1. ‘ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ’
ರಾಜ್ಯದಲ್ಲಿ ಸಿಎಂ ನಾಯಕತ್ವ ಬದಲಾವಣೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ  ಮಾತನಾಡಿದ ಅವರು, ಯಡಿಯೂರಪ್ಪನವರು ಸಿಎಂ ಕುರ್ಚಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಈ ಬಗೆಗಿನ ಚರ್ಚೆಯೇ ಅಪ್ರಸ್ತುತ ಅಂತ ಹೇಳಿದ್ದಾರೆ.

2. ಅನಿವಾರ್ಯವಾದ್ರೆ ಮತ್ತೊಂದು ಪ್ಯಾಕೇಜ್
ನೀರಾವರಿ ಯೋಜನೆಗಳಿಗೆ ಹಣಕಾಸಿನ ಕೊರತೆ ಆಗದಂತೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಅಂತಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾತನಾಡಿದ ಅವರು, ಈಗಾಗ್ಲೇ ಬಡವರಿಗೆ ತಲುಪುವಂತಹ ಎರಡು ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಅನಿವಾರ್ಯ ಅನಿಸಿದ್ರೆ, ಮುಂದೆ ಮತ್ತೊಂದು ಪ್ಯಾಕೇಜ್ ಘೋಷಿಸಲಾಗುವುದು ಅಂತಾ ತಿಳಿಸಿದ್ರು.

3. ಬಸ್ ಓಡಿಸೋ ಬಗ್ಗೆ ಸೂಚನೆ ಬಂದಿಲ್ಲ
ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ಸಲುವಾಗಿ ರಾಜ್ಯದಲ್ಲಿ ಸಾರಿಗೆ ಸಂಚಾರವನ್ನು ನಿಲ್ಲಿಸಲಾಗಿತ್ತು. ಆದ್ರೀಗ ಸಾರಿಗೆ ಓಡಾಟಕ್ಕೆ ಜನ ಕಾಯುತ್ತಿದ್ದಾರೆ. ಈ ಬಗ್ಗೆ ಕೆಎಸ್ಆರ್​​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಪ್ರತಿಕ್ರಿಯಿಸಿದ್ದು, ಬಸ್ ಓಡಿಸುವ ವಿಚಾರವಾಗಿ ಇನ್ನೂ ಸೂಚನೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಮಟ್ಟದಲ್ಲಿ ಓಡಿಸುವ ಸಾಧ್ಯತೆ ಇದೆ. ತದನಂತರ ಜಿಲ್ಲೆಯಿಂದ ಜಿಲ್ಲೆಗೆ, ಕೊನೆಯದಾಗಿ ಅಂತರ್ ರಾಜ್ಯ ಸಾರಿಗೆ ಸಂಚಾರ ವ್ಯವಸ್ಥೆ ಮಾಡಲಾಗುತ್ತದೆ ಅಂತ ತಿಳಿಸಿದ್ದಾರೆ.

4. ‘ಅಧಿಕಾರಿಯಾಗಿ ರೋಹಿಣಿ ಸಿಂಧೂರಿ ಮಾಡಿದ್ದು ಸರಿಯಲ್ಲ’
ರೋಹಿಣಿ ಸಿಂಧೂರಿ ಒಬ್ಬ ಅಧಿಕಾರಿಯಾಗಿ ಈ ರೀತಿ ಮಾಡಿದ್ದು ಸರಿಯಲ್ಲ ಅಂತ ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಹೇಳಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಸಾ.ರಾ ಮಹೇಶ್ ಜಟಾಪಟಿ ವಿಚಾರವನ್ನು ಪ್ರಸ್ತಾಪಿಸಿದ ಪುಟ್ಟಸ್ವಾಮಿ, ರಾಜಕಾರಣಿಗಳು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳುವ ಅಧಿಕಾರ ಸಿಂಧೂರಿಗಿತ್ತು. ಒಂದ್ವೇಳೆ, ನಿಜವಾಗಿಯೂ ತಪ್ಪು ಮಾಡಿದ್ರೆ ಪೊಲೀಸರೊಟ್ಟಿಗೆ ಹೋಗಿ ಡೆಮಾಲಿಷನ್ ಮಾಡಬಹುದಿತ್ತು. ಆದ್ರೆ ಅದನ್ನು ಬಿಟ್ಟು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದು ತಪ್ಪು ಅಂತ ಪುಟ್ಟಸ್ವಾಮಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

