿರುವ ಎಸ್​.ಬಿ ಐ ಬ್ಯಾಂಕ್​ ಕಟ್ಟಡದ ಮೇಲೆ ಕೂತು ಬಿಡ್ತಾನೆ.

ಎಲ್ಲಾ ಪ್ಲಾನ್​ ಪಕ್ಕಾ ಆಗ್ತಿದ್ದಂಗೆ ಧೀರಜ್ ನವೆಂಬರ್ 14ರಂದು ಎಸ್​.ಬಿ.ಐ ಬ್ಯಾಂಕ್​ನ ಕಟ್ಟಡ ಏರಿ ಕುಳಿತು ಅದರಂತೆ ಬ್ಯಾಂಕ್​ನಿಂದ ಸಿಬ್ಬಂದಿ ಮನೆಗೆ ಹೋಗೋದನ್ನ ಕಾಯ್ತಾ ಇರ್ತಾನೆ. ಇನ್ನೇನು ಎಲ್ಲರೂ ಹೋದ್ರು ಅಂದುಕೊಂಡು ಬ್ಯಾಂಕ್​ ಒಳಗಡೆ ಎಂಟ್ರಿಯಾದ ಈ ಆಸಾಮಿ, ಅಲ್ಲಿದ್ದ ಮಹಿಳಾ ಸಿಬ್ಬಂದಿಯ ಕುತ್ತಿಗೆಗೆ ಚಾಕು ಹಿಡಿದು ಸ್ಟ್ರಾಂಗ್ ರೂಂಗೆ ಕರೆದು ಕೊಂಡು ಹೋಗ್ತಾನೆ. ಅಲ್ಲಿದ್ದ 4 ಲಕ್ಷ ನಗದನ್ನ ದೋಚಿಯೇಬಿಡ್ತಾನೆ. ಆದ್ರೆ, ಧೀರಜ್​ಗೆ ಬೇಕಾಗಿದ್ದು 40 ಲಕ್ಷ. ಹಾಗಾಗಿ ಅಲ್ಲಿದ್ದ 1.8 ಕೆ.ಜಿ ಚಿನ್ನವನ್ನ ಕೂಡ ಕಳ್ಳತನ ಮಾಡ್ತಾನೆ. ಕ್ಯಾಶ್​ ಮತ್ತು ಚಿನ್ನಾಭರಣ ಸೇರಿ 85 ಲಕ್ಷ ರೂಪಾಯಿ ಮೊತ್ತದಷ್ಟು ಕಳ್ಳತನವಾಗುತ್ತೆ. ಅಲ್ಲದೇ, ಹೊರಗಡೆ ತನ್ನ 10 ಜನರ ಗ್ಯಾಂಗ್ ಇದ್ದು ನೀವೆನಾದ್ರೂ ಕಿರುಚಾದ್ರೆ, ಪೊಲೀಸರಿಗೆ ಇನ್​ಫರ್​ಮೇಷನ್ ಕೊಟ್ರೆ ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿ ನಂತರ ಅಲ್ಲಿಂದ ಎಸ್ಕೇಪ್ ಆಗ್ತಾನೆ. ಧೀರಜ್​ನ ಈ ಎಲ್ಲಾ ಕೈ ಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕೃತ್ಯ ಎಸಗಿದ ನಂತರ ಪೊಲೀಸರ ದಿಕ್ಕು ತಪ್ಪಿಸಲು ಖತರ್ನಾಕ್​ ಪ್ಲಾನ್​ ಕೂಡ ಹಾಕೊಂಡಿದ್ದ.

ದರೋಡೆ ಬಳಿಕ ಪೊಲೀಸರ ದಿಕ್ಕು ತಪ್ಪಿಸಲು ಪ್ಲಾನ್..

ದರೋಡೆ ಬಳಿಕ ಪೊಲೀಸರ ದಾರಿ ತಪ್ಪಿಸಲು ಧೀರಜ್ ಪ್ರಯತ್ನ ಮಾಡ್ತಾನೆ.ಅದರಂತೆ ಅಲ್ಲೇ ಐದಾರು ಕಿಲೋಮೀಟರ್ ಬ್ಯಾಂಕ್ ಸಮೀಪವೇ ಸುತ್ತಾಡ್ತಾನೆ. ನಂತರ ಆಟೋ ಹತ್ತಿ ಬನಶಂಕರಿಗೆ ಹೋಗಿದ್ದ. ಅಲ್ಲಿಂದ್ದ ಮತ್ತೆ ಮೆಜೆಸ್ಟಿಕ್​ಗೆ ಬಂದು ಚಿಕ್ಕಮಗಳೂರು ಬಸ್​ ಹತ್ತಿದ್ದಾನೆ. ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ ಅನಂತಪುರಂ ಹೀಗೇ ಬೇಕಾಬಿಟ್ಟಿ ಸುತ್ತಾಟ ನಡೆಸಿದ್ದಾನೆ. ಹೀಗೆ, ಎರಡು ದಿನಗಳ ಕಾಲ ಬಸ್​ನಲ್ಲಿಯೇ ಓಡಾಡಿದ ಕಿಲಾಡಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದ. ಅಲ್ಲದೇ ಚಿನ್ನಾಭರಣಗಳನ್ನ ಬೆಂಗಳೂರಿನಲ್ಲಿ ಮಾರಾಟ ಮಾಡಿದ್ದ

