1. ಆಕ್ಸಿಜನ್ & ರೆಮ್ಡೆಸಿವಿರ್ ಪೂರೈಕೆಗೆ ಕೇಂದ್ರದ ಒಪ್ಪಿಗೆ
ರಾಜ್ಯದಲ್ಲಿ ಕೊರೊನಾ ಕೇಕೆಯ ನಡುವೆ ನಾಯಕರ ದೆಹಲಿ ಭೇಟಿ ಕುತೂಹಲ ಕೆರಳಿಸಿತ್ತು. ಆಕ್ಸಿಜನ್ & ರೆಮ್ಡೆಸಿವಿರ್ ಕೊರತೆ ನೀಗಿಸಲು ನಿನ್ನೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮೇ 16 ರವರೆಗೆ ರಾಜ್ಯಕ್ಕೆ 5,75,000 ಡೋಸ್ ರೆಮ್ಡೆಸಿವಿರ್ ನೀಡಲು ಕೇಂದ್ರ ಸಮ್ಮತಿ ನೀಡಿದೆ. ಇನ್ನು, ರಾಜ್ಯದಲ್ಲಿನ ಆಕ್ಸಿಜನ್ ಕೊರತೆ ಬಗ್ಗೆಯೂ ಹರ್ಷವರ್ಧನ್ ಹತ್ತಿರ ಪ್ರಸ್ತಾಪಿಸಿರೋ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ವಿಜಯೇಂದ್ರ, ಸದ್ಯ ರಾಜ್ಯದಲ್ಲಿ ಆಕ್ಸಿಜನ್ ಬೇಕಾಗಿರೋ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಅವರಿಗೆ ಆಕ್ಸಿಜನ್ ಸರಬರಾಜು ತುಂಬಾ ಮುಖ್ಯವಾಗಿದೆ. ಆಕ್ಸಿಜನ್ ಕೊರತೆಯಿಂದಲೆ ಕೆಲವು ಕಡೆ ಅವಘಡಗಳಾಗಿವೆ. ಹಾಗಾಗಿ ನಮಗೆ ಪ್ರತಿದಿನ 1200 ಮೆಟ್ರಿಕ್ ಟನ್ಗೂ ಹೆಚ್ಚಿನ ಆಕ್ಸಿಜನ್ ಬಳಕೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಹರ್ಷವರ್ಧನ್ ಸುಪ್ರೀಂ ಕೋರ್ಟ್ ಆದೇಶದಂತೆ ನಾವು 1200 ಮೆಟ್ರಿಕ್ ಟನ್ ನೀಡುತ್ತೆವೆ ಅಂತ ಒಪ್ಪಿಕೊಂಡಿದ್ದಾರೆ.

2. ಕಲ್ಯಾಣ ಮಂಟಪದಲ್ಲಿ ಮದುವೆ ಆಗುವಂತಿಲ್ಲ
ರಾಜ್ಯ ಸರ್ಕಾರ ಮದುವೆಗಳಿಗೆ ಮತ್ತಷ್ಟು ನಿರ್ಬಂಧ ವಿಧಿಸಿದೆ. ಲಾಕ್​ಡೌನ್​ನಲ್ಲಿ ಮದುವೆಯಾಗೋರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಕಲ್ಯಾಣ ಮಂಟಪ ಮತ್ತು ಸಮುದಾಯ ಭವನದಲ್ಲಿ ಮದುವೆ ಮಾಡೋ ಹಾಗಿಲ್ಲ. ಮನೆಯಲ್ಲಿ ಮಾತ್ರ ಮದುವೆ ಮಾಡಲು ಅನುಮತಿ ನೀಡಲಾಗಿದೆ. ಹಾಗೆ ಮದುವೆಯಲ್ಲಿ 40 ಜನರಿಗಷ್ಟೇ ಭಾಗಿಯಾಗಲು ಅವಕಾಶ ನೀಡಲಾಗಿದೆ. ಹಲವು ಕಠಿಣ ನಿರ್ಬಂಧಗಳ ನಡುವೆಯೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋಗ್ತಿದೆ. ಹೀಗಾಗಿ ಮದುವೆ ಸಮಾರಂಭಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನ ಮತ್ತಷ್ಟು ಕಠಿಣಗೊಳಿಸಲಾಗಿದೆ.

