1. ಇನ್ನು ಮೂರು ದಿನಕ್ಕೆ ಲಾಕ್​​ಡೌನ್ ಅಂತ್ಯ
ರಾಜ್ಯದಲ್ಲಿ ಲಾಕ್‌ಡೌನ್‌ ಇಂದಿಗೆ ಬರೋಬ್ಬರಿ 12 ದಿನಕ್ಕೆ ಕಾಲಿಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಗತ್ಯ ವಸ್ತುಗಳಿಗೆ ಖರೀದಿ ಬಿಟ್ರೆ ಉಳಿದಿದೆಲ್ಲ ಸಂಪೂರ್ಣ ಬಂದ್ ಆಗಿದೆ. ಬೆಳಗ್ಗೆ 10 ಗಂಟೆವರೆಗೂ ಮಾತ್ರ ವಸ್ತುಗಳ ಖರೀದಿಗೆ ಅವಕಾಶವಿದೆ. ಕೆ.ಆರ್.ಮಾರ್ಕೆಟ್ನಲ್ಲಿ ತಳ್ಳೋ ಗಾಡಿಗಳ ವ್ಯಾಪಾರ ನಡೀತಿದ್ದು, ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನು ಜಿಲ್ಲಾ ಕೇಂದ್ರಗಳಲ್ಲೂ ಕೂಡ ಯಥಾಸ್ಥಿತಿ ಮುಂದುವರಿದಿದೆ. ಲಾಕ್​ಡೌನ್ ಕೊನೆಗೊಳ್ಳಲು ಇನ್ನು ಮೂರೇ ದಿನ ಬಾಕಿಯಿದೆ.

2. ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ
ರಾಜ್ಯದಲ್ಲಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಣೆಗೆ ಪುನರಾರಂಭಿಸಲಾಗಿದೆ ಅಂತಾ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಮೊದಲಿಗೆ ರಾಜ್ಯ ಸರ್ಕಾರ ಗುರುತಿಸಿರೋ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಂತರ ಇತರರಿಗೂ ಆದ್ಯತೆ ನೀಡಲಾಗುತ್ತದೆ ಅಂತ ಟ್ವೀಟ್ ಮೂಲಕ ಸುಧಾಕರ್ ಮಾಹಿತಿ ನೀಡಿದ್ದಾರೆ. 18 ವರ್ಷ ಮೇಲ್ಪಟ್ಟವರು ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

3. ಅರ್ಚಕರಿಗೆ ಸರ್ಕಾರದಿಂದ ಗುಡ್​​ನ್ಯೂಸ್​​
ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರಿಗೆ ಸರ್ಕಾರ ಗುಡ್ನ್ಯೂಸ್ ನೀಡಿದೆ. ಸಂಕಷ್ಟದಲ್ಲಿರುವ ಅರ್ಚಕರಿಗೆ ಆರ್ಥಿಕ ನೆರವು ನೀಡೋದಾಗಿ ಘೋಷಿಸಿದೆ. ಸರ್ಕಾರದ ಅಧೀನದಲ್ಲಿರುವ 27 ಸಾವಿರ ದೇವಾಲಯಗಳಲ್ಲಿನ ಅರ್ಚಕರಿಗೆ 03 ತಿಂಗಳ ಮುಂಗಡ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಕುರಿತು ಮುಜರಾಯಿ ಇಲಾಖೆ ಸಚಿವ ಶ್ರೀನಿವಾಸ್ ಪೂಜಾರಿ ಅಧಿಕೃತ ಆದೇಶವನ್ನೂ ಹೊರಡಿಸಿದ್ದಾರೆ.

4. ಆಕ್ಸಿಜನ್ ಸಮಸ್ಯೆ-ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ
ರಾಜ್ಯಕ್ಕೆ ಬೇಕಿರುವಷ್ಟು ಆಕ್ಸಿಜನ್ ಲಭ್ಯವಾಗಿಲ್ಲ ಅಂತ ಹೈಕೋರ್ಟ್​​ಗೆ ಎಎಜಿ ಸುಬ್ರಹ್ಮಣ್ಯ ತಿಳಿಸಿದ್ದಾರೆ. ರಾಜ್ಯಕ್ಕೆ ಪ್ರತಿದಿನ 1,396 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗುತ್ತೆ. ಆದ್ರೆ ಅದು ಸರಿಯಾಗಿ ಲಭ್ಯವಾಗ್ತಿಲ್ಲ. ಅಷ್ಟೇ ಅಲ್ಲ ರಾಜ್ಯಗಳಲ್ಲಿ ಆಕ್ಸಿಜನ್ ಹಂಚಿಕೆಯಾಗಿರುವ ಬಗ್ಗೆ ಮಾಹಿತಿ ಪಡೆದಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ, ನಮ್ಮ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಸರಿಯಾಗಿ ಆಗ್ತಿಲ್ಲ ಅಂತ ತಿಳಿಸಿದ್ದಾರೆ. ಇನ್ನು ಇದೇ ವೇಳೆ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿ, ಆಕ್ಸಿಜನ್ ಪೂರೈಕೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ ಅಂತ ಕೇಳಿದೆ.

