ಚೆನ್ನೈ: ವಾಂಖಡೆಯಲ್ಲಿ ನಡೆದ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ವಿಕೆಟ್ ಉಳಿಸಿಕೊಳ್ಳಲು ಡೈವ್ ಹೊಡೆದು ಕ್ರೀಸ್ ಗೆ ತಲುಪಿದ್ದರು. ಆ ಮೂಲಕ ರನ್ ಔಟ್ ನಿಂದ ಅಲ್ಪದರಲ್ಲೇ ಪಾರಾಗಿದ್ದರು. ಇದೀಗ ಈ ಡೈವ್ ನೆಟ್ಟಿಗರ ಗಮನ ಸೆಳೆದಿದೆ.

ಹೌದು. ಎಂ.ಎಸ್ ಧೋನಿ ಮೊದಲ ಬಾರಿಯಂಬಂತೆ ಅತ್ಯದ್ಬುತವಾಗಿ ಡೈವ್ ಹೊಡೆದಿದ್ದರು. ಇದೇ ಮಾದರಿಯಲ್ಲಿ 2019ರ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಡೈವ್ ಹೊಡೆದಿದ್ದಲ್ಲಿ ಪಂದ್ಯ ಗೆಲ್ಲುವ ಸಾಧ್ಯತೆಯಿತ್ತು ಎಂದು ನೆಟ್ಟಿಗರು ವರ್ಣನೆ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ವೇಳೆ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದ್ದರು. ಮಾರ್ಟಿನ್ ಗಪ್ಟಿಲ್ ಎಸೆದ ಥ್ರೋಗೆ ರನೌಟ್ ಆಗುವ ಮೂಲಕ ಭಾರತದ ವಿಶ್ವಕಪ್ ಕನಸು ಕೂಡ ಭಗ್ನವಾಗಿತ್ತು.  ಒಂದು ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ತಮ್ಮ ವಿಕೆಟ್ ಉಳಿಸಿಕೊಳ್ಳಲು ಹೊಡೆದ ಡೈವ್ ಅನ್ನು ಅಂದು ಪ್ರಯತ್ನಿಸಿದ್ದರೇ ಗೆಲ್ಲುವ ಸಾಧ್ಯತೆ ಅಧಿಕವಾಗಿತ್ತು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿ ತೊಡಗಿದ್ದಾರೆ. ಮಾತ್ರವಲ್ಲದೆ ಅಂದಿನ ಹಾಗೂ ಇಂದಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಕೆಲವು ಅಭಿಮಾನಿಗಳು, ಧೋನಿ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ 39ರ ಹರೆಯದಲ್ಲೂ ಗರಿಷ್ಠ ಮಟ್ಟದ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕ್ರೀಡೆ – Udayavani – ಉದಯವಾಣಿ
Read More