3. 9 ಲಕ್ಷ ಸೋಂಕಿತರು ಆಕ್ಸಿಜನ್ ಸಹಾಯದಲ್ಲಿದ್ದಾರೆ
ದೇಶದಲ್ಲಿ 9 ಲಕ್ಷ ಕೋವಿಡ್‌ ರೋಗಿಗಳು ಆಕ್ಸಿಜನ್ ಸಪೋರ್ಟ್​ನಲ್ಲಿದ್ದಾರೆ ಅಂತಾ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಕೋವಿಡ್‌ ಪರಿಸ್ಥಿತಿಯ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಹರ್ಷವರ್ಧನ್, ಕೊರೊನಾ ಸೋಂಕಿತರ ಪೈಕಿ ಶೇಕಡಾ 1.34ರಷ್ಟು ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ. 3.70 ಸೋಂಕಿತರು ಆಮ್ಲಜನಕದ ಸಹಾಯದಲ್ಲಿದ್ದಾರೆ ಅಂತಾ ತಿಳಿಸಿದ್ದಾರೆ. ಇನ್ನು ಇದೇ ವೇಳೆ ಮಹಾರಾಷ್ಟ್ರ ಬಿಟ್ಟರೆ ಅಧಿಕ ಸಕ್ರಿಯ ಪ್ರಕರಣಗಳು ಇರುವ ರಾಜ್ಯ ಕರ್ನಾಟಕ ಅಂತಾನೂ ಸಚಿವರು ಉಲ್ಲೇಖಿಸಿದ್ದಾರೆ.

4 ಕೊರೊನಾ ಮರೆತು ಲಸಿಕೆಗಾಗಿ ಮುಗಿ ಬಿದ್ದ ಜನ
ದೇಶಾದ್ಯಂತ ಕೊರೊನಾ ಎರಡನೇ ಅಲೆ ಹಾವಳಿ ಹೆಚ್ಚಾಗಿದೆ. ಮತ್ತೊಂದೆಡೆ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದೆ. ದೇಶದಲ್ಲಿ ಸೋಂಕಿನ ಸಂಖ್ಯೆ ದಿನಾ ನಾಲ್ಕು ಲಕ್ಷದ ಗಡಿ ದಾಟುತ್ತಿರೋದ್ರಿಂದ ಮಹಾಮಾರಿ ಜನರ ನಿದ್ದೆಗೆಡಿಸಿದೆ. ಹೀಗಾಗಿಯೇ ಲಸಿಕೆ ಹಾಕಿಸಿಕೊಳ್ಳಲು ದೇಶದೆಲ್ಲೆಡೆ ಜನ ಮುಗಿಬೀಳುತ್ತಿದ್ದಾರೆ. ಇನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಲಸಿಕೆ ಕೇಂದ್ರವೊಂದರ ಬಳಿ ನೂರಾರು ಜನರು ಜಮಾಯಿಸಿದ್ದ ದೃಶ್ಯ ಕಂಡುಬಂದಿದೆ. ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿಬಿದ್ದಿದ್ದು, ಈ ವೇಳೆ ಸಾಮಾಜಿಕ ಅಂತರವನ್ನು ಜನರು ಮರೆತಿದ್ದರು.

5 ಆಸ್ಪತ್ರೆಗೆ ದಾಖಲಾಗಲು ಪಾಸಿಟಿವ್ ವರದಿ ಕಡ್ಡಾಯವಲ್ಲ
ಸರ್ಕಾರಿ ಅಥವಾ ಖಾಸಗಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸುವಾಗ ಪಾಸಿಟಿವ್‌ ವರದಿ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಸುತ್ತೋಲೆ ಹೊರಡಿಸಿದೆ. ಸೋಂಕಿತರು ಕೋವಿಡ್ ಕೇಂದ್ರಗಳಿಗೆ ದಾಖಲಾಗುವ ಸಂಬಂಧ ಇರುವ ರಾಷ್ಟ್ರೀಯ ನೀತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕರಿಸಿದ್ದು, ಇದರ ಅನ್ವಯ ಯಾವುದೇ ರೋಗಿಗೂ ಆರೋಗ್ಯ ಸೇವೆಯನ್ನು ನಿರಾಕರಿಸುವಂತಿಲ್ಲ. ಒಂದು ವೇಳೆ ರೋಗಿ ಬೇರೆ ನಗರದವರಾಗಿದ್ದರೂ ಆಮ್ಲಜನಕ ಅಥವಾ ಔಷಧಿ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಚಿವಾಲಯ ಹೇಳಿದೆ.

