ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಕುಂಟು ನೆಪ ಹೇಳಿಕೊಂಡು ಓಡಾಟ
ರಾಜ್ಯದಲ್ಲಿ ಎರಡನೇ ಹಂತದ ಲಾಕ್ಡೌನ್ ವಿಸ್ತರಣೆಯಾಗಿದ್ದು ಬೆಂಗಳೂರಿನಲ್ಲಿ ಎಂದಿನಂತೆ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಸುಮನಹಳ್ಳಿ ಸರ್ಕಲ್ ಬಳಿ ಎಂದಿನಂತೆ ವ್ಯಾಪಾರ ವಹಿವಾಟು ಜೋರಾಗಿದ್ದು, ದೇವನಹಳ್ಳಿ, ತಾವರೆಕೆರೆ, ನೆಲಮಂಗಲ ರೈತರಿಂದ ಹೂ ಮಾರಾಟದ ಭರಾಟೆ ಜೋರಾಗಿದೆ. ಆಡುಗೋಡಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದು ಅನಗತ್ಯವಾಗಿ ಓಡಾಡುವವರ ವಾಹನ ಸೀಜ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇತ್ತ ಕಲಬುರಗಿಯಲ್ಲಿ 2ನೇ ದಿನಕ್ಕೆ ಕಂಪ್ಲೀಟ್ ಲಾಕ್​ಡೌನ್ ಜಾರಿಯಾಗಿದ್ದು, ಅಗತ್ಯ ವಸ್ತುಗಳ ಖರೀದಿಗೂ ಬ್ರೇಕ್ ಹಾಕಲಾಗಿದೆ. ಯಾವುದೇ ಗಾಡಿಯನ್ನ ಬಳಸದೆ ಹಾಲು, ಮೊಟ್ಟೆ, ಮೆಡಿಕಲ್ಸ್​ಗೆ ಹೋಗಲು ಅನುಮತಿಯಿದೆ. ಕಂಪ್ಲೀಟ್ ಲಾಕ್​ಡೌನ್​​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

2. ಇವತ್ತು ಸಂಜೆ ಸಚಿವರ ಜೊತೆ ಸಿಎಂ ಸಭೆ
ರಾಜ್ಯದಲ್ಲಿ ಕೊರೊನಾ ಸೋಂಕು ಹರಡೋದನ್ನ ತಡೆಯೋಕೆ ರಾಜ್ಯ ಸರ್ಕಾರ ಹರ ಸಾಹಸ ಪಡ್ತಿದೆ. ಅಲ್ಲದೆ, ಕೊರೊನಾ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಯನ್ನ ಪರಿಹರಿಸಿ, ಸೋಂಕು ನಿಯಂತ್ರಣಕ್ಕೆ ತರಲು ಐವರು ಸಚಿವರಿಗೆ ವಿಶೇಷ ಜವಾಬ್ದಾರಿಯನ್ನೂ ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ. ಇವತ್ತು ಸಂಜೆ ಸಚಿವರ ಜೊತೆ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಭೆ ನಡೆಯಲಿದ್ದು, ಸದ್ಯ ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ ಹೇಗಿದೆ, ಸೋಂಕು ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಲಾಗಿದೆ, ಸಮಸ್ಯೆಗಳು ಎಷ್ಟು ಬಗೆಹರಿದಿವೆ ಅನ್ನೋ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

