1. ಇಂದು ಎರಡನೇ ದಿನದ ಲಾಕ್​ಡೌನ್ ಮುಂದುವರಿಕೆ
ಎರಡನೇ ಹಂತದ ಲಾಕ್​ಡೌನ್ ಹಿನ್ನೆಲೆ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಪೊಲೀಸರು ರಸ್ತೆಗಿಳಿದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ನಗರದ ಸುಮನಹಳ್ಳಿ, ಆಡುಗೋಡಿ ಸಿಗ್ನಲ್ ಬಳಿ ಬ್ಯಾರಿಕೇಡ್​​ ಹಾಕಿ ಲಾಠಿ ಹಿಡಿದುಕೊಂಡು ಫೀಲ್ಡಿಗಿಳಿದ್ದಾರೆ. ಅಗತ್ಯ ವಸ್ತು ಖರೀದಿಗೆ ಹೋಗ್ತಿದ್ದೀವಿ ಅಂದ್ರು ಸಹ ಪೆೊಲೀಸರು ಮಾತ್ರ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳುತ್ತಿದ್ದು.. ಪ್ರತಿಯೊಬ್ಬರ ಹೆಸ್ರು, ವಿಳಾಸ ಜೊತೆಗೆ ಮೊಬೈಲ್ ನಂಬರ್ ಕೂಡ ಎಂಟ್ರಿ ಮಾಡಿಕೊಳ್ತಿದ್ದಾರೆ. ಇತ್ತ ಶಿವಾಜಿ ನಗರದ ರಸ್ಸೆಲ್ ಮಾರುಕಟ್ಟೆಯ ಬಳಿ ಎಂದಿನಂತೆ ಇಂದು ಕೂಡ ವಾಹನ ಸಂಚಾರ ಹೆಚ್ಚಿದ್ದು, ಮಾರ್ಕೆಟ್​ನ ಗಲ್ಲಿ ಗಲ್ಲಿಗೆ ತೆರಳಿ ಜನರು ವಸ್ತುಗಳನ್ನ ಖರೀದಿ ಮಾಡುತ್ತಿದ್ದಾರೆ.

2. ಮೈಸೂರು ಕಂಪ್ಲೀಟ್ ಲಾಕ್, ಕಲಬುರಗಿಯಲ್ಲಿ ರೂಲ್ಸ್​ ಬ್ರೇಕ್
ಮೈಸೂರಿನಲ್ಲಿಯೂ ಕೂಡ ಎರಡನೇ ದಿನದ ಲಾಕ್​ಡೌನ್​​ ಹಿನ್ನೆಲೆ ಪೊಲೀಸರು ನಗರದಲ್ಲಿ ಮುಂಜಾನೆಯಿಂದಲೆ ಫೀಲ್ಡ್​​​ಗಿಳಿದಿದ್ದಾರೆ. ಅನಗತ್ಯ ಓಡಾಟಕ್ಕೇ ಪೊಲೀಸರು ಬ್ರೇಕ್ ಹಾಕಿದ್ದು, ವಾಹನಗಳನ್ನ ಸೀಜ್ ಮಾಡುತ್ತಿದ್ದಾರೆ. ಸದ್ಯ ನಗರದಲ್ಲಿ ಅಗತ್ಯ ವಸ್ತುಗಳ ಖರೀದಿ ವೇಳೆ ವಾಹನ‌ ಸಂಚಾರ ವಿರಳವಾಗಿದ್ದು, ಕೆಲವೆಡೆ ರಸ್ತೆಗಳು ಫುಲ್ ಖಾಲಿ ಖಾಲಿಯಾಗಿವೆ. ಹಾಗೆ ದೇವರಾಜ ಮಾರುಕಟ್ಟೆಗೆ ಬರುವವರ ಸಂಖ್ಯೆಯು ಕೂಡ ವಿರಳವಾಗಿದೆ. ಇನ್ನು ಕಲಬುರಗಿಯಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್​ಡೌನ್​ ನಿಯಮಗಳು ಪಾಲನೆ ಆಗಿಲ್ಲ. ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಕಿರಾಣಾ ಬಜಾರ್ನಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಜನರು, ಕೋವಿಡ್ ನಿಯಮಗಳನ್ನ ಉಲ್ಲಂಘಿಸಿ ಮುಗಿಬಿದ್ದಿದ್ದಾರೆ. ಹಾಗೆ ರಸ್ತೆಯಲ್ಲಿ ಓಡಾಡೋರ ಸಂಖ್ಯೆಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿಯೆ ಕಂಡು ಬಂದಿದೆ.

