1. ಅಗತ್ಯ ವಸ್ತುಗಳ ಖರೀದಿ ಬಿಟ್ರೆ ಉಳಿದೆಲ್ಲ ಬಂದ್
ರಾಜ್ಯದಲ್ಲಿ ಲಾಕ್‌ಡೌನ್‌ ಆಗಿ ಏಂಟು ದಿನ ಕಳೆದು, ಒಂಭತ್ತನೇ ದಿನಕ್ಕೆ ಕಾಲಿಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬಿಟ್ರೆ ಉಳಿದಿದೆಲ್ಲ ಸಂಪೂರ್ಣ ಬಂದ್ ಆಗಿದೆ. ಇನ್ನು ಬೆಂಗಳೂರಿಗೆ ದುಡಿಯಲು ಬಂದಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಬೆಳ್ಳಂಬೆಳಗ್ಗೆ ರೈಲ್ವೇ ನಿಲ್ದಾಣಕ್ಕೆ ಆಗಮಿಸಿ, ತಮ್ಮ ಜಿಲ್ಲೆಗೆ ಹೋಗುವ ರೈಲಿಗಾಗಿ ಕಾಯುತ್ತಾ ಕುಳಿತುಕೊಂಡಿದ್ದಾರೆ. ಕೆಲವೆಡೆ ಅನಗತ್ಯವಾಗಿ ಓಡಾಡುತ್ತಿರುವವರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಮನೆಗೆ ಕಳುಹಿಸುತ್ತಿರುವ ಸನ್ನಿವೇಶ ಕಂಡುಬಂದಿದೆ.

2. ಇಂದು ಸಿಎಂಗಳು, ಡಿಸಿಗಳ ಜೊತೆ ಪ್ರಧಾನಿ ಸಂವಾದ
ಕೊರೊನಾ ಸೋಂಕು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ ಇಂದು ಕರ್ನಾಟಕ ಸೇರಿದಂತೆ 10 ರಾಜ್ಯಗಳ ಸಿಎಂಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೋದಿ ವಿಡಿಯೋ ಕಾನ್ಫರೆನ್ಸ್ ಶುರುವಾಗಲಿದ್ದು, ಕರ್ನಾಟಕ, ಬಿಹಾರ, ಅಸ್ಸಾಂ, ಚಂಡೀಗಢ, ತಮಿಳುನಾಡು, ಉತ್ತರಾಖಂಡ್ ಸಿಎಂಗಳು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮೋದಿ, ಸಿಎಂ ಯಡಿಯೂರಪ್ಪ ಹಾಗೂ ಖುದ್ದು 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

3. ಕೋವಿಡ್ ರೂಂಗೆ ಸಿಸಿಟಿವಿ ಅಳವಡಿಕೆ
ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲವೆಂಬ ಆರೋಪ ಕೇಳಿಬಂದ ಹಿನ್ನಲೆ ಮಂಡ್ಯದಲ್ಲಿ ಕೋವಿಡ್ ಐಸೋಲೇಷನ್ ವಾರ್ಡ್​​ಗೆ ಸಚಿವ ಡಾ.ಕೆ.ಸಿ ನಾರಾಯಣ್ ಗೌಡ ಸಿಸಿಟಿವಿ ಅಳವಡಿಕೆ ಮಾಡಿಸಿದ್ದಾರೆ. ಸೋಂಕಿತರ ರಕ್ಷಣೆ ಹಾಗೂ ಆರೈಕೆಗಾಗಿ ಸಚಿವರು, ಈ ಮೂಲಕ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸಿಇಓ ಹಾಗೂ ಎಸ್​ಪಿಗೆ ಕೋವಿಡ್ ವಾರ್ಡ್​​ನ ಈ ಸಿಸಿಟಿವಿ ವ್ಯವಸ್ಥೆಯ ಉಸ್ತುವಾರಿಯನ್ನ ವಹಿಸಿದ್ದಾರೆ.

4. ಪ್ರತಿ ಜಿಲ್ಲೆಗೆ 30 ಕಾನ್ಸಂಟ್ರೇಟೆಡ್ ಮೆಷಿನ್ಸ್
ಆಕ್ಸಿಜನ್ ಕೊರತೆ ಉಂಟಾಗದಂತೆ ತಡೆಯಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ 30 ಕಾನ್ಸಂಟ್ರೇಟೆಡ್ ಮಷಿನ್​ಗಳನ್ನ ಖರೀದಿಸಿ ವಿತರಿಸುತ್ತಿದ್ದು, ಸದ್ಯ ಸಾರಿಗೆ ಇಲಾಖೆ ಇದಕ್ಕೊಂದು ಹೊಸ ಆಯಾಮ‌ ನೀಡುತ್ತಿದೆ. ಸಾರಿಗೆ ಇಲಾಖೆಯಿಂದ ರಾಜ್ಯಾದ್ಯಂತ ಇನ್ಮುಂದೆ ಬಸ್​ಗಳಲ್ಲೇ ನಾಲ್ಕೈದು ಕಾನ್ಸಂಟ್ರೇಟೆಡ್ ಮೆಷಿನ್​ಗಳನ್ನು ಅಳವಡಿಸಿ, ಕೋವಿಡ್ ಸೆಂಟರ್​​ಗಳಲ್ಲಿ ನಿಲ್ಲಿಸಲಾಗುವುದು ಎಂದು ರಾಯಚೂರಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಪ್ರತಿಯೊಂದು ಜಿಲ್ಲೆಯ ಕೋವಿಡ್ ಕೇರ್ ಸೆಂಟರ್​​ನಲ್ಲೂ ಆಕ್ಸಿಜನ್ ಬಸ್ ಇರಲಿದೆ ಅಂತ ಅವರು ತಿಳಿಸಿದ್ದಾರೆ.

