1. ರಾಜ್ಯದಲ್ಲಿ ಲಾಕ್‌ಡೌನ್‌ 8ನೇ ದಿನ
ಮಹಾಮಾರಿ ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಘೋಷಿಸಿರೋ ಲಾಕ್​ಡೌನ್ ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯ ಲಾಕ್‌ಡೌನ್‌ ಬಹುತೇಕ ಯಶಸ್ವಿಯಾಗಿದ್ರಿಂದ ಇವತ್ತು ಸಹ ಎಲ್ಲಾ ಜಿಲ್ಲೆಗಳಲ್ಲಿ ಅದೇ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿದಿವೆ. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

2. ಕೆ.ಆರ್‌. ಮಾರ್ಕೆಟ್‌ ಖಾಲಿ..ಖಾಲಿ
ಬೆಂಗಳೂರಿನ ಕೆ‌.ಆರ್.ಮಾರ್ಕೆಟ್ ಸಂಪೂರ್ಣ ಖಾಲಿ ಖಾಲಿಯಾಗಿದೆ. ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನ ಎತ್ತಂಗಡಿ ಮಾಡಿಸಲಾಗಿದ್ದು, ತಳ್ಳುವ ಗಾಡಿಯಲ್ಲಿ ತೆರಳಿ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ. ಇನ್ನು ಎಸ್.ಜೆ.ಪಿ ರಸ್ತೆಯಲ್ಲಿದ್ದ ಹೂ, ಹಣ್ಣಿನ ಅಂಗಡಿಗಳನ್ನ ತೆರವು ಮಾಡಲಾಗಿದೆ. ಮಾರ್ಕೆಟ್‌ನಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಮಾತ್ರ ಓಪನ್ ಆಗಿವೆ. ಇನ್ನು ಕೆ.ಆರ್. ಮಾರುಕಟ್ಟೆಯಲ್ಲಿ ಜನರಿಗಿಂತ ಆಟೋಗಳ ಸಂಖ್ಯೆಯೇ ಹೆಚ್ಚಾಗಿದೆ.

3. ಮಾರ್ಕೆಟ್‌ ರಜೆ ಇದ್ರೂ ರೈತರಿಂದ ತರಕಾರಿ ಮಾರಾಟ
ಬೆಳಗಾವಿಯಲ್ಲಿ ಅಗತ್ಯ ವಸ್ತಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಸಿಪಿಎಡ್‌ ಮೈದಾನದಲ್ಲಿರುವ ಹೋಲ್‌ಸೇಲ್ ಮಾರ್ಕೆಟ್‌ನಲ್ಲಿ ತರಕಾರಿ ಮಾರಾಟ ಜೋರಾಗಿದೆ. ಇವತ್ತು ಮಾರ್ಕೆಟ್ ರಜೆ ಇದ್ರೂ ರೈತರು ತರಕಾರಿ ತಂದು ಮಾರುತ್ತಿದ್ದಾರೆ. ಹಲವು ಗ್ರಾಮಗಳಿಂದ ಆಗಮಿಸಿರುವ ರೈತರು ಸಿಕ್ಕಷ್ಟು ಬೆಲೆಗೆ ತರಕಾರಿ ಮಾರಾಟ ಮಾಡಿ ನಗರದಿಂದ ಹೋಗುತ್ತಿದ್ದಾರೆ.

4. 5 ದಿನಗಳ ಕಾಲ ಕೊಪ್ಪಳ ಲಾಕ್‌ಡೌನ್
ಮಹಾಮಾರಿ ಕೊರೊನಾ ತಡೆಗಟ್ಟಲು ಇಂದಿನಿಂದ ಶುಕ್ರವಾರದವರೆಗೂ 5 ದಿನಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಪೊಲೀಸ್ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ದು, ಅನಗತ್ಯವಾಗಿ ಓಡಾಟ ನಡೆಸುವ ವಾಹನಗಳನ್ನು ತಡೆದು ಸೀಜ್ ಮಾಡ್ತಿದ್ದಾರೆ. ಆರೋಗ್ಯ ಸೇವೆ, ಔಷಧಿ ಅಂಗಡಿಗಳು, ಕೃಷಿ ಚಟುವಟಿಕೆಗೆ ಪೂರಕವಾದ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆ ಬಂದ್ ಮಾಡಲಾಗಿದೆ.

