1. ರಾಜ್ಯದಲ್ಲಿ ಲಾಕ್‌ಡೌನ್‌ ಆರನೇ ದಿನ
ಮಹಾಮಾರಿ ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಘೋಷಿಸಿರೋ ಲಾಕ್​ಡೌನ್ 6ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯ ಲಾಕ್‌ಡೌನ್‌ ಬಹುತೇಕ ಯಶಸ್ವಿಯಾಗಿದ್ರಿಂದ, ಇವತ್ತು ಸಹ ಎಲ್ಲಾ ಜಿಲ್ಲೆಗಳಲ್ಲಿ ಅದೇ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿದಿವೆ. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳನ್ನ ಕೊಳ್ಳಲು ಅವಕಾಶ ನೀಡಲಾಗಿದೆ.

2. ರೇಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ
ಬೆಂಗಳೂರು ಬಿಟ್ಟು ತಮ್ಮ ಊರಿಗೆ ತೆರಳಲು ಜನ ರೈಲಿಗಾಗಿ ಕಾದು ಕೂತಿದ್ದಾರೆ. ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೇಲ್ವೇ ನಿಲ್ದಾಣದಲ್ಲಿ ಕ್ಷಣ ಕ್ಷಣಕ್ಕೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಊರಿಗೆ ಹೊರಟಿರುವ ಜನರು ಗುಂಪು ಗುಂಪಾಗಿ ಕುಳಿತುಕೊಂಡು ರೈಲಿಗಾಗಿ ಕಾಯುತ್ತಿದ್ದಾರೆ. ಹೀಗಾಗಿ ಲಾಠಿ ಹಿಡಿದು ಪೊಲೀಸರು ಪ್ರಯಾಣಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಗುಂಪು ಗುಂಪಾಗಿ ನಿಲ್ಲದಂತೆ ಪ್ರಯಾಣಿಕರಿಗೆ ಸೂಚಿಸುತ್ತಿದ್ದಾರೆ. ಇನ್ನು ರೇಲ್ವೇ ನಿಲ್ದಾಣದಲ್ಲಿ ಇಂದು ಕೂಡಾ ಕೋವಿಡ್‌ ಟೆಸ್ಟ್‌ ಮಾಡುತ್ತಿಲ್ಲ.

3. ಕೆ.ಆರ್.ಮಾರ್ಕೆಟ್ ಖಾಲಿ..ಖಾಲಿ
ನಿನ್ನೆ ಜನರಿಂದ ಗಿಜಿಗುಡುತ್ತಿದ್ದ ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ ಇಂದು ಖಾಲಿ ಖಾಲಿಯಾಗಿದೆ. ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನ ಪೊಲೀಸರು ಎತ್ತಂಗಡಿ ಮಾಡಿಸಿದ್ದಾರೆ. ಎಸ್‌ಜೆಪಿ ರಸ್ತೆಯಲ್ಲಿದ್ದ ಹೂ-ಹಣ್ಣಿನ ಅಂಗಡಿ ತೆರವು ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ. ಕೆ.ಆರ್‌. ಮಾರ್ಕೆಟ್‌ನಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಮಾತ್ರ ಓಪನ್ ಆಗಿವೆ.

4. ಕೊರೊನಾದ 2ನೇ ಅಲೆ ಹೆಚ್ಚು ಮಾರಕವಾಗಿರಲಿದೆ- ವಿಶ್ವ ಆರೋಗ್ಯ ಸಂಸ್ಥೆ
ವಿಶ್ವದಾದ್ಯಂತ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು ಜನ ಜೀವನ ಸಂಪೂರ್ಣ ಅಸ್ಥವ್ಯಸ್ತವಾಗಿದೆ. ಕೋವಿಡ್​​ನ ಎರಡನೇ ಅಲೆಯೂ ಹಿಂದಿನ ವರ್ಷಕ್ಕಿಂತ ಹೆಚ್ಚು ಮಾರಕವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಇನ್ನು ಜಪಾನ್ ರಾಜಧಾನಿ ಟೋಕಿಯೋ ಸೇರಿದಂತೆ ಇತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಇದರ ನಡುವೆ ಒಲಂಪಿಕ್ಸ್ ನಡೆಯಲಿದೆ. ಹೀಗಾಗಿ ಜಪಾನ್​​ನಾದ್ಯಂತ ಕೊರೊನಾ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

