1. ಬೆಂಗಳೂರು ಅನ್ಲಾಕ್.. ನಗರದತ್ತ ಜನ
ಇವತ್ತಿನಿಂದ ಮಹಾನಗರಿ ಬೆಂಗಳೂರಲ್ಲಿ ಅನ್ಲಾಕ್ ಆಗಿದೆ. ರಾಜ್ಯದ 19 ಜಿಲ್ಲೆಗಳಲ್ಲಿ ಇವತ್ತಿನಿಂದ ಸೆಮಿ ಅನ್ಲಾಕ್ ಆಗಿದ್ದು, ಇನ್ನುಳಿದ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಒಂದು ವಾರ ಲಾಕ್ಡೌನ್ ಮುಂದುವರಿಯಲಿದೆ. ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಕಡಿಮೆ ಜಿಲ್ಲೆಗಳಲ್ಲಿ ಅನ್ಲಾಕ್ ಇರಲಿದೆ. ಬೆಂಗಳೂರು ಅನ್ಲಾಕ್ ಆದ್ರು, ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ ಸಂಚಾರ ಇರೋದಿಲ್ಲ. ವಾರಾಂತ್ಯದಲ್ಲಿ ಸಂಪೂರ್ಣ ಕರ್ಫ್ಯೂ ಇರಲಿದ್ದು, ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಕರ್ಫ್ಯೂ ಇರಲಿದೆ. ಇನ್ನ ಊರುಗಳಿಗೆ ತೆರಳಿದ್ದ ಜನರು ಮತ್ತೆ ಕೆಲಸಕ್ಕಾಗಿ ಬೆಂಗಳೂರಿನತ್ತ ರೈಲುಗಳಲ್ಲಿ ಆಗಮಿಸ್ತಿದ್ದಾರೆ.

2. ಸಿ.ಡಿ ಕೇಸ್​​ನ ಶಂಕಿತ ಆರೋಪಿಗಳಿಗೆ ಮತ್ತೆ ನೋಟಿಸ್
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿ.ಡಿ ಬಹಿರಂಗ ಪ್ರಕರಣದ ಆರೋಪಿಗಳು ಎಸ್ಐಟಿ ಮುಂದೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಯುವತಿಗೆ ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ರಿಂದ ಹಿಡಿದು ಸಿ.ಡಿ ಗ್ಯಾಂಗ್ ಎಸ್ಕೇಪ್ ಆಗಿರೋವರೆಗಿನ ಇಂಚಿಂಚೂ ಮಾಹಿತಿಯನ್ನು ಶ್ರವಣ್ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಆದ್ರೆ ಮತ್ತೊಬ್ಬ ಆರೋಪಿ ನರೇಶ್ ಗೌಡ ಮಾತ್ರ ಯಾವುದೇ ವಿಚಾರ ಬಾಯ್ಬಿಟ್ಟಿಲ್ಲ. ಹೀಗಾಗಿ ಎಸ್ಐಟಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಶ್ರವಣ್ ಹಾಗೂ ನರೇಶ್​​ಗೆ ನೋಟಿಸ್ ನೀಡಿದೆ. ಇವತ್ತು ವಿಚಾರಣೆಗೆ ಹಾಜರಾಗುವಂತೆ ನರೇಶ್​ ಗೌಡಗೆ ಸೂಚಿಸಿದ್ರೆ, ನಾಳೆ ವಿಚಾರಣೆಗೆ ಹಾಜರಾಗುವಂತೆ ಶ್ರವಣ್​​ಗೆ ನೋಟಿಸ್ ನೀಡಲಾಗಿದೆ.

3. ನೈರುತ್ಯ ಮಾನ್ಸೂನ್ ಅಪ್ಪಳಿಸಲಿದೆ ಎಚ್ಚರ
ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಮಾನ್ಸೂನ್ ಹಲವು ರಾಜ್ಯಗಳಿಗೆ ಅಪ್ಪಳಿಸಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗ್ಲೇ ಹಲವು ರಾಜ್ಯಗಳಲ್ಲಿ ವರುಣನ ಸ್ಪರ್ಶವಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರೋ ವರದಿ ಪ್ರಕಾರ ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಉತ್ತರ ಹರಿಯಾಣ, ಉತ್ತರ ಪಂಜಾಬ್ ಭಾಗಗಳಲ್ಲಿ ಮಾನ್ಸೂನ್ ಅಪ್ಪಳಿಸಲಿದೆ. ಇನ್ನು ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದ್ದು, ಆದಷ್ಟು ಜನ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.

