1. ಅನಗತ್ಯ ಓಡಾಡಕ್ಕೆ ಬ್ರೇಕ್
ಎರಡನೇ ಹಂತದ ಮೂರನೇ ದಿನದ ಕೊರೊನಾ ಲಾಕ್​​ಡೌನ್ ಮುಂದುರೆದಿದ್ದು ಬೆಂಗಳೂರಿನ ಆಡುಗೋಡಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. 10 ಗಂಟೆ ಒಳಗಡೆಯೂ ಅನಗತ್ಯವಾಗಿ ಓಡಾಡುವವರ 4 ಗಾಡಿಯನ್ನ ಸೀಜ್ ಮಾಡಿದ್ದಾರೆ. ಇತ್ತ ಸುಮ್ಮನಹಳ್ಳಿ ಸರ್ಕಲ್ ಬಳಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದು, ಬೇರೆ ಬೇರೆ ಭಾಗದಿಂದ ಬಂದ ರೈತರು ಹೂ ಮಾರಾಟ ಮಾಡುತ್ತಿದ್ದಾರೆ. ದೇವನಹಳ್ಳಿ, ತಾವರೆಕೆರೆ, ನೆಲಮಂಗಲ ರೈತರು ಹೂ ಮಾರಾಟ ಮಾಡುತ್ತಿದ್ದು, ಬೀದಿ ಬದಿ ವ್ಯಾಪಾರಿಗಳ ವ್ಯಾಪಾರದ ಭರಾಟೆ ಜೋರಾಗಿದೆ. ಶಿವಾಜಿನಗರದಲ್ಲಿ ರಸೆಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದ್ದು ಎಂದಿನಂತೆ ಮಾರ್ಕೆಟ್ ಬಳಿ ಜನರ ಸಂಖ್ಯೆ ಹೆಚ್ಚಾಗಿದೆ.

2. ಹುಬ್ಬಳ್ಳಿಯಲ್ಲಿ ಇಂದು ಮಾತ್ರ ಕಂಪ್ಲೀಟ್ ಲಾಕ್​ಡೌನ್
ಹುಬ್ಬಳ್ಳಿಯಲ್ಲಿ ಇಂದು ಮಾತ್ರ ಕಂಪ್ಲೀಟ್ ಲಾಕ್ ಡೌನ್ ಜಾರಿಯಲ್ಲಿದ್ದು, ಮತ್ತೆ ನಾಳೆಯಿಂದ ಮೂರು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಅಗತ್ಯ ವಸ್ತುಗಳ ಖರೀದಿಯ ಸಮಯವನ್ನ ಹೆಚ್ಚು ಮಾಡಿದ್ದು ಬೆಳಗ್ಗೆ 6 ಗಂಟೆಯಿಂದ 12 ರವರೆಗೆ ಖರೀದಿಗೆ ಅವಕಾಶವಿದೆ. ಮೂರು ದಿನಗಳ ಬಳಿಕ ಮತ್ತೆ ಯಥಾಸ್ಥಿತಿಯಲ್ಲಿ ಲಾಕ್​ಡೌನ್ ಮುಂದುವರೆಯಲಿದೆ. ಇತ್ತ ಕಲಬುರಗಿಯಲ್ಲಿ ಕೊರೊನಾ ನಿಯಮ ಗಾಳಿಗೆ ತೂರಿ ಗುಂಪು ಸೇರ ವ್ಯಾಪಾರದಲ್ಲಿ ತೊಡಗಿದ್ದಾರೆ. ಅಲ್ದೆ ಬೆಳಗ್ಗೆಯೇ ಆಟೋ ಚಾಲಕರು ಮತ್ತು ವಾಹನ ಸವಾರರು ರಸ್ತೆಗಿಳಿದಿದ್ದು ವಾಹನ ಸಂಚಾರವೂ ಹೆಚ್ಚಾಗಿದೆ.