6 ಸೋಂಕಿನಿಂದ ಚೇತರಿಸಿಕೊಂಡ್ರೂ ‘ಫಂಗಲ್’ ಕಾಟ
ಒಂದೆಡೆ ಕೋವಿಡ್-19 ಸೋಂಕು ತಗಲುವ ಭೀತಿ ಜನರನ್ನು ಕಾಡುತ್ತಿದ್ರೆ, ಮತ್ತೊಂದೆಡೆ ಸೋಂಕಿನಿಂದ ಚೇತರಿಸಿಕೊಂಡರೂ ಅದು ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜನರಲ್ಲಿ ಆತಂಕ ಮನೆಮಾಡಿದೆ. ಕೋವಿಡ್-19 ನಿಂದ ಚೇತರಿಸಿಕೊಂಡವರಲ್ಲಿ ಮ್ಯೂಕೋರ್ಮೈಕೋಸಿಸ್ ಎಂಬ ಫಂಗಲ್ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಮೆದುಳು, ಕಣ್ಣುಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ದೃಷ್ಟಿಹೀತನೆ ಅಥವಾ ಪ್ರಾಣಕ್ಕೇ ಕುತ್ತಾಗುವ ಅಪಾಯವಿದೆ ಅಂತಾ ವೈದ್ಯರು ಹೇಳಿದ್ದಾರೆ. ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ ಅಂತಾ ಅಲ್ಲಿನ ಆರೋಗ್ಯ ಅಧಿಕಾರಿಗಳು ಹೇಳುತ್ತಿದ್ದಾರೆ.

7. ದೆಹಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ
ಹೆರಾಯಿನ್ ಮಾರಾಟ ಮಾಡುತ್ತಿರೋ ಆರೋಪದ ಮೇರೆಗೆ ಅಪ್ಘನ್ ಮೂಲದ ದಂಪತಿಯನ್ನ ದೆಹಲಿಯಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ 860 ಕೋಟಿ ರೂಪಾಯಿ ಮೌಲ್ಯದ 125 ಕೆಜಿ ಹೆರಾಯಿನ್ ಹಾಗೂ ಒಂದು ಕಾರನ್ನ ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳನ್ನ ಐದು ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಇನ್ನು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

8 ಭಾರತಕ್ಕೆ ಸಹಾಯ ಹಸ್ತ ಚಾಚಿದ ಮತ್ತಷ್ಟು ರಾಷ್ಟ್ರಗಳು
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರೋದ್ರಿಂದ ದೇಶದಲ್ಲಿ ಆಕ್ಸಿಜನ್ ಹಾಗೂ ಬೆಡ್ ಸಮಸ್ಯೆ ಉಂಟಾಗಿದೆ. ಇದರ ಕೊರತೆ ನಿಗಿಸಲು ಜರ್ಮಿನಿ  ಭಾರತಕ್ಕೆ ಬೃಹತ್ ಆಕ್ಸಿಜನ್ ಘಟಕವನ್ನ ಕಳುಹಿಸಿ ಕೊಟ್ಟಿದೆ. ಇದು ದಿನಕ್ಕೆ ಸುಮಾರು 4 ಲಕ್ಷ ಲೀಟರ್ ಆಕ್ಸಿಜನ್ ಉತ್ಪಾದಿಸಲಿದೆ. ದೆಹಲಿಯ ಸರ್ದಾರ್ ಪಟೇಲ್ ಕೋವಿಡ್ ಆಸ್ಪತ್ರೆಯಲ್ಲಿ ಇದನ್ನ ಅಳವಡಿಸಲಾಗಿದೆ. ಇನ್ನು ಆಸ್ಟ್ರಿಯಾದಿಂದ 1900 ಆಕ್ಸಿಜನ್ ಕ್ಯಾನುವಲ್ಸ್ ಹಾಗೂ 396 ಆಕ್ಸಿಜನ್ ಸಿಲಿಂಡರ್​ಗಳು ಬಂದಿವೆ. ಝೆಕ್ ರಿಪಬ್ಲಿಕ್ ಕೂಡ ಭಾರತಕ್ಕೆ ಸಹಾಯ ಹಸ್ತ ಚಾಚಿದೆ. 500 ಆಕ್ಸಿಜನ್ ಸಿಲಿಂಡಗರ್​​ಗಳನ್ನ ಝೆಕ್ ರಿಪಬ್ಲಿಕ್ ಕಳುಹಿಸಿಕೊಟ್ಟಿದೆ.