5. ವೈದ್ಯರ ಜೊತೆ ಸಂವಾದ ನಡೆಸಲಿರುವ ಮೋದಿ
ಇಂದು ಪ್ರಧಾನಿ ಮೋದಿ ತಮ್ಮ ಲೋಕಸಭಾ ಕ್ಷೇತ್ರ ಉತ್ತರ ಪ್ರದೇಶದ ವಾರಣಾಸಿಯ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ವೇಳೆ ವಾರಣಾಸಿಯಲ್ಲಿ ಕೊರೊನಾ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಲಿದ್ದಾರೆ. ಇತ್ತೀಚೆಗೆ ಪ್ರಾರಂಭವಾದ ಪಂಡಿತ್ ರಾಜನ್ ಮಿಶ್ರ ಕೋವಿಡ್ ಆಸ್ಪತ್ರೆ ಸೇರಿದಂತೆ ವಾರಣಾಸಿಯ ವಿವಿಧ ಕೊರೊನಾ ಆಸ್ಪತ್ರೆಗಳ ಕಾರ್ಯಗಳ ಬಗ್ಗೆ ಪ್ರಧಾನಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.

6. ‘ಬ್ಲ್ಯಾಕ್ ಫಂಗಸ್​​​ಗೆ ಅಂಫೋಟೆರಿಸಿನ್‌ ಔಷಧ ನೀಡಿ’
ಬ್ಲ್ಯಾಕ್ ಫಂಗಸ್ ಸೋಂಕನ್ನ 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸಾಂಕ್ರಾಮಿಕ ರೋಗ ಎಂದು ಪರಿಗಣಿಸಬೇಕು ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಲ್ಲದೇ ಸೋಂಕಿಗೆ ಸಂಬಂಧಿಸಿದ ತಪಾಸಣೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬಿಡುಗಡೆ ಮಾಡುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು. ಬ್ಲ್ಯಾಕ್ ಫಂಗಸ್ ನಿವಾರಣೆಗಾಗಿ ಅಂಫೋಟೆರಿಸಿನ್‌ ಔಷಧ ನೀಡಬೇಕು ಅಂತಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

7. ದ್ರವದ ಸಣ್ಣ ಕಣಗಳಿಂದ ಹರಡಲಿದೆ ಕೊರೊನಾ
ಕೊರೊನಾ ವೈರಸ್ ಒಳಗೊಂಡ ದ್ರವದ ಅತಿ ಸಣ್ಣ ಕಣಗಳು ಗಾಳಿಯಲ್ಲಿ ಹತ್ತು ಮೀಟರ್‌ನಷ್ಟು ದೂರಕ್ಕೆ ಚಿಮ್ಮಿಯಲಿದೆ ಅಂತ ಕೇಂದ್ರ ಸರ್ಕಾರ ತಿಳಿಸಿದೆ. ಸೋಂಕಿತನ ಸೀನು, ಕೆಮ್ಮಿನಿಂದ ಎರಡು ಮೀಟರ್ ಒಳಗೆ ಬೀಳುವ ದ್ರವದ ಸಣ್ಣ ಕಣಗಳು ಗಾಳಿಯಿಂದ ಹತ್ತು ಮೀಟರ್ ದೂರದವರೆಗೆ ಸಾಗಲಿದೆ. ಹೀಗಾಗಿ ಜನರು ಪರಸ್ಪರ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು. ಜೊತೆಗೆ ಎರಡೆರಡು ಮಾಸ್ಕ್‌ಗಳನ್ನು ಧರಿಸುವುದು ಒಳ್ಳೆಯದು ಅಂತ ತಿಳಿಸಿದೆ.

