1. ರಾಜ್ಯದ ಎಲ್ಲಾ ರಿಜಿಸ್ಟ್ರಾರ್ ಕಚೇರಿ ಓಪನ್
ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಇಳಿಕೆಯಾಗ್ತಿರೋ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದಿನಿಂದ ರಾಜ್ಯದ ಎಲ್ಲಾ ರಿಜಿಸ್ಟ್ರಾರ್ ಕಚೇರಿಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

2. ಸಿಎಂ ಬದಲಾವಣೆ ಮಾಡುವಂತಹ ಸಂದರ್ಭ ಈಗಿಲ್ಲ
ಸಿಎಂ ಬದಲಾವಣೆ ಮಾಡುವಂತಹ ಯಾವುದೇ ಸಂದರ್ಭ ಈಗಿಲ್ಲ ಅಂತ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ರಾಘವೇಂದ್ರ, ಕೊರೊನಾ ಸಂದರ್ಭದಲ್ಲಿ ಸಾವು- ನೋವಿನ ಸಂಖ್ಯೆಯನ್ನು ಕಡಿಮೆ ಮಾಡೋದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಮತ್ತು ಆಗುತ್ತಿದೆ. ಹೀಗಿರುವಾಗ ಈ ವಿಷಯಕ್ಕೆ ಅಷ್ಟು ಮಹತ್ವ ಕೊಡುವ ಅಗತ್ಯ ಇಲ್ಲ ಅಂತ ರಾಘವೇಂದ್ರ ಹೇಳಿದ್ದಾರೆ.

3. ಲಕ್ಷದ್ವೀಪದಲ್ಲಿ ಮತ್ತೆ ಹೊಸ ನಿಯಮದ ಕಿಡಿ
ಲಕ್ಷದ್ವೀಪದಲ್ಲಿನ ಮೀನುಗಾರಿಕೆ ದೋಣಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಇನ್ನಿತರ ಹೊಸ ನಿಯಮಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಬೇಹುಗಾರಿಕೆ ಮಾಹಿತಿಯನ್ನು ಸಂಗ್ರಹಿಸಲು ದೋಣಿಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲಕ್ಷದ್ವೀಪ ಸಂಸದ ಮೊಹಮ್ಮದ್‌ ಫೈಜಲ್‌, ತಕ್ಷಣವೇ ಆದೇಶ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ ಸಹ ಈ ಹೊಸ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿದ್ದು, ಇಂದು ಕೊಚ್ಚಿಯಲ್ಲಿ ಧರಣಿ ನಡೆಸಲು ಮುಂದಾಗಿದೆ.

4.ಕಾಶ್ಮೀರದ ಪೊಲೀಸರಲ್ಲಿ 100 % ವ್ಯಾಕ್ಸಿನೇಶನ್
ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣವಾಗಿ ಎಲ್ಲಾ ಪೊಲೀಸರಿಗೆ ಈಗಾಗಲೇ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ ಅಂತ ಐಜಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಶೇಕಡಾ 100ರಷ್ಟು ಪೊಲೀಸರು ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಶೇಕಡಾ 75ರಷ್ಟು ಪೊಲೀಸರಿಗೆ ಈಗಾಗಲೇ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಅಂತ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಶೇಕಡಾ 100ರಷ್ಟು ಲಸಿಕೆಯನ್ನು ನೀಡಿದ ಮೊದಲ ಕೇಂದ್ರಾಡಳಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಜಮ್ಮು- ಕಾಶ್ಮೀರ ಪಾತ್ರವಾಗಿದೆ.

5. ನೂರ್ ಜಹಾನ್ ಮಾವಿನ ಬೆಲೆ ಬರೋಬ್ಬರಿ ₹1,000
ಮಾವಿನ ಸೀಸನ್ ಬಂದ್ರೆ ಸಾಕು ಎಲ್ಲರ ಮನೆಯಲ್ಲೂ ಹಣ್ಣಿನ ರಾಜನದ್ದೇ ಕಾರುಬಾರು ಇರುತ್ತೆ. ಆದ್ರೆ ಮಧ್ಯಪ್ರದೇಶದಲ್ಲಿ ಬೆಳೆದಿರುವ ಈ ವಿಶೇಷ ಮಾವಿನ ಬೆಲೆ ಹತ್ತಿಪ್ಪತ್ತು ಅಲ್ಲ, ನೂರು, ಇನ್ನೂರು ಅಲ್ಲ ಬರೋಬ್ಬರಿ 1000 ರೂಪಾಯಿಗಳು. ಮಧ್ಯಪ್ರದೇಶದ ಇಂದೋರ್​​ನಲ್ಲಿರುವ ಅಲಿರಾಜ್ಪುರದಲ್ಲಿ ನೂರ್​ ಜಹಾನ್ ಮಾವಿನ ಹಣ್ಣನ್ನ ಬೆಳೆಯಲಾಗ್ತಿದೆ. ಇದು ಮೂಲತಃ ಅಫ್ಘಾನಿಸ್ತಾನದ ಬೆಳೆಯಾಗಿದ್ದು, ಈ ವರ್ಷ ಬಹು ಬೇಡಿಕೆಯಿರುವ ಮಾವು ಇದಾಗಿದೆ. ಕೆಜಿಗೆ 500 ರಿಂದ 1000 ರೂಪಾಯಿಗಳಿಗೆ ಮಾರಾಟ ಮಾಡಲಾಗ್ತಿದೆ ಅಂತ ಮಾವಿನ ಬೆಳೆಗಾರರು ಹೇಳಿದ್ದಾರೆ.

