ಈಶ್ವರಪ್ಪ ವಜಾ ಮಾಡದಿದ್ದರೆ ಸಿಎಂ ಮನೆಗೆ ಮುತ್ತಿಗೆ: ಕಾಂಗ್ರೆಸ್ ಎಚ್ಚರಿಕೆ | Congress Demands to Throughout KS Eshwarappa from Karnataka Cabinet


ಈಶ್ವರಪ್ಪ ವಜಾ ಮಾಡದಿದ್ದರೆ ಸಿಎಂ ಮನೆಗೆ ಮುತ್ತಿಗೆ: ಕಾಂಗ್ರೆಸ್ ಎಚ್ಚರಿಕೆ

ಸಿದ್ದರಾಮಯ್ಯ

ಬೆಂಗಳೂರು: ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ಅದೇ ಮಾದರಿಯನ್ನು ಸಚಿವ ಕೆ.ಎಸ್.ಈಶ್ವರಪ್ಪ ಸಹ ಅನುಸರಿಸಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಮಗಾರಿ ಮಾಡಿದ್ದ ಸಂತೋಷ್ ಪಾಟೀಲ್​ ಅವರಿಗೆ ಬಿಲ್ ಮಂಜೂರು ಮಾಡಲು ಈಶ್ವರಪ್ಪ ಕಮಿಷನ್ ಕೇಳಿದ್ದರು ಎಂಬ ಆರೋಪ ಕೇಳಿಬಂದಿದೆ. ನನ್ನ ಸಾವಿಗೆ ಸಚಿವ ಈಶ್ವರಪ್ಪ ನೇರಕಾರಣವೆಂದು ಸಂತೋಷ್ ಪಾಟೀಲ್ ವಾಟ್ಸಾಪ್​ ಸಂದೇಶ ರವಾನಿಸಿದ್ದಾರೆ. ಸಚಿವ ಈಶ್ವರಪ್ಪ ತಕ್ಷಣ ರಾಜೀನಾಮೆ ಕೊಡಬೇಕು. ಪೊಲೀಸರು ಅವರ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಸಂಪುಟದಿಂದ ಈಶ್ವರಪ್ಪನನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಮತ್ತೊಂದೆಡೆ ಪ್ರಕರಣ ಕುರಿತು ಪ್ರತ್ಯೇಕವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿದ್ದಾರೆ. ರಸ್ತೆ ಕಾಮಗಾರಿ ಬಿಲ್ ಮಂಜೂರು ಮಾಡಲು ಹೆಚ್ಚಿನ ಕಮಿಷನ್ ಕೇಳಿದ್ದಕ್ಕೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈಶ್ವರಪ್ಪ ಏನು ಬೇಕಾದರೂ ಹೇಳಲಿ, ಸಂತೋಷ್ ಅವರೇ ಸ್ವತಃ ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ‌ನೇರವಾಗಿ ಹೇಳಿರುವುದು ಮುಖ್ಯವಾಗುತ್ತದೆ. ಈಶ್ವರಪ್ಪ ಅವರು ಹಾಕಿರುವ ಮಾನಹಾನಿ ಪ್ರಕರಣಕ್ಕೂ ಈ ಆತ್ಮಹತ್ಯೆಗೂ ಸಂಬಂಧವಿಲ್ಲ ಎಂದು ಹೇಳಿದರು.

ಈಶ್ವರಪ್ಪ ಬಂಧನಕ್ಕೆ ಸುರ್ಜೆವಾಲಾ ಆಗ್ರಹ

ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡಲೇ ಮಂತ್ರಿಮಂಡಲದಿಂದ ವಜಾ ಮಾಡಿ ಬಂಧಿಸಬೇಕು. ಮೋದಿ ಮೂಗಿನ ಕೆಳಗೆ ಕರ್ನಾಟಕದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಆದರೆ ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಬೊಮ್ಮಾಯಿ ಕ್ರಮ ಕೈಗೊಳ್ಳದೇ ಇದ್ದರೆ ಅದು ಸರಿ ಅಲ್ಲ. ಕಾಂಗ್ರೆಸ್ ಸುಮ್ಮನೆ ಕೂರುವುದಿಲ್ಲ. ನಾವು ಇಂದು ಸಂಜೆ ಒಳಗೆ ಬಂಧನ ಮಾಡದೇ ಇದ್ದರೆ ನಾವು ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದರು.

ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಅಡಿಯಿಂದ ಮುಡಿವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ‘ಬಸವರಾಜ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ’. 40 ಪರ್ಸೆಂಟ್ ಕಮಿಷನ್ ಆರೋಪ ಕೇವಲ ಸಚಿವರ ವಿರುದ್ಧವಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆರೋಪವಿದೆ. ಸಚಿವ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಭಾಗಿ ಎಂದು ಒಪ್ಪಿಕೊಂಡಂತೆ ಎಂದಿದ್ದಾರೆ ಸುರ್ಜೇವಾಲ. ಸಚಿವ ಈಶ್ವರಪ್ಪ ಖುದ್ದು ಬಿಜೆಪಿ ಕಾರ್ಯಕರ್ತರನ್ನೇ ಬಿಡಲಿಲ್ಲ ಎಂದು ಸಂತೋಷ್ ಪಾಟೀಲ್ ನೇರವಾಗಿ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರೇ ಬಿಡಲಿಲ್ಲ ಅಂದರೆ ಜನರನ್ನು ಬಿಡ್ತಾರಾ? ನರೇಂದ್ರ ಮೋದಿ, ಅಮಿತ್ ಶಾ ಸ್ಪಂದಿಸದಿದ್ದಾಗ ಬಿಜೆಪಿ ಕಾರ್ಯಕರ್ತ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಚಿವ ಈಶ್ವರಪ್ಪ ವಿರುದ್ಧ ಕೊಲೆ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯಿಸಿದ್ದಾರೆ.

TV9 Kannada


Leave a Reply

Your email address will not be published.