1. ಲಾಕ್​ಡೌನ್​, ಕೊರೊನಾ 3ನೇ ಅಲೆ ಬಗ್ಗೆ ಸಿಎಂ ಸಭೆ
ಕೊರೊನಾ ನಿಯಂತ್ರಣ ಹಾಗೂ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರಲಿದೆ ಎನ್ನಲಾದ ಮೂರನೇ ಅಲೆ ಎದುರಿಸುವ ಬಗ್ಗೆ ಚರ್ಚಿಸಲು ಇಂದು ಸಿಎಂ 2 ಪ್ರತ್ಯೇಕ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಅಕ್ಟೋಬರ್​ ಅಥವಾ ನವೆಂಬರ್​ನಲ್ಲಿ ಬರಬಹುದಾದ ಮೂರನೇ ಅಲೆ ತಡೆಯುವ ಬಗ್ಗೆ ವರದಿ ನೀಡಲು ರಚಿಸಿರುವ ಡಾ.ದೇವಿಪ್ರಸಾದ್​ ಶೆಟ್ಟಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಜೊತೆ ಸಿಎಂ ಇಂದು ವರ್ಚ್ಯೂವಲ್​ ಸಭೆ ನಡೆಸಲಿದ್ದಾರೆ. ಬಳಿಕ ಲಾಕ್​ಡೌನ್​ ವಿಸ್ತರಣೆ ಕುರಿತು ತಜ್ಞರ ಸಲಹೆ ಆಧಾರದಲ್ಲಿ ಚರ್ಚೆ ನಡೆಯಲಿದೆ.

2. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ 12.30%ಕ್ಕೆ ಇಳಿಕೆ
ರಾಜ್ಯದಲ್ಲಿ ದಿನೆ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗ್ತಿದೆ. ದಿನಂಪ್ರತಿ ಸುಮಾರು 2 ರಿಂದ 4 ಸಾವಿರದಷ್ಟು ಕೇಸ್​ಗಳು ಕಡಿಮೆಯಾಗ್ತಿವೆ. ನಿನ್ನೆ ರಾಜ್ಯದಲ್ಲಿ 14,304 ಪ್ರಕರಣಗಳು ಪತ್ತೆಯಾಗಿದೆ. ಎಂದಿನಂತೆ ಡಿಸ್ಚಾರ್ಜ್ ಸಂಖ್ಯೆ ಹೆಚ್ಚಾಗಿದ್ದು, ಒಂದೇ ದಿನ 29,271 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದ್ರೆ, ಮೊನ್ನೆಗಿಂತ 53 ಸೋಂಕಿತರು ಹೆಚ್ಚಾಗಿ ಸಾವನ್ನಪ್ಪಿದ್ದು ಒಟ್ಟು 464 ಮಂದಿ ಕೊನೆಯುಸಿರೆಳೆದಿದ್ದಾರೆ. ಪಾಸಿಟಿವಿಟಿ ರೇಟ್​ 12.30ಕ್ಕಿಂತ ಕೆಳಗೆ ಇಳಿದಿದ್ರೆ, ಮರಣ ಪ್ರಮಾಣ ಮಾತ್ರ 3.24ಕ್ಕೆ ಏರಿಕೆಯಾಗಿದೆ. ಇನ್ನು, ಬೆಂಗಳೂರಿನಲ್ಲೂ ಮೊನ್ನೆಗಿಂತ ಕಡಿಮೆ ಅಂದ್ರೆ 3,418 ಪ್ರಕರಣಗಳು ಪತ್ತೆಯಾಗಿವೆ.