3. ಸೋಂಕಿತರ ನೆರವಿಗೆ ನಿಂತ ರಾಜ್ಯದ ಪ್ರತಿಷ್ಠಿತ ಮಠಗಳು
ರಾಜ್ಯದಲ್ಲಿ ಕೆಲ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಕೆಲ ಮಠಗಳನ್ನ ಕೋವಿಡ್ ಕೇರ್ ಸೆಂಟರ್​​ಗಳಾಗಿ ಮಾಡಲಾಗ್ತಿದೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. 80 ಹಾಸಿಗೆಯುಳ್ಳ ಈ ಕೇಂದ್ರದಲ್ಲಿ ಐಸೋಲೇಶನ್ ವ್ಯವಸ್ಥೆ, ಊಟ, ವಸತಿ ಹಾಗೂ ಔಷಧಿ ಸೇರಿದಂತೆ ಪ್ರತಿಯೊಂದು ಸೌಲಭ್ಯವೂ ಸಹ ಉಚಿತವಾಗಿ ನೀಡಲಾಗುತ್ತಿದೆ. ಇತ್ತ ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳು ಇದೀಗ ಮಠದಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್​ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಮಠದ ಆವರಣದಲ್ಲಿನ ವೃದ್ಧಾಶ್ರಮವನ್ನ 100 ಹಾಸಿಗೆಗಳ ಕೋವಿಡ್ ಕೇರ್ ಆಸ್ಪತ್ರೆಗಾಗಿ ಜಿಲ್ಲಾಡಳಿತಕ್ಕೆ ನೀಡಿದ್ರು. ಈಗ ಮತ್ತೊಮ್ಮೆ ಮಠದ ವಿದ್ಯಾರ್ಥಿನಿಲಯದಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್​ ಆರಂಭಿಸಿದ್ದಾರೆ. ಚಿತ್ರದುರ್ಗದ ಮುರುಘ ರಾಜೇಂದ್ರ ಮಠದ ಶ್ರೀಗಳು ಕೂಡ ಕೊರೊನಾ ಸಂಕಷ್ಟದ ಹೊತ್ತಲ್ಲಿ, ಸಂಪೂರ್ಣ ಉಚಿತ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯುವ ಮೂಲಕ ಅನೇಕ ಬಡ ರೋಗಿಗಳಿಗೆ ನೆರವಾಗಿದ್ದಾರೆ.

4. ಚಿಕ್ಕಮಗಳೂರಿನಲ್ಲಿ ಮತ್ತೆ 4 ದಿನ ಸಂಪೂರ್ಣ ಲಾಕ್​ಡೌನ್
ಕಾಫಿನಾಡು ಚಿಕ್ಕಮಗಳೂರಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಜಿಲ್ಲಾಡಳಿತ ಮತ್ತೆ ನಾಲ್ಕು ದಿನಗಳ ಕಾಲ ಕಠಿಣ ಲಾಕ್​ಡೌನ್​ ಮುಂದುವರೆಸಿದೆ. ಆದರೆ, ಈ ಅವಧಿಯಲ್ಲಿ ಜನರ ಅನುಕೂಲಕ್ಕಾಗಿ ಕೆಲವೊಂದು ಬದಲಾವಣೆಗಳನ್ನ ತಂದಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಿದ್ದರೂ ಕೂಡ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ನಗರ ಪ್ರದೇಶಗಳಿಗೆ ಸಂಚರಿಸುವಂತಿಲ್ಲ. ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯ ವಸ್ತುಗಳನ್ನ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲೇ ಖರೀದಿಸಬಹುದಾಗಿದೆ.

5. ಪ್ರತಿ ಡೋಸ್ ಲಸಿಕೆಗೆ 200 ರೂಪಾಯಿ ಸೇವಾ ಶುಲ್ಕ
ಕೊರೊನಾ ಲಸಿಕಾ ವಿತರಣೆಯ ಸೇವಾ ಶುಲ್ಕವನ್ನ 100 ರಿಂದ 200 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಪ್ರತಿ ಡೋಸ್​​ಗೆ ಕೇವಲ 100 ರೂಪಾಯಿಯನ್ನ ನಿಗದಿ ಮಾಡಲಾಗಿತ್ತು, ಆದ್ರೆ ಈಗ ಲಸಿಕೆ ನೀಡುವಿಕೆ ಶುಲ್ಕವನ್ನ ಪ್ರತಿ ಡೋಸ್​ಗೆ 300 ರೂಪಾಯಿಗೆ ಹೆಚ್ಚಿಸುವಂತೆ ಖಾಸಗಿ ಆಸ್ಪತ್ರೆಗಳು, ರಾಜ್ಯದ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ್ದವು. ಹೀಗಾಗಿ ಅಂತಿಮವಾಗಿ ಪ್ರತಿ ಡೋಸ್ ಲಸಿಕಾ ಶುಲ್ಕವನ್ನ, 100 ರಿಂದ 200 ರೂಪಾಯಿಗೆ ಹೆಚ್ಚಿಸಲಾಗಿದೆ ಅಂತ ಡಿಸಿಎಂ ಅಶ್ವತ್ ನಾರಾಯಣ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