5. ‘ಸೋಂಕಿನಿಂದ ಗುಣಮುಖರಾದವರಿಗೆ ಲಸಿಕೆ ಅಗತ್ಯವಿಲ್ಲ’
ಲಸಿಕೆ ಅಭಾವ ಇರುವಾಗ್ಲೇ ಸಾಮೂಹಿಕವಾಗಿ, ಮನಬಂದಂತೆ ಹಾಗೂ ಅಪೂರ್ಣ ರೀತಿಯಲ್ಲಿ ಲಸಿಕೆ ವಿತರಣೆ ಮಾಡುವುದರಿಂದ ರೂಪಾಂತರಿ ಕೊರೊನಾ ಪ್ರಕರಣಗಳು ಹೆಚ್ಚಾಗಬಹುದು ಅಂತ ಸಾರ್ವಜನಿಕ ಆರೋಗ್ಯ ಇಲಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದುರ್ಬಲರು ಹಾಗೂ ಅಪಾಯದಂಚಿನಲ್ಲಿರುವವರಿಗೆ ಲಸಿಕೆ ವಿತರಣೆಗೆ ಆದ್ಯತೆ ಸಿಗಬೇಕು. ಅದರ ಬದಲು ದೇಶದ ಜನತೆಗೆಲ್ಲಾ ಲಸಿಕೆ ನೀಡುವುದು ಗುರಿಯಾಗಬಾರದು. ಜೊತೆಗೆ ಸೋಂಕಿನಿಂದ ಗುಣಮುಖರಾದವರಿಗೆ ಲಸಿಕೆಯ ಅಗತ್ಯವಿಲ್ಲ. ಅವಶ್ಯಕತೆ ಬಿದ್ರೆ, ಸೋಂಕಿನಿಂದ ಗುಣಮುಖರಾದವರಲ್ಲಿ ಲಸಿಕೆ ನೀಡಿ, ಅದರ ಪರಿಣಾಮದ ಮೇರೆಗೆ ಅವರಿಗೂ ಲಸಿಕೆ ನೀಡುವುದು ಉತ್ತಮ ಅಂತ ಏಮ್ಸ್ ಸೇರಿದಂತೆ ಇತರೆ ಆರೋಗ್ಯ ಕ್ಷೇತ್ರದ ಪರಿಣತರು ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.

6. ಹೋಮ ಮಾಡಿ ಎಂದ ಡ್ರೀಮ್ ಗರ್ಲ್ ಹೇಮಾ
ಬಾಲಿವುಡ್ ಡ್ರೀಮ್ ಗರ್ಲ್, ರಾಜಕಾರಣಿ, ನಟಿ ಹೇಮಾ ಮಾಲಿನಿ ಸದ್ಯ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪ್ರತಿದಿನ ಮನೆಯಲ್ಲಿ ಹೋಮ, ಹವನ ಮಾಡಿದ್ರೆ ಮನುಷ್ಯ ಕೊರೊನಾ ಸೋಂಕಿನಿಂದ ದೂರ ಇರಬಹುದು ಅಂತ ಹೇಮಾ ಮಾಲಿನಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಡ್ರೀಮ್ ಗರ್ಲ್ ಹೇಳಿದ ಈ ಉಪಾಯವೇ ಸದ್ಯ ಟ್ರೋಲಿಗರಿಗೆ ಆಹಾರವಾಗಿದೆ. ಮಥುರಾಗೆ ಸಂಸದೆ ಬರೋದಿಲ್ಲ. ಜನರ ಕಷ್ಟ ಕೇಳಲ್ಲ. ಅದು ಬಿಟ್ಟು ಮನೆಯಲ್ಲಿ ಕುಳಿತುಕೊಂಡು ಹೋಮ -ಹವನ ಅಂತ ಸಂದೇಶ ನೀಡ್ತಾರೆ ಅಂತಾ ಹೇಮಾ ಮಾಲಿನಿಗೆ ಸಾಕಷ್ಟು ಮಂದಿ ತರಾಟೆ ತೆಗೆದುಕೊಂಡಿದ್ದಾರೆ.

