1. ಇಂದಿನಿಂದ ಎರಡನೇ ಹಂತದ ಲಾಕ್​ಡೌನ್ ಜಾರಿ
ಮೊದಲ ಹಂತದ ಲಾಕ್ಡೌನ್ ಇವತ್ತಿಗೆ ಮುಕ್ತಾಯವಾಗಿದ್ದು, ಇಂದಿನಿಂದ ಎರಡನೇ ಹಂತದ ಲಾಕ್ಡೌನ್ ಶುರುವಾಗಿದೆ. ರಾಜ್ಯಾದ್ಯಂತ ಜೂನ್ 7ರವರೆಗೆ ಲಾಕ್ಡೌನ್ ವಿಸ್ತರಣೆಯಾಗಿದ್ದು, ಇಂದಿನಿಂದ ಇನ್ನಷ್ಟು ಕಠಿಣ ನಿಯಮಗಳು ಜಾರಿಗೊಳ್ಳಲಿವೆ. ಹೀಗಾಗಿ ಈ ಮೊದಲಿನಂತೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದ್ದು, 10 ಗಂಟೆ ನಂತರ ಮನೆಯಿಂದ ಆಚೆ ಬರುವುದಕ್ಕೆ ಅವಕಾವನ್ನ ನೀಡಲಾಗಿಲ್ಲ. ಇನ್ನು ಅನಾವಶ್ಯಕವಾಗಿ ಓಡಾಡಿದ್ರೆ ಅಂತವರ ವಿರುದ್ಧ ಕಠಿಣ ಕ್ರಮದ ಜೊತೆಗೆ ವಾಹನಗಳನ್ನ ಸೀಜ್ ಮಾಡಿ ಕೇಸ್ ಕೂಡ ದಾಖಲಾಗುವುದು ಕೂಡ ಪಕ್ಕಾ.

2. ಅಗತ್ಯ ವಸ್ತುಗಳ ಖರೀದಿಯಲ್ಲಿ ಫುಲ್ ಬ್ಯುಸಿಯಾದ ಜನರು
ರಾಜ್ಯದಲ್ಲಿ ಎರಡನೇ ಹಂತದ ಲಾಕ್ಡೌನ್ ಮುಂದುವರಿಕೆಯಾಗಿದ್ದು, ಎಂದಿನಂತೆ ಅಗತ್ಯ ವಸ್ತುಗಳ ಖರೀದಿಗೆ ಜನರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ಫುಲ್ ಬ್ಯುಸಿಯಾಗಿದ್ದು, ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಿಲಿಕಾನ್ ಸಿಟಿಜನ ಮುಗಿಬಿದಿದ್ದಾರೆ. ಇನ್ನು ಬೆಳ್ಳಂಬೆಳಗ್ಗೆಯೇ ವಾಹನ ಸಂಚಾರವು ಹೆಚ್ಚಿನ ಮಟ್ಟದಲ್ಲಿ ಕಾಣ್ತಿದ್ದು, ಹಣ್ಣು ತರಕಾರಿ ಖರೀದಿಗೆ ಮಾರ್ಕೆಟ್ನತ್ತ ಜನರು ಮುಖ ಮಾಡ್ತಿದ್ದಾರೆ.

