ಈ ಬಾರಿ ಪ್ರೇಮಿಗಳ ದಿನದಂದು ಬೆಂಗಳೂರಿನಿಂದ ರಫ್ತಾದ ಗುಲಾಬಿ ಹೂವುಗಳ ಪ್ರಮಾಣವೆಷ್ಟು? ಇಲ್ಲಿದೆ ಅಚ್ಚರಿಯಾಗುವ ಅಂಕಿಅಂಶ | More than 5 lakh kg Roses were exported from Bengaluru on valentines day 2022 details inside


ಈ ಬಾರಿ ಪ್ರೇಮಿಗಳ ದಿನದಂದು ಬೆಂಗಳೂರಿನಿಂದ ರಫ್ತಾದ ಗುಲಾಬಿ ಹೂವುಗಳ ಪ್ರಮಾಣವೆಷ್ಟು? ಇಲ್ಲಿದೆ ಅಚ್ಚರಿಯಾಗುವ ಅಂಕಿಅಂಶ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಪ್ರೇಮಿಗಳ ದಿನದಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bengaluru International Airport) ಬರೋಬ್ಬರಿ 5.15 ಲಕ್ಷ ಕೆ.ಜಿ ಗುಲಾಬಿ ಹೂಗಳ (Red Rose) ಸಾಗಣೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಹೆಚ್ಚು ಎನ್ನಲಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿವರ್ಷ ಪ್ರೇಮಿಗಳ ದಿನದಂದು (Valentine’s Day) 25 ವಿಮಾನ ನಿಲ್ದಾಣಗಳಿಗೆ ಗುಲಾಬಿಯನ್ನು ರಫ್ತು ಮಾಡಲಾಗುತ್ತದೆ. ಕಳೆದ ವರ್ಷ 2.17 ಲಕ್ಷ ಕೆ.ಜಿಯಷ್ಟು ರಫ್ತು ಮಾಡಲಾಗಿತ್ತು. ಈ ಬಾರಿ 5.15 ಲಕ್ಷ ಕೆ.ಜಿ. ರಫ್ತು ಮಾಡಲಾಗಿದ್ದು, ದುಪ್ಪಟ್ಟು ಹೆಚ್ಚಳ ಕಂಡಿದೆ. ಅದರಲ್ಲೂ ದೇಶೀಯ ಸಾಗಣೆಯಲ್ಲಿಯೇ 3.15 ಲಕ್ಷ ಕೆ.ಜಿ. ರಫ್ತು ಮಾಡಲಾಗಿದ್ದು, ಕಳೆದ ವರ್ಷ ಕೇವಲ 1.03 ಲಕ್ಷ ಕೆ.ಜಿ ಮಾತ್ರ ರಫ್ತು ಮಾಡಲಾಗಿತ್ತು ಎಂದು ಬಿಐಎಎಲ್ ಮುಖ್ಯ ಸ್ಟಾರ್ಟಜಿ ಡೆವಲಪರ್ ಆಫೀಸರ್ ಸಾತ್ಯಕಿ ರಂಗನಾಥ್ ತಿಳಿಸಿದ್ದಾರೆ. ಭಾರತ ಅದರಲ್ಲೂ ಕರ್ನಾಟಕ ಗುಲಾಬಿ ರಫ್ತು ಮಾಡುವಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ವರ್ಷ ಗುಲಾಬಿ ರಫ್ತಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿ, ಮುಂಬೈ, ಕೊಲ್ಕತ್ತ, ಗೌಹಾಟಿ, ಚಂಡೀಗಢ ಹಾಗೂ ಸಿಂಗಾಪುರ, ಲಂಡನ್, ದುಬೈ ಸೇರಿದಂತೆ ಅಂತರಾಷ್ಟ್ರೀಯ ತಾಣಗಳಿಗೆ ರಫ್ತು ಮಾಡಲಾಗಿದೆ. 2020-21ರ ವರ್ಷದಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 60 ಸಾವಿರ ಮೆಟ್ರಿಕ್ ಟನ್‌ನಷ್ಟು ಕೋಲ್ಡ್ ಸ್ಟೋರೇಜ್ ಹೊಂದಿದ್ದು, ಕಡಿಮೆ ಬಾಳಿಕೆ ಅವಧಿಯ ಪದಾರ್ಥಗಳ ಸಾಗಣೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಗುಲಾಬಿ ಹೂವಿಗಿದೆ ಉನ್ನತ ಬೇಡಿಕೆ:

ಬೆಂಗಳೂರಿನ ಗುಲಾಬಿ ಹೂವುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಬೇಡಿಕೆ ಇದೆ. ಈ ಕಾರಣದಿಂದ ಪ್ರತೀ ವರ್ಷ ರಫ್ತು ಹೆಚ್ಚುತ್ತಲೇ ಇದೆ. ಈ ವರ್ಷ ಬೆಂಗಳೂರಿನಲ್ಲಿಯೇ ಒಂದು ರೆಡ್ ರೋಜ್ ಗೆ ಸದ್ಯ 15 ರೂಪಾಯಿ ಯಿಂದ ಹಿಡಿದು 20 ರೂಪಾಯಿವರೆಗೂ ಮಾರಾಟವಾಗಿತ್ತು. ಇದಕ್ಕೆ ಬೇಡಿಕೆ ಹೇಗಿತ್ತೆಂದರೆ ವರ್ತಕರು ರೈತರ ತೋಟಕ್ಕೆ ತೆರಳಿ ಗುಲಾಬಿ ಹೂವುಗಳನ್ನು ಖರೀದಿಸಿದ್ದರು. ಈ ಕಾರಣದಿಂದ ಈ ಬಾರಿ ಗುಲಾಬಿ ಬೆಳೆದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಇದೀಗ ರಫ್ತಿನ ಅಂಕಿ ಅಂಶಗಳೂ ಇದಕ್ಕೆ ಪೂರಕ ದಾಖಲೆ ನೀಡಿವೆ.

TV9 Kannada


Leave a Reply

Your email address will not be published. Required fields are marked *