5. ‘12ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆ ರದ್ದು ಮಾಡಿ’
ಕೊರೊನಾದ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 12ನೇ ತರಗತಿಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರ ಪರ ವಕೀಲ ಮಮತಾ ಶರ್ಮಾ, ಮುಗ್ಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಅಮಾನವೀಯ ನಿರ್ದೇಶನಗಳನ್ನು ನೀಡಲಾಗಿದೆ. ಕಳೆದ ವರ್ಷ ಅವರು ಅಂಗೀಕರಿಸಿದ ನಿರ್ದೇಶನಗಳನ್ನು ಅನುಸರಿಸುವ ಬದಲು ಅಂತಿಮ ಪರೀಕ್ಷೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಬೇಕು ಎಂದು ಕೋರಿದ್ದಾರೆ. ಆನ್‌ಲೈನ್ ಅಥವಾ ಆಫ್‌ಲೈನ್ ಪರೀಕ್ಷೆಗಳು ಸಹ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರ್ಯಸಾಧ್ಯವಲ್ಲ ಎಂದು ಮಮತಾ ಶರ್ಮಾ ಹೇಳಿದ್ದಾರೆ.

6. ಪುಣೆಯಲ್ಲಿ 270 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ದೃಢ 
ಕೊರೊನಾ ಆರ್ಭಟದ ನಡುವೆ ದೇಶಾದ್ಯಂತ ಬ್ಲ್ಯಾಕ್ ಫಂಗಸ್ ಭೀತಿ ಹೇಚ್ಚಾಗಿದೆ. ಇದೀಗ ಪುಣೆಯಲ್ಲಿ ಸುಮಾರು 270 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೋಂಕು ಮೆದುಳು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹಿಗಳು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾರಣಾಂತಿಕವಾಗಬಹುದು ಎಂದು ತಿಳಿಸಲಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಈವರೆಗೆ ಸುಮಾರು 270 ಪ್ರಕರಣಗಳು ವರದಿಯಾಗಿವೆ ಎಂದು ಪುಣೆ ವಿಭಾಗದ ವಿಭಾಗೀಯ ಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ.

7. ಕೋವಿಡ್ ನಿಯಂತ್ರಣಕ್ಕೆ ವಸ್ತುಗಳ ಬೆಲೆ ನಿಗದಿ 
ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸೋಂಕು ನಿಯಂತ್ರಣಕ್ಕೆ ಅವಶ್ಯಕವಾದ ವಸ್ತುಗಳ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಪಿಪಿಇ ಕಿಟ್​​ಗಳನ್ನು ಗರಿಷ್ಠ 273 ರೂಪಾಯಿಗೆ ಮಾತ್ರ ಮಾರಾಟ ಮಾಡಬಹುದು. ಜೊತೆಗೆ ಒಂದು ಎನ್95 ಮಾಸ್ಕ್‌ಗೆ 22 ರೂ., ಸರ್ಜಿಕಲ್ ಮಾಸ್ಕ್‌ಗೆ 3 ರೂಪಾಯಿ 90 ಪೈಸೆ ಎಂದು ನಿಗದಿಗೊಳಿಸಲಾಗಿದೆ. ಅಲ್ಲದೆ ಕೋವಿಡ್ ಹರಡುವಿಕೆ ನಿಯಂತ್ರಿಸಲು ಬಳಸುವ ಸ್ಯಾನಿಟೈಸರ್ ಮಾರಾಟಕ್ಕೂ ದರ ನಿಗದಿಗೊಳಿಸಲಾಗಿದ್ದು, ಅರ್ಧ ಲೀಟರ್ ಸ್ಯಾನಿಟೈಸರ್​​ಗೆ 192 ರೂ. ಹಣವನ್ನು ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ.