3. ಶಾಸಕರಿಂದ ಸೋಂಕಿತರಿಗೆ ರಸಮಂಜರಿ ಕಾರ್ಯಕ್ರಮ
ದಾವಣಗೆರೆಯ ಕೋವಿಡ್ ಕೇರ್ ಸೆಂಟರ್​​​ನಲ್ಲಿರುವ ಸೋಂಕಿತರಿಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿದ್ದರು. ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ಗ್ರಾಮದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್​ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕೊರೊನಾ ಸೋಂಕಿತರು ಚಿತ್ರಗೀತೆಗಳನ್ನ ಕೇಳುವ ಮೂಲಕ ಖುಷಿ ಪಟ್ಟರು.ಈ ವೇಳೆ ಶಾಸಕ ರೇಣುಕಾಚಾರ್ಯ ಸ್ವತಃ ಡ್ಯಾನ್ಸ್ ಕೂಡ ಮಾಡಿದ್ರು.

4.‘ಮೇ ಒಳಗೆ 3.63 ಲಕ್ಷ ವಯಲ್ಸ್ ಆಮದು’
ಬ್ಲ್ಯಾಕ್ ಫಂಗಸ್ ರೋಗದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ನಿನ್ನೆ ರಾಜ್ಯಗಳಿಗೆ 19 ಸಾವಿರ 420 ವಯಲ್ಸ್ ಲೈಪೋಸೊಮಾಲ್ ಆ್ಯಂಫೋಟೆರಿಸಿನ್-ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು, ರಾಜ್ಯಕ್ಕೆ 1 ಸಾವಿರ 30 ವಯಲ್ಸ್ ಪೂರೈಕೆ ಮಾಡಿದೆ. ಮೇ ಒಳಗೆ 3.63 ಲಕ್ಷ ವಯಲ್ಸ್ ಆಮದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕಕ್ಕೆ 1 ಸಾವಿರದ 30 ವಯಲ್ಸ್ ಒದಗಿಸಲಾಗಿದೆ. ಮೊನ್ನೆ 1 ಸಾವಿರ 270 ವಯಲ್ಸ್ ಹಾಗೂ ಅದಕ್ಕೂ ಮುನ್ನ ಮೂರು ಕಂತುಗಳಲ್ಲಿ 1 ಸಾವಿರ 660 ವಯಲ್ಸ್ ಒದಗಿಸಲಾಗಿತ್ತು. ಇದುವರೆಗೆ ದೇಶದ ಐದು ಫಾರ್ಮಾ ಕಂಪನಿಗಳು ಇದರ ಉತ್ಪಾದನೆ ಮಾಡುತ್ತಿದ್ದು, ಈಗ ಹೊಸದಾಗಿ ಮತ್ತೆ ಐದು ಕಂಪನಿಗಳಿಗೆ ಲೈಸನ್ಸ್ ನೀಡಲಾಗಿದೆ. ಈ ಸ್ವದೇಶಿ ಕಂಪನಿಗಳು ಮೇ ತಿಂಗಳಲ್ಲಿ 1.63 ಲಕ್ಷ ವಯಲ್ಸ್​ ಹಾಗೂ ಜೂನ್ ತಿಂಗಳಲ್ಲಿ 2.55 ವಯಲ್ಸ್ ಆ್ಯಂಫೋಟೆರಿಸಿನ್-ಬಿ ಉತ್ಪಾದನೆ ಮಾಡಲಿವೆ ಎಂದು ತಿಳಿಸಿದ್ರು.