6. ಜೂನ್ 2ನೇ ವಾರದಿಂದ ಸ್ಫುಟ್ನಿಕ್-ವಿ ಲಸಿಕೆ ವಿತರಣೆ
ದೇಶದಲ್ಲಿ ಈಗಾಗಲೇ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಜನರಿಗೆ ನೀಡಲಾಗ್ತಿದೆ. ಇದೀಗ ಈ ಲಸಿಕೆಗಳ ಜೊತೆಗೆ ಜೂನ್ ಎರಡನೇ ವಾರದಲ್ಲಿ ಮತ್ತೊಂದು ಲಸಿಕೆ ಸೇರಿಕೊಳ್ಳಲಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್-ವಿ ಇದೇ ಜೂನ್ ತಿಂಗಳ ಮಧ್ಯಂತರದಲ್ಲಿ ವ್ಯಾಕ್ಸಿನೇಷನ್​ಗೆ ಲಭ್ಯವಾಗಲಿದೆ. ಆದ್ರೆ ಅಪೊಲೋ ಆಸ್ಪತ್ರೆಗಳಲ್ಲಿ ಮಾತ್ರವೇ ಈ ಲಸಿಕೆ ಲಭ್ಯವಾಗಲಿದೆ ಎನ್ನಲಾಗಿದೆ. ಸ್ಪುಟ್ನಿಕ್-ವಿ ಲಸಿಕೆ ಪಡೆದುಕೊಳ್ಳಲು ಇಚ್ಚಿಸುವವರು ಅಪೊಲೋ ಆಸ್ಪತ್ರೆಗಳಿಗೆ ಭೇಟಿ ನೀಡಿ ಪ್ರತಿ ಡೋಸ್​​ಗೆ 995 ರೂಪಾಯಿಯಂತೆ ಖರೀದಿಸಿ ಲಸಿಕೆ ಪಡೆಯಬೇಕಾಗುತ್ತದೆ ಎಂದು ಹೇಳಲಾಗ್ತಿದೆ.

7. ಹಿರಿಯರಿಗೆ, ವಿಶೇಷ ಚೇತನರಿಗೆ ಮನೆ ಹತ್ತಿರವೇ ಲಸಿಕೆ
ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ತಮ್ಮ ಮನೆಯ ಸಮೀಪವೇ ಕೊರೊನಾ‌ ಲಸಿಕೆ ಪಡೆಯಬಹುದಾದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ. ಮನೆಯ ಸಮೀಪ ಕೋವಿಡ್‌ ಲಸಿಕಾ ಕೇಂದ್ರವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಸೂಚನೆಗಳನ್ನು ಬಿಡುಗಡೆ ಮಾಡಿದೆ. 60 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಶೇಷ ಚೇತನರಿಗೆ ಕೋವಿಡ್‌ ಲಸಿಕೆ ಪಡೆಯಲು ಸುಲಭವಾಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ಮೊದಲ ಡೋಸ್‌ ಪಡೆದಿರುವ ಮತ್ತು ಇನ್ನೂ ಮೊದಲ ಡೋಸ್‌ ಹಾಕಿಸಿಕೊಳ್ಳದಿರುವ 60 ವರ್ಷ ಮೇಲ್ಪಟ್ಟ ಎಲ್ಲರೂ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ದೈಹಿಕವಾಗಿ ಮತ್ತು ಆರೋಗ್ಯವಾಗಿ ದೂರದ ಕೇಂದ್ರಗಳಿಗೆ ಹೋಗಲು ಅಶಕ್ತರಾದವರು ಎನ್‌ಎಚ್‌ಸಿವಿಸಿ ಸೇವೆಯನ್ನು ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

8. ‘ಮಿಶ್ರ ಲಸಿಕೆ ನೀಡುವುದರಿಂದ ಪ್ರತಿಕೂಲ ಪರಿಣಾಮವಿಲ್ಲ’
ಕೊರೊನಾ ಲಸಿಕೆಯ ಡೋಸ್​ಗಳನ್ನು ಮಿಶ್ರಣ ಮಾಡಿದರೆ, ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಉತ್ತರಪ್ರದೇಶದಲ್ಲಿ 20 ಮಂದಿಗೆ ಮೊದಲನೇ ಡೋಸ್ ಕೋವ್ಯಾಕ್ಸಿನ್ ಹಾಗೂ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ನೀಡಿದ ವರದಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡನೇ ಡೋಸ್ ಲಸಿಕೆ ತೆಗೆದುಕೊಳ್ಳುವಾಗ, ಮೊದಲ ಡೋಸ್​​ನಲ್ಲಿ ತೆಗೆದುಕೊಂಡ ಲಸಿಕೆಯನ್ನೇ ತೆಗೆದುಕೊಳ್ಳಬೇಕು. ನಮ್ಮ ಈ ಶಿಷ್ಟಾಚಾರ ತುಂಬಾ ಸ್ಪಷ್ಟ. ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆದರೆ ಮೊದಲನೇ ಡೋಸ್ ಒಂದು ಲಸಿಕೆ, ಎರಡನೇ ಡೋಸ್ ಇನ್ನೊಂದು ಲಸಿಕೆ ತೆಗೆದುಕೊಂಡರೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ ಎಂದು ಪೌಲ್ ಹೇಳಿದ್ದಾರೆ.

