ಕಾರವಾರ: ಬಿಜೆಪಿಯಲ್ಲಿ ಎದ್ದಿರುವ ಗೊಂದಲದ ಬಗ್ಗೆ ಈಶ್ವರಪ್ಪನವರಿಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ. ಕಾಂಗ್ರೆಸ್ ಶಾಸಕರನ್ನು ಕರೆದುಕೊಳ್ಳುವ ಮೊದಲೇ ಹಿರಿಯ ರಾಜಕೀಯ ನಾಯಕರಾದ ಅವರಿಗೆ ಅರಿವಿರಬೇಕಿತ್ತು ಎಂದು ಮಾಜಿ ಸಚಿವ ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಟಾಂಗ್ ನೀಡಿದ್ದಾರೆ.

ಹಿಸ್ಟರಿ ರಿಪೀಟ್ ಆಗಿದೆ. ವೆಸ್ಟ್ ಬೆಂಗಾಳದಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ವಿಚಾರಧಾರೆ ಒಂದಿರುವಾಗ ನಮ್ಮಲ್ಲಿಂದ ಹೋಗಿರುವವರ ವಿಚಾರಧಾರೆ ಇನ್ನೊಂದಿದೆ. ಇದೀಗ ಇಬ್ಬರ ಹೊಂದಾಣಿಕೆ ಸಾಧ್ಯವಿಲ್ಲ ಎಂದಿದ್ದಾರೆ.

ನಾನು 1,983 ರಿಂದ ಆಡಳಿತ ಹಾಗೂ ವಿರೋಧ ಪಕ್ಷದಲ್ಲಿದ್ದಾಗ ಇದೆಲ್ಲವನ್ನು ನೋಡುತ್ತಿದ್ದೇನೆ. ಪಕ್ಷಾಂತರವಾದಾಗ ಏನೇನು ದುಷ್ಪರಿಣಾಮವಾಗುತ್ತಿದೆ ಎಂಬುದು ಗೊತ್ತಿದೆ. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಏನಾಗಿದೆ ಅಂದರೆ ಇತ್ತ ಜೊತೆಗೆ ಇದ್ದವರು ಅವರ ಹಾದಿ, ಸಂಸ್ಕೃತಿ ಬಿಡುತ್ತಿಲ್ಲ. ಕಾಂಗ್ರೆಸ್ ನಿಂದ ಬಂದವರಿಗೆ ಅಧಿಕಾರ ಸಿಗುತ್ತಿಲ್ಲ. ಅವರವರ ಕೆಲಸಗಳೂ ಆಗುತ್ತಿಲ್ಲ. ಬಿಜೆಪಿಯಿಂದ ನೂರಕ್ಕೂ ಹೆಚ್ಚು ಜನರು ಆಯ್ಕೆಯಾಗಿದ್ದರು ಮಂತ್ರಿಯಾದವರು 10-12 ಜನ ಮಾತ್ರ. ಇದು ಬಹಳ ಜನರಿಗೆ ನೋವಾಗಿದೆ. ನೂರಾರು ಜನ ಬಂದರು ಪ್ರಾಧಾನ್ಯತೆ ಇಲ್ಲದಂತಾಗಿದೆ. ಇದರ ಮುಂದಾಲೋಚನೆಯನ್ನು ಬಿಜೆಪಿ ಹೈಕಮಾಂಡ್ ಶಾಸಕರನ್ನು ಸೇರಿಸಿಕೊಳ್ಳುವ ಮೊದಲೇ ಮಾಡಬೇಕಿತ್ತು. ಪಕ್ಷಾಂತರಕ್ಕೆ ಉತ್ತೇಜನ ಕೊಡಬಾರದಿತ್ತು. ಸರ್ಕಾರ ಮಾಡಿಕೊಂಡು ಹೋಗಿ ಎಂದು ನಮಗೆ ಹೇಳಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿಕೊಂಡಿದ್ದರಿಂದ ಈ ರೀತಿಯ ಗೊಂದಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆತ್ಮವಿಶ್ವಾಸ ಕಡಿಮೆಯಾಗಿರುವ ಕಾರಣ ಮುಖ್ಯಮಂತ್ರಿ ಇನ್ನು ಎರಡು ವರ್ಷ ತಾವೇ ಸಿಎಂ ಆಗಿರುವುದಾಗಿ ಹೇಳುತ್ತಿದ್ದಾರೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಬೀರುತ್ತಿದೆ. ಸರ್ಕಾರದಲ್ಲಿ ಯಾರು ಯಾರ ಮಾತನ್ನು ಕೇಳುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಇಂತಹ ಪರಿಸ್ಥಿತಿ ಬಗ್ಗೆ ಈಶ್ವರಪ್ಪನವರಿಗೆ ಮೊದಲೇ ಗೊತ್ತಿತ್ತು. ಅವರು ವಿರೋಧ ಮಾಡಿಲ್ಲ. ಇದರಲ್ಲಿ ಅವರದ್ದು ತಪ್ಪಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 17 ಜನ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ನಂತರ ಸಣ್ಣ ಸಣ್ಣ ಗೊಂದಲಗಳಾಗಿವೆ: ಕೆ.ಎಸ್.ಈಶ್ವರಪ್ಪ

ಈಶ್ವರಪ್ಪ ಹೇಳಿದ್ದೇನು?: ಭಾರತೀಯ ಜನತಾ ಪಾರ್ಟಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಮುಖ್ಯಮಂತ್ರಿ ಬದಲಾವಣೆಯ ಗೊಂದಲ ಆಗುತ್ತಿರಲಿಲ್ಲ. 17 ಜನ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ನಂತರ ಈ ಸಣ್ಣ ಸಣ್ಣ ಗೊಂದಲವಾಗಿದೆ. ಗೊಂದಲ ನಿರ್ಮಾಣ ಮಾಡಿಕೊಂಡವರು ಪಕ್ಷದ ನಾಯಕರಲ್ಲ. ಚುನಾವಣೆ ಫಲಿತಾಂಶದ ಗೊಂದಲ. ಕೇಂದ್ರ ನಾಯಕ ಅರುಣ್ ಸಿಂಗ್ ಬೆಂಗಳೂರಿಗೆ ಬರುತ್ತಾರೆ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಾರೆ. ಯಾರಿಗೆ ಏನು ಅಸಮಧಾನವಿದೆಯೋ ಕೇಂದ್ರದ ನಾಯಕರ ಮುಂದೆ ಹೇಳಿಕೊಳ್ಳುತ್ತಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ದರು.

ಇದೇ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್‍ರವರು, 17 ಜನ ಬಿಜೆಪಿಗೆ ಬಂದ ಕಾರಣದಿಂದ ಸರ್ಕಾರ ಬಂದಿದೆ. ಸರ್ಕಾರ ಬಂದಿರುವ ಕಾರಣ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಈಶ್ವರಪ್ಪ ಆ ರೀತಿ ಹೇಳಿಕೆ ಕೊಟ್ಟಿದ್ದರೆ ಇದು ಸರಿಯಲ್ಲ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ:  ನಾವು ಬಿಜೆಪಿಗೆ ಬಂದಿದ್ದಕ್ಕೆ ಈಶ್ವರಪ್ಪ ಮಿನಿಸ್ಟರ್ ಆಗಿದ್ದು: ಬಿ.ಸಿ.ಪಾಟೀಲ್ ತಿರುಗೇಟು

The post ಈಶ್ವರಪ್ಪನವರಿಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ: ಆರ್.ವಿ.ದೇಶಪಾಂಡೆ appeared first on Public TV.

Source: publictv.in

Source link