5. ಕೊರೊನಾ ಹಿಮ್ಮೆಟ್ಟಿಸಿದ ಅವಿಭಕ್ತ ಕುಟುಂಬ
ಕೊರೊನಾ ಎರಡನೇ ಅಲೆಗೆ ಜನರು ಹೈರಾಣಾಗಿದ್ದಾರೆ. ಈ ನಡುವೆಯೆ ಉತ್ತರ ಕನ್ನಡ ಜಿಲ್ಲೆಯ ಒಂದೇ ಕುಟುಂಬದ 18 ಸದಸ್ಯರಿಗೂ ಕೊರೊನಾ ಸೋಂಕು ತಗುಲಿತ್ತು. ಆದ್ರೆ ಅವರೆಲ್ಲೂ ಆತ್ಮಸ್ಥೆರ್ಯ ಹಾಗೂ ಒಗ್ಗಟ್ಟಿನಿಂದ ಕೊರೊನಾವನ್ನು ಗೆದ್ದು ಬಂದಿದ್ದಾರೆ. ಜಿಲ್ಲೆಯ ಸರಕುಳಿ ಗ್ರಾಮದ ಲೋಕೇಶ್ವರ ರಾಮಚಂದ್ರ ಹೆಗಡೆಯವರ ಮನೆಯಲ್ಲಿ, ಒಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಪರೀಕ್ಷೆ ಮಾಡಿಸಲಾಗಿತ್ತು. ಆಗ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಇದಾದ ಬೆನ್ನಲ್ಲೆ ಅವರ ಕುಟುಂಬಸ್ಥರೆಲ್ಲರೂ ಪರೀಕ್ಷೆ ಮಾಡಿಸಿದಾಗ ಉಳಿದ 17 ಜನರಿಗೂ ಪಾಸಿಟಿವ್ ಬಂದಿರುವುದು ದೃಢಪಟ್ಟಿತ್ತು. ಆದ್ರೆ ಯಾರೂ ಸಹ ಧೃತಿಗೆಡದೆ ಒಗ್ಗಟ್ಟಿನಿಂದ ಸರ್ಕಾರದ ಕೊರೊನಾ ನಿಯಮಗಳನ್ನ ಪಾಲಿಸಿ ಮನೆಯಲ್ಲಿಯೇ ಅಗತ್ಯವಿರುವ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಮೂಲಕ ಸೋಂಕು ಊರಿನಲ್ಲಿ ಹರಡದಂತೆ ಜಾಗ್ರತಿ ವಹಿಸುವ ಮೂಲಕ ಅವಿಭಕ್ತ ಕುಟುಂಬಗಳ ಒಗ್ಗಟ್ಟು ಹಾಗು ಸಾಮಾಜಿಕ ಕಳಕಳಿಗೆ ಸಾಕ್ಷಿ ಎಂದು ತೋರಿಸಿಕೊಟ್ಟಿದ್ದಾರೆ.

6. ದನದ ಕೊಟ್ಟಿಗೆಯಲ್ಲಿದ್ದೇ ಕೊರೊನಾ ಗೆದ್ದ
ಕೊರೊನಾ ಪಾಸಿಟಿವ್ ಬಂದ ಹಿನ್ನಲೆ 14 ದಿನ ವ್ಯಕ್ತಿಯೊಬ್ಬರು ದನದ ಕೊಟ್ಟಿಗೆಯಲ್ಲೇ ಇದ್ದು, ಕೊರೊನಾದಿಂದ ಗುಣಮುಖರಾಗಿ ಬಂದಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಭು ಎಂಬವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ದನದ ಕೊಟ್ಟಿಗೆಯಲ್ಲಿ ಹಸು ಕರುಗಳ ಜೊತೆಯೇ 14 ದಿನ ವಾಸ ಮಾಡಿದ್ದಾರೆ. ಸದ್ಯ ಈಗ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾದ ಪ್ರಭುಗೆ ನೆಗೆಟಿವ್ ವರದಿ ಬಂದಿದ್ದು, ಮನೆ ಕಡೆ ಹೊರಟಿದ್ದಾರೆ.