3. ರೂಲ್ಸ್ ಬ್ರೇಕ್ ಮಾಡಿದ್ರೆ, ಕಸ ವಿಲೇವಾರಿ ಮಾಡ್ಬೇಕು
ಉಡುಪಿಯಲ್ಲಿ ಲಾಕ್​ಡೌನ್ ಇದ್ರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಓಡಾಡುತ್ತಿದ್ದ ವಾಹನವನ್ನು ತಡೆಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,  ತ್ಯಾಜ್ಯ ವಿಲೇವಾರಿ ಮಾಡಿಸುವ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಆಭರಣ ಮೋಟರ್ಸ್ ಎದುರಿನಿಂದ ಕಾಂಚನ ಮೋಟಾರ್ಸ್ವರೆಗೆ ಹೆದ್ದಾರಿ ಬದಿಯಲ್ಲಿ ಬಿದ್ದಿದ್ದ ಕಸವನ್ನು ಅನಗತ್ಯ ಓಡಾಟ ನಡೆಸಿದವರ ವಾಹನಕ್ಕೆ ತುಂಬಿಸಿ ಡಂಪಿಂಗ್ ಯಾರ್ಡ್​​ಗೆ ಸಾಗಿಸಿದ್ದಾರೆ. ಇದೇ ರೀತಿಯಲ್ಲಿ ನಿಯಮ ಉಲ್ಲಂಘಿಸಿದ್ರೆ, ಅಂತಹ ವಾಹನಗಳನ್ನು ಲಾಕ್​ಡೌನ್​​ ಮುಗಿಯುವವರೆಗೂ ಕಸ ವಿಲೇವಾರಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಸದಾಶಿವ ಪ್ರಭು ಅವರು ಎಚ್ಚರಿಸಿದ್ದಾರೆ.

4. ಎಣ್ಣೆಗಾಗಿ ಕ್ಯೂ ನಿಂತ ಮದ್ಯಪ್ರಿಯರು
ಕೊಪ್ಪಳದಲ್ಲಿ ಕಂಪ್ಲೀಟ್ ಲಾಕ್ ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ, ಮದ್ಯ ಪ್ರಿಯರು ಬಾರ್ಗಳ ಮುಂದೆ ಎಣ್ಣೆಗಾಗಿ ಕ್ಯೂ ನಿಂತಿದ್ದರು. ಈ ವೇಳೆ ಜನರಿಗೆ ಕೃತಕ ಅಭಾವ ಸೃಷ್ಟಿ ಮಾಡಿ ಮದ್ಯ ಮಾರಾಟ ಮಾಡಲಾಗುತ್ತಿದೆ ಅಂತಾ ಮದ್ಯಪ್ರಿಯರು ಆರೋಪ ಮಾಡಿದ್ದರು, ಹೀಗಾಗಿ ತಕ್ಷಣ ಸ್ಥಳಕ್ಕೆ ಧಾವಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ರು. ಬಳಿಕ ಗಂಗಾವತಿ, ಕೊಪ್ಪಳ, ಯಲಬುರ್ಗಾ ಸೇರಿದಂತೆ ಜಿಲ್ಲೆಯ ಹಲವೆಡೆ ಪರಿಶೀಲನೆಯನ್ನ ನಡೆಸಲಾಗಿದೆ.

5. ಆಸ್ತಿ ವಿಚಾರಕ್ಕೆ ಒಂದೇ ಕುಟುಂಬದ 5 ಮಂದಿಯ ಕೊಲೆ
ಆಸ್ತಿ ವಿಚಾರಕ್ಕೆ ಮೂವರು ಮಕ್ಕಳನ್ನು ಸೇರಿದಂತೆ ಕುಟುಂಬದ ಐದು ಮಂದಿಯನ್ನು ಕೊಲೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಖಾನ್ಪುರ್ ಗ್ರಾಮದಲ್ಲಿ ನಡೆದಿದೆ. ಮಲಗಿರುವ ವೇಳೆ ಕತ್ತು ಕೋಯ್ದು ಭೀಕರವಾಗಿ ಕೊಲ್ಲಲಾಗಿದೆ ಅಂತಾ ಅಯೋಧ್ಯೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಹೇಳಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ನಾಲ್ವರ ಆರೋಪಿಗಳನ್ನ ಬಂಧಿಸಲಾಗಿದೆ ಅಂತಾ ಶೈಲೇಶ್ ಹೇಳಿದ್ದಾರೆ.

6. ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಸಾವಿನ ಸಂಖ್ಯೆಯಲ್ಲಿ ಭಾರತ 3ನೇ ಸ್ಥಾನ
ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ದೇಶದಲ್ಲಿ ಈವರೆಗೆ 3 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಇಡೀ ವಿಶ್ವದಲ್ಲಿ ಕೊರೊನಾಗೆ ಅತೀ ಹೆಚ್ಚು ಬಲಿಯಾದವರ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಪ್ರತಿದಿನ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿತ್ತು, ಆದ್ರೆ ಇದೀಗ 2 ಲಕ್ಷಕ್ಕೆ ಇಳಿಕೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿ ಮಾತ್ರ ಪ್ರತಿದಿನ 4000 ಅಸುಪಾಸಿನಲ್ಲೇ ಪತ್ತೆಯಾಗುತ್ತಿದೆ. ಹೀಗಾಗಿ ಕೊರೊನಾ ಎರಡನೇ ಅಲೆ ಹೊಡೆತಕ್ಕೆ ಭಾರತದಲ್ಲಿ ಅತೀ ಹೆಚ್ಚು ಸೋಂಕಿತರು ಸಾವನ್ನಪ್ಪುತ್ತಿದ್ದು, ಅಮೆರಿಕಾ ಮತ್ತು ಬ್ರೆಜಿಲ್ ನಂತರ ಈಗ ಭಾರತ ಸಹ ಹೆಮ್ಮಾರಿ ಕೊರೊನಾಗೆ ಹೆಚ್ಚು ಸೋಂಕಿತರು ಬಲಿಯಾಗುವ ಮೂಲಕ ಮೂರನೇ ಸ್ಥಾನಕ್ಕೆ ಬಂದು ತಲುಪಿದೆ.

7. ಕೊರೊನಾ ರೂಲ್ಸ್ ಮೀರಿದ್ರೆ  ಪ್ರೆಡಿಡೆಂಟ್​ಗೂ ಬೀಳುತ್ತೆ ದಂಡ
ಕೊರೊನಾ ಎರಡನೇ ಅಲೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಅನೇಕ ದೇಶಗಳು ಕೊರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಿದೆ. ಆದ್ರೆ ಬ್ರೆಜಿಲ ನ ಅಧ್ಯಕ್ಷ ಜೈರ್ ಬೊಲ್ಸ್ನೋರ್ ಮರ್ನಾಹೋದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಸ್ಕ್ ಹಾಕದೇ ಭಾಗವಹಿಸಿದ್ದಲ್ಲದೆ, ಕೊರೊನಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಸಾಮಾನ್ಯ ಜನರಿಗೆ ದಂಡ ಹಾಕುವಂತೆ ಅಧ್ಯಕ್ಷ ಬೋಲ್ಸ್ನೋರ್ಗೂ ಸಹ ದಂಡ ಹಾಕಲಾಗಿದೆ. ಈ ಬಗ್ಗೆ ಬ್ರೆಜಿಲ್​ ಆರೋಗ್ಯ ಇಲಾಖೆಯೂ ಸಹ ಬೋಲ್ಸ್ನೋರ್ ಮೇಲೆ ಕೇಸ್ ದಾಖಲಿಸಿಕೊಂಡಿದ್ದು, ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದೆ.

8. ಮೈಕ್, ಸ್ಪೀಕರ್ ಇರುವ ಮಾಸ್ಕ್ ತಯಾರಿಸಿದ ವಿದ್ಯಾರ್ಥಿ
ಕೇರಳದ ತ್ರಿಶೂರ್ ಕಾಲೇಜಿನ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥೀ ಕೆವಿನ್ ಜಾಕೋಬ್ ಹೊಸ ರೀತಿಯ ಮಾಸ್ಕ್  ವಿನ್ಯಾಸಗೊಳಿಸಿದ್ದಾನೆ. ಕೊರೊನಾ ಸಾಂಕ್ರಮಿಕ ರೋಗದ ನಡುವೆ ಮಾತನಾಡುವುದನ್ನು ಸುಲಭಗೊಳಿಸಲು ಮಾಸ್ಕ್ ಒಳಗೆ ಮೈಕ್ ಮತ್ತು ಸ್ಪೀಕರ್​ ಇರುವಂತೆ ವಿನ್ಯಾಸಗೊಳಿಸಿದ್ದಾನೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆವಿನ್, ನನ್ನ ಪೋಷಕರು ವೈದ್ಯರಾಗಿದ್ದರಿಂದ ಸೋಂಕಿತರು ಜೊತೆ ಸಂವಹನ ನಡೆಸಲು ಕಷ್ಟವಾಗುತ್ತಿತ್ತು, ಆದ್ದರಿಂದ ಸೋಂಕಿತರ ಜೊತೆ ಉತ್ತಮ ಸಂವಹನ ನಡೆಸಲು ಹೊಸ ರೀತಿಯ ಮಾಸ್ಕ್​ ವಿನ್ಯಾಸಗೊಳಿಸಿದ್ದೇನೆ ಅಂತಾ ಹೇಳಿದ್ದಾನೆ.