8. ದೇವರನಾಡಲ್ಲಿ ತೌಕ್ತೆ ಚಂಡಮಾರುತದ ಆರ್ಭಟ 
ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತದ ಅಬ್ಬರದಿಂದ ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 9 ಎನ್​ಡಿಆರ್​​​ಎಫ್​​ ತಂಡಗಳು ಕೇರಳಕ್ಕೆ ದೌಡಾಯಿಸಿವೆ. ಇನ್ನು ತೌಕ್ತೆ ಚಂಡಮಾರುತ ಇಂದು ಕರ್ನಾಟಕದ ಕರಾವಳಿಗೆ ಅಪ್ಪಳಿಸಲಿದ್ದು, ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು, ದಕ್ಷಿಣ ಕನ್ನಡದಲ್ಲೂ ಎಚ್ಚರದಿಂದಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

9. ಸೋಂಕಿತರ ಜೊತೆ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಗಳು ಡ್ಯಾನ್ಸ್ ಮಾಡುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವೈದ್ಯರು ಹಂಚಿಕೊಂಡಿದ್ದಾರೆ. ಡಾ.ಆಶಿಕೇಟ್ ಸೇಬಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಕೊರೊನಾ ಗೆದ್ದು ಇವರುಗಳು ಚೇತರಿಸಿಕೊಂಡು ನೃತ್ಯ ಮಾಡುತ್ತಿದ್ದಾರೆ. ಇವರುಗಳ ಹುಮ್ಮಸ್ಸು ನೋಡಿದರೆ ನಮಗೂ ಸಹ ಕೊರೊನಾ ಸೋಂಕಿತರ ಜೊತೆ ಇನ್ನಷ್ಟು ಕೆಲಸ ಮಾಡಲು ಧೈರ್ಯ ಬರುತ್ತಿದ್ದೆ. ಕೊರೊನಾಗೆ ಯಾರು ಹೆದರದೆ ದೈರ್ಯದಿಂದ ಕೊರೊನಾ ವಿರುದ್ಧ ಹೋರಾಟ ನಡೆಸಬೇಕು , ಆಗ ಮಾತ್ರ ನಾವು ಬದುಕಲು ಸಾಧ್ಯವಾಗುತ್ತೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಡಾ.ಆಶಿಕೇಟ್ ಸೇಬಲ್ ಬರೆದು ಶೇರ್ ಮಾಡಿದ್ದಾರೆ.

10. ಮೇ 18ರಿಂದ ಪಬ್ಜಿ ನೋಂದಣಿ
ಪಬ್ ಜಿ ಮತ್ತೆ ಭಾರತಕ್ಕೆ ಎಂಟ್ರಿಕೊಡಲು ಸಿದ್ಧವಾಗಿದೆ. ಗೇಮ್ ಡೆವಲಪರ್ ಕಂಪನಿ ಕ್ರಾಫ್ಟನ್ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಭಾರತದಲ್ಲಿ ಪಬ್ಜಿ ಮೊಬೈಲ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಅದೇ ಸಮಯಕ್ಕೆ ಪಬ್ ಜಿ ಗಾಗಿ ಕಾಯುತ್ತಿರುವ ಯುವಕರಿಗೆ ಮೇ 18 ರಂದು ನೋಂದಣಿಗೆ ಲಭ್ಯವಾಗಲಿದೆ ಅಂತ ಸಂಸ್ಥೆ ತಿಳಿಸಿದೆ. ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಬಳಕೆದಾರರು ಆಟವನ್ನು ಮೊದಲೇ ನೋಂದಾಯಿಸಿಕೊಳ್ಳಬಹುದು ಎಂದು ಪಬ್ ಜಿ ಸಂಸ್ಥೆ ಹೇಳಿದೆ.

The post ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link