1. ಇವತ್ತು ಮೂರನೇ ದಿನದ ಲಾಕ್‌ಡೌನ್‌
ಮಹಾಮಾರಿ ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಘೋಷಿಸಿರೋ ಲಾಕ್​ಡೌನ್ ಇಂದು​ ಮೂರನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯ ಲಾಕ್‌ಡೌನ್‌ ಬಹುತೇಕ ಯಶಸ್ವಿಯಾಗಿದ್ರಿಂದ ಇವತ್ತು ಸಹ ಎಲ್ಲಾ ಜಿಲ್ಲೆಗಳಲ್ಲಿ ಅದೇ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿಯಲಿದೆ. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳನ್ನ ಖರೀದಿಸಲು ಅವಕಾಶ ನೀಡಲಾಗಿದೆ.

2. ಆಕ್ಸಿಜನ್ ಪೈಪ್‌ ಲೀಕ್, ತಪ್ಪಿದ ಭಾರೀ ಅನಾಹುತ
ಬಾಗಲಕೋಟೆ ಬರಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಪೈಪ್‌ ಲೀಕೇಜ್ ಆಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ತಡರಾತ್ರಿ ಅವಘಡ ಸಂಭವಿಸುತ್ತಿದ್ದಂತೆ ಕೋವಿಡ್ ರೋಗಿಗಳನ್ನ ಬೇರೆ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಸೋಂಕಿತರನ್ನ ಬೇರೆ ಆಸ್ಪತ್ರೆಗೆ ರವಾನಿಸುವುದು ತಡವಾಗಿದ್ರೆ 10ಕ್ಕೂ ಹೆಚ್ಚು ಮಂದಿ ಸಾವನಪ್ಪುವ ಸಾಧ್ಯತೆ ಇತ್ತು ಎಂದು ಬಾಗಲಕೋಟೆ ಡಿಹೆಚ್ಒ ಅನಂತ ದೇಸಾಯಿ ಹೇಳಿದ್ದಾರೆ. ಇನ್ನು ಕೋವಿಡ್ ಸೋಂಕಿತರನ್ನ ಶೀಘ್ರವೇ ಬೇರೆ ಕಡೆ ಸ್ಥಳಾಂತರಿಸಿ ಜಿಲ್ಲಾಡಳಿತ ಹಲವು ರೋಗಿಗಳ ಪ್ರಾಣ ಕಾಪಾಡಿದೆ.

3. ​ ಇಂದಿನಿಂದ ಇಂದಿರಾ ಕ್ಯಾಂಟೀನ್​ನಲ್ಲಿ 3 ಹೊತ್ತು ಫ್ರೀ ಊಟ
ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಬಡಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಇಂದಿನಿಂದ ಇಂದಿರಾ ಕ್ಯಾಂಟೀನ್​ನಲ್ಲಿ ದಿನದ ಮೂರು ಹೊತ್ತೂ ಫ್ರೀ ಊಟ ಪೂರೈಸುವುದಾಗಿ ಬಿಬಿಎಂಪಿ ಹೇಳಿದೆ. ಬಡ ವರ್ಗದ ಜನರು, ವಲಸಿಗರು, ಕೂಲಿ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಆಹಾರ ಪೊಟ್ಟಣಗಳ ಮೂಲಕ ಊಟ ಪೂರೈಕೆ ಮಾಡಲಾಗುತ್ತದೆ. ಇಂದಿನಿಂದ ಮೇ 24ರವರೆಗೆ ಮೂರೂ ಹೊತ್ತು ಆಹಾರ ಪೂರೈಕೆಯಾಗಲಿದೆ. ಗುರುತಿನ ಚೀಟಿ ತೋರಿಸಿ ಜನರು ಉಚಿತ ಊಟ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಹೇಳಿದೆ.

4. ಮೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಡಾ.ಸುಧಾಕರ್
ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್​ ಇಂದು ಮೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 8:45 ರಿಂದ ಸಂಜೆ 5:30ರವರೆಗೂ  ಸುಧಾಕರ್ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಆರೋಗ್ಯ ಸಚಿವರು ಪ್ರವಾಸ ಕೈಗೊಳ್ಳಲಿದ್ದಾರೆ.