9. ಕೊರೊನಾ ಲಸಿಕೆಗೆ ಹೆದರಿ ನದಿಗೆ ಹಾರಿದ ಜನರು
ಉತ್ತರಪ್ರದೇಶದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದನ್ನ ತಪ್ಪಿಸಿಕೊಳ್ಳಲು ಜನರು ನದಿಗೆ ಹಾರಿದ್ದಾರೆ. ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯ ಸಿಸೌಡಾ ಗ್ರಾಮದಲ್ಲಿ, ಸಾರ್ವಜನಿಕರಿಗೆ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದೆ. ಈ ವೇಳೆ ಅಧಿಕಾರಿಗಳನ್ನ ಕಂಡ ಕೆಲ ಗ್ರಾಮಸ್ಥರು ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿ ನದಿಯ ಕಡೆಗೆ ಓಡಿಹೋಗಿದ್ದಾರೆ. ಬಳಿಕ ಇವರನ್ನ ಆರೋಗ್ಯ ಅಧಿಕಾರಿಗಳು ಸಹ ಹಿಂಬಾಲಿಸಿದ್ದಾರೆ. 200ಕ್ಕೂ ಹೆಚ್ಚು ಜನರು ಆರೋಗ್ಯ ಸಿಬ್ಬಂದಿಗಳ ಕೈಯಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದಾರೆ. ಇನ್ನು ಆರೋಗ್ಯ ಅಧಿಕಾರಿಗಳು ಎಷ್ಟೇ ಮನವಿ ಮಾಡಿಕೊಂಡ್ರು ಸಹ ಗ್ರಾಮಸ್ಥರು ಮಾತ್ರ ಲಸಿಕೆಯನ್ನ ಸಂಪೂರ್ಣ ನಿರಾಕರಿಸಿದ್ದಾರೆ.

10. 2021ರ ಏಷ್ಯಾಕಪ್ ಟೂರ್ನಿ 2023ಕ್ಕೆ ಮುಂದೂಡಿಕೆ
ಕೊರೊನಾ ಮಹಾಮಾರಿಯಿಂದ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯಲ್ಲಿ ನಿರಂತರ ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ, 2021ರ ಏಷ್ಯಾಕಪ್ ಟೂರ್ನಿಯನ್ನು ಸಹ 2023ಕ್ಕೆ ಮುಂದೂಡಲಾಗಿದೆ. ಏಷ್ಯಾಕಪ್ ಆಡಲಿರುವ ಎಲ್ಲಾ ನಾಲ್ಕು ತಂಡಗಳ ವೇಳಾಪಟ್ಟಿ ವರ್ಷದ ಅಂತ್ಯದವರೆಗೆ ನಿಗದಿಯಾಗಿರುವುದರಿಂದ. ಈ ವರ್ಷ ಪಂದ್ಯಾವಳಿಗಾಗಿ ವೇಳಾಪಟ್ಟಿ ಹೊಂದಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹೇಳಿತ್ತು. ಹೀಗಾಗಿ ಮಂಡಳಿಯು ಈ ವಿಷಯವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿದ್ದು ಟೂರ್ನಿಯನ್ನು ಮುಂದೂಡುವುದು ಮುಂದಿನ ಮಾರ್ಗವಾಗಿದೆ ಎಂದು ನಿರ್ಧರಿಸಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​​ಅಪ್​​ appeared first on News First Kannada.

Source: newsfirstlive.com

Source link