1. ನಾಳೆಯಿಂದ ಮತ್ತೆ 14 ದಿನ ಮನೆಗಳಲ್ಲೇ ‘ಲಾಕ್’
ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರೋ ಲಾಕ್​​ಡೌನ್ ನಾಳೆ ಬೆಳಗ್ಗೆ 6ಕ್ಕೆ ಮುಕ್ತಾಯವಾಗಬೇಕಿತ್ತು.  ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ, ಮೇ 10ರಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಲಾಕ್​​ಡೌನ್ ಜಾರಿ ಮಾಡಿತ್ತು. ಆದ್ರೆ ಸೋಂಕು ಇನ್ನು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಮತ್ತೆ 14 ದಿನಗಳ ಕಾಲ ಲಾಕ್​​ಡೌನ್ ವಿಸ್ತರಣೆ ಮಾಡಲಾಗಿದೆ. ನಾಳೆಯಿಂದ  ಜೂನ್ 7ರವರೆಗೆ ಲಾಕ್​​ಡೌನ್ ಮುಂದುವರಿಯಲಿದೆ. ಲಾಕ್​​ಡೌನ್ ವೇಳೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿರಲಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

2. ‘ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ’
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಅಂತ ಸಚಿವ ಡಾ.ಕೆ ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಸುಧಾಕರ್, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತಿದೆ. ಇದಕ್ಕೆ ಕಾರಣ ಲಾಕ್​​​​ಡೌನ್​​​​. ರಾಜ್ಯದಲ್ಲಿ ಲಾಕ್​​​​ಡೌನ್ ಜಾರಿ ಮಾಡಿದ್ದಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಜೊತೆಗೆ ಗುಣಮುಖರಾದವರ ಸಂಖ್ಯೆ ಜಾಸ್ತಿಯಾಗುತ್ತಿದೆ ಅಂತ ತಿಳಿಸಿದ್ದಾರೆ.

3. ಕೊರೊನಾ ಭಯದಿಂದ ಜಮೀನುಗಳಲ್ಲೇ ವಾಸ!
ಕ್ರೂರಿ ಕೊರೊನಾ ಗ್ರಾಮೀಣ ಪ್ರದೇಶಕ್ಕೂ ಲಗ್ಗೆಯಿಟ್ಟು ಆರ್ಭಟಿಸುತ್ತಿದೆ. ಕೊಪ್ಪಳದಲ್ಲಿ ಹಳ್ಳಿಗಳಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಕೆಲ ಗ್ರಾಮಗಳಲ್ಲಿ ಜನರು ತಮ್ಮ ಜಮೀನು ಹಾಗೂ ಹೊರವಲಯದಲ್ಲಿ ವಾಸವಾಗಿದ್ದಾರೆ. ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳ ಗ್ರಾಮ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜನರು ಕುಟುಂಬ ಸಮೇತ ಹೊಲದ ಗುಡಿಸಲಿನಲ್ಲಿ ವಾಸವಾಗಿದ್ದಾರೆ.

4. ಹುಲಿ ಕುಣಿತ ಮಾಡಿದ್ದವರ ಮೇಲೆ ಎಫ್ಐಆರ್
ಉಡುಪಿಯಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸಿ, ಮೆಹೆಂದಿ ಕಾರ್ಯಕ್ರಮದಲ್ಲಿ ಭರ್ಜರಿ ಹುಲಿ ಕುಣಿತ ಮಾಡಿದ್ದವರ ಮೇಲೆ ಎಫ್ಐಆರ್ ದಾಖಲಾಗಿದೆ. ಕುಂದಾಪುರದ ಕರ್ಕುಂಜೆ ಗ್ರಾಮದ ಅಸೋಡಿ ಎಂಬಲ್ಲಿ ಮೆಹೆಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಸೋಡಿ ಭುಜಂಗ ಶೆಟ್ಟಿ ಎಂಬುವವರ ಮನೆಯ ಕಾರ್ಯಕ್ರಮದಲ್ಲಿ ಮಾಸ್ಕ್ ಬಳಸದೇ, ಸಾಮಾಜಿಕ ಅಂತರ ಇಲ್ಲದೇ ಕುಣೀದು ಕುಪ್ಪಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

5. ಅನಾಥ ಮಕ್ಕಳ ನೆರವಿಗೆ ನಿಂತ ಸುತ್ತೂರು ಶ್ರೀ
ಕೊರೊನಾದಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಆರೈಕೆಗೆ ಸುತ್ತೂರು ಶ್ರೀಗಳು ಮುಂದೆ ಬಂದಿದ್ದಾರೆ. ಆರ್ಥಿಕ ಸಂಕಷ್ಟಕೊಳಗಾದ ಮತ್ತು ಕೊರೊನಾದಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿವರೆಗೂ ಉಚಿತ ಶಿಕ್ಷಣ ನೀಡಲು ಮೈಸೂರಿನಲ್ಲಿ ಸುತ್ತೂರು ಶ್ರೀಗಳು ತಿಳಿಸಿದ್ದಾರೆ. ರಾಜ್ಯದ ಹಾಗೂ ಹೊರ ರಾಜ್ಯದ ಮಕ್ಕಳು ಈ ಸೌಲಭ್ಯ ಪಡೆಯಬಹುದಾಗಿದ್ದು, ಸುತ್ತೂರಿನ ಶಾಲೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಲು ನಿರ್ಧಾರಿಸಿದೆ.

