1. ರೋಹಿಣಿ ಪ್ರಶ್ನೆಗೆ ಉತ್ತರಿಸಿದ ಶಿಲ್ಪಾನಾಗ್
ಮೈಸೂರಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಕಿತ್ತಾಟ ಮುಂದುವರೆದಿದೆ. ಮೊನ್ನೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಹೊರಡಿಸಿ, ತನ್ನ ಮೇಲಿನ ಆರೋಪ ನಿರಾಧಾರ ಎಂದಿದ್ರು. ಅಲ್ಲದೇ ಆಯುಕ್ತರ ಕಾರ್ಯವೈಕರಿಯನ್ನ ಪ್ರಶ್ನೆ ಮಾಡಿದ್ರು. ಇದಕ್ಕೆ ಪ್ರತಿಯಾಗಿ ಶಿಲ್ಪಾನಾಗ್ ಕೂಡ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಡಿಸಿ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಿದ್ದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ.

2. ಎಲೆಕ್ಷನ್ ಕ್ಯಾಬಿನೆಟ್ ಚಿಂತೆಗೆ ಬಿದ್ದ ಸಚಿವರು
2023ರ ಸಾರ್ವತ್ರಿಕ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಎಲೆಕ್ಷನ್ ಕ್ಯಾಬಿನೆಟ್ ರಚಿಸೋದಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಉತ್ಸುಕರಾಗಿದ್ದಾರೆ. ಈ ಬೆನ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್​​​ ಕುಮಾರ್, ಸಣ್ಣ ನೀರಾವರಿ ಸಚಿವರಾಗಿರೋ ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್ ಹಾಗೂ ಪ್ರಭು ಚೌವ್ಹಾಣ್​ರಿಗೂ ಮಂತ್ರಿಗಿರಿ ಕಳೆದುಕೊಳ್ಳೋ ಆತಂಕ ಶುರುವಾಗಿದೆ. ಹೀಗಾಗಿ ತೆರೆಮರೆಯಲ್ಲೇ ಸ್ಥಾನ ಉಳಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ. ಈ ಮಧ್ಯೆ ಸಂಪುಟ ಸರ್ಜರಿಯ ಸದ್ದು ಕೇಳಿ ಆಕಾಂಕ್ಷಿಗಳ ಲಾಬಿಯೂ ಶುರುವಾಗಿದೆ.

3. ಪಾಸಿಟಿವಿಟಿ ರೇಟ್​​ನಲ್ಲಿ ಮೈಸೂರೇ ನಂಬರ್. 1
ಕೊರೊನಾ ಪಾಸಿಟಿವಿಟಿ ರೇಟ್​​​ನಲ್ಲಿ ಮೈಸೂರು ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ಶೇಕಡ 30.23ರಷ್ಟು ಪಾಸಿಟಿವಿಟಿ ರೇಟ್ ಮೂಲಕ ರಾಜ್ಯದಲ್ಲೇ ಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿದ ಜಿಲ್ಲೆಯಾಗಿದೆ. ಇನ್ನೂ ಚಿಕ್ಕಮಗಳೂರು ಜಿಲ್ಲೆ ಶೇಕಡ 24.20 ರಷ್ಟು ಪಾಸಿಟಿವಿಟಿ ರೇಟ್​​​ನೊಂದಿಗೆ ಎರಡನೆ ಸ್ಥಾನದಲ್ಲಿದೆ. ಇನ್ನು, ಮೂರನೇ ಸ್ಥಾನದಲ್ಲಿ ಶೇಕಡ 19.71ರಷ್ಟು ಪಾಸಿಟಿವಿಟಿ ರೇಟ್ ಹೊಂದಿರೋ ಚಿತ್ರದುರ್ಗ ಜಿಲ್ಲೆ ಇದೆ. ಬೀದರ್ ಜಿಲ್ಲೆ ಕಡೇ ಸ್ಥಾನದಲ್ಲಿದ್ದು ಪಾಸಿಟಿವಿಟಿ ರೇಟ್ ಶೇಕಡ 0.85ರಷ್ಟಿದೆ. 7 ದಿನಗಳ ಪಾಸಿಟಿವಿಟಿ ರೇಟ್​​ನ ಚಿತ್ರಣ ಇದ್ದಾಗಿದ್ದು, ರಾಜ್ಯದ ಸರಾಸರಿ ಪಾಸಿಟಿವಿಟಿ ರೇಟ್ ಶೇಕಡ 11.21%ರಷ್ಟಿದೆ.

