ಪ್ರತಿವಾರ ರಿಯಾಲಿಟಿ ಶೋ ಮೂಲಕ ವೀಕೆಂಡ್‌ನ‌ಲ್ಲಿ ನಟ ಕಿಚ್ಚ ಸುದೀಪ್‌ ಕಿರುತೆರೆ ಪ್ರೇಕ್ಷಕರಿಗೆ ತಮ್ಮ ನಿರೂಪಣೆ ಮೂಲಕ ದರ್ಶನ ಕೊಡುತ್ತಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸುದೀಪ್‌ ಕಳೆದವಾರ ತಮ್ಮ ಕಿರುತೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಕಳೆದ ವಾರ ಕಿರುತೆರೆ ವೀಕ್ಷಕರಿಗೆ ಸುದೀಪ್‌ ಅವರನ್ನು ಟಿವಿಯಲ್ಲಿ ನೋಡುವ ಅವಕಾಶ ಮಿಸ್‌ ಆಗಿತ್ತು. ಇನ್ನು ಈ ವಾರ ಸುದೀಪ್‌ ಎಂದಿನಂತೆ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಕಳೆದ ವಾರದಂತೆ ಈ ವಾರವೂ ಕಿರುತೆರೆಯಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಳ್ಳುತ್ತಿಲ್ಲ.

ಸುದೀಪ್‌ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿರುವುದರಿಂದ, ಜೊತೆಗೆ ವೈದ್ಯರು ಕೂಡ ಎರಡು ವಾರಗಳ ಕಾಲ ಸುದೀಪ್‌ ಅವರಿಗೆ ವಿಶ್ರಾಂತಿಗೆ ಸೂಚಿಸಿರುವುದರಿಂದ, ಸುದೀಪ್‌ ಈ ವಾರ ಕೂಡ ತಮ್ಮ ಕಿರುತೆರೆ ಕಾರ್ಯಕ್ರಮದ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಈ ವಾರ ಕೂಡ ಕಿರುತೆರೆಯಲ್ಲಿ ಕಿಚ್ಚನ ದರ್ಶನ ಆಗುತ್ತಿಲ್ಲ.

ಇದನ್ನೂ ಓದಿ:ಇಂದು ವರನಟ ಡಾ.ರಾಜ್‌ ಕುಮಾರ್ 93ನೇ ಹುಟ್ಟುಹಬ್ಬ

ಈ ವಿಷಯವನ್ನು ಸ್ವತಃ ಸುದೀಪ್‌ ಅವರೇ, ಟ್ವೀಟ್‌ ಮಾಡಿದ್ದು, “ಈ ವಾರವೂ ವೀಕೆಂಡ್‌ ಎಪಿಸೋಡ್‌ಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ವೇದಿಕೆ ಹತ್ತಿ ಅದಕ್ಕೆ ನ್ಯಾಯ ಸಲ್ಲಿಸಲು ನನಗೆ ಇನ್ನೊಂದಿಷ್ಟು ವಿಶ್ರಾಂತಿಯ ಅಗತ್ಯವಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಸುದೀಪ್‌ ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದು, ಆದಷ್ಟು ಬೇಗ ಸುದೀಪ್‌ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಪತ್ನಿ ಪ್ರಿಯಾ ಸುದೀಪ್‌ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More