1. ತಾರ್ತಿಕ ಅಂತ್ಯ ಕಾಣುತ್ತಾ ನಾಯಕತ್ವ ಚರ್ಚೆ?
ರಾಜ್ಯ ಬಿಜೆಪಿಯಲ್ಲಿ ಕಳೆದ ಹಲವು ದಿನಗಳಿಂದ ಸೃಷ್ಟಿಯಾಗಿರೋ ಬಂಡಾಯ, ಗೊಂದಲ, ವೈಮನಸ್ಸುಗಳಿಗೆ ಶೀಘ್ರವೇ ತಿಲಾಂಜಲಿ ಬೀಳುವ ಕಾಲ ಸನಿಹದಲ್ಲಿದೆ. ನಾಯಕತ್ವ ಬದಲಾವಣೆ, ಪರ-ವಿರೋಧ ಚಟುವಟಿಕೆಗಳಿಗೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಇಂದು ರಾಜ್ಯಕ್ಕೆ ಆಗಮಿಸ್ತಿದ್ದಾರೆ. ಮೂರು ದಿನ ರಾಜ್ಯದಲ್ಲೇ ಮೊಕ್ಕಾಂ ಹೂಡಿ ಎಲ್ಲರೊಡನೆ ಸಮಾಲೋಚನೆ ನಡೆಸಿ ಬಿಜೆಪಿಯಲ್ಲಿನ ಬಿಕ್ಕಟ್ಟಿಗೆ ಪರಿಹಾರ ಸೂತ್ರ ರೂಪಿಸುವ ಕಸರತ್ತು ನಡೆಸಲಿದ್ದಾರೆ. ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸಿ ಬಿಕ್ಕಟ್ಟಿಗೆ ಪರಿಹಾರ ಸೂತ್ರವನ್ನು ಕಂಡುಕೊಳ್ಳಲು ಎಲ್ಲರ ಅಭಿಪ್ರಾಯ ಆಲಿಸಲಿದ್ದಾರೆ.

2. ಅರವಿಂದ್ ಬೆಲ್ಲದ್​​ಗೆ ಬೊಮ್ಮಾಯಿ ಕಿವಿಮಾತು
ನಾಯಕತ್ವ ಬದಲಾವಣೆ ವಿಚಾರದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಇತ್ತೀಚೆಗೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಬಂದಿದ್ದ ಬೆಲ್ಲದ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ ನಿವಾಸಕ್ಕೆ ಕರೆಸಿ ಕಿವಿಮಾತು ಹೇಳಿದ್ದಾರೆ. ಮೇಲಿಂದ ಮೇಲೆ ದೆಹಲಿಗೆ ಹೋಗ್ತಿರೋದ್ರಿಂದ ಪಕ್ಷಕ್ಕೆ ದೊಡ್ಡ ಪ್ರಮಾಣದ ಡ್ಯಾಮೇಜ್ ಆಗುತ್ತಿದೆ. ಇದೆಲ್ಲವನ್ನೂ ಸದ್ಯಕ್ಕೆ ನಿಲ್ಲಿಸಿ. ನಿಮ್ಮ ಅಸಮಾಧಾನ ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.

3. ಕೃಷ್ಣನೂರಿನಲ್ಲಿ ಮುಂಗಾರು ಆರ್ಭಟ
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು 24 ಗಂಟೆಯಲ್ಲಿ ಸರಾಸರಿ 86 ಮಿಲಿ ಮೀಟರ್ ಮಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 102 ಮಿಲಿ ಮೀಟರ್ ಮಳೆಯಾಗಿದ್ದು ಬ್ರಹ್ಮಾವರದಲ್ಲಿ 93 ಮಿಲಿ ಮೀಟರ್, ಉಡುಪಿಯಲ್ಲಿ 87, ಕಾಪುವಿ ನಲ್ಲಿ 94, ಕುಂದಾಪುರದಲ್ಲಿ 86, ಕಾರ್ಕಳದಲ್ಲಿ 83, ಹೆಬ್ರಿಯಲ್ಲಿ 53 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇನ್ನು ಹವಮಾನ ಇಲಾಖೆ ನಾಲ್ಕು ದಿನಗಳ ಕಾಲ ಮಳೆಯ ಮುನ್ಸೂಚನೆ ನೀಡಿದ್ದು ಜಿಲ್ಲೆಯಾದ್ಯಂತ ಅರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ.

