ಈ ವರ್ಷ ಮದುವೆಯಾಗುತ್ತೇನೆ ಎಂದ ಶಮಿತಾ; ಆದರೆ ಹುಡುಗ ಯಾರು ಎಂಬುದೇ ಅನುಮಾನವಂತೆ! | Shamita Shetty says she will marry in 2022 but dont know who the man is


ಈ ವರ್ಷ ಮದುವೆಯಾಗುತ್ತೇನೆ ಎಂದ ಶಮಿತಾ; ಆದರೆ ಹುಡುಗ ಯಾರು ಎಂಬುದೇ ಅನುಮಾನವಂತೆ!

ಶಮಿತಾ ಶೆಟ್ಟಿ, ರಾಕೇಶ್ ಬಾಪಟ್

ಬಿಗ್​ ಬಾಸ್ 15ರಲ್ಲಿ ಕಾಣಿಸಿಕೊಂಡಿರುವ ಶಮಿತಾ ಶೆಟ್ಟಿ (Shamita Shetty) ಇದೀಗ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಬಿಗ್ ಬಾಸ್ ಒಟಿಟಯಲ್ಲಿ ಪರಿಚಿತರಾದ ರಾಕೇಶ್ ಬಾಪಟ್ (Raqesh Bapat) ಜತೆ ಅವರ ಹೆಸರು ಜೋರಾಗಿ ಕೇಳಿಬರುತ್ತಿದೆ. ಈರ್ವರು ಅದನ್ನು ನಿರಾಕರಿಸಿಯೂ ಇಲ್ಲ. ಬಿಗ್ ಬಾಸ್ 15 ಪ್ರಾರಂಭವಾಗುವ ಮೊದಲು ಈರ್ವರು ಡೇಟ್ ಕೂಡ ಹೋಗಿದ್ದರು. ಅಲ್ಲದೇ ಶೋಗೆ ರಾಕೇಶ್ ಬಾಪಟ್ ಎಂಟ್ರಿ ಕೂಡ ನೀಡಿದ್ದರು. ಆದರೆ ಅನಾರೋಗ್ಯದಿಂದ ಅವರು ಮರಳಿದ್ದರು. ಇದೀಗ ಶಮಿತಾ ಮಾತ್ರ ಸ್ಪರ್ಧಿಸುತ್ತಿದ್ದಾರೆ. ಅಭಿಮಾನಿಗಳು ಈರ್ವರನ್ನೂ ಪ್ರೀತಿಯಿಂದ ‘ಶರಾ’ ಎಂದು ಕರೆಯುತ್ತಾರೆ. ಬಿಗ್​ ಬಾಸ್​ನಲ್ಲಿ ರಾಕೇಶ್ ಇಲ್ಲದಿದ್ದರೂ ಅವರ ಹೆಸರು ಆಗಾಗ ಪ್ರಸ್ತಾಪವಾಗುತ್ತಲೇ ಇರುತ್ತದೆ. ಇತ್ತೀಚೆಗೆ ಶಮಿತಾ ಮದುವೆಯ ಕುರಿತು ಬಿಗ್ ಬಾಸ್​ನಲ್ಲಿ ಚರ್ಚೆಯಾಗಿದೆ. ಆದರೆ ಅಲ್ಲೊಂದು ಟ್ವಿಸ್ಟ್​​ಅನ್ನು ಶಮಿತಾ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

ಬಿಗ್ ಬಾಸ್ 15ಕ್ಕೆ ಇತ್ತೀಚೆಗೆ ಜ್ಯೋತಿಷಿಯೊಬ್ಬರು ಬಂದಿದ್ದರು. ಸ್ಪರ್ಧಿಗಳ ಭವಿಷ್ಯದ ಕುರಿತು ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಶಮಿತಾ ಬಗ್ಗೆ ಹೇಳುವಾಗ ಹಲವು ಅಚ್ಚರಿ ವಿಚಾರಗಳನ್ನು ಅವರು ಹೇಳಿದ್ದಾರೆ. ‘‘ನಿಮ್ಮ ಪತಿ ಶ್ರೀಮಂತನಲ್ಲ, ಒಬ್ಬ ಸಾಮಾನ್ಯರು’’ ಎಂದಿದ್ದಾರೆ ಜ್ಯೋತಿಷಿ. ಅಲ್ಲದೇ ಮದುವೆಯ ನಂತರ ಅವರು ಶ್ರೀಮಂತರಾಗುತ್ತಾರೆ ಎಂದಿದ್ದಾರೆ. ಜತೆಗೆ ಶಮಿತಾ ಹಾಗೂ ಅವರ ಭಾವಿ ಪತಿಗೆ ಈರ್ವರು ಮಕ್ಕಳು ಜನಿಸುತ್ತಾರಂತೆ. ಮೊದಲಿಗೆ ಪುತ್ರಿ ನಂತರ ಪುತ್ರ ಎಂದಿದ್ದಾರೆ.

