1. ‘ಸಂಚಾರ’ ಮುಗಿಸಿದ ಸಂಚಾರಿ ವಿಜಯ್
ಅಪಘಾತವಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಸ್ಯಾಂಡಲ್​​ವುಡ್ ನಟ ಸಂಚಾರಿ ವಿಜಯ್ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಜಯ್ ಮೃತಪಟ್ಟಿರೋ ಬಗ್ಗೆ ಅಪೋಲೋ ಆಸ್ಪತ್ರೆ ವೈದ್ಯರು ಇವತ್ತು ಮುಂಜಾನೆ 3.34ರ ಸುಮಾರಿಗೆ ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದ್ದಾರೆ. ರಾತ್ರಿಯಿಡೀ ಸಂಚಾರಿ ವಿಜಯ್ ಅಂಗಾಗ ದಾನ ಪ್ರಕ್ರಿಯೆ ನಡೆದಿದ್ದು, ಜೀವನ ಸಾರ್ಥಕತೆ ತಂಡ ವಿಜಯ್ ಅಂಗಾಂಗ ಸಂಗ್ರಹಿಸಿದೆ. ಅಪೋಲೋ ಆಸ್ಪತ್ರೆಯಲ್ಲೇ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ನಟನ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ವಿಜಯ್ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.  ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 8ರಿಂದ 10ರವರೆಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್ ಅಂತ್ಯಕ್ರಿಯೆ ನೆರವೇರಲಿದೆ.

2. ‘ಕೆಲವರು ಸಿಎಂ ಆಗಲು ಸೂಟು-ಬೂಟು ಹೊಲಿಸಿದ್ದಾರೆ’
ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಕಸರತ್ತು ನಡೆಸುತ್ತಿರೋ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್​​ಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಕೆಲವರು ಸಿಎಂ ಆಗ್ಬೇಕು ಅಂತಾ ಸೂಟು- ಬೂಟು ಹೊಲಿಸಿದ್ದಾರೆ. ವಿಜಯಪುರ ಶಾಸಕ ನಾನೇ ಸಿಎಂ.., ಸಹಕಾರ ಕೊಡಿ ಅಂತ ಶಾಸಕರಿಗೆ ಫೋನ್ ಮಾಡ್ತಾ ಇದ್ದಾರಂತೆ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ. ಜೂನ್ 17ರಂದು ಶಾಸಕರ ತಂಡದೊಂದಿಗೆ ಅರುಣ್ ಸಿಂಗ್ ಅವರನ್ನ ಭೇಟಿಯಾಗೋದಾಗಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

3. ಇವತ್ತು SIT ವಿಚಾರಣೆಗೆ ಹಾಜರಾಗ್ತಾರಾ ಶ್ರವಣ್?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಇತ್ತ ಜಾರಕಿಹೊಳಿ ದೂರು ಆಧರಿಸಿ ಎಸ್ಐಟಿ ನಿನ್ನೆ ಶಂಕಿತ ಆರೋಪಿ ನರೇಶ್ ವಿಚಾರಣೆ ನಡೆಸಿದೆ. ಸತತ ನಾಲ್ಕೈದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ಐಟಿ, ಶ್ರವಣ್ ಹೇಳಿದ್ದ ಸ್ಟಿಂಗ್ ಕ್ಯಾಮರಾ ಬಗ್ಗೆ ಮಾಹಿತಿ ಕಲೆ ಹಾಕಿದೆ. ಇವತ್ತು ಮತ್ತೊಬ್ಬ ಶಂಕಿತ ಆರೋಪಿ ಶ್ರವಣ್​ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿತ್ತು. ಈ ಹಿನ್ನೆಲೆ ಎಸ್ಐಟಿ ಅಧಿಕಾರಿಗಳ ವಿಚಾರಣೆಗೆ ಶ್ರವಣ್ ಹಾಜರಾಗುವ ಸಾಧ್ಯತೆ ಇದೆ.

