1. ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ವರ್ಗಾವಣೆ
ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿಂಧೂರಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾಯಿಸಲಾಗಿದ್ದು. ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿದ್ದ ಡಾ.ಗೌತಮ್ ಬಗಾದಿಯವರನ್ನ ನೂತನ ಡಿಸಿಯಾಗಿ ನೇಮಿಸಲಾಗಿದೆ. ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​​​ರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನಿರ್ದೇಶಕಿಯಾಗಿ ವರ್ಗಾಯಿಸಲಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲಕ್ಷ್ಮೀಕಾಂತ ರೆಡ್ಡಿಯವರನ್ನ ಪಾಲಿಕೆ ಆಯುಕ್ತರಾಗಿ ನೇಮಿಸಲಾಗಿದೆ.

2. ಗೂಗಲ್ ಬೆನ್ನಲ್ಲೇ ಕನ್ನಡಿಗರನ್ನ ಕೆಣಕಿದ ಅಮೆಜಾನ್
ಮೊನ್ನೆಯಷ್ಟೇ ಗೂಗಲ್ ಸಂಸ್ಥೆ, ಕನ್ನಡಿಗರ ಭಾವನೆಗೆ ಧಕ್ಕೆ ಮಾಡಿ, ನಂತರ ಕ್ಷಮೆ ಕೇಳಿತ್ತು. ಈ ಘಟನೆ ಹಸಿಯಿರುವಾಗಲೇ ದೈತ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ ತನ್ನ ವೆಬ್​ಸೈಟ್​​ನಲ್ಲಿ ಕರ್ನಾಟಕದ ಧ್ವಜ ಹೋಲುವ ಉಡುಪುಗಳನ್ನ ಮಾರಾಟಕ್ಕಿಟ್ಟಿದೆ. ಕರ್ನಾಟಕ ರಾಜ್ಯದ ಧ್ವಜವನ್ನೇ ಹೋಲುವ ಕೆಂಪು ಹಾಗೂ ಹಳದಿ ಬಣ್ಣದ ಒಳ ಉಡುಪುಗಳನ್ನ ಅಮೆಜಾನ್ ಮಾರಾಟಕ್ಕಿಟ್ಟಿದ್ದು, ಅದರ ಮೇಲೆ ರಾಜ್ಯದ ಲಾಂಛನವನ್ನೂ ಮುದ್ರಿಸಿದೆ. ಅಮೆಜಾನ್​ನ ಈ ನಡೆಗೆ ವ್ಯಾಪಕವಾಗಿ ಟೀಕೆಗಳು ಕೇಳಿ ಬಂದಿದೆ. ಈಗ ಅಮೆಜಾನ್ ವೆಬ್​ಸೈಟ್​​ನಿಂದ ಆ ಚಿತ್ರವನ್ನ ತೆಗೆದು ಹಾಕಿದೆ.

3. ದೇಶದಲ್ಲಿ N440K ಎಂಬ ಹೊಸ ತಳಿ ಪತ್ತೆ
ದೇಶದಲ್ಲಿ N440K ಎಂಬ ಮತ್ತೊಂದು ಸಾಂಕ್ರಾಮಿಕ ಕೊರೊನಾ ತಳಿ ಪತ್ತೆಯಾಗಿದೆ ಅಂತ ಅಕಾಡೆಮಿ ಫಾರ್ ಸೈಂಟಿಫಿಕ್ ಅಂಡ್ ರಿಸರ್ಚ್ ಸಂಸ್ಥೆ ಅಧ್ಯಯನದಲ್ಲಿ ತಿಳಿಸಿದೆ. ಈ ತಳಿಗಳು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಾಗಿ ಕಂಡುಬಂದಿದ್ದು, ಮಹಾರಾಷ್ಟ್ರದಲ್ಲಿ 91, ತೆಲಂಗಾಣದಲ್ಲಿ 773, ಕರ್ನಾಟಕದಲ್ಲಿ 54 ಪ್ರಕರಣಗಳು ದಾಖಲಾಗಿವೆ. ದೇಶದ ಹಲವೆಡೆ ಕೊರೊನಾ ಪರೀಕ್ಷಿಸಿ ಅದರಲ್ಲಿ ಸಂಗ್ರಹಿಸಿದ ಶೇಕಡಾ 50ರಷ್ಟು ಮಾದರಿಗಳು N440K ತಳಿಯಾಗಿವೆ. ಈ ತಳಿಗಳು ಅತಿ ವೇಗವಾಗಿ ಹರಡಿ, ಸೋಂಕಿನ ತೀವ್ರತೆಯನ್ನು ಹೆಚ್ಚಿಸುತ್ತದೆ ಅಂತ ಅಧ್ಯಯನದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

