ರಾಜ್ಯಕ್ಕೆ ಮುಂಗಾರು ಪ್ರವೇಶ ಹಿನ್ನೆಲೆ ಕೃಷಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಇಂದು ಸಿಎಂ ಸಭೆ ನಡೆಸಿದರು. ಸಭೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಬಿ.ಸಿ ಪಾಟೀಲ್, ಆರ್ ಶಂಕರ್, ಎಸ್.ಟಿ ಸೋಮಶೇಖರ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯಕ್ಕೆ ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ, ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಭೆಯ ಮುಖ್ಯಾಂಶಗಳು:

1. ರಾಜ್ಯದಲ್ಲಿ ಈ ವರೆಗೆ ಚೆನ್ನಾಗಿ ಮಳೆಯಾಗಿದೆ. ಕರ್ನಾಟಕದಲ್ಲಿ 20 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಹಾಗೂ 10 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 6-7ರ ವೇಳೆಗೆ ಮುಂಗಾರು ಪ್ರಾರಂಭವಾಗಲಿದೆ.

2. 2020-21ರಲ್ಲಿ ದಾಖಲೆ ಪ್ರಮಾಣದ 153.08 ಲಕ್ಷ ಟನ್ ಗಳಷ್ಟು ಆಹಾರ ಧಾನ್ಯ ಉತ್ಪಾದನೆ ಆಗಿದೆ. ಕಳೆದ ವರ್ಷಕ್ಕಿಂತ ಶೇ. 10 ರಷ್ಟು ಹೆಚ್ಚಳವಾಗಿದೆ.

3. ಈ ವರ್ಷ 135.48 ಲಕ್ಷ ಟನ್ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ..

4. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟು ಸಂಖ್ಯೆಯಲ್ಲಿದೆ. ಡಿಎಪಿ ಪೂರೈಕೆಯಲ್ಲಿ ಇದ್ದ ಸಮಸ್ಯೆ ಬಗೆಹರಿಸಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

5. ಡಿಎಪಿ ಗೊಬ್ಬರ ಮತ್ತು ಯೂರಿಯ ಗೊಬ್ಬರ ಸಕಾಲದಲ್ಲಿ ಪೂರೈಸುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

6. ರಾಜ್ಯದಲ್ಲಿ 690 ಕೃಷಿ ಯಂತ್ರ ಧಾರೆ ಕೇಂದ್ರಗಳು ಹಾಗೂ 210 ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ.

7. ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಲಾದ ಪರಿಹಾರ ವಿತರಣೆ ಈಗಾಗಲೇ ಪ್ರಾರಂಭವಾಗಿದ್ದು, ಇದಕ್ಕಾಗಿ ಬಿಡುಗಡೆಯಾಗಿರುವ 19 ಕೋಟಿ ರೂ. ಗಳಲ್ಲಿ 15.23 ಕೋಟಿ ರೂ. ಗಳನ್ನು 36,327 ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ.

8. 2020-21ರಲ್ಲಿ ಕೃಷಿ ಸಾಲ ಗುರಿಗಿಂತ 16 ಶೇ. ಹೆಚ್ಚು ವಿತರಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 3 ಸಾವಿರ ಕೋಟಿ ರೂ. ಹೆಚ್ಚುವರಿ ಗುರಿ ನಿಗದಿ ಪಡಿಸಿದ್ದು, ಪ್ರಸಕ್ತ ಸಾಲಿನಲ್ಲಿ 21 ಸಾವಿರ ಕೋಟಿ ರೂ. ಸಾಲ ವಿತರಣೆಯ ಗುರಿ ನಿಗದಿ ಪಡಿಸಲಾಗಿದೆ.

9. ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ 1067 ಕೋಟಿ ರೂ. ಪಾವತಿಗೆ ಬಾಕಿ ಇದ್ದು, ಕೂಡಲೇ 250 ಕೋಟಿ ರೂ. ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರವಾಹ ಎದುರಿಸಲು ಸಿದ್ಧತೆ:

10. ಮಳೆಗಾಲದಲ್ಲಿ ಪ್ರವಾಹ ಎದುರಿಸಲು ಸಹ ಸಿದ್ಧತೆ ನಡೆಸಲಾಗಿದ್ದು, ಪಂಚಾಯಿತಿ ಮಟ್ಟದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.

11. ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡಗಳು ಸಜ್ಜಾಗಿವೆ. ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

The post ಈ ವರ್ಷ 135.48 ಲಕ್ಷ ಟನ್ ಆಹಾರ ಉತ್ಪಾದನೆಯ ಗುರಿ: ಸಿಎಂ ಸಭೆಯ ಹೈಲೈಟ್ಸ್ appeared first on News First Kannada.

Source: newsfirstlive.com

Source link