7. ಕೊರೊನಾ ವಿರುದ್ಧ ಹೋರಾಟಕ್ಕೆ ‘ಕಾಕ್​​ಟೇಲ್ ’ ಮದ್ದು
ಕೊರೊನಾದಿಂದ ಸಾವನ್ನಪ್ಪುತ್ತಿರುವವರ ರಕ್ಷಣೆಗೆ ಮತ್ತೊಂದು ಔಷಧ ಭಾರತಕ್ಕೆ ಲಗ್ಗೆಯಿಟ್ಟಿದ್ದು, ಮುಂದಿನ ತಿಂಗಳಷ್ಟರಲ್ಲಿ ದೇಶದಲ್ಲಿ 2ನೇ ಬ್ಯಾಚ್ ಲಭ್ಯವಾಗಲಿದೆ. ರೋಚೆಸ್ ಆಂಟಿಬಾಡಿ ಕಾಕ್​ಟೇಲ್(Casirivimab & Imdevimab)​ ಔಷಧ ಭಾರತದಲ್ಲಿ ಸಿಗಲಿದೆ. ಇದನ್ನ ಕಳೆದ ವರ್ಷ ಡೊಲಾನ್ಡ್ ಟ್ರಂಪ್ ಕೊರೊನಾಗೆ ತುತ್ತಾಗಿದ್ದ ಸಂದರ್ಭದಲ್ಲಿ ಪಡೆದುಕೊಂಡಿದ್ದರು. ರೋಚೆ ಇಂಡಿಯಾ ಹಾಗೂ ಸಿಪ್ಲಾ ಸಂಸ್ಥೆ ಹೊರತಂದಿರುವ ಈ ಔಷಧಿಯ ಪ್ರತಿ ಡೋಸ್​​ನ ಬೆಲೆ 59,750 ರೂಪಾಗಳಾಗಿರಲಿದೆ. ಇದರ ಮೊದಲ ಬ್ಯಾಚ್ ಈಗಾಗ್ಲೆ ಭಾರತದಲ್ಲಿ ಲಭ್ಯವಿದ್ದು, ಕೊರೊನಾ ತೀವ್ರತೆಗೆ ಸಿಲುಕಿಕೊಂಡಿರುವ ಸೋಂಕಿತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಒಬ್ಬರಿಗೆ ಇದರ ಎರಡು ಡೋಸ್​​ ಅವಶ್ಯಕತೆ ಇರಲಿದೆ ಅಂತ ಹೇಳಲಾಗ್ತಿದೆ.

8. ಸೋಂಕಿಗೆ ಜಗತ್ತಿನಾದ್ಯಂತ 1.15 ಲಕ್ಷ ಆರೋಗ್ಯ ಸಿಬ್ಬಂದಿ ಸಾವು
ಕೋವಿಡ್-19 ಸಾಂಕ್ರಾಮಿಕದ ಆರಂಭದಿಂದ ಈವರೆಗೆ 1,15,000 ಆರೋಗ್ಯ ಸೇವಕರು ಈ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ವಾರ್ಷಿಕ ಸಮಾವೇಶದ ಉದ್ಘಾಟನೆಯ ವೇಳೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರಾದ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ರವರು ಕೊರೊನಾ ವಿರುದ್ಧದ ಹೋರಾಟದಲ್ಲಿ ಜಗತ್ತಿನಾದ್ಯಂತ ಆರೋಗ್ಯ ಸೇವಕರು ಮಾಡಿರುವ ತ್ಯಾಗಗಳು ಶ್ಲಾಘನೀಯ, ಸತತ18 ತಿಂಗಳುಗಳ ಕಾಲ ಜಗತ್ತಿನಾದ್ಯಂತದ ಆರೋಗ್ಯ ಸೇವಕರು ಸಾವು ಮತ್ತು ಬದುಕಿನ ನಡುವೆಯೇ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ಅಸಂಖ್ಯಾತ ಜೀವಗಳನ್ನು ಉಳಿಸಿದ್ದಾರೆ ಹಾಗೂ ಇತರರನ್ನು ಉಳಿಸಲು ಹೋರಾಡಿದ್ದಾರೆ. ಅವರ ಕಾರ್ಯ ನಿಜಕ್ಕೂ ಸ್ಮರಣೀಯ ಎಂದಿದ್ದಾರೆ.