4. ‘ಕಟ್ಟಡ ಕಟ್ಟೋಕೆ ಅನುಮತಿ ಬೇಕಾ? ಗಿಡ ನೆಡಿ’
ವಿಶ್ವಪರಿಸರ ದಿನಾಚರಣೆ ಅಂಗವಾಗಿ ಮಧ್ಯಪ್ರದೇಶ ಸರ್ಕಾರ ಹೊಸ ಕಟ್ಟಡ ಕಟ್ಟಲು ಅನುಮತಿ ಬೇಕಾದರೆ ಒಂದು ಸಸಿ ನೆಡುವುದು ಕಡ್ಡಾಯ ಎಂದು ಹೇಳಿದೆ. ಆನ್​​ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಪ್ರತಿ ಮನೆ ಅಥವಾ ಉದ್ಯಾನವನಗಳು, ಶಾಲೆಗಳು, ಪಂಚಾಯತ್ ಭವನಗಳ ಬಳಿ ಮರ ಬೆಳೆಸಬೇಕು ಎಂದು ಹೇಳಿದ್ದಾರೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಲಾಗಿದ್ದರೂ ಈ ಷರತ್ತು ಕಡ್ಡಾಯವಾಗಿರುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ರು.

5. ಕೋವ್ಯಾಕ್ಸಿನ್ ಆಮದಿಗೆ ಬ್ರೆಜಿಲ್ ಗ್ರೀನ್ ಸಿಗ್ನಲ್
ಬ್ರೆಜಿಲ್ ಸರ್ಕಾರ ಭಾರತದಲ್ಲಿ ತಯಾರಾದ ಕೋವ್ಯಾಕ್ಸಿನ್ ಲಸಿಕೆಗಳನ್ನ ಆಮದು ಮಾಡಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಬ್ರೆಜಿಲ್​​ ರಾಷ್ಟ್ರೀಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತ್ ಬಯೋಟೆಕ್ ಸಂಸ್ಥೆಯ ಜೊತೆ ಚರ್ಚೆ ಮಾಡಿದ್ದು, ಹಲವು ಷರತ್ತುಗಳ ಮೇಲೆ 4 ಮಿಲಿಯನ್ ಕೋವ್ಯಾಕ್ಸಿನ್ ಡೋಸ್​ಗಳನ್ನ ಆಮದು ಮಾಡಿಕೊಳ್ಳಲಾಗುವುದು ಅಂತ ತಿಳಿಸಿದ್ದಾರೆ. ಇದರ ಜೊತೆಗೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗಳನ್ನ ಆಮದು ಮಾಡಿಕೊಳ್ಳಲು ರಷ್ಯಾ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದಾಗಿ ತಿಳಿಸಿದೆ.

6. ನೈಜೀರಿಯಾದಲ್ಲಿ ಕೂ ಆ್ಯಪ್ ವಿಸ್ತರಣೆಗೆ ಪ್ಲಾನ್
ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿಯವರ ಟ್ವೀಟ್ ಅನ್ನು ರಿಮೂವ್ ಮಾಡಿದ ಕಾರಣ, ನೈಜೀರಿಯಾದಲ್ಲಿ ಅನಿರ್ದಿಷ್ಟಾವಧಿಯವರೆಗೂ ಟ್ವಿಟರ್ ಬಳಕೆ ಮಾಡುವಂತಿಲ್ಲ ಅಂತ ಅಲ್ಲಿನ ಸರ್ಕಾರ ಆದೇಶ ಹೊರಡಿಸಿತ್ತು. ಸದ್ಯ ಇದೇ ಸಮಯದಲ್ಲಿ ಭಾರತದ ಕೂ ಆ್ಯಪ್ ನೈಜೀರಿಯಾದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆಗೆ ಚಿಂತಿಸುತ್ತಿದೆ. ಈ ಬಗ್ಗೆ ಕೂ ಆ್ಯಪ್​ನ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಟ್ವೀಟ್ ಮಾಡಿದ್ದು, ಕೂ ಆ್ಯಪ್  ನೈಜೀರಿಯಾದಲ್ಲಿ ಲಭ್ಯವಿದೆ. ಅಲ್ಲಿನ ಸ್ಥಳೀಯ ಭಾಷೆಗಳನ್ನೂ ಕೂಡ ಆ್ಯಪ್​ನಲ್ಲಿ ಸೇರಿಸಲು ನಾವು ಚಿಂತಿಸುತ್ತಿದ್ದೇವೆ. ಏನಂತೀರಾ? ಅಂತ ಪ್ರಶ್ನಿಸಿದ್ದಾರೆ.