3. ‘ಕೋವಿಶೀಲ್ಡ್​-ಕೋವ್ಯಾಕ್ಸಿನ್​ ಲಸಿಕೆ ಮಿಶ್ರಣ ಸದ್ಯಕ್ಕಿಲ್ಲ’
ದೇಶದಲ್ಲಿ ಬೇಡಿಕೆಗಿಂತ ಲಸಿಕೆ ಪೂರೈಕೆ ಕಡಿಮೆಯಿರೋ ಬೆನ್ನಲ್ಲೇ ಲಸಿಕೆ ಮಿಶ್ರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದ್ರೆ ಈ ವಿಚಾರವನ್ನು ಕೇಂದ್ರ ಸಾರಾಸಗಟಾಗಿ ತಳ್ಳಿ ಹಾಕಿದೆ. ದೇಶದಲ್ಲಿ ಸದ್ಯ ಕೊರೊನಾ ಲಸಿಕೆಗಳನ್ನು ಮಿಶ್ರಣ ಮಾಡ್ತಿಲ್ಲ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ. ಮಿಶ್ರಣ ಲಸಿಕೆಯ ಪರಿಣಾಮಕಾರಿ ಅಂಶಗಳ ಬಗ್ಗೆ ವೈಜ್ಞಾನಿಕ ಆಧಾರ ಸಿಗುವವರೆಗೂ ಅದರ ಬಳಕೆ ಇರುವುದಿಲ್ಲ. ಅಲ್ಲದೇ, ಪ್ರಸ್ತುತ ಲಸಿಕೆ ವಿತರಣೆಯ ವಿಧಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ತಿಳಿಸಿದೆ. ಇನ್ನು ರಾಷ್ಟ್ರೀಯ ರೋಗನಿರೋಧಕ ಸಲಹಾ ಸಮಿತಿಯ ಸೂಚನೆಯ ಮೇರೆಗೆ 2 ಬೇರೆ ಬೇರೆ ಲಸಿಕೆಗಳನ್ನ ಜನರಿಗೆ ನೀಡಲಾಗುವುದು ಅಂತ ಕೆನಡಾ ಸರ್ಕಾರ ಘೋಷಿಸಿದೆ.

4. ‘ವೈದ್ಯರ ಮೇಲಿನ ಹಲ್ಲೆ ತಡೆಯಲು ಕಠಿಣ ಕಾಯ್ದೆ ರೂಪಿಸಿ’
ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಐಎಮ್​ಎ, ಗೃಹ ಸಚಿವ ಅಮಿತ್ ಶಾಗೆ ಪತ್ರದ ಮೂಲಕ ಮನವಿ ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರೆ ಕುಟುಂಬಸ್ಥರು ನೇರವಾಗಿ ವೈದ್ಯರ ಮೇಲೆಯೇ ಹಲ್ಲೆಗೆ ಮುಂದಾಗುತ್ತಿರುವ ಘಟನೆಗಳು ಹೆಚ್ಚಾಗಿವೆ. ಹೀಗಾಗಿ, ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೋರಿ ಗೃಹ ಸಚಿವ ಅಮಿತ್ ಶಾಗೆ ಪತ್ರ ಮೂಲಕ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ.

5. ದೆಹಲಿಯಲ್ಲಿ ಮನೆ ಬಾಗಿಲಿಗೆ ಬರುತ್ತೆ ಮದ್ಯ
ಲಾಕ್​ಡೌನ್​ನಿಂದಾಗಿ ಮದ್ಯಪ್ರಿಯರಿಗೆ ಎಣ್ಣೆಯದ್ದೇ ಚಿಂತೆಯಾಗಿದೆ. ಮದ್ಯ ಖರೀದಿಗೆ ಅವಕಾಶ ಮಾಡಿಕೊಟ್ಟರೂ ಮದ್ಯ ಖರೀದಿಗೆ ಹರಸಾಹಸಪಡ್ತಿದ್ದಾರೆ. ಸದ್ಯ ಮದ್ಯಪ್ರಿಯರ ಕಷ್ಟ ಅರಿತ ದೆಹಲಿ ಸರ್ಕಾರ ಲಿಕ್ಕರ್ ಹೋಂ ಡೆಲಿವರಿಗೆ ಅವಕಾಶ ಮಾಡಿಕೊಟ್ಟಿದೆ. ಮೊಬೈಲ್​ ಆ್ಯಪ್​ ಹಾಗೂ ವೆಬ್​ಸೈಟ್​ಗಳ ಮೂಲಕ ತಮ್ಮ ಮನೆ ಬಾಗಿಲಿಗೆ ಮದ್ಯವನ್ನು ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಲೈಸೆನ್ಸ್ ಇರುವ ಎಲ್ಲಾ ಮದ್ಯದ ಅಂಗಡಿಗಳು ಹೋಂ ಡೆಲಿವರಿ ಮಾಡಬಹುದಾಗಿದ್ದು, ಹಾಸ್ಟೆಲ್​, ಕಚೇರಿ ಹಾಗೂ ಯಾವುದೇ ಸಂಸ್ಥೆಗೆ ಡೆಲಿವರಿ ಮಾಡುವಂತಿಲ್ಲ ಅಂತ ಸರ್ಕಾರ ಆದೇಶಿಸಿದೆ.

