ಈ ಜೋಡಿಗೆ ಗಿಡ-ಮರಗಳೇ ಮಕ್ಕಳು; ಬರೋಬ್ಬರಿ 2,400 ಮರ ನೆಟ್ಟು ಪೋಷಿಸಿದ ವೃದ್ಧ ದಂಪತಿ


ಇಂದಿನ ಕಾಲದಲ್ಲಿ ತಮಗೆ ಮಕ್ಕಳು ಹುಟ್ಟಿಲಿಲ್ಲವಲ್ಲ ಅಂತ ಕೊರಗುವ ದಂಪತಿಗಳೇ ಹೆಚ್ಚು. ಆದ್ರೆ, ಇಲ್ಲೊಬ್ಬ ವೃದ್ಧ ದಂಪತಿ ತಮಗೆ ಮಕ್ಕಳಿಲ್ಲ ಅಂತ ಕೊರಗದೆ, ಎಲ್ಲರಿಗೂ ಮಾದರಿಯಾಗಿದ್ದಾರೆ. ಜನಮೆಚ್ಚುವಂತೆ ಬದುಕಿ ಸಾಧಿಸಿದ್ದಾರೆ. ಆದ್ರೆ, ಇವರ ಕಾರ್ಯಕ್ಕೆ ಸರ್ಕಾರ ಏನೂ ಫಲ ನೀಡದೇ ಇರೋದು ಬೇಸರದ ಸಂಗತಿ.

ಇಳಿವಯಸ್ಸಲ್ಲೂ ಈ ದಂಪತಿಯ ಛಲ ನೋಡ್ರಿ. ಯುವಕರು ನಾಚುವಂತದ್ದು ಇವರ ಕಾರ್ಯ. ಅದೇನ್ ಶ್ರದ್ಧೆ..ಅದೇನ್ ತಪಸ್ಸು.. ಮರ, ಗಿಡಗಳನ್ನ ಬೆಳೆಸಬೇಕು ಅನ್ನೋ ಇವರ ಕಾರ್ಯ ಎಂಥವರು ಮೆಚ್ಚುವಂತದ್ದು. ಹಚ್ಚ ಹಸಿರಿನಿಂದ ಕಂಗೊಳಿಸ್ತಿರೋ ಈ ಗಾರ್ಡನ್​​ನಲ್ಲಿ ವೃದ್ಧ ದಂಪತಿ ಬೆಳೆಸಿರೋದು ಒಂದೋ ಎರಡೋ ಮರಗಳಲ್ಲ. 2, 400 ಮರಗಳು ಕಣ್ರೀ..

ಅಂದ್ಹಾಗೆ, ಈ ವೃದ್ಧ ದಂಪತಿ ಪರಿಚಯ ಮಾಡಿಕೊಳ್ಳಲಿಲ್ಲ ಅಂದ್ರೆ ಹೇಗೆ.. ಈರಣ್ಣ ಹಾಗೂ ನಾಗಮ್ಮ ನಾಶಿ ದಂಪತಿಗಳಿವರು. ಆದ್ರೆ, ಇವರು ವಿಕಲಚೇತನರು. ವಿಜಯಪುರದ ವಜ್ರ ಹನುಮಾನ ಗೇಟ್ ಬಳಿಯಿರೋ 1 ಎಕರೆ ಸರ್ಕಾರಿ ಜಾಗದಲ್ಲಿ 2,400 ವಿವಿಧ ಜಾತಿಯ ಗಿಡ, ಮರಗಳನ್ನು ಬೆಳೆಸಿದ್ದಾರೆ. ಸಾವಿರಾರು ಮರಗಳನ್ನ ಬೆಳೆಸಲು ಕಾರಣ, ಈ ಹಿರಿ ಜೀವಗಳಿಗೆ ಮಕ್ಕಳಿಲ್ಲದೇ ಇರೋದು. ಆದ್ರೆ, ಮಕ್ಕಳಿಲ್ಲ ಅಂತ ಇವರು ಕೊರಗದೇ, ಗಿಡ, ಮರಗಳನ್ನೇ ಮಕ್ಕಳಂತೆ ಸಾಕಿ, ಸಲಹಿದ್ದಾರೆ. 20 ವರ್ಷಗಳ ಹಿಂದೆ ತಮ್ಮಗಿದ್ದ ಸೈಟ್ ಅರ್ಧಭಾಗ ಮಾರಿ, ಬಂದಿರೋ 4 ಲಕ್ಷ ಹಣದಲ್ಲಿ ತಾವೇ ಸಸಿ ತಂದು ನೆಟ್ಟಿದ್ದಾರೆ.

ಪತ್ನಿ ನಾಗಮ್ಮ ರೊಟ್ಟಿ ಮಾರಾಟ ಮಾಡ್ತಿದ್ರೆ, ಪತಿ ಈರಣ್ಣ ನಾಶಿ ಮಾತ್ರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಗಾರ್ಡನ್​​ನಲ್ಲೇ ಕೆಲಸ ಮಾಡ್ತಾರೆ. ವಿಕಲಚೇತನವಾಗಿರೋ ಇವ್ರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈರಣ್ಣನಿಗೆ ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು ಕನಿಷ್ಠ ಮಾಸಾಶನ ಮಾಡಿ ಕೊಟ್ಟಿಲ್ಲ. ಇವ್ರು ಎಷ್ಟೇ ಕಷ್ಟ ಬಂದ್ರೂ ಪರಿಸರ ಕಾಯಕ ಮಾತ್ರ ಬಿಟ್ಟಿಲ್ಲ. ಇವ್ರ ಈ ಕಾರ್ಯಕ್ಕೆ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ಒಟ್ನಲ್ಲಿ, ತಮಗೆ ಮಕ್ಕಳು ಹುಟ್ಟಲಿಲ್ಲ ಅಂತ ಕೊರಗದೇ, ಈ ವೃದ್ಧ ದಂಪತಿ ತಮ್ಮ ಸ್ವಂತ ಹಣದಲ್ಲೇ ಗಾರ್ಡನ್ ನಿರ್ಮಿಸಿ ನೆಮ್ಮದಿ ಕಾಣುತ್ತಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳು ವಿಕಲಚೇತನ ಪರಿಸರ ಪ್ರೇಮಿ ಈರಣ್ಣನ ಕುಟುಂಬಕ್ಕೆ ಮಾಸಾಶನ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಿ, ಆಸರೆಯಾಗಬೇಕಿದೆ.

ರಾಚಪ್ಪ ಬನ್ನಿದಿನ್ನಿ, ನ್ಯೂಸ್​ಫಸ್ಟ್

News First Live Kannada


Leave a Reply

Your email address will not be published.