7. ರಷ್ಯಾದಲ್ಲಿ ವಿದೇಶಿ ಪ್ರವಾಸಿಗರಿಗೆ ಲಸಿಕೆಯ ಆಫರ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೇಶಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಲಸಿಕೆಯ ಆಫರ್ಗಳನ್ನ ನೀಡಿದ್ದಾರೆ. ಸೇಂಟ್ ಪೀಟರ್ಸ್ ಬರ್ಗ್ ಇಂಟರ್ನ್ಯಾಷನಲ್ ಎಕಾನಾಮಿಕ್ ಫಾರ್ಮ್ನಲ್ಲಿ ಮಾತನಾಡಿದ ವ್ಲಾದಿಮಿರ್, ಸರ್ಕಾರದ ಅಧಿಕಾರಿಗಳಿಗೆ ಕೊರೊನಾದ ಬಗ್ಗೆ ಅಧ್ಯಯನ ಮಾಡಲು ಈ ತಿಂಗಳ ಕೊನೆಯವರೆಗೂ ಗಡುವು ನೀಡಿದ್ದೇನೆ, ಜೊತೆಗೆ ರಷ್ಯಾಗೆ ಬರುವ ವಿದೇಶಿ ಪ್ರವಾಸಿಗರಿಗೆ ಉಚಿತವಾಗಿ ವ್ಯಾಕ್ಸಿನ್ಗಳನ್ನ ನೀಡಲು ಸೂಚನೆ ನೀಡಿದ್ದೇನೆ. ನಮ್ಮ ಮುಖ್ಯ ಗುರಿಯೇ ದೇಶದಿಂದ ಸೋಂಕನ್ನ ತೊಲಗಿಸುವುದು ಅಂತ ವ್ಲಾದಿಮಿರ್ ಪುಟಿನ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ರು.

8. ಟೆರೆಸ್ ಮೇಲೆ ಕಾನನ ಸೃಷ್ಟಿಸಿದ ಮರಗಳ ಪ್ರೇಮಿ
ಮಧ್ಯಪ್ರದೇಶದ ಜಬಲ್ಪುರದಲ್ಲಿ ವ್ಯಕ್ತಿಯೊಬ್ಬರು ತನ್ನ ಮನೆಯ ಟೆರೇಸ್‌ನಲ್ಲಿ 2,500ಕ್ಕೂ ಹೆಚ್ಚು ಬೋನ್ಸೈ ಮರಗಳನ್ನು ಬೆಳೆಸಿ ಮಿನಿ ಅರಣ್ಯವನ್ನು ಸೃಷ್ಟಿಸಿದ್ದಾರೆ. ರಾಜ್ಯ ವಿದ್ಯುತ್ ಮಂಡಳಿಯ ನಿವೃತ್ತ ಉದ್ಯೋಗಿ ಸೋಹನ್ ಲಾಲ್ ದ್ವಿವೇದಿ ಅವರು ತಮ್ಮ ಮನೆಯಲ್ಲಿ 40ಕ್ಕೂ ಹೆಚ್ಚು ಪ್ರಬೇಧಗಳ ಸಸಿಗಳನ್ನ ಬೆಳೆಸಿದ್ದಾರೆ. ನಾನು ಮಧ್ಯಪ್ರದೇಶ ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ನನ್ನ ಎಲ್ಲಾ ಸಂಬಳವನ್ನು ಸಸಿಗಳಿಗೆ ಖರ್ಚು ಮಾಡಿದ್ದೇನೆ. ಸದ್ಯ ಮಿನಿ ಫಾರೆಸ್ಟ್​​ನಲ್ಲಿ ನನ್ನ ಸಮಯವನ್ನು ಕಳೆಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