05. ಆಸ್ತಿ ವಿಚಾರಕ್ಕೆಜಡೆ ಹಿಡಿದು ಜಗಳ
ಜಮೀನಿನಲ್ಲಿ ಉಳುಮೆ ಮಾಡುವ ವಿಚಾರಕ್ಕೆ ಮಹಿಳೆಯರು ಜಡೆ ಹಿಡಿದು ಬಡಿದಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮೇಲಿನವಳಗೆರೆ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ ಕುಡುಗೋಲು ಹಿಡಿದು ಗಂಗರಾಣಿ ಹಾಗೂ ನಾಗಮ್ಮ ಎಂಬ ತಾಯಿ-ಮಗಳು ಜಗಳ ಮಾಡಿಕೊಂಡಿದ್ದಾರೆ. ಇನ್ನು ಮಹಿಳೆಯರ ಜಡೆ ಜಗಳ ಬಿಡಿಸದೆ ಗ್ರಾಮಸ್ಥರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಜಗಳಕ್ಕೆ ಪ್ರಚೋದನೆ ನೀಡಿದ್ದಾರೆ. ಇದೀಗ ಹಲ್ಲೆಗೊಳಗಾದ ಸುಮಾ ಅವರ ಗಂಡ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

6. ತೆಲಂಗಾಣದಲ್ಲಿ ಇಂದಿನಿಂದ 10 ದಿನ ಲಾಕ್​ಡೌನ್​​​​​​ ಜಾರಿ
ಕೆಲವು ದಿನಗಳ ಹಿಂದೆಯಷ್ಟೆ ತೆಲಂಗಾಣದಲ್ಲಿ ಲಾಕ್​ಡೌನ್​ ಪ್ರಸ್ತಾಪವನ್ನೇ ಸಿಎಂ ಕೆ.ಚಂದ್ರಶೇಖರ್​​ ರಾವ್​​​​​​ ತಳ್ಳಿಹಾಕಿದ್ದರು. ಆದರೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ 10 ದಿನಗಳ ಕಾಲ ಲಾಕ್​ಡೌನ್ ವಿಧಿಸಿ ಕೊನೆಗೂ ಆದೇಶ ಹೊರಡಿಸಿದ್ದಾರೆ. ಸಿಎಂ ಕೆ.ಸಿ.ಆರ್​ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಂದಿನಿಂದ ಮೇ 22 ರವರೆಗೆ ಲಾಕ್​ಡೌನ್ ಜಾರಿಲಿರುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.

7. ಗೋವಾದಲ್ಲಿ ಆಮ್ಲಜನಕ ಕೊರತೆ 26 ಮಂದಿ ಸಾವು
ಗೋವಾದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ನಾಲ್ಕು ಗಂಟೆಗಳ ಅವಧಿಯಲ್ಲಿ 26 ಸೋಂಕಿತರು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಅಗತ್ಯ ಪ್ರಮಾಣದಷ್ಟು ಆಮ್ಲಜನಕ ಪೂರೈಕೆಯಾಗಿಲ್ಲ. ಆದರೆ, ಆಸ್ಪತ್ರೆಯಲ್ಲಿದ್ದ ಆಮ್ಲಜನಕದ ನಿರ್ವಹಣೆಯಲ್ಲಿ ಯಾವುದೇ ವೈಫಲ್ಯ ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ತಿಳಿಸಿದ್ದಾರೆ. ಈ ಘಟನೆ ಕುರಿತು ಕೂಡಲೇ ಬಾಂಬೆ ಹೈಕೋರ್ಟ್‌ನ ಪಣಜಿ ಪೀಠ ತನಿಖೆ ನಡೆಸಬೇಕು. ಜಿಎಂಸಿಎಚ್‌ನಲ್ಲಿ ಕೋವಿಡ್‌ ರೋಗಿಗಳಿಗೆ ನೀಡುವ ಚಿಕಿತ್ಸೆಯ ಉಸ್ತುವಾರಿಯನ್ನೂ ಪೀಠ ವಹಿಸಿಕೊಳ್ಳಬೇಕು ಎಂದು ಸಚಿವ ರಾಣೆ ಒತ್ತಾಯಿಸಿದ್ದಾರೆ.