9 ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಯೂರೋಪಿಯನ್ ಯೂನಿಯನ್
ಪ್ರಧಾನಿ ಮೋದಿ ಯುರೋಪಿಯನ್ ಯೂನಿಯನ್ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಈ ವೇಳೆ ಕಳೆದ ವರ್ಷ ರೋಗದಿಂದ ತಮ್ಮ ದೇಶಗಳು ತತ್ತರಿಸಿದ್ದಾಗ ಭಾರತ ಮಾಡಿದ ಸಹಾಯವನ್ನು ಮರೆಯಲು ಸಾಧ್ಯವಿಲ್ಲ ಅಂತಾ ವಿವಿಧ ದೇಶಗಳ ನಾಯಕರು ನೆನಪಿಸಿಕೊಂಡಿದ್ದಾರೆ. ಎಲ್ಲಾ ನಾಯಕರು ತಾವು ಪಡೆದ ವೈದ್ಯಕೀಯ ಸಾಮಗ್ರಿಗಳಿಗಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು. ಅಲ್ಲದೇ ಕೊರೊನಾ 2ನೇ ಅಲೆಯ ಭೀಕರತೆಗೆ ತತ್ತರಿಸಿರುವ ಭಾರತಕ್ಕೆ ಸಾಧ್ಯವಾದಷ್ಟು ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಒಕ್ಕೊರಲಿನಿಂದ ಸಾರಿದರು. ಇನ್ನು ಯುರೋಪಿಯನ್ ಕಮಿಷನ್​​​ ಅಧ್ಯಕ್ಷೆ ಅರ್ಸುಲಾ ಲಯೆನ್, ನಾವು ಈ ಸಂಕಷ್ಟದ ಸಮಯದಲ್ಲಿ ಭಾರತದ ಜೊತೆ ದೃಢವಾಗಿ ನಿಲ್ಲುತ್ತೇವೆ ಎಂದಿದ್ದಾರೆ.

10. ಕಿಚ್ಚನ ಸಹಾಯವನ್ನು ನೆನೆದ ನಟಿ ಸೋನು
ಬಿಗ್ಬಾಸ್ ಸ್ಪರ್ಧಿ ನಟಿ ಸೋನು ಕಿಚ್ಚ ಸುದೀಪ್ ಅವರು ಮಾಡಿದ ಸಹಾಯವನ್ನ ನೆನೆದಿದ್ದಾರೆ. ವಿಡಿಯೋವೊಂದರಲ್ಲಿ ನಟಿ ಸೋನು, ನಾನು ಕಷ್ಟದಲ್ಲಿದ್ದಾಗ ಕಂಡಕಂಡವ್ರ ಬಳಿ ಸಹಾಯ ಕೇಳಿದೆ. ನನ್ನ ತಾಯಿಯ ಚಿಕಿತ್ಸೆಗೆ ಹಲವರ ಬಳಿ ಸಹಾಯಕ್ಕಾಗಿ ಅಂಗಲಾಚಿದೆ. ಎಲ್ಲರೂ ಸಹಾಯ ಮಾಡುವ ಮಾತುಗಳನ್ನಾಡಿದರೇ ವಿನಃ ಯಾರೂ ಸಹಾಯ ಮಾಡಲಿಲ್ಲ. ಕೊನೆಗೆ ಸುದೀಪ್ ಸರ್ ಬಳಿ ನನ್ನ ನೋವು ಹೇಳಿಕೊಂಡೆ. ಒಂದು ಕ್ಷಣವೂ ಯೋಚಿಸದೇ ಸುದೀಪ್ ಸರ್ ನನಗೆ ಸಹಾಯ ಮಾಡಿದ್ದಾರೆ. ನನ್ನ ತಾಯಿಯ ಚಿಕಿತ್ಸೆಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಅಂತಾ ಹೇಳಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​​ಅಪ್​ appeared first on News First Kannada.

Source: newsfirstlive.com

Source link