5. ಬಿಬಿಎಂಪಿ ವಲಯಗಳಲ್ಲಿ 32 ಟ್ರಯಾಜ್ ಸೆಂಟರ್
ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಕೋವಿಡ್ ಸೋಂಕಿತರಿಗೆ ದೈಹಿಕ ಟ್ರಯಾಜ್ ಮೂಲಕ ಅವಲೋಕಿಸಿ ತ್ವರಿತವಾಗಿ ಆರೈಕೆ ಮಾಡುವ ನಿಟ್ಟಿನಲ್ಲಿ 32 ಕೋವಿಡ್ ಟ್ರಯಾಜ್ ಸೆಂಟರ್ಗಳನ್ನು ಸ್ಥಾಪಿಸಲಾಗಿದೆ. ಟ್ರಯಾಜ್ ಸೆಂಟರ್ಗಳಲ್ಲಿ ನುರಿತ ವೈದ್ಯರ ತಂಡವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸೆಂಟರ್ಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಸಹಿತ ಹಾಸಿಗೆಗಳಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಇಲ್ಲಿ ಕಡಿಮೆ ರೋಗಲಕ್ಷಣದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 3 ವೈದ್ಯರು ಹಾಗೂ 3 ನರ್ಸ್​ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ. ಸೋಂಕಿತ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ವೈದ್ಯಕೀಯ ಕಿಟ್​ಗಳನ್ನು ಸಹ ನೀಡಲಾಗುತ್ತದೆ.

6. 2-ಡಿಜಿ ಕೊರೊನಾ ಔಷಧಿಗೆ ಇಂದು ಚಾಲನೆ
ಕೊರೊನಾಗೆ ದೇಶದ DRDO(ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಕಂಡು ಹಿಡಿದಿರೋ ಔಷಧಿ 2-ಡಿಜಿ ಇಂದು ಲೋಕಾರ್ಪಣೆ ಆಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ರಾಷ್ಟ್ರ ರಾಜಧಾನಿಯಲ್ಲಿ ಈ ಔಷಧದ ಹತ್ತು ಸಾವಿರ ಪ್ಯಾಕೆಟ್​ಗಳನ್ನು ಕೆಲವು ಆಸ್ಪತ್ರೆಗಳಿಗೆ ನೀಡಲಿದ್ದಾರೆ. ಇದನ್ನ ಬಳಸಿದ ಮೂರೇ ದಿನಗಳಲ್ಲಿ ಸೋಂಕಿತರು ಚೇತರಿಸಿಕೊಳ್ಳುವ ಸಾಮರ್ಥ್ಯ ಇದಕ್ಕಿರುವುದು ಕ್ಲಿನಿಕಲ್ ಟ್ರಯಲ್​​ನಲ್ಲಿ ಸಾಬೀತಾಗಿದೆ ಎಂದು ಡಿಆರ್​​ಡಿಓ ತಿಳಿಸಿದೆ.

7. ಬ್ರಿಟನ್‌ ಮ್ಯೂಟೆಂಟ್‌ಗೂ ಕೋವ್ಯಾಕ್ಸಿನ್ ಮದ್ದು
ಕೊರೊನಾಗೆ ಸಂಜೀವಿನಿಯಾಗಿರೋ ಲಸಿಕೆ ಕೋವ್ಯಾಕ್ಸಿನ್‌ ಮತ್ತಷ್ಟು ಪರಿಣಾಮಕಾರಿ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಕೋವ್ಯಾಕ್ಸಿನ್‌ ಲಸಿಕೆ ಬ್ರಿಟನ್ ಮ್ಯೂಟೆಂಟ್‌ ಕೊರೊನಾ ವೈರಸ್‌ಗೂ ರಾಮಬಾಣ ಅಂತಾ ಭಾರತ್‌ ಬಯೋಟೆಕ್ ಸಂಸ್ಥೆ ಹೇಳಿದೆ. ಐಸಿಎಂಆರ್‌ ಸಂಶೋಧನೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಸಂಶೋಧನೆಯಲ್ಲಿ ಈ ಅಂಶ ಗೊತ್ತಾಗಿದೆ. ಈ ಮೂಲಕ ಭಾರತದ ಕೋವ್ಯಾಕ್ಸಿನ್‌ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆಯುವಂತಾಗಿದೆ.

8. ಭಾರತಕ್ಕೆ ವಿದೇಶಗಳಿಂದ ನೆರವಿನ ಮಹಾಪೂರ
ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ನಿಯಂತ್ರಣಕ್ಕೆ ಹಲವು ರಾಷ್ಟ್ರಗಳಿಂದ ಬಂದಿರೋ ಪ್ರತಿಯೊಂದು ವಸ್ತುಗಳ ಮಾಹಿತಿಯನ್ನ ಬಹಿರಂಗಪಡಿಸಿದೆ. ಇದುವರೆಗೂ ಭಾರತಕ್ಕೆ 5.3 ಲಕ್ಷ ವೈಯಲ್ ರೆಮ್‌ಡೆಸಿವಿರ್‌ ಔಷಧಿ ವಿದೇಶಗಳಿಂದ ಬಂದಿದೆ. ಜೊತೆಗೆ 11 ಸಾವಿರದ 58 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳು, 13 ಸಾವಿರದ 496 ಆಕ್ಸಿಜನ್ ಸಿಲಿಂಡರ್‌ಗಳು, 19 ಆಕ್ಸಿಜನ್ ಜೆನರೇಷನ್‌ ಪ್ಲಾಂಟ್‌ಗಳು ಹಲವು ದೇಶಗಳಿಂದ ಬಂದಿವೆ. ಬಂದಿರುವಂತಹ ಎಲ್ಲಾ ಕೊರೊನಾ ನಿಯಂತ್ರಣ ಸಲಕರಣೆಗಳನ್ನು ದೇಶದ ಎಲ್ಲಾ ರಾಜ್ಯಗಳಿಗೂ ತಲುಪಿಸಲಾಗಿದೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

9. ಭಾರತದಲ್ಲಿ ಕಡಿಮೆಯಾದ ತೈಲ ಬೇಡಿಕೆ
ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಮತ್ತೆ ಲಾಕ್ ಡೌನ್ ಮಾಡುತ್ತಿವೆ. ಹೀಗಾಗಿ ಭಾರತದಲ್ಲಿ ಮೇ ತಿಂಗಳಲ್ಲಿ ತೈಲ ಬೇಡಿಕೆ ಕಡಿಮೆಯಾಗಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಹೇಳಿದೆ. 2019 ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಶೇ 28% ತೈಲಗಳ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ದೇಶದಲ್ಲಿ ಮಾತ್ರ ತೈಲ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ.

10. ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ‘ಸ್ಪುಟ್ನಿಕ್ ಲೈಟ್‌’
ಕೋವಿಡ್‌–19 ಸೋಂಕು ನಿರೋಧಕವಾಗಿ ಒಂದೇ ಡೋಸ್‌ನಲ್ಲಿ ನೀಡಬಹುದಾದ ಲಸಿಕೆಯನ್ನು ಭಾರತದಲ್ಲಿ ಆದಷ್ಟು ಶೀಘ್ರದಲ್ಲೇ ಬಿಡುಗಡೆ ಮಾಡಲು ರಷ್ಯಾ ಚಿಂತನೆ ನಡೆಸಿದೆ. ಭಾರತದಲ್ಲಿನ ರಷ್ಯಾದ ರಾಯಭಾರಿ ನಿಕೋಲಾಯ್‌ ಕುಡಸೇವ್ ಈ ಬಗ್ಗೆ ತಿಳಿಸಿದ್ದಾರೆ. ರಷ್ಯಾದಿಂದ ಒಟ್ಟು 60 ಸಾವಿರ ಡೋಸ್‌ ‘ಸ್ಪುಟ್ನಿಕ್‌ ವಿ’ ಲಸಿಕೆಯ ಎರಡನೇ ಬ್ಯಾಚ್‌ ನಿನ್ನೆ ಹೈದರಾಬಾದ್‌ಗೆ ತಲುಪಿದ ಸಂದರ್ಭದಲ್ಲಿ ಅವರು ಈ ಮಾಹಿತಿ ಪ್ರಕಟಿಸಿದ್ದಾರೆ. ಅಲ್ಲದೆ, ಭಾರತದಲ್ಲಿ ಇತ್ತೀಚಿಗೆ ಪರಿಚಯಿಸಿರುವ ‘ಸ್ಪುಟ್ನಿಕ್‌ ವಿ’ ಲಸಿಕೆಯ ಉತ್ಪಾದನೆಯ ಪ್ರಮಾಣವನ್ನು ವಾರ್ಷಿಕ 850 ಮಿಲಿಯನ್‌ ಡೋಸ್‌ಗಳಿಗೆ ಹಂತ ಹಂತವಾಗಿ ಹೆಚ್ಚಿಸುವ ಗುರಿಯಿದೆ ಎಂದು ತಿಳಿಸಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link