4. ಇಂದಿನಿಂದ ತಮಿಳುನಾಡಿನ 27 ಜಿಲ್ಲೆಗಳು ರಿಲೀಫ್
ಕೋವಿಡ್ ಸೋಂಕು ನಿರಂತರ ಇಳಿಮುಖವಾಗುತ್ತಿರುವ ಹಿನ್ನೆಲೆ ತಮಿಳುನಾಡಿನ 27 ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಗೊಳಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್ ಅಧಿಕೃತ ಆದೇಶ ಹೊರಡಿಸಿದ್ದು, ಕೊರೊನಾ ಅಟ್ಟಹಾಸ ರಾಜ್ಯದಲ್ಲಿ ಕೊಂಚ ಕಡಿಮೆಯಾಗಿರುವುದರಿಂದ, ಇಂದಿನಿಂದ 11 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಸಹ ಲಾಕ್​​ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಅಂತ ಹೇಳಿದ್ದಾರೆ.

5. ರಾಮ ಮಂದಿರ ಟ್ರಸ್ಟ್ ವಿರುದ್ಧ ಭೂಹಗರಣ ಆರೋಪ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರಚಿಸಿದ್ದ ರಾಮ ಮಂದಿರ ಚಾರಿಟೇಬಲ್ ಟ್ರಸ್ಟ್ ವಿರುದ್ಧ ಭೂ ಹಗರಣದ ಆರೋಪ ಕೇಳಿ ಬಂದಿದೆ. ಟ್ರಸ್ಟ್​ನ 2 ಕೋಟಿ ರೂಪಾಯಿ ಹಣದಲ್ಲಿ ಅಕ್ರಮ ರಿಯಲ್ ಎಸ್ಟೇಟ್ ದಂಧೆ ನಡೆಸಿ, ಕೆಲವೇ ನಿಮಿಷಗಳಲ್ಲಿ 18 ಕೋಟಿ ರೂಪಾಯಿ ಸಂಪಾದಿಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಮತ್ತು ಸಮಾಜವಾದಿ ಪಕ್ಷ ಗಂಭೀರ ಆರೋಪ ಮಾಡಿದೆ. ನಿನ್ನೆ ಸುದ್ದಿಗೋಷ್ಠಿ ನಡೆಸಿ ಪಕ್ಷದ ಮುಖಂಡರು ಸ್ಟ್ಯಾಂಪ್ ಪೇಪರ್ ದಾಖಲೆಗಳನ್ನು ಬಿಡುಗಡೆಗೊಳಿಸಿ, ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

6. ಇಸ್ರೇಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆ
ಇಸ್ರೇಲ್​​ನ ನೂತನ ಪ್ರಧಾನಮಂತ್ರಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬೆಂಜಮಿನ್ ನೆತನ್ಯಾಹು ಬರೋಬ್ಬರಿ 12 ವರ್ಷಗಳ ನಂತರ ಪ್ರಧಾನಿ ಪಟ್ಟದಿಂದ ಕೆಳಕ್ಕಿಳಿದಿದ್ದಾರೆ. ಅವರನ್ನು ಖುರ್ಚಿಯಿಂದ ಇಳಿಸಲು ಅವರದೇ ಮೈತ್ರಿಕೂಟದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರು ಈ ಮುನ್ನ ಒಟ್ಟುಗೂಡಿದ್ದರು. ನಿನ್ನೆ ಇಸ್ರೇಲ್ ಸಂಸತ್ತಿನಲ್ಲಿ ಹೊಸ ಸರ್ಕಾರವನ್ನುಆಯ್ಕೆ ಮಾಡಲಾಯಿತು. 60 ಸದಸ್ಯರು ಬೆನೆಟ್ ಹಾಗೂ ಯೇರ್ ಲ್ಯಾಪಿಡ್ ನೇತತ್ವದ ಮೈತ್ರಿ ಪಕ್ಷದ ಪರ ಮತ ಚಲಾಯಿಸಿದರು.

7. ತಿಮಿಂಗಿಲ ನುಂಗಿದ್ರೂ ಬದುಕಿ ಬಂದ ವ್ಯಕ್ತಿ
ಸೀ ಡೈವಿಂಗ್ ಮಾಡುವಾಗ ತಿಮಿಂಗಲದ ಬಾಯೊಳಗೆ ಹೋಗಿ ಮತ್ತೆ ವ್ಯಕ್ತಿಯೋರ್ವ ಬದುಕಿ ಬಂದ ಘಟನೆ ಅಮೆರಿಕದಲ್ಲಿ ನಡೆದಿದೆ. ಮೆಸ್ಸಾಯುಯೆಟನ್ಸ್ ಈಶಾನ್ಯ ಭಾಗದ ಕಡಲಿನಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ಮೈಕಲ್ ಪಾಕಾರ್ಡ್ ಎನ್ನುವ ಮೀನುಗಾರ ಹಾಗೂ ಸೀ ಡ್ರೈವರ್, ತಿಮಿಂಗಿಲ ಬಾಯಿಯೊಳಗೆ ಹೋಗಿ ವಾಪಸ್ ಬದುಕಿ ಬಂದಿದ್ದಾನೆ. ಈ ಬಗ್ಗೆ ಖುದ್ದು ಆತನೇ ವಿಡಿಯೋದಲ್ಲಿ ಮಾತನಾಡಿದ್ದು, ಈತನ ಮೈಗೆ ತಿರುಚಿದ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