5. ಗುಜರಾತ್​​ನಲ್ಲಿ ಮುಂದುವರೆದ ‘ತೌಕ್ತೆ’ ಆರ್ಭಟ
ಗುಜರಾತ್​​ನಲ್ಲಿ ತೌಕ್ತೆ ಚಂಡಮಾರುತದ ಆರ್ಭಟ ಜೋರಾಗಿದೆ. ನಿನ್ನೆ ರಾತ್ರಿ ಪೋರ್ಬಂದರ್​ಗೆ 185 ಕಿ.ಮೀ. ವೇಗದಲ್ಲಿ ಚಂಡಮಾರುತ ಬಂದು ಅಪ್ಪಳಿಸಿದ್ದು, ಇವತ್ತು ಕೂಡ ಸೈಕ್ಲೋನ್ ಇನ್ನಷ್ಟು ರೌದ್ರಾವತಾರ ತೋರುವ ಸಾಧ್ಯತೆಯಿದೆ. ಚಂಡಮಾರುತಕ್ಕೆ ಈವರೆಗೂ ಕನಿಷ್ಠ 12 ಜನರು ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ, ಕರಾವಳಿ ತೀರದ ಸುಮಾರು 1.50 ಲಕ್ಷ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಬಂದರುಗಳು ಮತ್ತು ವಿಮಾನ ನಿಲ್ದಾಣವನ್ನ ಓಪನ್ ಮಾಡದಂತೆ ಆದೇಶಿಸಲಾಗಿದೆ.

6. ‘ತೌಕ್ತೆ’ ರೌದ್ರಾವತಾರಕ್ಕೆ 6 ಸಾವು, ಮೂವರು ನಾಪತ್ತೆ
ಇನ್ನು ತೌಕ್ತೆ ಚಂಡಮಾರುತದ ರೌದ್ರ ನರ್ತನಕ್ಕೆ ವಾಣಿಜ್ಯ ನಗರಿ ಮುಂಬೈ ಕೂಡ ತತ್ತರಿಸಿ ಹೋಗಿದೆ. ಚಂಡಮಾರುತಕ್ಕೆ ಕೊಂಕಣ ಪ್ರದೇಶದಲ್ಲಿ 6 ಮಂದಿ ಸಾವಿಗೀಡಾಗಿದ್ದು, ಎರಡು ಬೋಟ್‌ಗಳು ಸಮುದ್ರದಲ್ಲಿ ಮುಳುಗಡೆಯಾಗಿ ಮೂವರು ನಾಪತ್ತೆಯಾಗಿದ್ದಾರೆ. ಜೊತೆಗೆ ಬೋಟ್​​ನಲ್ಲಿದ್ದ 9 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭಾರೀ ಗಾಳಿ ಮಳೆಗೆ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

7. ಕೋವಿಡ್ ಆಸ್ಪತ್ರೆಗೆ ನುಗ್ಗಿದ ಮಳೆ ನೀರು
ಮಧ್ಯಪ್ರದೇಶಕ್ಕೂ ಕೂಡ ತೌಕ್ತೆ ಚಂಡಮಾರುತದ ಎಫೆಕ್ಟ್ ಜೋರಾಗಿಯೇ ತಟ್ಟಿದೆ. ಮಧ್ಯ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ರಾಜ್​ಘಡ್​​ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಕೋವಿಡ್ ಜಿಲ್ಲಾಸ್ಪತ್ರೆಗೆ ಮಳೆ ನೀರು ನುಗ್ಗಿದೆ. ಅಷ್ಟೇ ಅಲ್ದೆ ಕೋವಿಡ್ ಐಸಿಯು ವಾರ್ಡ್​ಗೆ ಮಹಡಿಯಿಂದ ನೀರು ಸೋರಿದ್ದು, ಇದ್ರಿಂದ ಸೋಂಕಿತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ಈ ಅವ್ಯವಸ್ಥೆಯನ್ನು ನೋಡಿ ಸೋಂಕಿತರು ಹಾಗೂ ಕುಟುಂಬಸ್ಥರು ಆಸ್ಪತ್ರೆ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ.