4. ರಾಜ್ಯಕ್ಕೆ ಮುಂದಿನ ಮೂರು ದಿನ ವರುಣಾಘಾತ..?
ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ 18ರವರೆಗೆ ವ್ಯಾಪಕ ಮಳೆಯಾಗಲಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 20 ಸೆಂಟಿಮೀಟರ್​​ಗೂ ಹೆಚ್ಚು ಮಳೆಯಾಗೋ ನಿರೀಕ್ಷೆಯಿದೆ. ಈ ಹಿನ್ನೆಲೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲೂ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

5. ಸಿಇಟಿ ಪರೀಕ್ಷೆಗೆ ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ
ವೃತ್ತಿಪರ ಕೋರ್ಸ್​​ಗಳ ಆಯ್ಕೆಗಾಗಿ ನಡೆಸುವ ಸಿಇಟಿ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ  ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್​ಸೈಟ್​​​ನಲ್ಲಿ ನಿಗದಿತ ಲಿಂಕ್ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಸಿಇಟಿ ಪರೀಕ್ಷೆ ಆಗಸ್ಟ್ 28 ಮತ್ತು ಆಗಸ್ಟ್ 29ರಂದು ನಡೆಯಲಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಜುಲೈ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ಅಭ್ಯರ್ಥಿಯ ಅರ್ಹತೆ, ಶೈಕ್ಷಣಿಕ ಅರ್ಹತೆಗಳನ್ನು ಇಲಾಖೆಯ ವೆಬ್​ಸೈಟ್​​​ನಲ್ಲಿ ನೀಡಲಾಗಿದೆ. ಆಗಸ್ಟ್ 13ರ ಬೆಳಗ್ಗೆ 11 ಗಂಟೆಯಿಂದ ಹಾಲ್ ಟಿಕೆಟ್‌ ಡೌನ್ಲೋಡ್ ಮಾಡಿಕೊಳ್ಳಬಹುದು ಅಂತ ಕೂಡ ತಿಳಸಲಾಗಿದೆ.

6. ಕೊರೊನಾದಿಂದ ಸತ್ತ ವೈದ್ಯರ, ನರ್ಸ್​​ಗಳ ಕುಟುಂಬಕ್ಕೆ ನೆರವು
ಕೊರೊನಾದಿಂದ ಸಾವನ್ನಪ್ಪಿದ ವೈದ್ಯರು ಹಾಗೂ ನರ್ಸ್​​​ಗಳ ಕುಟುಂಬಗಳಿಗೆ ಆಂಧ್ರ ಸರ್ಕಾರ 25 ಲಕ್ಷ ರೂಪಾಯಿ ನೆರವು ಘೋಷಿಸಿದೆ. ಹಾಗೆಯೇ ಸೋಂಕಿತರನ್ನು ನೋಡಿಕೊಳ್ಳುತ್ತಿದ್ದ ನರ್ಸ್​​ಗಳ ಕುಟುಂಬದವರಿಗೂ ಸಹ 20 ಲಕ್ಷ ರೂಪಾಯಿ ಘೋಷಣೆ ಮಾಡಿದೆ. ಈ ಹಣವನ್ನು ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ನಿರಂತರ ಕಾರ್ಯ ನಿರ್ವಹಿಸಿ ಉಸಿರು ಚೆಲ್ಲಿದ ಡಾಕ್ಟರ್ ಹಾಗೂ ನರ್ಸ್ ಕುಟುಂಬದವರಿಗೆ ತಲುಪಿಸುವ ಕೆಲಸ ಆಗಬೇಕು ಅಂತ ಸರ್ಕಾರ ತಿಳಿಸಿದೆ.

7. 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಪ್ರಯೋಗ
6 ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಭಾರತ್ ಬಯೋಟೆಕ್ ಸಂಸ್ಥೆಯ ಕೋವಾಕ್ಸಿನ್ ಲಸಿಕೆ ಕ್ಲಿನಿಕಲ್ ಪ್ರಯೋಗಕ್ಕಾಗಿ ಇಂದಿನಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ದೆಹಲಿ ಏಮ್ಸ್ನ ಸಮುದಾಯ ಔಷಧ ಕೇಂದ್ರದ ಪ್ರೊಫೆಸರ್ ಡಾ.ಸಂಜಯ್ ರೈ ತಿಳಿಸಿದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರಲ್ಲಿ ಡಾಕ್ಟರ್ ಸಂಜಯ್ ಮಾತನಾಡಿದ್ದು, 12-18 ವರ್ಷಗಳಲ್ಲಿ ಕ್ಲಿನಿಕಲ್ ಪ್ರಯೋಗಗಳ ಆಯ್ಕೆ ಈಗಾಗ್ಲೇ ಮುಗಿದಿದೆ ಮತ್ತು ಈ ವಯಸ್ಸಿನ ಮಕ್ಕಳಿಗೆ ಲಸಿಕೆಯ ಒಂದೇ ಡೋಸ್ ನೀಡಲಾಗುತ್ತದೆ ಎಂದಿದ್ದಾರೆ.