6. ಹ್ಯಾರಿ-ಮೇಘನ್ ದಂಪತಿಗೆ ಹೆಣ್ಣು ಮಗು ಜನನ
ಬ್ರಿಟನ್‌ನ ರಾಜಮನೆತನದ ಹ್ಯಾರಿ ಮತ್ತು ಮೇಘನ್ ದಂಪತಿಗೆ ಹೆಣ್ಣು ಮಗು ಜನನವಾಗಿದೆ.  ಲಂಡನ್ ಅರಮನೆಯ ಪತ್ರಿಕಾ ಕಾರ್ಯದರ್ಶಿ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹ್ಯಾರಿ ದಂಪತಿಗೆ ಇದು ಎರಡನೇ ಮಗುವಾಗಿದ್ದು, ಕ್ಯಾಲಿಪೋರ್ನಿಯಾದ ಸಂತಾ ಬಾರ್ಬರಾ ಕಾಟೇಜ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11.40ಕ್ಕೆ ಮಗು ಜನಿಸಿದೆ. ಇನ್ನು ಈ ಮುದ್ದಾದ ಹೆಣ್ಣು ಮಗುವಿಗೆ ಹ್ಯಾರಿ ದಂಪತಿ ಲಿಲ್ಲಿಬೆಟ್​ ಲಿಲ್ಲಿ ಡಯನಾ ಮೌಂಟ್​​ಬ್ಯಾಟನ್ ವಿಂಡ್ಸರ್ ಅಂತ ನಾಮಕರಣ ಮಾಡಿದ್ದು, ಮಗಳ ಆಗಮನದಿಂದ ತುಂಬಾ ಸಂತೋಷವಾಗಿದೆ ಅಂತ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ತಿಳಿಸಿದ್ದಾರೆ.

7. ಪೋಷಕರ ಕಾರು ಕದ್ದ ಸಹೋದರಿಯರು
ಬೀಚ್​​ಗೆ ಹೋಗೋ ಆಸೆಯಿಂದ ಪುಟಾಣಿ ಸಹೋದರಿಯರು ಮನೆಯ ಕಾರನ್ನ ಕದ್ದಿರೋ ಘಟನೆ ಅಮೆರಿಕಾದಲ್ಲಿ ನಡೆದಿದೆ. 9 ವರ್ಷದ ಬಾಲಕಿ ಮತ್ತು 4 ವರ್ಷದ ಆಕೆಯ ತಂಗಿಗೆ ಕ್ಯಾಲಿಫೂರ್ನಿಯಾದಲ್ಲಿರುವ ಬೀಚ್​​ಗೆ ಹೋಗಿ ಆಟ ಆಡಬೇಕು ಅನ್ನೋ ಆಸೆಯಾಗಿತ್ತು. ಹೀಗಾಗಿ ಇಬ್ಬರೂ, ಪೋಷಕರಿಗೂ ತಿಳಿಸದೇ ಅವರ ಕಾರನ್ನು ಕದ್ದು ರೋಡಿಗೆ 7 ಕಿಲೋ ಮೀಟರ್ವರೆಗೂ ಚಲಾಯಿಸಿಕೊಂಡು ಬಂದಿದ್ದಾರೆ. ಕಾರ್ ಚಲಿಸುತ್ತಿದ್ದದ್ದು ಬಾಲಕಿಯರು ಅಂತ ತಿಳಿದ ಟ್ರಕ್ ಚಾಲಕನೊಬ್ಬ ಕಾರಿಗೆ ಅಡ್ಡ ಹಾಕಿ ನಿಲ್ಲಿಸಿದ್ದಾನೆ. ಸದ್ಯ ಬಾಲಕಿಯರು ಕಾರ್ ಓಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

