ಈ ಜೋಡಿ ಸೂಪರ್ ಮಚ್ಚಿ; ರಚಿತಾ ರಾಮ್​-ಕಲ್ಯಾಣ್​ ದೇವ್​ ಬಗ್ಗೆ ಅಭಿಮಾನಿಗಳು ಏನಂತಾರೆ? | Super Machi Trailer: Rachita Ram and Kalyan Dev starrer Super Machi film will release on 14th January


ಈ ಜೋಡಿ ಸೂಪರ್ ಮಚ್ಚಿ; ರಚಿತಾ ರಾಮ್​-ಕಲ್ಯಾಣ್​ ದೇವ್​ ಬಗ್ಗೆ ಅಭಿಮಾನಿಗಳು ಏನಂತಾರೆ?

ರಚಿತಾ ರಾಮ್, ಕಲ್ಯಾಣ್ ದೇವ್

ಕನ್ನಡ ಚಿತ್ರರಂಗದಲ್ಲಿ ನಟಿ ರಚಿತಾ ರಾಮ್ (Rachita Ram)​ ಮಿಂಚುತ್ತಿದ್ದಾರೆ. ಸ್ಟಾರ್​ ನಟರ ಸಿನಿಮಾಗಳಿಗೆ ನಾಯಕಿಯಾಗಿ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರ ಕೈತುಂಬ ಆಫರ್​ಗಳಿವೆ. ಈ ನಡುವೆ ರಚಿತಾ ರಾಮ್​ ಪರಭಾಷೆಯ ಚಿತ್ರರಂಗದತ್ತಲೂ ಕಣ್ಣಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ‘ಸೂಪರ್​ ಮಚ್ಚಿ’ (Super Machi Movie) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಟಾಲಿವುಡ್​ ನಟ ಕಲ್ಯಾಣ್​ ದೇವ್​ (Kalyan Dev)​ ಜತೆ ಅವರು ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್​ ಈಗ ರಿಲೀಸ್​ ಆಗಿದೆ. ಸಿನಿಪ್ರಿಯರಿಂದ ‘ಸೂಪರ್​ ಮಚ್ಚಿ’ ಚಿತ್ರದ ಟ್ರೇಲರ್​ಗೆ (Super Machi Trailer) ಮೆಚ್ಚುಗೆ ವ್ಯಕ್ತವಾಗಿದೆ.

ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಚಿತ್ರದ ಟ್ರೇಲರ್​ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಕಮೆಂಟ್​ ಮಾಡಿದ ಅಭಿಮಾನಿಗಳು ಕಲ್ಯಾಣ್​ ದೇವ್​ ಮತ್ತು ರಚಿತಾ ರಾಮ್​ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷ ಏನೆಂದರೆ ‘ಸೂಪರ್​ ಮಚ್ಚಿ’ ಚಿತ್ರ ಜ.14ರಂದು ಬಿಡುಗಡೆ ಆಗುತ್ತಿದೆ. ಚಿತ್ರತಂಡದ ಈ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಯಾಕೆಂದರೆ ಅನೇಕ ಕಡೆಗಳಲ್ಲಿ ಸಿನಿಮಾ ಬಿಡುಗಡೆಗೆ ಅನುಕೂಲ ಆಗುವಂತಹ ವಾತಾವರಣ ಸದ್ಯಕ್ಕೆ ಇಲ್ಲ.

ಕೊರೊನಾ ವೈರಸ್​​ ಮೂರನೇ ಅಲೆಯ ಕಾರಣದಿಂದ ಅನೇಕ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ನೈಟ್​ ಕರ್ಫ್ಯೂ ಮತ್ತು ವೀಕೆಂಡ್​ ಕರ್ಫ್ಯೂ ಜಾರಿ ಆಗಿರುವುದರಿಂದ ಹಲವು ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿವೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇರುವುದರಿಂದ ಸಿನಿಮಾದ ಕಲೆಕ್ಷನ್​ ಮೇಲೆ ಪೆಟ್ಟು ಬೀಳಲಿದೆ. ಇಷ್ಟೆಲ್ಲ ವಿಘ್ನಗಳು ಇರುವಾಗಲೇ ‘ಸೂಪರ್​ ಮಚ್ಚಿ’ ಬಿಡುಗಡೆ ಆಗುತ್ತಿರುವುದು ಅಚ್ಚರಿ ಮೂಡಿಸಿದೆ.

ಇದೇ ಮೊದಲ ಬಾರಿಗೆ ರಚಿತಾ ರಾಮ್​ ಪರಭಾಷೆಗೆ ಕಾಲಿಟ್ಟಿರುವುದರಿಂದ ಅವರ ವೃತ್ತಿಜೀವನಕ್ಕೆ ಈ ಸಿನಿಮಾದ ಗೆಲುವು ತುಂಬ ಮಹತ್ವದ್ದಾಗಲಿದೆ. ಈ ಚಿತ್ರವನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ಪ್ರಸ್ತುತ ರಚಿತಾ ರಾಮ್​ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ಲವ್​ ಯೂ ರಚ್ಚು’ ಸಿನಿಮಾ ತೆರೆಕಂಡಿತು. ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಚಿತ್ರದಲ್ಲೂ ರಚಿತಾ ಅಭಿನಯಿಸಿದ್ದಾರೆ. ಆ ಸಿನಿಮಾದ ಬಿಡುಗಡೆ ದಿನಾಂಕ ಕೂಡ ಮುಂದೂಡಲ್ಪಟ್ಟಿದೆ.

(‘ಸೂಪರ್​ ಮಚ್ಚಿ’ ಚಿತ್ರದ ಟ್ರೇಲರ್​)

TV9 Kannada


Leave a Reply

Your email address will not be published. Required fields are marked *