4. ‘ಕೆಎಸ್ಆರ್ಟಿಸಿ ಹೆಸರು ಕೈ ತಪ್ಪುವ ಆತಂಕ ಬೇಡ’
KSRTC ಹೆಸರು ಕೈ ತಪ್ಪುವ ಆತಂಕ ಬೇಡ ಅಂತ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ. KSRTC ಎಂಬ ಹೆಸರನ್ನು ಮುಂದೆಯೂ ಕರ್ನಾಟಕವು ಬಳಸಲು ಸ್ವತಂತ್ರವಿದೆ. ಹಾಗೂ ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ ಅಂತ ಸವದಿ ಹೇಳಿದ್ದಾರೆ. ಅಲ್ಲದೇ ಅಗತ್ಯ ಬಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಅಂತ ಹೇಳಿದ್ದಾರೆ

5. ಮಕ್ಕಳ ಮೇಲೆ ಎರಡು ಲಸಿಕೆ ಪ್ರಯೋಗ
ಮೂರನೇ ಕೊರೊನಾ ಅಲೆಗೆ ಮಕ್ಕಳೇ ಟಾರ್ಗೆಟ್ ಅನ್ನೋ ತಜ್ಞರ ಎಚ್ಚರಿಕೆ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆಗಳನ್ನ ಮಕ್ಕಳ ಮೇಲೆ ಪ್ರಯೋಗ ಮಾಡುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಬ್ರಿಟನ್​ನಲ್ಲಿ ಫೈಜರ್ ಲಸಿಕೆಗಳನ್ನ 12 ವರ್ಷದ ಕೆಳಗಿರುವ ಮಕ್ಕಳಿಗೆ ನೀಡಲು ಸರ್ಕಾರ ಅನುಮತಿ ಕೊಟ್ಟ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇನ್ನು ನೀತಿ ಆಯೋಗದ ಸದಸ್ಯ ಡಾ. ವಿಕೆ. ಪೌಲ್ ಈ ವಿಚಾರವಾಗಿ ಮಾತನಾಡಿದ್ದು, ಈಗಾಗಲೇ ಕೋವ್ಯಾಕ್ಸಿನ್ ಹಾಗೂ ಜೈಡಸ್ ಲಸಿಕೆಗಳನ್ನ ಮಕ್ಕಳ ಮೇಲೆ ಪ್ರಯೋಗ ಮಾಡಲಾಗ್ತಿದೆ ಎಂದಿದ್ದಾರೆ.

6. ಪ್ರೇಯಸಿಯ ಮದುವೆಗೆ ಸೀರೆ ಧರಿಸಿ ಬಂದ ಪ್ರಿಯಕರ
ಭಗ್ನ ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ಮದುವೆಗೆ ಸೀರೆ ತೊಟ್ಟು ಬಂದಿದ್ದ ಘಟನೆಯೊಂದು ಉತ್ತರ ಪ್ರದೇಶದ ಬಡೋದಿಯಲ್ಲಿ ನಡೆದಿದೆ. ಪ್ರೀತಿಸಿದ ಹುಡುಗಿಯನ್ನು ಕೊನೆ ಬಾರಿ ನೋಡಲು ಯುವಕ ಸೀರೆ ಉಟ್ಟು, ಥೇಟ್ ಹೆಂಗಸರ ಹಾಗೆ ಬಳೆ ತೊಟ್ಟುಕೊಂಡು, ಆಭರಣಗಳನ್ನ ಧರಿಸಿ, ಮೇಕಪ್ ಕೂಡ ಮಾಡಿಕೊಂಡು ಮದುವೆ ಮನೆಗೆ ಬಂದಿದ್ದಾನೆ. ಆದ್ರೆ ಮದುವೆ ಮನೆಯಲ್ಲಿ ಈತನ ನಡೆ ಕಂಡು ಅನುಮಾನಿಸಿದ ಹುಡುಗಿಯ ಸಂಬಂಧಿಕರು ಬಲವಂತವಾಗಿ ಮುಖದ ಮೇಲಿನ ಸೆರಗನ್ನು ಸರಿಸಿದಾಗ ಆತ ಯುವಕ ಅನ್ನೋದು ಗೊತ್ತಾಗಿದೆ.