6. ಇಂದು ಕೇಂದ್ರ ಶಿಕ್ಷಣ ಸಚಿವರಿಂದ ಮಹತ್ವದ ಸಭೆ
ಕೇಂದ್ರ ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. 12ನೇ ತರಗತಿ ಹಾಗೂ ವೃತ್ತಿಪರ ಕೋರ್ಸ್​​ಗಳ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಮಂತ್ರಿಗಳು, ಶಿಕ್ಷಣ ಕಾರ್ಯದರ್ಶಿಗಳು ಹಾಗೂ ಪರೀಕ್ಷಾ ಮಂಡಳಿಗಳ ಮುಖ್ಯಸ್ಥರೊಂದಿಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

7. ಮೃತ ವಾರಿಯರ್ಸ್ ಕುಟುಂಬಕ್ಕೆ ₹1 ಕೋಟಿ ಪರಿಹಾರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದ ವಾರಿಯರ್ಸ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಖುದ್ದಾಗಿ ಮೃತ ವೈದ್ಯರೊಬ್ಬರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರದ ಚೆಕ್ ಹಸ್ತಾಂತರಿಸಿದ್ದಾರೆ. ಜೊತೆಗೆ ಕೊರೊನಾದಿಂದ ಮೃತಪಟ್ಟ ಶಾಲಾ ಶಿಕ್ಷಕನ ಕುಟುಂಬಕ್ಕೂ 1 ಕೋಟಿ ರೂಪಾಯಿ ಪರಿಹಾರ ಚೆಕ್ ಘೋಷಿಸಿದ್ದಾರೆ.

8. ಸೋಂಕಿತರಿಗೆ ನೀಡ್ತಿದ್ದ ಆಯುರ್ವೇದ ಔಷಧಿಗೆ ಬ್ರೇಕ್
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯರು, ಕೊರೊನಾ ರೋಗಿಗಳಿಗೆ ಔಷಧಿ ನೀಡುತ್ತಿದ್ದರು. ಈ ಔಷಧಿ ಪಡೆಯೋಕೆ ಜನರು ನಾ ಮುಂದು ತಾ ಮುಂದು ಅಂತ ದೌಡಾಯಿಸ್ತಿದ್ರು. ಈ ಹಿನ್ನಲೆ ಆಯುರ್ವೇದ ವೈದ್ಯರು ನೀಡುತ್ತಿರುವ ಔಷಧಿಯ ಪರಿಣಾಮಕಾರಿಯೇ ಎಂದು ಆಂಧ್ರಪ್ರದೇಶ ಸರ್ಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಕೋರಲು ನಿರ್ಧರಿಸಿದೆ. ಸದ್ಯ ಸರ್ಕಾರ ಕೆಲ ನಿರ್ಬಂಧ ವಿಧಿಸಿ, ತಾತ್ಕಾಲಿಕವಾಗಿ ಔಷಧ ವಿತರಣೆಯನ್ನ ಸ್ಥಗಿತಗೊಳಿಸಿದೆ.

9. ‘ಲಸಿಕೆ ಹಾಕಿಸಿಕೊಂಡೋರೆಲ್ಲಾ ಸತ್ತು ಹೋಗಿದ್ದಾರಾ?‘
ಮಧ್ಯಪ್ರದೇಶದ ನಿವರಿ ಜಿಲ್ಲೆಯ ಬುಂದೇಲ್‌ಖಂಡ್‌ನ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಲಸಿಕೆ ಬಗ್ಗೆ ಅರಿವಿನ ಕೊರತೆಯಿಂದಾಗಿ, ಜನರು ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿವರಿ ಜಿಲ್ಲಾಧಿಕಾರಿ ಆಶಿಶ್ ಭಾರ್ಗವ, ಲಸಿಕೆ ಬಗ್ಗೆ ಜನರಿಗೆ ಮನವರಿಕೆ ಮಾಡಲು ಮುಂದಾಗಿದ್ದರು. ಆಗ ಮಹಿಳೆಯೊಬ್ಬಳು ಲಸಿಕೆ ಪಡೆದು ನಾವು ಸತ್ತರೆ ಯಾರು ಜವಾಬ್ದಾರರು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಜಿಲ್ಲಾಧಿಕಾರಿ ಲಸಿಕೆ ಹಾಕಿಸಿಕೊಂಡ ನಂತ್ರ ಯಾರೂ ಹುಚ್ಚರಾಗಿಲ್ಲ. ಲಸಿಕೆ ಹಾಕಿಸಿಕೊಂಡವರೆಲ್ಲಾ ಸತ್ತು ಹೋಗಿದ್ದಾರಾ? ನಾನು ನಿಮ್ಮೆಲ್ಲರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಮನವರಿಕೆ ಮಾಡಿಸಲು ಯತ್ನಿಸಿದ್ದಾರೆ.

10. ಮೇ.26ಕ್ಕೆ ಸೂಪರ್ ಮೂನ್ ದರ್ಶನ
ಈ ವರ್ಷದ ಮೊದಲ ಚಂದ್ರಗ್ರಹಣ ಮೇ.26ರಂದು ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣ ವಿಶೇಷವಾಗಿರಲಿದ್ದು, ಅಂದು ಸೂಪರ್‌ಮೂನ್‌ ಹಾಗೂ ಬ್ಲಡ್​ ರೆಡ್​ ಮೂನ್ ಕೂಡ ಗೋಚರವಾಗಲಿದೆ. ಇದ್ರಿಂದ ಚಂದ್ರಗ್ರಹಣ, ಸೂಪರ್​ ಮೂನ್ ಮತ್ತು ಕೆಂಪು ಚಂದ್ರನನ್ನು ಏಕಕಾಲಕ್ಕೆ ಕಾಣಬಹುದಾಗಿದೆ. ಮೇ.26ರಂದು ಆಸ್ಟ್ರೇಲಿಯಾ, ಜಪಾನ್‌, ಅಮೆರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಸೂಪರ್‌ಮೂನ್‌ ದರ್ಶನವಾಗಲಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link