ಈ ವಿಷಯ ಕೇಳಿದ ತಕ್ಷಣ ಸ್ಪರ್ಧಿಯಾದ ಪ್ರತೀಕ್ ಶಮಿತಾ ಅವರಿಗೆ ಅಭಿನಂದಿಸಿದ್ದಾರೆ. ಆಗ ಮಾತನಾಡಿರುವ ಶಮಿತಾ, ‘‘2022ರಲ್ಲಿ ಮದುವೆಯಾಗೋದು ಪಕ್ಕಾ’’ ಎಂದಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ನೀಡಿರುವ ಶಮಿತಾ, ಹುಡುಗನ ಬಗ್ಗೆ ಖಚಿತತೆ ಇಲ್ಲ ಎಂದಿದ್ದಾರೆ. ‘‘2022ರಲ್ಲಿ ಮದುವೆಯಾಗೋದು ಪಕ್ಕಾ, ಆದರೆ ಹುಡುಗ ಯಾರು ಎಂದು ಇನ್ನೂ ತಿಳಿದಿಲ್ಲ’’ ಎಂದಿದ್ದಾರೆ. ರಾಕೇಶ್ ಬಾಪಟ್ ಜತೆ ಉತ್ತಮ ಬಾಂಧವ್ಯ ಹೊಂದಿದ್ದರೂ ಶಮಿತಾ ಇನ್ನೂ ಖಚಿತತೆ ಹೊಂದಿಲ್ಲ ಎಂದು ಅಭಿಮಾನಿಗಳು ಬೇಸರಪಟ್ಟುಕೊಂಡಿದ್ದಾರೆ.

ಮತ್ತೋರ್ವ ಸ್ಪರ್ಧಿ ನಿಶಾಂತ್ ಶಮಿತಾಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅಲ್ಲದೇ ರಾಕೇಶ್ ಬಾಪಟ್ ಬಗ್ಗೆ ದುಡುಕಬೇಡ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಶಮಿತಾ, ‘‘ನನಗೆ ಅವರ ಬಗ್ಗೆ ತಿಳಿದೇ ಇರಲಿಲ್ಲ, ಬಿಗ್ ಬಾಸ್ ಓಟಿಟಿಯಲ್ಲಿ ಪರಿಚಯವಾಯಿತು’’ ಎಂದಿದ್ದಾರೆ.

ಆದರೆ ನಿಶಾಂತ್ ರಾಕೇಶ್ ಕುರಿತು ಹೇಳುತ್ತಾ, ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದಿದ್ದಕ್ಕೆ, ಶಮಿತಾ ರಾಕೇಶ್ ಪರ ನಿಂತಿದ್ದಾರೆ. ‘‘ರಾಕೇಶ್ ನನ್ನೊಂದಿಗೆ ಬೇರೆಯದೇ ರೀತಿಯಲ್ಲಿ ಇರುತ್ತಾರೆ’’ ಎಂದು ಗೆಳೆಯನ ಪರ ನಿಂತಿದ್ದಾರೆ ಶಮಿತಾ. ಇದರಿಂದ ಅವರ ಅಭಿಮಾನಿಗಳಿಗೆ ತುಸು ಸಮಾಧಾನವಾಗಿದೆ.

ಈ ಮೊದಲು ಶಮಿತಾ ಜತೆ ಗೆಳೆತನದ ಬಗ್ಗೆ ಮಾತನಾಡಿದ್ದ ರಾಕೇಶ್, ‘‘ನಮ್ಮೀರ್ವರ ಸಂಬಂಧಕ್ಕೆ ಏನೂ ಹೆಸರಿಡಲು ಇಚ್ಛಿಸುವುದಿಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ತಿಳಿದುಕೊಳ್ಳಬೇಕು. ರಿಯಾಲಿಟಿ ಶೋಗಿಂತ ನಿಜ ಜೀವನ ಭಿನ್ನ’’ ಎಂದಿದ್ದರು. ಇದೀಗ ಶಮಿತಾ ಹೇಳಿಕೆ ಎಲ್ಲರ ಕುತೂಹಲ ಕೆರಳಿಸಿದೆ.

TV9 Kannada


Leave a Reply

Your email address will not be published. Required fields are marked *