7. ಕಬಾಬ್ ಮಾಡಲು ಲ್ಯಾಂಬೋರ್ಗಿನಿ ಕಾರ್ ಬಳಕೆ
ಚೀನಾದ ವ್ಯಕ್ತಿಯೊಬ್ಬ ಕಬಾಬ್ ತಯಾರಿಸಲು ಎರಡೂವರೆ ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರನ್ನ ಬಳಸಿ ನಂತರ ಪೇಚಿಗೆ ಸಿಲುಕಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಸಲುವಾಗಿ ಚೀನಾದ ಸುಹೋ ಎಂಬ ಯುವಕ, ತನ್ನ ಲ್ಯಾಂಬೋರ್ಗಿನಿ ಕಾರಿನಲ್ಲಿರುವ ಎಗ್ಸಾಸ್ಟ್ ಬಳಿ ಚಿಕನ್ ಕಬಾಬ್ ಇರಿಸಿ ಆಚೆಯಿಂದ ಬೆಂಕಿ ಕೊಟ್ಟು ಕಾಯಿಸಿದ್ದಾನೆ. ಆದ್ರೆ ತಕ್ಷಣವೇ ಕಾರ್​​ನ ಹಿಂಬದಿಯಿಂದ ಹೊಗೆ ಏಳಲು ಆರಂಭವಾಗಿದ್ದು, ಇಂಜಿನ್ ಸಂಪೂರ್ಣವಾಗಿ ಹಾಳಾಗಿದೆ. ಈ ರೀತಿ ಕಬಾಬ್ ಮಾಡಲು ಹೋಗಿ ದುಬಾರಿ ಕಾರನ್ನು ಕಳೆದುಕೊಂಡ ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡ್ತಿದೆ.

8. ಆಸ್ಪತ್ರೆಗೆ ಒಬ್ಬಳೇ ಬಂದ 3 ವರ್ಷದ ಹುಡುಗಿ
ಮೂರು ವರ್ಷದ ಬಾಲಕಿಯೊಬ್ಬಳೇ ವೈದ್ಯರ ಬಳಿ ಹೋಗಿ ಆರೋಗ್ಯ ತಪಾಸಣೆ ಮಾಡಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾಗಲ್ಯಾಂಡ್​ನ 3 ವರ್ಷದ ಬಾಲಕಿ ಲಿಪ್ವಿಗೆ ಶೀತ ಬಂದಿತ್ತು. ಆಕೆಯ ಪೋಷಕರು ಕೆಲಸಕ್ಕೆ ಹೋದ ಕಾರಣ, ತಾನೊಬ್ಬಳೇ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದಾಳೆ. ಲಿಪ್ವಿ ಆಸ್ಪತ್ರೆಯಲ್ಲಿ ವೈದ್ಯರ ಜೊತೆಗಿರುವ ಫೋಟೋವನ್ನ ಜಾಲತಾಣದಲ್ಲಿ ಹಂಚಿಕೊಂಡಿರುವ ಹಲವರು, ಈ ಸಣ್ಣ ಮಗುವಿಗೆ ಆರೋಗ್ಯದ ಬಗ್ಗೆ ಇರುವ ಕಾಳಜಿ, ದೊಡ್ಡವರಲ್ಲಿ ಇಲ್ಲವಲ್ಲ ಎಂದಿದ್ದಾರೆ.