6. ಸಂಕಷ್ಟದಲ್ಲಿದ್ದವರಿಗೆ ನೆರವಾದ ಕಿಚ್ಚ-ಯಶ್​
ಸಂಕಷ್ಟದ ಸ್ಥಿತಿಯಲ್ಲಿದ್ದ ಬುದ್ದಿಮಾಂಧ್ಯ ಮಕ್ಕಳ ವಸತಿ ಶಾಲೆಗೆ ಕಿಚ್ಚ ಸುದೀಪ್ ಸಹಾಯ ಹಸ್ತ ಚಾಚಿದ್ದಾರೆ. ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿಯಿಂದ ಶಾಲೆಗೆ ತಕ್ಷಣಕ್ಕೆ ತಿಂಗಳಿಗಾಗುವಷ್ಟು ದಿನಸಿ ಪೂರೈಕೆ ಮಾಡಲಾಗಿದ್ದು, ಸ್ವಂತ ಕಟ್ಟಡ ಸೇರಿದಂತೆ ಶಾಶ್ವತ ಪರಿಹಾರಕ್ಕೂ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಲಾಕ್​ಡೌನ್​ನಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಸಿನಿ ಕಾರ್ಮಿಕರಿಗಾಗಿ ನಟ ರಾಕಿಂಗ್​ ಸ್ಟಾರ್​ ಯಶ್​ 1.5 ಕೋಟಿ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಯಶ್​ ಸಹಾಯಕ್ಕೆ ರಿಯಲ್​ ಸ್ಟಾರ್​ ಉಪೇಂದ್ರ ಟ್ವೀಟ್​ ಮಾಡಿ ಧನ್ಯವಾದ ತಿಳಿಸಿದ್ದಾರೆ.

7. ಇಂದು ಮೆಹುಲ್​ ಚೋಕ್ಸಿ ವಿಚಾರಣೆ
ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಸಾವಿರಾರು ಕೋಟಿ ವಂಚಿಸಿದ ವಜ್ರ ವ್ಯಾಪಾರಿ ಮೆಹುಲ್​ ಚೋಕ್ಸಿಯನ್ನು ಡೊಮಿನಿಕಾದಿಂದ ಭಾರತಕ್ಕೆ ಕರೆತರುವ ಕೆಲಸ ಭರದಿಂದ ಸಾಗಿದೆ. ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ಸಿಬಿಐ ಡಿಐಜಿ ನೇತೃತ್ವದ ತಂಡ ಅಲ್ಲಿಗೆ ತೆರಳಿದೆ. ಡೊಮಿನಿಕಾ ನ್ಯಾಯಾಲಯ ಚೋಕ್ಸಿಯನ್ನು ಗಡಿಪಾರು ಮಾಡಿದ್ರೆ, ಆತನನ್ನು ಬಂಧಿಸಿ ಕರೆತರಲಾಗುವುದು ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಡೊಮಿನಿಕಾ ನ್ಯಾಯಾಲಯ ಚೋಕ್ಸಿಯ ವಿಚಾರಣೆ ಮಾಡಲಿರುವ ಹಿನ್ನೆಲೆ ಸಿಬಿಐನ ಇಬ್ಬರು ಅಧಿಕಾರಿಗಳು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳು ಅಲ್ಲಿಗೆ ತಲುಪಿದ್ದಾರೆ ಅಂತ ಸಿಬಿಐ ಮಾಹಿತಿ ನೀಡಿದೆ.

8. ಬ್ರಿಟನ್​ನಲ್ಲಿ ಸೋಂಕಿತರ ಸಾವಿನ ಸಂಖ್ಯೆ ಶೂನ್ಯ
ಬ್ರಿಟನ್​ನಲ್ಲಿ ನಿನ್ನೆ ಒಬ್ಬ ಕೊರೊನಾ ಸೋಂಕಿತರೂ ಸಾವನ್ನಪ್ಪಿಲ್ಲ ಅಂತ ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ. ಕಳೆದ ಜುಲೈನಿಂದ ಬ್ರಿಟನ್​ನಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ ಹೆಚ್ಚಾಗಿತ್ತು. ಆದ್ರೆ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ಯಾವುದೇ ಸಾವಿನ ಪ್ರಕರಣಗಳು ಕಂಡುಬಂದಿಲ್ಲ ಅಂತ ಹೇಳಲಾಗಿದೆ. ಇನ್ನು ಸೋಮವಾರ ದೇಶಾದ್ಯಂತ ಕೇವಲ ಒಂದೇ ಒಂದು ಸಾವಿನ ಸಂಖ್ಯೆ ದಾಖಲಾಗಿದೆ.