ಒಂದು ಕಡೆ ಧೀರಜ್​ ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ ಅಂತಾ ಸುತ್ತಾಡ್ತಿದ್ರೆ ಇತ್ತ ಪೊಲೀಸರು 5 ವಿಶೇಷ ತಂಡವನ್ನ ರಚನೆ ಮಾಡಿ ಫೀಲ್ಡ್​​ಗೆ ಇಳಿದು ಬಿಟ್ಟಿದ್ರು. ಇನ್ವೆಸ್ಟಿಗೇಷನ್ ಶುರುಮಾಡಿದ್ದ ಎಸಿಪಿ ಸುಧೀರ್ ಹೆಗ್ಡೆ ಌಂಡ್​ ಟೀಂ ಘಟನೆ ನಡೆದ ಒಂದು ವಾರದ ಆರೋಪಿಯ ಪತ್ತೆ ಮಾಡಿದ್ದಾರೆ. ಕೋರಮಂಗಲ, ಮಡಿವಾಳ, ಎಸ್,ಜೆ ಪಾಳ್ಯ ಇನ್ಸ್ಪೆಕ್ಟರ್ ಮತ್ತು ತಿಲಕ್ ನಗರ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ನೇತೃತ್ವದಲ್ಲಿ 5 ವಿಶೇಷ ತಂಡವನ್ನ ರಚನೆ ಮಾಡಿ ಖದೀಮನ ಬೇಟೆಯಾಡಿದ್ದಾರೆ.

ಇನ್ನು, ಧೀರಜ್​​ ಕೂಡ ಕದ್ದ ಚಿನ್ನಾಭರಣ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನ ಸಾಲಗಾರರಿಗೆ ವಾಪಸ್ ಕೊಡ್ತಿದ್ದ ಅನ್ನೋದೂ ಈಗ ಗೊತ್ತಾಗಿದೆ. ಇನ್ನು, ಸಾಲ ಎಲ್ಲಾ ಕ್ಲಿಯರ್​ ಆದ್ಮೇಲೆ ಅನ್ಯ ರಾಜ್ಯಕ್ಕೆ ಎಸ್ಕೇಪ್ ಆಗುವ ಪ್ಲಾನ್ ಕೂಡ ಧೀರಜ್​ ಮಾಡಿದ್ದದ್ದು ತಿಳಿದು ಬಂದಿದೆ. ತನಗೆ ಸಾಲ ಕೊಟ್ಟ ಕಡೆಯ ವ್ಯಕ್ತಿಯ ಕೈಗೆ ದೊಡ್ಡು ಕೊಟ್ಟು ಎಸ್ಕೇಪ್ ಆಗ್ಬೇಕು ಅನ್ನೋ ಲೆಕ್ಕಾಚಾರದಲ್ಲಿದ್ರೆ, ಇತ್ತ ಪೊಲೀಸರು ಇವನ ಬೇಟೆಯಾಡಲು ರೆಡಿಯಾಗಿದ್ರು. ಧೀರಜ್​ ಸಾಲ ಹಿಂದಿರುಗಿಸಲು ಬರ್ತಾನೆ ಅನ್ನೋ ಮಾಹಿತಿ ಸಿಗ್ತಿದ್ದಂಗೆ ಪೊಲೀಸರು ಸ್ಪಾಟ್​ಗೆ ಎಂಟ್ರಿ ಕೊಟ್ಟಿದ್ರು. ಅದರಂತೆ ಸಾಲ ಹಿಂದಿರುಗಿಸಲು ಬಂದವನು ಕಡೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪೊಲೀಸರು ಈ ವೇಳೆ ಧೀರಜ್​ ಕಳ್ಳತನ ಮಾಡಿದ್ದ ನಗದು, ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ.

ಒಟ್ಟಾರೆ, ಅತಿಯಾಸೆ ಗತಿಕೇಡು ಅನ್ನೋವಂತಾಗಿದೆ ಧೀರಜ್​ನ ಕಥೆ. ವಿದ್ಯಾವಂತನಾಗಿ, ಮುಂದೊಂದೆ ತಾನು ಬೇಕಾದಷ್ಟು ಸಂಪಾದನೆಯನ್ನು ನ್ಯಾಯಮಾರ್ಗದಲ್ಲಿಯೇ ಮಾಡುವ ಅವಕಾಶವಿದ್ರೂ ಅಡ್ಡದಾರಿ ಹಿಡಿದು ಕಂಬಿ ಹಿಂದೆ ಸೇರಿದ್ದಾನೆ ಧೀರಜ್. ಮಾಡಿದ ತಪ್ಪಿಗೆ ಜೈಲಿನಲ್ಲಿ ಮುದ್ದೆ ಮುರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಅಲ್ವಾ ದೊಡ್ಡವರು ಹೇಳೋದು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತಾ ಆನ್​ಲೈನ್​ ಟ್ರೇಡಿಂಗ್ ಅಂತಾ ಅತಿಯಾಸೆಗೆ ಬಿದ್ದು ಈಗಾಗಲೇ ಸಾಕಷ್ಟು ಜನರು ಲಕ್ಷ ಲಕ್ಷ ಕಳೆದುಕೊಂಡಿದ್ದಾರೆ. ಅಂತದ್ದೇ ನಷ್ಟದ ಹೊಡೆತ ಅನುಭವಿಸಿದ ವಿದ್ಯಾವಂತನೊಬ್ಬ ಈ ರೀತಿ ಕಳ್ಳನಾಗಿದ್ದು ಮಾತ್ರ ನಿಜಕ್ಕೂ ದುರಂತ..

News First Live Kannada


Leave a Reply

Your email address will not be published. Required fields are marked *