9. ಅಧ್ಯಕ್ಷರ ಟ್ವೀಟ್ ತೆಗೆದಿದ್ದಕ್ಕೆ ಟ್ವಿಟರ್ ಬ್ಯಾನ್
ನೈಜೀರಿಯಾದಲ್ಲಿ ಅನಿರ್ದಿಷ್ಟಾವಧಿಗೆ ಟ್ವಿಟರ್​​ ಬ್ಯಾನ್ ಮಾಡಲಾಗಿದೆ. ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿ, ಆಂತರಿಕ ಯುದ್ಧದ ಬಗ್ಗೆ ಟ್ವೀಟ್ ಒಂದನ್ನ ಮಾಡಿದ್ರು. ನಿಯಮ ಉಲ್ಲಂಘನೆ ಆರೋಪದ ಮೇಲೆ ಟ್ವಿಟರ್ ಸಂಸ್ಥೆ ಈ ಟ್ವೀಟ್​​ ರಿಮೂವ್ ಮಾಡಿತ್ತು. ಇದೇ ಕಾರಣಕ್ಕೆ ಸಿಟ್ಟಾಗಿರುವ ನೈಜೀರಿಯಾ ಸರ್ಕಾರ ಇಡೀ ದೇಶದಿಂದಲೇ ಟ್ವಿಟರ್ ಬಳಕೆಗೆ ನಿರ್ಬಂಧ ಹೇರಿದೆ. ಮುಂದಿನ ಆದೇಶದವರೆಗೂ ನೈಜೀರಿಯಾದಲ್ಲಿ ಟ್ವಿಟರ್ ಚಾಲನೆಯಲ್ಲಿ ಇರೋದಿಲ್ಲ ಅಂತ ಪ್ರಕಟಣೆ ಹೊರಡಿಸಲಾಗಿದೆ.

10. ‘ಜಡೇಜಾರಂತಹ ಆಟಗಾರ ಇಂಗ್ಲೆಂಡ್ಗೆ ಬೇಕು’
ಟೀಮ್ ಇಂಡಿಯಾದ‌ ಆಲ್‌ರೌಂಡರ್‌ ರವೀಂದ್ರ ಜಡೇಜಾರಂತಹ ಆಟಗಾರನ ಅಗತ್ಯತೆ, ಇಂಗ್ಲೆಂಡ್‌ ತಂಡಕ್ಕಿದೆ ಅಂತಾ ಇಂಗ್ಲೆಂಡ್ನ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌, ವೇಲ್ಸ್ ಕ್ರಿಕೆಟ್ ಬೋರ್ಡ್ಗೆ ಸಲಹೆ ನೀಡಿದ್ದಾರೆ. ಇಂಗ್ಲಿಷ್ ಎಡಗೈ ಸ್ಪಿನ್‌ ಆಲ್‌ರೌಂಡರ್‌ಗಳು, ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿಲ್ಲ. ಜಡೇಜಾ, ಟೆಸ್ಟ್, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಏನು ಮಾಡುತ್ತಿದ್ದಾರೆಂದು ನೋಡಿ. ಮುಖ್ಯವಾಗಿ ವೇಲ್ಸ್ ಕ್ರಿಕೆಟ್ಬೋರ್ಡ್ ಒಂದು ಸ್ಥಾನಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಎಲ್ಲಾ ಫಾರ್ಮೆಟ್ನಲ್ಲಿ ಬ್ಯಾಟಿಂಗ್, ಬೌಲಿಂಗ್ ಮಾಡಬಲ್ಲ, ತಂಡಕ್ಕೆ ನೆರವಾಗುವ ಆಟಗಾರನ ಅಗತ್ಯವಿದೆ ಅಂತಾ ಪೀಟರ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

 

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link