9. ಮೌಂಟ್ ಎವರೆಸ್ಟ್​ ಏರಿ ದಾಖಲೆ ಬರೆದ ಶಿಕ್ಷಕಿ
ವಿಶ್ವದ ಅತ್ಯಂತ ಎತ್ತರದ ಶಿಖರವಾದ ಮೌಂಟ್​ ಎವರೆಸ್ಟ್​ನ್ನು ಕೇವಲ 25 ಗಂಟೆ 50 ನಿಮಿಷಗಳಲ್ಲಿ ಏರಿರುವ ಹೆಗ್ಗಳಿಕೆಗೆ ಹಾಂಗ್​ ಕಾಂಗ್​ನ ಮಹಿಳೆಯೊಬ್ಬರು ಪಾತ್ರರಾಗಿದ್ದಾರೆ. ಈ ಮೂಲಕ ಅತೀ ವೇಗವಾಗಿ ಶಿಖರ ಏರಿರುವ ಮೊದಲ ಮಹಿಳೆಯೆಂಬ ಬಿರುದನ್ನು ತ್ಸಾಂಗ್​ ಯಿನ್​ ಹಂಗ್​ ಪಡೆದಿದ್ದಾರೆ. ಇವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಾಧಿಸುವ ಛಲ ಹಾಗೂ ಮನೋಬಲವಿದ್ದರೆ ಯಾವ ಕೆಲಸವೂ ಕಷ್ಟವಲ್ಲ ಅಂತ ತೋರಿಸುವ ಸಲುವಾಗಿ ಶಿಖರ ಏರಿದ್ದಾಗಿ ಹೇಳಿಕೊಂಡಿದ್ದಾರೆ.

10. ಸ್ಕರ್ಟ್​ ಧರಿಸಿ ತರಗತಿಗೆ ಬಂದ ಶಿಕ್ಷಕ
ಶಾಲಾ ಬಾಲಕನೊಬ್ಬ ಲೈಂಗಿಕ ತಾರತಮ್ಯಕ್ಕೆ ಒಳಗಾದ ಕಾರಣ, ಶಿಕ್ಷಕ ಸ್ಕರ್ಟ್​ ಹಾಕಿಕೊಳ್ಳುವ ಮೂಲಕ ಆತನಿಗೆ ಬೆಂಬಲ ಸೂಚಿಸಿದ್ದಾರೆ. ಸ್ಪೇನ್​ನಲ್ಲಿನ ಶಾಲೆಯೊಂದರಲ್ಲಿ ಬಟ್ಟೆಗಳ ಮೇಲೆ ಲಿಂಗ ತಾರತಮ್ಯ ಮಾಡಬಾರದು ಅಂತ 15 ವರ್ಷದ ವಿದ್ಯಾರ್ಥಿ ಮೈಕಲ್​ ಗೋಮ್ಜ್​ ಸ್ಕರ್ಟ್​ ಹಾಕಿಕೊಂಡು ಶಾಲೆಗೆ ಬಂದಾಗ ಆತನ ಜೊತೆ ಹಲವು ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ರು ಎನ್ನಲಾಗಿದೆ. ಇದನ್ನು ನೋಡಿದ ಶಾಲೆಯ ಶಿಕ್ಷಕರು, ಇತರ ವಿದ್ಯಾರ್ಥಿಗಳು ಕೂಡ ಸ್ಕರ್ಟ್​ ಧರಿಸುವ ಮೂಲಕ ಬಟ್ಟೆಗಳ ಆಧಾರದ ಮೇಲೆ ಲಿಂಗ ತಾರತಮ್ಯ ಮಾಡಬಾರದು ಅಂತ ಸಂದೇಶ ಸಾರಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್​ appeared first on News First Kannada.

Source: newsfirstlive.com

Source link