ಬೆಂಗಳೂರು: ಪೊಲೀಸರು ವ್ಯಕ್ತಿಯೊಬ್ಬರನ್ನ ಸುತ್ತುವರಿದು ಹೊಡೆಯುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಸ್ಪಷ್ಟನೆ ನೀಡಿದ್ದು, ಈ ವಿಡಿಯೋ ಕರ್ನಾಟಕದ್ದಲ್ಲ. ಘಟನೆ ನಡೆದಿರೋದು ಕಳೆದ ವರ್ಷ, ಅದೂ ಮುಂಬೈನಲ್ಲಿ ಅಂತ ತಿಳಿಸಿದ್ದಾರೆ. ಕರ್ನಾಟಕ ಪೊಲೀಸ್​ ವೆಬ್​ಸೈಟ್​ನಲ್ಲಿ ಈ ಕುರಿತು ಫ್ಯಾಕ್ಟ್​ ಚೆಕ್​ ವರದಿ ಪ್ರಕಟಿಸಲಾಗಿದೆ.

ಕರ್ನಾಟಕದಲ್ಲಿ ಲಾಕ್‌ಡೌನ್ ವೇಳೆ ಪೊಲೀಸರ ಗುಂಪು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು  ವಿಡಿಯೋ ತುಣುಕೊಂದನ್ನ ವಾಟ್ಸಾಪ್‌ನಲ್ಲಿ ಶೇರ್ ಮಾಡಲಾಗುತ್ತಿದೆ. ವೀಡಿಯೊದಲ್ಲಿ ಪದ್ಮ ಹರೀಶ್(ಅಪರಿಚಿತೆ) ಎಂದು ಹೇಳಿಕೊಂಡಿರುವ ಮಹಿಳೆ, ಪೋಲಿಸರನ್ನ ಅವಾಚ್ಯ ಪದಗಳಲ್ಲಿ ದೂಷಿಸಿದ್ದಾರೆ. ಹಾಗೇ ಪೊಲೀಸರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹಲ್ಲೆಗೆ ಪ್ರೇರೇಪಿಸಿದ್ದಾರೆ. ಈ ಬಗ್ಗೆ ವಿವರವಾದ ಪರಿಶೀಲನೆ ನಡೆಸಲಾಗಿದ್ದು, ಈ ವಿಡಿಯೊ ಕಳೆದ ವರ್ಷ ಮಹಾರಾಷ್ಟ್ರದ ಮುಂಬೈ ಸಮೀಪದ ಮುಂಬ್ರಾದಲ್ಲಿ ನಡೆದ ಘಟನೆಯದ್ದು ಅಂತ ತಿಳಿದುಬಂದಿದೆ. ಇದು ಕರ್ನಾಟಕ ಪೊಲೀಸರಿಗಾಗಲೀ ಅಥವಾ ಕರ್ನಾಟಕದ ಪ್ರಸ್ತುತ ಲಾಕ್‌ಡೌನ್‌ಗಾಗಲೀ ಸಂಬಂಧಿಸಿಲ್ಲ. ಏಪ್ರಿಲ್ 3, 2020ರ ಈ ವಿಡಿಯೋ ಮಹಾರಾಷ್ಟ್ರದ ಮುಂಬೈನ ವಾಸೈನದ್ದು. ಮುಂಬೈ ಮಿರರ್ ಈ ಘಟನೆ ಬಗ್ಗೆ ವಿವರವಾಗಿ ವರದಿ ಮಾಡಿದೆ ಎಂದು ವೆಬ್​ಸೈಟ್​​ನಲ್ಲಿ ಹೇಳಲಾಗಿದೆ.

ವಿಡಿಯೋದಲ್ಲಿರುವುದು ಕರ್ನಾಟಕ ಪೊಲೀಸರು ಎಂದು ಸುಳ್ಳು ಸುದ್ದಿ​ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮಲ್ ಪಂತ್ ಹೇಳಿದ್ದಾರೆ.

ವಿಡಿಯೋ ಬಗ್ಗೆ ಕಮಲ್​ ಪಂತ್ ಈ ರೀತಿ  ಟ್ವೀಟ್ ಮಾಡಿದ್ದಾರೆ.
ಸುದ್ದಿ ಪರಿಶೀಲಿಸಿ ಶೇರ್ ಮಾಡಿ!! ಒಬ್ಬ ವ್ಯಕ್ತಿಯನ್ನು ಸುತ್ತುವರಿದು ಪೊಲೀಸ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಮಹಿಳೆ ಅದನ್ನು ಕರ್ನಾಟಕ ಲಾಕ್​ಡೌನ್ ಸಮಯದಲ್ಲಿ ನಡೆದಿದ್ದು ಎಂದು ವಿವರಿಸುತ್ತಾ ಇರುವುದು ವಿಡಿಯೋದಲ್ಲಿ ಗಮನಿಸಬಹುದು. ಈ ಮೂಲಕ ತಿಳಿಸುವುದೇನೆಂದರೆ, ಆ ದೃಶ್ಯದಲ್ಲಿರುವುದು ಕರ್ನಾಟಕ ಪೊಲೀಸ್ ಅಲ್ಲ, ಆ ಘಟನೆ ಏಪ್ರಿಲ್ 3, 2020ರಂದು ಮುಂಬೈಯಲ್ಲಿ ನಡೆದಿದೆ. ಈ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ರೀತಿ ಪ್ರಚೋದನಾತ್ಮಕ ಸುದ್ದಿಗಳಿಂದ ದಿಕ್ಕು ತಪ್ಪಬಾರದು. ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಪರಿಶೀಲಿಸಬೇಕು

– ಕಮಲ್​ ಪಂತ್, ಬೆಂಗಳೂರು ಪೊಲೀಸ್​ ಕಮಿಷನರ್

 

 

The post ಈ ವಿಡಿಯೋ ಕರ್ನಾಟಕದ್ದಲ್ಲ.. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ದ ಕ್ರಮ ಕೈಗೊಳ್ತೀವಿ -ಕಮಲ್ ಪಂತ್​ appeared first on News First Kannada.

Source: newsfirstlive.com

Source link