8. ಆನ್​ಲೈನ್ ಶಿಕ್ಷಣಕ್ಕಾಗಿ ರಾಜ್ಯಗಳಿಗೆ ₹2,500 ಕೋಟಿ
ಕೊರೊನಾ ಸಂಕಷ್ಟದಲ್ಲಿ ಮಕ್ಕಳ ಆನ್​ಲೈನ್ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಗಳಿಗೆ 2500 ಕೋಟಿ ಹಣವನ್ನ ಮೀಸಲಿಟ್ಟಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಕೂಲ್ ಎಜುಕೇಷನ್ ಸೆಕ್ರೆಟರೀಸ್ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಸರ್ಕಾರ ಆನ್​ಲೈನ್ ಶಿಕ್ಷಣ ಮುಂದುವರಿಸಲು ರಾಜ್ಯಗಳಿಗೆ 2500 ಕೋಟಿ ರೂಪಾಯಿ ಹಣವನ್ನ ಮೀಸಲಿಡುವ ಬಗ್ಗೆ ತನ್ನ ನಿರ್ಧಾರವನ್ನ ಪ್ರಕಟಿಸಿದೆ. ಇನ್ನು ಸಮಗ್ರ ಶಿಕ್ಷಣದ ಅಡಿಯಲ್ಲಿ ಈಗಾಗಲೇ 5228 ಕೋಟಿ ರೂಪಾಯಿಗಳಿಗೆ ತಾತ್ಕಾಲಿಕ ಅನುದಾನವನ್ನು ನೀಡಲಾಗಿದೆ.

9. ಕೋವಿಡ್ ಮೃತದೇಹಕ್ಕೆ ಮುತ್ತಿಕ್ಕಿ ಅಂತಿಮ ಗೌರವ
ಡೆಡ್ಲಿ ವೈರಸ್ ಕೊರೊನಾದಿಂದ ಸಾವನ್ನಪ್ಪಿದರೆ ಮೃತದೇಹದ ಬಳಿ ಯಾರೂ ಕೂಡ ಸುಳಿಯುವುದಿಲ್ಲ. ಆದರೆ, ತೆಲಂಗಾಣದ ಸಮಾಜ ಸೇವಕ ಅನ್ನಂ ಶ್ರೀನಿವಾಸರಾವ್, ಕೋವಿಡ್​​ನಿಂದ ಸಾವನ್ನಪ್ಪಿರುವ ವ್ಯಕ್ತಿಯ ಮೃತದೇಹಕ್ಕೆ ಮುತ್ತಿಕ್ಕಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ತೆಲಂಗಾಣದ ಖಮ್ಮಂನ ಸರ್ಕಾರಿ ಆಸ್ಪತ್ರೆಯಲ್ಲಿ ಅನ್ನಂ ಶ್ರೀನಿವಾಸರಾವ್ ಇಂಥ ಕಾರ್ಯ ಮಾಡೋ ಮೂಲಕ, ಕೋವಿಡ್​ನಿಂದ ಮೃತಪಟ್ಟವರ ದೇಹದಿಂದ ಇತರರಿಗೂ ಸೋಂಕು ಬರುವುದಿಲ್ಲ ಅಂತ ಅರಿವು ಮೂಡಿಸುತ್ತಿದ್ದಾರೆ. ವಿಶೇಷವೆಂದರೆ ದೇಶದಲ್ಲಿ ಎರಡನೇ ಹಂತದ ಕೋವಿಡ್ ಪ್ರಾರಂಭವಾದಾಗಿನಿಂದಲೂ ಇವ್ರು ನೂರಾರು ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ್ದಾರೆ

10. ಸೋನು ಸೂದ್ ಹೆಸರಿನಲ್ಲಿ ನಕಲಿ ದೇಣಿಗೆ ಅಭಿಯಾನ
ಕೋವಿಡ್‌–19 ಬಿಕ್ಕಟ್ಟಿನ ಮಧ್ಯೆ ಜನರಿಗೆ ನಿರಂತರವಾಗಿ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್, ಸಹಾಯ ಮಾಡುವ ನೆಪದಲ್ಲಿ ನಕಲಿ ಫೌಂಡೇಷನ್ ಮೂಲಕ ದೇಣಿಗೆ ಪಡೆಯುತ್ತಿರುವ ಬೆಳಕಿಗೆ ಬಂದಿದೆ. ಸೋನು ಸೂದ್ ಫೌಂಡೇಷನ್’ ಎನ್ನುವ ಹೆಸರಿನಲ್ಲಿ ಕೆಲವರು ದೇಣಿಗೆ ಪಡೆಯುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ’ ಎಂದು ಸೂನ್ ಸೂದ್ ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಿದ್ದಾರೆ. ನನ್ನ ಹೆಸರು ಹೇಳಿಕೊಂಡು ಹಣ ಸಂಗ್ರಹಿಸಿದ್ರೆ, ನಿಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಂತ ಮನವಿ ಮಾಡಿಕೊಂಡಿದ್ದಾರೆ.

 

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link