3. ಸಂಕಷ್ಟದಲ್ಲಿರುವವರಿಗೆ ಆಕ್ಸಿಜನ್ ಆಟೋ ಸೇವೆ
ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ತಮ್ಮ ತಾಯಿಗೆ ಆಕ್ಸಿಜನ್ ಸಿಗದೇ ಸಾವನ್ನಪ್ಪಿದ ಹಿನ್ನಲೆ ಬೇರೆಯವರಿಗೆ ಇಂತಹ ಸ್ಥಿತಿ ಬರಬಾರದು ಎಂಬ ಕಾರಣಕ್ಕೆ, ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆ ಮುಂದೆ ಉಚಿತವಾಗಿ ಆಕ್ಸಿಜನ್ ಆಟೋ ಸೇವೆ ನೀಡುತ್ತಿದ್ದಾರೆ. ಸೀತಾ ದೇವಿ ಎಂಬ ಮಹಿಳೆ ಎನ್​ಜಿಒ ನಿರ್ದೇಶಕಿ ಸಹ ಆಗಿದ್ದು, ಸಂಕಷ್ಟದಲ್ಲಿರುವವರಿಗಾಗಿ ಈ ವ್ಯವಸ್ಥೆಯನ್ನ ಮಾಡಿದ್ದಾರೆ ಈ ಬಗ್ಗೆ ಅವರೇ ಮಾತನಾಡಿದ್ದು, ಆಕ್ಸಿಜನ್ ಕೊರತೆಯಿಂದ ನನ್ನ ತಾಯಿ ಸಾವನ್ನಪ್ಪಿದ್ರು. ಹೀಗಾಗಿ ಮೇ 6 ರಿಂದ ಇಲ್ಲಿಯವರೆಗೂ ಸಹ ಸಂಕಷ್ಟದಲ್ಲಿರುವ ರೋಗಿಗಳ ನೆರವಿಗಾಗಿ ಆಕ್ಸಿಜನ್ ಆಟೋ ಸೇವೆ ವ್ಯವಸ್ಥೆ ಮಾಡಿದ್ದೇವೆ ಅಂತಾ ಹೇಳಿದ್ರು.

4. ಲಸಿಕೆ ಹಾಕಿಸಿ 2 ಕೋಟಿ ಹಣದ ಜೊತೆ ಕಾರು ಪಡೆಯಿರಿ
ಪ್ರಪಂಚದೆಲ್ಲೆಡೆ ಕೊರೊನಾ ಮಹಾಮಾರಿ ಹಬ್ಬಿದ್ದು ಅದಕ್ಕಾಗಿ ಎಲ್ಲೆಡೆ ಕೊರೊನಾ ಲಸಿಕೆ ನೀಡಲಾಗ್ತಿದೆ. ಪೋಲ್ಯಾಂಡ್ ನಲ್ಲಿ ಜನರಿಗೆ ಲಸಿಕೆ ಪಡೆಯಲು ಉತ್ತೇಜಿಸುವ ಸಲುವಾಗಿ ಲಸಿಕೆ ಪಡೆದರೆ ಬಹುಮಾನಗಳೊಂದಿಗೆ ಲಾಟರಿ ಟಿಕೆಟ್ ನೀಡಲಾಗುವುದು ಎಂದು ಅಲ್ಲಿನ ಸಚಿವರು ಘೋಷಿಸಿದ್ದಾರೆ. ಆ ಲಾಟರಿ ಟಿಕೆಟ್ ಬೆಲೆ 2 ಕೋಟಿಗೂ ಅಧಿಕವಾಗಿದ್ದು ಲಸಿಕೆ ಹಾಕಿಸಿಕೊಂಡವರು ಲಾಟರಿ ಟಿಕೆಟ್​ ಪಡೆದು ಅದರಲ್ಲಿ ವಿಜೇತನಾದ್ರೆ ಆತನಿಗೆ 2ಕೋಟಿ ಹಣದ ಜೊತೆಗೆ ಹೈಬ್ರಿಡ್ ಕಾರು ಸಹ ನೀಡಲಾಗುವುದು ಎಂದು ಅಲ್ಲಿನ ಸಚಿವರು ತಿಳಿಸಿದ್ದಾರೆ.