8. ನೋವಾವ್ಯಾಕ್ಸ್ ಕೋವಿಡ್​​ ರೂಪಾಂತರಿಗಳ ವಿರುದ್ಧ ಎಫೆಕ್ಟಿವ್
ಅಮೆರಿಕಾ ಮೂಲದ ನೋವಾವ್ಯಾಕ್ಸ್ ಕೊರೊನಾ ಲಸಿಕೆ ಕೋವಿಡ್ ಸೋಂಕಿನ ಎಲ್ಲಾ ರೂಪಾಂತರಿ ವಿರುದ್ಧ ಪರಿಣಾಮಕಾರಿ ಎಂದು ಪ್ರಾಯೋಗಿಕ ಅಧ್ಯಯನ ವರದಿ ಹೇಳಿದೆ. ಅಮೆರಿಕಾ ಹಾಗೂ ಮೆಕ್ಸಿಕೋದಲ್ಲಿ ಸುಮಾರು 30,000 ಮಂದಿಗೆ ಈ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು. ಅದರ ಅನ್ವಯ ಲಸಿಕೆ ಕೋವಿಡ್ ಸೋಂಕಿನ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿ ಎಂದು ನೋವಾವ್ಯಾಕ್ಸ್ ಸಂಸ್ಥೆ ಹೇಳಿಕೊಂಡಿದೆ.

9. WTC ತಂಡಕ್ಕೆ ಭರ್ಜರಿ ಬಹುಮಾನ
ಸೌತಾಂಪ್ಟನ್‌ನಲ್ಲಿ ಜೂನ್ 18ರಿಂದ ಆರಂಭವಾಗಲಿರೋ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ಹಣಾಹಣಿ ನಡೆಸಲು ಸಜ್ಜಾಗಿವೆ. ಚಾಂಪಿಯನ್ ಶಿಪ್ ವಿಜೇತರಿಗೆ 11.7 ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ನೀಡಲಾಗುವುದು ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸಿಇಒ ಜೆಫ್ ಅಲಾರ್ಡಿಸ್ ಘೋಷಿಸಿದ್ದಾರೆ. ಜೊತೆಗೆ ಅದೇ ಸಮಯದಲ್ಲಿ, ರನ್ನರ್ ಅಪ್​​​ಗೆ 5.85 ಕೋಟಿ ರೂಪಾಯಿ ನೀಡಲಾಗುತ್ತದೆ.

10. ಜನರನ್ನು ಮನೆಯಲ್ಲಿ ಬಂಧಿಸಲು ಡ್ರೋನ್ ನಿಯೋಜನೆ
ಚೀನಾದಲ್ಲಿ ಕೊರೊನಾ ಕಡಿವಾಣಕ್ಕೆ ಬಂದ್ರೂ ಸಹ ಕೆಲ ಪ್ರಾಂತ್ಯದಲ್ಲಿ ಕೊರೊನಾ ನಿಯಂತ್ರಣವಾಗ್ತಿಲ್ಲ. ಅವುಗಳಲ್ಲಿ ಗ್ವಾಂಗ್ಝೂ ಪ್ರಾಂತ್ಯ ಸಹ ಒಂದು. ಈ ಭಾಗದಲ್ಲಿ ಜನರು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಲು, ಚೀನಾ ಆಡಳಿತ 60 ಡ್ರೋನ್​ಗಳನ್ನು ನಿಯೋಜಿಸಿದೆ. ಈ ಡ್ರೋನ್​ಗಳು ಜನ್ರಿಗೆ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನೆನಪಿಸುವ ಕೆಲಸ ಮಾಡ್ತವೆ. ಇನ್ನು ಈ ಡ್ರೋನ್​ಗಳನ್ನು ಪೊಲೀಸರು ಕ್ಷಣ ಕ್ಷಣವೂ ಗಮನಿಸುತ್ತಿದ್ದು, ಮನೆಯಿಂದ ಹೊರಬರುವವರಿಗೆ ಎಚ್ಚರಿಕೆ ನೀಡೋ ಕೆಲಸ ಮಾಡ್ತಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್​ appeared first on News First Kannada.

Source: newsfirstlive.com

Source link