7. ‘ಡೆಲ್ಟಾ ರೂಪಾಂತರಿ ವೈರಸ್​ ಆಲ್ಫಾಗಿಂತ 60% ಹೆಚ್ಚು ಹರಡಬಲ್ಲದು’
ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್-19ನ ಡೆಲ್ಟಾ ರೂಪಾಂತರಿ ತಳಿ ಅಥವಾ B1.617.2 ಕಳವಳಕಾರಿ ವೈರಸ್, ಬ್ರಿಟನ್​ನನಲ್ಲಿ ಗುರುತಿಸಲಾದ ಆಲ್ಫಾ ರೂಪಾಂತರಕ್ಕಿಂತ ಇದು ಶೇಕಡಾ 60ರಷ್ಟು ಹೆಚ್ಚು ಹರಡಬಲ್ಲದು ಅಂತ ಹೇಳಲಾಗಿದೆ. ಲಸಿಕೆಗಳ ಪರಿಣಾಮಕಾರಿತ್ವವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಎಂದು ಬ್ರಿಟನ್ ಆರೋಗ್ಯ ತಜ್ಞರು ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ. ಬ್ರಿಟನ್‌ನಲ್ಲಿ ದೃಢಪಡುತ್ತಿರುವ ಹೊಸ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 90ರಷ್ಟು ಪ್ರಕರಣಗಳು ಡೆಲ್ಟಾ ರೂಪಾಂತರದಿಂದ ಆಗಿವೆ.

8. 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಬ್ರೆಜಿಲ್ ಅಸ್ತು
12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಬ್ರೆಜಿಲ್ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದ್ದು, ಕೊರೊನಾ ಅಬ್ಬರ ದಿನ ಕಳೆದಂತೆ ಜಾಸ್ತಿಯಾಗ್ತಿದೆ. ಕೊರೊನಾ ರೌದ್ರ ನರ್ತನವನ್ನು ಕಡಿಮೆ ಮಾಡಲು ನಮ್ಮ ಬಳಿ ಇರುವ ಅಸ್ತ್ರ ಎಂದರೆ ಅದು ಲಸಿಕೆ. ಹೀಗಾಗಿ ದೇಶದ ಪ್ರತಿಯೊಬ್ಬ ನಾಗರಿಕನು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಈ ಹಿನ್ನಲೆ ಮಕ್ಕಳಿಗೆ ಸಹ ವ್ಯಾಕ್ಸಿನ್ ನೀಡಲು ಅನುಮತಿ ಕೊಡಲಾಗಿದೆ. ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ ನೀಡಿ ಆದ್ಮೇಲೆ, ಮಕ್ಕಳಿಗೆ ಫೈಜರ್ ವ್ಯಾಕ್ಸಿನ್ ನೀಡಲಾಗ್ತದೆ ಅಂತ ಬ್ರೆಜಿಲ್ ಸರ್ಕಾರದ ಮೂಲಗಳು ತಿಳಿಸಿವೆ.