5. ಹೊರಗೋಗ್ತೀನಿ ಎಂದವನಿಗೆ ಪೊಲೀಸರ ಖಡಕ್ ಉತ್ತರ
ದೇಶದಲ್ಲಿ ಕೊರೊನಾ ಹೆಚ್ಚಾಗಿರೋದ್ರಿಂದ ಹಲವು ರಾಜ್ಯಗಳಲ್ಲಿ ಲಾಕ್​ಡೌನ್ ಜಾರಿಯಲ್ಲಿದೆ. ಅದೇ ರೀತಿ ಮುಂಬೈನಲ್ಲೂ ಲಾಕ್​ಡೌನ್ ಜಾರಿ ಮಾಡಲಾಗಿದ್ದು ಈ ನಡುವೆ ಇಲ್ಲೊಬ್ಬ ವ್ಯಕ್ತಿ ಮುಂಬೈ ಪೊಲೀಸರಿಗೆ ‘ಸರ್ ನನ್ನ ಹೆಸರು ಸನ್ನಿ, ನಾನು ಹೊರಗಡೆ ಹೋಗಬಹುದೇ?’ ಎಂದು ಟ್ವೀಟ್ ಮಾಡಿ ಮುಂಬೈ ಪೊಲೀಸರಿಗೆ ಕೇಳಿದ್ದಾನೆ. ಇದಕ್ಕೆ ತಮಾಷೆಯಾಗಿಯೇ ಉತ್ತರ ಕೊಟ್ಟ ಮುಂಬೈ ಪೊಲೀಸರು ಸರ್, ನೀವು ನಿಜವಾಗಿಯೂ ಸೌರಮಂಡಲದ ಮಧ್ಯಭಾಗದಲ್ಲಿರುವ ನಕ್ಷತ್ರವಾಗಿದ್ದರೆ, ಅದರ ಸುತ್ತ ಭೂಮಿ ಮತ್ತು ಸೌರಮಂಡಲದ ಇತರ ಅಂಶಗಳು ಸುತ್ತುತ್ತಿದ್ದರೆ, ನೀವು ಹೊತ್ತುಕೊಳ್ಳುವ ಜವಾಬ್ದಾರಿಯನ್ನು ನೀವು ಅರಿತುಕೊಳ್ಳುತ್ತೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಿಮ್ಮನ್ನು ಸೋಂಕಿಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ ಎಂದು ಮುಂಬೈ ಪೊಲೀಸರು ಬರೆದಿದ್ದಾರೆ.

6. ಮೇಕೆದಾಟು ಅಣೆಕಟ್ಟು ನಿರ್ಮಾಣ ವರದಿ ಕೇಳಿದ ಚೆನ್ನೈ ಪೀಠ
ಮೇಕೆದಾಟು ಆಣೆ‌ಕಟ್ಟು ನಿರ್ಮಾಣ ವಿಚಾರವಾಗಿ ಕರ್ನಾಟಕದಿಂದ ಪರಿಸರ ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಚೆನ್ನೈ ಪೀಠ ಸ್ಥಳದಲ್ಲಿನ ವಾಸ್ತವ ವರದಿ ನೀಡುವಂತೆ ಸೂಚನೆ ನೀಡಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಚೆನ್ನೈ ಪೀಠ ಈ ವಿಚಾರವಾಗಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಿರಿಯ ಅಧಿಕಾರಿ, ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿ ಹಾಗೂ ಕರ್ನಾಟಕ ಹೆಚ್ಚುವರಿ ಅರಣ್ಯ ಸಂರಕ್ಷಣಾ ಅಧಿಕಾರಿ ಒಳಗೊಂಡಂತೆ ಜಂಟಿ ಸಮಿತಿ ರಚಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ಜುಲೈ 5ರೊಳಗೆ ವರದಿ ಸಲ್ಲಿಸಲು ಜಸ್ಟೀಸ್ ಕೆ. ರಾಮಕೃಷ್ಣನ್ ನೇತೃತ್ವದ ಪೀಠದಿಂದ ಸೂಚನೆ ನೀಡಲಾಗಿದೆ.

7 . ‘ಯಾಸ್’ ಚಂಡಮಾರುತ ಎಫೆಕ್ಟ್ ಅಲೆಗಳ ಅಬ್ಬರ ಜೋರು
ಯಾಸ್ ಚಂಡಮಾರುತದ ಭೀತಿ ಶುರುವಾಗಿದ್ದು, ಇಂದು ಒಡಿಶಾದ ಬಾಲಸೋರ್‌ನಲ್ಲಿ ಯಾಸ್ ಚಂಡಮಾರುತವು ಧರೆಗಪ್ಪಿಳಿಸುವ ಸಾಧ್ಯತೆ ಇದೆ. ಈಗಾಗಲೇ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಮುಂದಿನ ಕೆಲ ಗಂಟೆಗಳಲ್ಲಿ ಯಸ್ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಲಕ್ಷಾಂತರ ಮಂದಿಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

8. ಸಿಬಿಐ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ
ಮಹಾರಾಷ್ಟ್ರದ ಮಾಜಿ ಪೊಲೀಸ್ ಮುಖ್ಯಸ್ಥರು ಹಾಗೂ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್​ರನ್ನು ಕೇಂದ್ರ ತನಿಖಾ ತಂಡದ ನಿರ್ದೇಶಕರಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಮುಖ್ಯ ನ್ಯಾಯಮೂರ್ತಿಗಳು ನಡೆಸಿದ ಮಹತ್ವದ ಸಭೆಯ ಬಳಿಕ ಕೇಂದ್ರ ತನಿಖಾ ತಂಡಕ್ಕೆ ಹೊಸ ನಿರ್ದೇಶಕರನ್ನು ನೇಮಿಸಿ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.