8. ಮನೆಗಳಲ್ಲೇ ಕೋವಿಸೆಲ್ಫ್ ಕಿಟ್ ಬಳಕೆಗೆ ಅಸ್ತು
ಮನೆಗಳಲ್ಲೇ ಕೋವಿಡ್ ಟೆಸ್ಟ್ ಮಾಡಿಕೊಳ್ಳಲು ನೆರವಾಗುವಂಥ ಕೋವಿಸೆಲ್ಫ್ ಕಿಟ್​​ಗೆ ಐಸಿಎಂಆರ್ ಅನುಮತಿ ನೀಡಿದೆ. ಮನೆಗಳಲ್ಲೇ ಈ ಕಿಟ್ ಬಳಸಿ ಜನರು ತಮ್ಮ ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷೆ ಮಾಡಿಕೊಳ್ಳಬಹುದು. 15 ನಿಮಿಷಗಳಲ್ಲಿ ಫಲಿತಾಂಶವನ್ನು ಪಡೆಯಬಹುದು. ಕಿಟ್ ಬಳಸುವುದಕ್ಕಾಗಿ, ಬಳಕೆದಾರರರು ಮೊಬೈಲ್ ಅಪ್ಲಿಕೇಶನ್ ಡೌನ್​ಲೋಡ್​ ಮಾಡಿಕೊಳ್ಳಬೇಕು. ಇದು ಪರೀಕ್ಷಾ ಕಾರ್ಯವಿಧಾನದ ಸಮಗ್ರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರೋಗಿಗೆ ಪಾಸಿಟಿವ್ ಅಥವಾ ನೆಗೆಟಿವ್ ಪರೀಕ್ಷಾ ಫಲಿತಾಂಶವನ್ನು ನೀಡುತ್ತದೆ.

9. ಶೂಟಿಂಗ್ ಕೋಚ್ ಮೊನಾಲಿ ಬ್ಲಾಕ್ ಫಂಗಸ್​​ಗೆ ಬಲಿ
ಭಾರತದ ಶೂಟಿಂಗ್ ಕೋಚ್ ಮೊನಾಲಿ ಗಾರ್ಹಿ ಬ್ಲಾಕ್ ಫಂಗಸ್ ಸೋಂಕಿಗೆ ಬಲಿಯಾಗಿದ್ದಾರೆ. ಇತ್ತೀಚಿಗೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರು. ದುರದುಷ್ಟವಶಾತ್ ಮೊನಾಲಿಗೆ ಬ್ಲಾಕ್ ಫಂಗಸ್ ದೃಢ ಪಟ್ಟ ಹಿನ್ನೆಲೆ ಆಸ್ಪತ್ರೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೊನಾಲಿ ಸಾವಿನ ಸುದ್ದಿ ಅವರ ಆಪ್ತ ವಲಯಕ್ಕೆ ಅತೀವ ದುಃಖ ಉಂಟುಮಾಡಿದೆ.

10. NTR ಹುಟ್ಟುಹಬ್ಬ, ಮತ್ತೊಂದು ಪೋಸ್ಟರ್ ರಿಲೀಸ್
ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಅವರ ಹುಟ್ಟುಹಬ್ಬದ ಅಂಗವಾಗಿ “ಆರ್​​ಆರ್​​​ಆರ್” ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಚಿತ್ರದಲ್ಲಿ, ಕೊಮರಾಮ್ ಭೀಮ್ ಪಾತ್ರದಲ್ಲಿ ನಟಿಸುತ್ತಿರುವ ಎನ್​ಟಿಆರ್ ಬಿರುಗಾಳಿಯ ನಡುವೆ ಸಮುದ್ರದ ಅಲೆಗಳ ಮೇಲೆ ನಿಂತು ಕೈಯಲ್ಲಿ ಈಟಿ ಹಿಡಿದುರುವ ಪೋಸ್ಟರ್ ಅಭಿಮಾನಿಗಳಿಗೆ ಹೊಸ ಜೋಶ್ ನೀಡುತ್ತಿದೆ. #ಆರ್​​ಆರ್​​​ಆರ್ ಸಿನಿಮಾದಿಂದ # ಕೊಮಾರಾಮ್ ಭೀಮ್” ಎಂದು ಬರೆದುಕೊಂಡು ಪೋಸ್ಟರ್ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ತೇಜ, ಆಲಿಯಾ ಭಟ್ ಮತ್ತು ಅಜಯ್ ದೇವ್‌ಗನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link