9. ಜರ್ಮನಿಯಲ್ಲಿ 12ನೇ ವಯಸ್ಸಿನ ಮಕ್ಕಳಿಗೆ ಲಸಿಕೆ
ಜೂನ್ 7 ರಿಂದ 12 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಜರ್ಮನಿಯ ಏಂಜೆಲಾ ಮಾರ್ಕೆಲಾ ತಿಳಿಸಿದ್ದಾರೆ. ಆದ್ರೆ ಮಕ್ಕಳಿಗೆ ವ್ಯಾಕ್ಸಿನೇಷನ್ ಕಡ್ಡಾಯವೇನಲ್ಲ ಅವರ ಸ್ವ ಇಚ್ಚೆಗೆ ಬಿಟ್ಟಿದ್ದು, ಎಂದು ತಿಳಿಸಿದೆ. ಇನ್ನು ಯುರೋಪಿಯನ್ ಮೆಡಿಸನ್ ಏಜೆನ್ಸಿ 12 ರಿಂದ 15 ವರ್ಷದ ಮಕ್ಕಳಿಗೆ ಫೈಜರ್ ಅಥವಾ ಬಯೋಟೆಕ್ನ ಕೊರೊನಾ ಲಸಿಕೆಯನ್ನ ನೀಡಬಹುದು ಎಂದು ತಿಳಿಸಿದೆ. ಹೀಗಾಗಿ ಜೂನ್ 7 ಕ್ಕೆ ಲಸಿಕೆ ಮಕ್ಕಳಿಗೆ ಲಸಿಕೆ ಹಾಕಿಸಲು ಇಚ್ಚಿಸುವವರು ಈಗಿನಿಂದಲೇ ನೊಂದಣಿ ಮಾಡಿಕೊಳ್ಳಬಹುದಾಗಿದೆ ಅಲ್ಲದೆ ಆಗಸ್ಟ್ ಅಂತ್ಯದ ವೇಳೆಗೆ ಮಕ್ಕಳಿಗೆ ಎರಡು ಡೋಸ್ ಲಸಿಕೆಯನ್ನ ನೀಡುವ ಗುರಿ ಹೊಂದಿದ್ದೇವೆ. ಈ ಮೂಲಕ ಮಕ್ಕಳು ಸಹ ಕೊರೊನಾ ವಿರುದ್ದ ಹೋರಾಡಲು ಸಹಕಾರಿಯಾಗಲಿದೆ ಎಂದು ಮಾರ್ಕೆಲಾ ತಿಳಿಸಿದ್ದಾರೆ. ಈಗಾಗಲೇ ಕೆನಾಡ ಹಾಗೂ ಅಮೆರಿಕದಲ್ಲಿ 12 ನೇ ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.

10 ‘ಧೋನಿ ಐಪಿಎಲ್‌ಗೂ ನಿವೃತ್ತಿ ಹೇಳಲು ಸೂಕ್ತ ಸಮಯ’
ಐಪಿಎಲ್‌ 2021 ಟೂರ್ನಿಯಲ್ಲಿ 29 ಪಂದ್ಯಗಳ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪರ ಸ್ಟಾರ್‌ ಕ್ಯಾಪ್ಟನ್‌ ಎಂಎಸ್‌ ಧೋನಿ ಕೊನೆಯ ಬಾರಿ ಕಾಣಿಸಿಕೊಳ್ಳಲಿದ್ದಾರೆ ಎಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ. 39 ವರ್ಷದ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮ್ಯಾನ್‌ ಇನ್ನು ಕೆಲವೇ ದಿನಗಳಲ್ಲಿ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ವಯಸ್ಸನ್ನು ಪರಿಗಣಿಸಿ ಮತ್ತು ಅವರ ಆಟದಲ್ಲಿ ಕಾಣಿಸುತ್ತಿರುವ ಮಂದಗತಿಯ ಅನುಗುಣವಾಗಿ ಶೀಘ್ರವೇ ಧೋನಿ ಐಪಿಎಲ್‌ ವೃತ್ತಿ ಬದುಕಿಗೂ ನಿವೃತ್ತಿ ನೀಡಲಿದ್ದಾರೆ ಎಂದು ಆಕಾಶ್‌ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link