8. ರಾಷ್ಟೀಯ ಪೊಲೀಸ್ ಅಕಾಡೆಮಿಗೆ ದಿ.ಮಧುಕರ್ ಶೆಟ್ಟಿ ಹೆಸರು
ಹೈದರಾಬಾದ್​ನಲ್ಲಿರುವ ಸರ್ದಾರ್​ ವಲ್ಲಭಬಾಯಿ ನ್ಯಾಷನಲ್ ಪೊಲೀಸ್ ಅಕಾಡೆಮಿಗೆ ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಸರನ್ನಿಡಲಾಗಿದೆ. ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರ ಕಾರ್ಯದಕ್ಷತೆ, ಪ್ರಾಮಾಣಿಕತೆಗೆ ಸಮರ್ಪಣಾ ಮನೋಭಾವ ಕಂಡು ಅಕಾಡೆಮಿಯ ಲೆಕ್ಚರಲ್ ಹಾಲ್​​ಗೆ ಮಧುಕರ್ ಶೆಟ್ಟಿ ಅವರ ಹೆಸರಿಟ್ಟಿದ್ದಾರೆ.‌ ಈ ಮೂಲಕ ಮಧುಕರ್ ಶೆಟ್ಟಿ ಪೊಲೀಸ್ ತರಬೇತಿ ಪಡೆಯುವ ಐಪಿಎಸ್ ಅಧಿಕಾರಿಗಳಿಗೆ ಸ್ಫೂರ್ತಿಯಾಗಲಿದ್ದಾರೆ.

9. ಚೀನಾ ಲೋನ್​ ಆ್ಯಪ್​ ಕಂಪನಿ ಮೇಲೆ ED ದಾಳಿ
ಸಾರ್ವಜನಿಕರಿಗೆ ವಂಚನೆ ಆರೋಪದ ಮೇಲೆ ಚೀನಾ ಲೋನ್ ಆ್ಯಪ್ ಕಂಪನಿಗಳ ಮೇಲೆ, ಜಾರಿ ನಿರ್ದೇಶನಾಲಯ ದಾಳಿ ನಡೆಸಿ, 76.67 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಜಪ್ತಿ ಮಾಡಿದೆ. ಈ ಬಗ್ಗೆ ED ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದೆ. CIDನಲ್ಲಿ ದಾಖಲಾಗಿದ್ದ ಪ್ರಕರಣಗಳ ಆಧಾರದ ಮೇಲೆ ED ಸಹ ಪ್ರಕರಣಗಳನ್ನ ದಾಖಲಿಸಿಕೊಂಡು ತನಿಖೆಯನ್ನ ನಡೆಸುತ್ತಿದೆ. ರಿಕವರಿ ಏಜೆಂಟ್​ಗಳು ಲೋನ್ ಮರುಪಾವತಿ ಮಾಡದ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದರು. ಬಡ್ಡಿ, ಚಕ್ರಬಡ್ಡಿ, ಸರ್ವಿಸ್ ಚಾರ್ಜಸ್ ಹೆಸರಿನಲ್ಲಿ ಲೋನ್ ಪಡೆದವರಿಗೆ ಕಿರುಕುಳ ನೀಡುತ್ತಿದ್ದ ಆರೋಪ ಕಂಪನಿಗಳ ವಿರುದ್ಧ ಕೇಳಿಬಂದಿತ್ತು.

10. ಗಾಜಾದ ಮೇಲೆ ಇಸ್ರೇಲ್ ರಾಕೆಟ್ ದಾಳಿ
ಇಸ್ರೇಲ್​ ಹಾಗೂ ಪ್ಯಾಲೆಸ್ತೇನ್​ ಉಗ್ರರ ನಡುವಿನ ಯುದ್ಧ ವಿಕೋಪಕ್ಕೆ ತಿರುಗಿದೆ. ಇಸ್ರೇಲ್​ ಮೇಲೆ ಪ್ಯಾಲೆಸ್ತೆನ್ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನಾಪಡೆಗಳು ಗಾಜಾದ ವಸತಿ ಪ್ರದೇಶದ ಮೇಲೆ ರಾಕೆಟ್​ ದಾಳಿ ನಡೆಸಿವೆ. ದಾಳಿಯಲ್ಲಿ ಇದುವರೆಗೂ 28ಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ ಪ್ಯಾಲೆಸ್ತೇನ್​ನ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಮೊದಲು ಗಾಜಾದ ಹ್ಯಾಮಸ್​ ಪ್ರದೇಶದಿಂದ ಇಸ್ರೇಲ್​ ಮೇಲೆ ರಾಕೆಟ್​ ದಾಳಿ ಮಾಡಲಾಗಿತ್ತು.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link