9. ಎಣ್ಣೆ ನಶೆಯಲ್ಲಿ ಹೆಣ್ಣು ಕೊಟ್ಟ ಅತ್ತೆಗೆ ಹಾರ ಹಾಕಿದ ವರ
ಮದ್ಯಪಾನ ಅಡಿಕ್ಷನ್ ಆಗ್ಬಿಟ್ರೆ ಏನೆಲ್ಲಾ ಯಡವಟ್ಟು ಆಗುತ್ತೆ ಅನ್ನೋಕೆ ಈ ಘಟನೆಯೇ ಸಾಕ್ಷಿ. ಮದುವೆಯ ದಿನವೂ ಕಂಠಪೂರ್ತಿ ಮದ್ಯ ಸೇವಿಸಿದ್ದ ವರ, ವಧುವಿಗೆ ಹಾರ ಹಾಕೋದು ಬಿಟ್ಟು, ಆಕೆಯ ಪಕ್ಕದಲ್ಲಿ ಇದ್ದ ಮಹಿಳೆಗೆ ಹಾರ ಹಾಕಿದ್ದಾನೆ. ಇನ್ನು ಹಾರ ಹಾಕಿಸಿಕೊಂಡ ಮಹಿಳೆ ವಧುವಿನ ತಾಯಿ ಅಂದ್ರೆ ಆತನ ಅತ್ತೆ. ವರ ನಂತರ ಮತ್ತೊಮ್ಮೆ ಹಾರವನ್ನು ವಧುವಿಗೆ ಹಾಕಲು ಪ್ರಯತ್ನ ಮಾಡುತ್ತಾನಾದರೂ ಕುಡಿದ ನಶೆಗೆ ಅಲ್ಲೇ ಕುಸಿದು ಬೀಳುತ್ತಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಯಾವ ಸ್ಥಳದಲ್ಲಿ ಈ ಘಟನೆ ನಡೆದಿದೆ ಅಂತ ಸ್ಪಷ್ಟವಾಗಿಲ್ಲ.

10. ಪ್ರಾಣಿಗಳನ್ನ ದತ್ತು ತೆಗೆದುಕೊಳ್ಳುವಂತೆ ದರ್ಶನ್ ಮನವಿ
ಲಾಕ್​​ಡೌನ್ ಕಾರಣ ಮೃಗಾಲಯಗಳು ಬಂದ್ ಆಗಿದ್ದು, ಇದ್ರಿಂದ ಅಲ್ಲಿನ ಪ್ರಾಣಿಗಳಿಗೆ ತೊಂದರೆಯಾಗಿದೆ. ಹಾಗಾಗಿ ಅವುಗಳನ್ನ ದತ್ತು ಪಡೆಯಬೇಕು ಅಂತ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ದರ್ಶನ್ ಬಳಿ ಮನವಿ ಮಾಡಿದ್ರು. ಅಭಿಮಾನಿಗಳ ಮನವಿಯಂತೆ ಮೃಗಾಲಯದ ಪ್ರಾಣಿಗಳನ್ನ ದತ್ತು ಪಡೆದ ದರ್ಶನ್, ಜನರಿಗೂ ಕೂಡ ಪ್ರಾಣಿಗಳಿಗೆ ನೆರವಾಗಿ ಅಂತ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ನಟ ದರ್ಶನ್, ನಿಮ್ಮ ಶಕ್ತಿಗನುಸಾರ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ, ನಿಮ್ಮ ಪ್ರೀತಿಯನ್ನು ಹಂಚಿ. ಈ ಒಂದು ಒಳ್ಳೆ ಕೆಲಸಕ್ಕೆ ನಾವೆಲ್ಲಾ ಕೈ ಜೋಡಿಸೋಣ, ನಮ್ಮ ಮುಂದಿನ ಪೀಳಿಗೆಗೆ ಈ ಸಂಪತ್ತನ್ನು ಉಳಿಸೋಣ ಅಂತ ಕೇಳಿಕೊಂಡಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link