8. ವಿಶ್ವನಾಥನ್‌ ಆನಂದ್‌ಗೆ ಕಠಿಣ ಸ್ಪರ್ಧೆ ಕೊಟ್ಟ ಕಿಚ್ಚ ಸುದೀಪ್‌
ಐದು ಬಾರಿ ವಿಶ್ವ ಚೆಸ್‌ ಚಾಂಪಿಯನ್‌ ಆಗಿರುವ ವಿಶ್ವನಾಥನ್‌ ಆನಂದ್ಗೆ ನಟ ಕಿಚ್ಚ ಸುದೀಪ್‌, ಚೆಸ್‌ ಸ್ಪರ್ಧೆಯಲ್ಲಿ ಕಠಿಣ ಸ್ಪರ್ಧೆಯನ್ನೇ ನೀಡಿದ್ದಾರೆ. ಕೋವಿಡ್‌ ಪರಿಹಾರ ನಿಧಿ ಸಂಗ್ರಹಕ್ಕಾಗಿ ಅಕ್ಷಯ ಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್‌ಕಾಮ್‌ ಭಾನುವಾರ ಆಯೋಜಿಸಿದ್ದ ಚೆಕ್‌ಮೇಟ್‌ ಕೋವಿಡ್‌ ಸೆಲೆಬ್ರಿಟಿ ಆವೃತ್ತಿಯಲ್ಲಿ, ನಟರಾದ ಸುದೀಪ್‌, ರಿತೇಷ್‌ ದೇಶ್‌ಮುಖ್‌, ಕ್ರಿಕೆಟಿಗ ಯಜುವೇಂದ್ರ ಚಾಹಲ್‌ ಸೇರಿದಂತೆ ಕೆಲ ಗಣ್ಯರೊಂದಿಗೆ 30 ನಿಮಿಷಗಳ ಟೈಂಔಟ್‌ನಲ್ಲಿ ಏಕಕಾಲದಲ್ಲಿ ವಿಶ್ವನಾಥನ್‌ ಆನಂದ್‌ ಆಡಿದರು. ಟೈಂಔಟ್‌ನಲ್ಲಿ ಸುದೀಪ್‌ ವಿಶ್ವನಾಥನ್‌ ಆನಂದ್‌ ಎದುರು ಸೋತರು. ವಿಶ್ವನಾಥನ್‌ ಆನಂದ್‌ ಅವರ ಟೈಮರ್‌ನಲ್ಲಿ 46 ಸೆಕೆಂಡ್‌ಗಳಷ್ಟೇ ಉಳಿದಿತ್ತು.

9. ಫ್ರೆಂಚ್ ಗ್ರಾಂಡ್ ಸ್ಲಾಂ ಗೆದ್ದ ಜೋಕೊವಿಕ್
ವಿಶ್ವದ ನಂಬರ್ 1 ಆಟಗಾರ ಎಂದೇ ಪ್ರಖ್ಯಾತಿ ಪಡೆದಿರೋ ನೋವಾಕ್ ಜೋಕೊವಿಕ್ ಈಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಈ ಮೂಲಕ ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ 4 ಗ್ರಾಂಡ್ ಸ್ಲಾಂಗಳಲ್ಲಿ ಕನಿಷ್ಠ ತಲಾ 2 ಬಾರಿ ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ವೃತ್ತಿ ಜೀವನದ 19ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡ ಸೆರ್ಬಿಯಾ ತಾರೆ ಜೋಕೊವಿಕ್, ಮುಕ್ತ ಟೆನಿಸ್ ಯುಗದಲ್ಲಿ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರ ಗ್ರಾಂಡ್ ಸ್ಲಾಂ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.

10. 38 ಪತ್ನಿಯರ ಮುದ್ದಿನ ಗಂಡ ಚಾನ್ ಇನ್ನಿಲ್ಲ
38 ಪತ್ನಿಯರು, 89 ಮಕ್ಕಳು ಮತ್ತು 33 ಮೊಮ್ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನಾ 76ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಡಯಾಬಿಟೀಸ್ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಝಿಯೋನಾ ಚಾನ್ ನಿನ್ನೆ ನಿಧನರಾಗಿದ್ದಾರೆ. ಝಿಯೋನಾ ನಿಧನಕ್ಕೆ ಮಿಜೋರಾಂ ಸಿಎಂ ಝೋರಾಮಂಗ್ಟಾ ಸಂತಾಪ ಸೂಚಿಸಿದ್ದಾರೆ. ಪತ್ನಿಯರು, ಮಕ್ಕಳು ಸೇರಿದಂತೆ ಝಿಯೋನಾ ಚಾನ್ ಕುಟುಂಬದಲ್ಲಿ ಒಟ್ಟು 180 ಮಂದಿ ಇದ್ದಾರೆ. ಇವರೆಲ್ಲರೂ ಒಂದೇ ಮನೆಯಲ್ಲಿ ವಾಸವಿದ್ದರು ಅನ್ನೋದು ಮತ್ತೊಂದು ವಿಶೇಷ

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link