9. ಮನೆಯನ್ನು 1 ಮೀ. ಪಕ್ಕಕ್ಕೆ ಸರಿಸಿ, ಇಲ್ವಾ ದಂಡ ಕಟ್ಟಿ
ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ಮೂಲದ ದೀಪಕ್ ಲಾಲ್‌ ಎಂಬುವವರು ನ್ಯೂಜಿಲೆಂಡ್‌ನಲ್ಲಿ ಮನೆ ಕಟ್ಟುವಾಗ ಸರ್ಕಾರದ ನಿಯಮ ಉಲ್ಲಂಘಿಸಿದ್ದಾರೆ. ತಮ್ಮ ಕನಸಿನ ಮೂರು ಬೆಡ್‌ ರೂಂ ಉಳ್ಳ ಮನೆಯನ್ನು ಆಕ್ಲೆಂಡ್‌ನಲ್ಲಿ ನಿರ್ಮಿಸಿದ್ದ ಭಾರತೀಯ ದೀಪಕ್‌ ಲಾಲ್, ಇನ್ನೇನು ನಿರ್ಮಾಣ ಪೂರ್ಣಗೊಳ್ಳಲು ಕೆಲವೇ ದಿನ ಇರುವಾಗಲೇ ಅವರು ನಿಯಮಗಳನ್ನ ಉಲ್ಲಂಘಿಸಿ ಮನೆ ಕಟ್ಟಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಗಬೇಕಿದ್ದ ಗೃಹಪ್ರವೇಶ ನಿಲ್ಲಿಸಲಾಗಿದ್ದು, ಮನೆ ನಿರ್ಮಿಸುವ ಸ್ಥಳ ಬಿಟ್ಟು ಬೇರೆಡೆ ಮನೆ ಕಟ್ಟಿದ್ದಕ್ಕೆ ನಿಮ್ಮ ಮನೆಯನ್ನು ಒಂದು ಮೀಟರ್ ದೂರಕ್ಕೆ ವರ್ಗಾಯಿಸಿ ಅಥವಾ 1.65 ಕೋಟಿ ರೂ. ದಂಡ ಕಟ್ಟಿ ಎಂದು ಅಲ್ಲಿನ ಸರ್ಕಾರ ಆದೇಶಿಸಿದೆ. ಮನೆಯನ್ನು ಎತ್ತಿಡಲು ಹೇಗ ಸಾಧ್ಯ..? ಎಂಬ ಚಿಂತೆಯಲ್ಲಿ ಇರುವ ದೀಪಕ್‌ ಲಾಲ್‌ ಮನೆ ಕಟ್ಟಿ ಇದೀಗ ಪೇಚಿಗೆ ಸಿಲುಕಿದ್ದಾರೆ.

10. ಚಂದ್ರಗ್ರಹಣ ಕೆಲಭಾಗಗಳಲ್ಲಿ ಮಾತ್ರ ಗೋಚರ
ನಾಳೆ ಚಂದ್ರಗ್ರಹಣ ಸಂಭವಿಸುತ್ತಿದ್ದು, ಈಶಾನ್ಯ ಭಾರತದ ಕೆಲ ಭಾಗ, ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾದ ಕರಾವಳಿ ಭಾಗಗಳಲ್ಲಿ ಅಲ್ಪಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ ಚಂದ್ರೋದಯದ ನಂತರ, ಗ್ರಹಣದ ಭಾಗಶಃ ಅಂತ್ಯವು ಈಶಾನ್ಯ ಭಾಗಗಳಿಂದ ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾದ ಕೆಲವು ಭಾಗಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಲ್ಪಾವಧಿಯಲ್ಲಿ ಗೋಚರಿಸುತ್ತದೆ ಎಂದು ಐಎಂಡಿ ಹೇಳಿದೆ. ಭಾಗಶಃ ಗ್ರಹಣವು ಮಧ್ಯಾಹ್ನ 3.15 ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 6.23ಕ್ಕೆ ಕೊನೆಗೊಳ್ಳಲಿದೆ. ಸಂಪೂರ್ಣ ಗ್ರಹಣವು ಸಂಜೆ 4.39ಕ್ಕೆ ಪ್ರಾರಂಭವಾಗಿ ಸಂಜೆ 4.58ಕ್ಕೆ ಕೊನೆಗೊಳ್ಳಲಿದೆ.

 

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link