9. ಕೇರಳದಲ್ಲೊಂದು ‘ಇಂಟರೆಸ್ಟಿಂಗ್ ಲವ್ ಸ್ಟೋರಿ’
ಮಗಳು ಮನೆಯಿಂದ ನಾಪತ್ತೆಯಾಗಿದ್ದಾಳೆ ಅಂತ ದೂರು ನೀಡಿದ 11 ವರ್ಷಗಳ ಬಳಿಕ ಮಹಿಳೆ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿದೆ. 29 ವರ್ಷ ವಯಸ್ಸಿನವಳಿದ್ದಾಗ ನಾಪತ್ತೆಯಾಗಿದ್ದ ಸುಜಾತ ಎಂಬ ಮಹಿಳೆ, ರೆಹಮಾನ್ ಎಂಬ ವ್ಯಕ್ತಿಯ ಜೊತೆ ಓಡಿಹೋಗಿ ವಿವಾಹವಾಗಿರುತ್ತಾಳೆ. ಆಶ್ಚರ್ಯಕರ ಸಂಗತಿಯೆಂದರೆ, ಈ ರೆಹಮಾನ್ ಮದುವೆಯಾದ ಬಳಿಕ ಆತನ ಮನೆಯ ಸಣ್ಣ ಕೋಣೆಯಲ್ಲಿ ಸುಜಾತಳನ್ನು ಇರಿಸಿದ್ದು, ಇಷ್ಟು ವರ್ಷಗಳ ಕಾಲ ಯಾರಿಗೂ ತಿಳಿಯದಂತೆ ಸಂಸಾರ ಮಾಡಿದ್ದಾರೆ. ಇನ್ನು ಸುಜಾತ ಮನೆಗೂ, ಆಕೆಯ ಗಂಡನ ಮನೆಗೂ ಕೇವಲ 500 ಮೀಟರ್ ಅಂತರವಷ್ಟೇ ಇತ್ತು. ಬಳಿಕ, ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ಇಬ್ಬರು ಒಟ್ಟಿಗೆ ಜೀವಿಸಲು ಅನುಮತಿ ಸಹ ಸಿಕ್ಕಿದೆ.

10. ರೆಪ್ಪೆಯಿಂದ ಗಿನ್ನಿಸ್ ದಾಖಲೆ ಬರೆದ ಮಹಿಳೆ..!
ಸಾಮಾನ್ಯವಾಗಿ ರೆಪ್ಪೆಗೂದಲು ಉದ್ದವಾಗಿದ್ದರೆ ಕಣ್ಣುಗಳ ಅಂದ ಹೆಚ್ಚಿಸುತ್ತದೆ. ಆದ್ರೆ ರೆಪ್ಪೆಗೂದಲು ಬರೀ ಸೌಂದರ್ಯವನ್ನು ಹೆಚ್ಚಿಸದೇ ದಾಖಲೆ ಬರೆಯಲು ಸಹಕಾರಿಯಾಗಿದೆ ಅಂದ್ರೆ ನೀವು ನಂಬಲೇಬೇಕು. ಚೀನಾದ ಯು ಜಿಯಾಂಕ್ಸಿಯಾ ಎಂಬ ಮಹಿಳೆ, ಉದ್ದನೆಯ ರೆಪ್ಪೆಗಳಿಂದಲೇ ವಿಶ್ವ ದಾಖಲೆ ಸೃಷ್ಟಿಸಿದ್ದಾಳೆ. ಇತ್ತೀಚೆಗಷ್ಟೇ ಈಕೆಯ ರೆಪ್ಪೆಯನ್ನ ಅಳತೆ ಮಾಡಲಾಗಿದ್ದು, 20.5 ಸೆಂಟಿ ಮೀಟರ್ ಅಂದ್ರೆ 8 ಇಂಚು ಇತ್ತೆಂದು ಗಿನ್ನಿಸ್ ದಾಖಲೆಯ ಅಧಿಕೃತ ವೆಬ್​​ಸೈಟ್​​ನಲ್ಲಿ ಹೇಳಲಾಗಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್ appeared first on News First Kannada.

Source: newsfirstlive.com

Source link