8. ಹಸುಗಳಿಗೆ ಪಾನಿಪೂರಿ ತಿನ್ನಿಸಿದ ವ್ಯಕ್ತಿ
ಪಾನಿ ಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕೊರೊನಾ ಲಾಕ್​ಡೌನ್​ನಿಂದಾಗಿ ರಸ್ತೆ ಬದಿ ಅಲ್ಲಲ್ಲಿ ಜನರ ಬಾಯಲ್ಲಿ ನೀರೂರಿಸುತ್ತಿದ್ದ ಪಾನಿಪುರಿ ಅಂಗಡಿಗಳು ಕಾಣೆಯಾಗಿವೆ. ಪಾನಿಪುರಿ ಕಂಡರಂತೂ ಜನ ಕೊರೊನಾ ಇದೆ ಅನ್ನೋದನ್ನೂ ಮರೆತು ಮುಗಿ ಬೀಳ್ತಾರೆ. ಇನ್ನು ಲಖನೌದ ರೆಡ್ ಹಿಲ್ ಕಾನ್ವೆಂಟ್ ಶಾಲೆ ಬಳಿ ವ್ಯಕ್ತಿಯೊಬ್ಬ ಹಸುಗಳಿಗೆ ಪಾನಿಪುರಿ ತಿನ್ನಿಸುವ ವಿಡಿಯೋ ವೈರಲ್ ಆಗಿದೆ. ಮಸಾಲೆಯುಕ್ತ ಪಾನಿ ಪುರಿಯನ್ನು ಆಕಳು ಮತ್ತು ಕರುವಿಗೆ ತಿನ್ನಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವ್ಯಕ್ತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

9. ಬಡವರು, ನಿರ್ಗತಿಕರಿಗೆ ಮಿಡಿದ ಸನ್ನಿ ಹೃದಯ
ಬಾಲಿವುಡ್ ಸ್ಟಾರ್ ನಟಿ ಸನ್ನಿ ಲಿಯೋನ್ ಸಿನಿಮಾದ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡವರು. ಈಗ ಕೊರೊನಾ ಸಮಯದಲ್ಲೂ ಹೃದಯ ಶ್ರೀಮಂತಿಕೆ ಮೆರೆದಿರುವ ಸನ್ನಿ, ಮುಂಬೈನಲ್ಲಿರುವ ಬಡವರಿಗೆ ಹಾಗೂ ನಿರ್ಗತಿಕರಿಗೆ ಊಟ ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಸನ್ನಿಯ ಸೇವೆಗೆ ಪತಿ ಡೇನಿಯಲ್ ವೆಬರ್ ಕೂಡ ಸಾಥ್ ನೀಡಿದ್ದು, ಟ್ರಕ್ನಲ್ಲಿ ಊಟದ ಪ್ಯಾಕೆಟ್ಗಳನ್ನ ಇಟ್ಟುಕೊಂಡು, ಮುಂಬೈನ ಬೀದಿ ಬೀದಿಗೂ ಹೋಗಿ ಸನ್ನಿ ಹಾಗೂ ಡೇನಿಯಲ್ ಆಹಾರ ವಿತರಿಸಿದ್ದಾರೆ.

10. ದರ್ಶನ್​​​ ಮನವಿಗೆ ಫ್ಯಾನ್ಸ್ ಪವಾಡ
ಲಾಕ್‌ಡೌನ್‌ ಸಮಯದಲ್ಲಿ ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದರು. ಅದಕ್ಕೀಗ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ 9 ಮೃಗಾಲಯಗಳಲ್ಲೂ ದತ್ತು ಸ್ವೀಕಾರ ಮಾಡಿದ ದರ್ಶನ್ ಅಭಿಮಾನಿಗಳು ದೇಣಿಗೆ ಸಲ್ಲಿಸಿದ್ದಾರೆ. ಎರಡೇ ದಿನಕ್ಕೆ ಬರೋಬ್ಬರಿ 25 ಲಕ್ಷ ರೂಪಾಯಿಗಳಷ್ಟು ದೇಣಿಗೆ ಸಲ್ಲಿಕೆಯಾಗಿದೆ. ಈ ಹಿನ್ನೆಲೆ ಟ್ವೀಟ್ ಮಾಡುವ ಮೂಲಕ ಕರ್ನಾಟಕ ಮೃಗಾಲಯ ಇಲಾಖೆ ನಟ ದರ್ಶನ್​​ಗೆ ಧನ್ಯವಾದ ಸಲ್ಲಿಸಿದೆ.

 

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link