9. ಭಾರತದ ಡಿಜಿಟಲ್ ನಿಯಮ ಅನುಸರಿಸ್ತೇವೆಂದ ಗೂಗಲ್
ಡಿಜಿಟಲ್​ ಮಾಹಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳು ಇನ್ನೇನು ಜಾರಿಗೆ ಬರಲಿವೆ. ಆದರೆ ಫೇಸ್ಬುಕ್, ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್​ ಈವರೆಗೂ ತಮ್ಮ ನಿಯಮಾವಳಿಗಳನ್ನ ಅಳವಡಿಸಿಕೊಂಡಿಲ್ಲ. ಸದ್ಯ ಇಂದಿನಿಂದ ಇವುಗಳು ಬಂದ್ ಆಗುತ್ತವೆ ಅಂತಾ ಹೇಳಲಾಗ್ತಿದ್ದು ಈ ಬೆನ್ನಲ್ಲೇ ಗೂಗಲ್ ಮತ್ತು ಯೂಟ್ಯೂಬ್ ಭಾರತದ ಹೊಸ ಡಿಜಿಟಲ್ ನಿಯಮಗಳನ್ನು ಅನುಸರಿಸುವ ಗುರಿ ಹೊಂದಿದ್ದೇವೆ ಅಂತಾ ಮಾಹಿತಿ ನೀಡಿವೆ. ನಾವು ಭಾರತದ ನಿಯಮಾವಳಿಗಳನ್ನ ಗೌರವಿಸುತ್ತೇವೆ ಮತ್ತು ಕಾನೂನಿಗೆ ಬಾಹಿರ ಹಾಗೂ ಕೆಲ ವಿಷಯಗಳನ್ನ ತೆಗೆದುಹಾಕುವ ಸರ್ಕಾರದ ನೀತಿಗಳಿಗೆ ಸ್ಪಂದಿಸುವ ಸುದೀರ್ಘ ಇತಿಹಾಸವನ್ನು ಹೊಂದಿದ್ದೇವೆ ಎಂದು ಗೂಗಲ್ ಹಾಗೂ ಯೂಟ್ಯೂಬ್ ತಿಳಿಸಿವೆ.

10. ಕೆ.ಎಲ್ ರಾಹುಲ್ ಪೋಸ್ಟ್​ಗೆ ಅಥಿಯಾ ಸ್ಮೈಲಿ ಕಮೆಂಟ್
ಐಪಿಎಲ್​ನಲ್ಲಿ ಆಡುತ್ತಿದ್ದ ವೇಳೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಭಾರತದ ಬ್ಯಾಟ್ಸ್​ಮನ್ ಕೆ.ಎಲ್ ರಾಹುಲ್ ಸದ್ಯ ಚೇತರಿಸಿಕೊಂಡಿದ್ದಾರೆ. ಪ್ರತಿನಿತ್ಯ ವ್ಯಾಯಾಮ ಮಾಡುವ ರಾಹುಲ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇದಕ್ಕೆ ಬಾಲಿವುಡ್​ನ ನಟಿ ಅಥಿಯಾ ಶೆಟ್ಟಿ ಕೆ.ಎಲ್ ರಾಹುಲ್ ಪೋಸ್ಟ್​ಗೆ ಸ್ಮೈಲಿ ಈಮೋಜಿ ಕಳಿಸಿದ್ದಾರೆ. ಅಲ್ಲದೇ ಈ ಹಿಂದೆ ಏಪ್ರಿಲ್​ನಲ್ಲಿ ರಾಹುಲ್ ಹುಟ್ಟುಹಬ್ಬದ ದಿನದಂದು ವಿಶ್ ಮಾಡಿ ಸುದ್ದಿಯಾಗಿದ್ರು. ಸದ್ಯ ರಾಹುಲ್ ಮತ್ತು ಅಥಿಯಾ ಶೆಟ್ಟಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link