4. ಸ್ಕೂಲ್ ಫೀ ವಿಚಾರ, ಮಧ್ಯಂತರ ಅರ್ಜಿ ಸಲ್ಲಿಕೆ
ಲಾಕ್​ಡೌನ್ ವೇಳೆ ಖಾಸಗಿ ಶಾಲೆಗಳಿಂದ ಸ್ಕೂಲ್ ಫೀ ಟಾರ್ಚರ್ ವಿಚಾರವಾಗಿ ರಾಜ್ಯ ಸರ್ಕಾರ ಹೈಕೋರ್ಟ್​​ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ. ಅರ್ಜಿಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚನೆ ಬಗ್ಗೆ ಪ್ರಸ್ತಾಪಿಸಿದೆ. ಕೊರೊನಾ ಲಾಕ್​ಡೌನ್ ವೇಳೆ ಪೋಷಕರಿಗೆ ಸಂಪೂರ್ಣ ಶುಲ್ಕ ಭರಿಸಲು ಕಷ್ಟವಾಗ್ತಿದೆ. ಶುಲ್ಕ ನಿಗದಿ ಮಾಡಲು ಸಮಿತಿ ರಚನೆ ಅಗತ್ಯವೆಂದು ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೈಕೋರ್ಟ್​​ಗೆ ಮನವಿ ಮಾಡಿದ್ದಾರೆ. ಖಾಸಗಿ ಶಾಲೆಗಳು ಒಟ್ಟು ಶುಲ್ಕದಲ್ಲಿ ಶೇಕಡ 70 ರಷ್ಟು ಮಾತ್ರ ಪಡೆಯಬೇಕೆಂದು ಸರ್ಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್​​ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಮುಗಿಯುವ ತನಕ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಕೋರ್ಟ್ ಸೂಚಿಸಿದೆ. ವಿಚಾರಣೆಯನ್ನ ಜೂನ್ 21ಕ್ಕೆ ನಿಗದಿ ಮಾಡಿದೆ.

5. ನಟ ಚೇತನ್ ವಿರುದ್ಧ ಕೇಸ್ ದಾಖಲು
ಬ್ರಾಹ್ಮಣರ ವಿರುದ್ಧ ಸಾಮಾಜಿಕ ಮಾದ್ಯಮಗಳಲ್ಲಿ ಪೋಸ್ಟ್ ಹಾಕಿದ್ದಕ್ಕೆ ನಟ ಚೇತನ್ ಅವರನ್ನು ಇಂದು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಪವನ್ ಕುಮಾರ್ ಶರ್ಮಾ ಎಂಬುವವರು ನೀಡಿದ ದೂರಿನನ್ವಯ ಬಸವನಗುಡಿ ಠಾಣೆ ಪೊಲೀಸರು ಚೇತನ್ಗೆ ನೋಟಿಸ್ ನೀಡಿದ್ದು, ಈ ಬಗ್ಗೆ ಖುದ್ದು ನಟ ಚೇತನ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ಕಾನೂನಿಗೆ ಬೆಲೆ ಕೊಟ್ಟು ಇಂದು ವಿಚಾರಣಗೆ ಹಾಜರಗುತ್ತೇನೆ ಅಂತ ಬರೆದುಕೊಂಡಿದ್ದಾರೆ.

6. ಏಷ್ಯಾ ರಾಷ್ಟ್ರಗಳ ರಕ್ಷಣಾ ಸಚಿವರ ಜೊತೆ ರಾಜನಾಥ್ ಸಭೆ
ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏಷ್ಯಾ ರಾಷ್ಟ್ರಗಳ ರಕ್ಷಣಾ ಸಚಿವರುಗಳ ಜೊತೆ ಸಭೆ ನಡೆಸಲಿದ್ದಾರೆ ಅಂತ ಭಾರತೀಯ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ರಕ್ಷಣಾ ಇಲಾಖೆಯ ಅಧಿಕಾರಿಗಳು, ಇಂದು ರಾಜನಾಥ್ ಸಿಂಗ್ ಏಷ್ಯಾ ರಾಷ್ಟ್ರಗಳ ರಕ್ಷಣಾ ಸಚಿವರುಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ದೇಶದ ರಕ್ಷಣಾ ವಿಚಾರವನ್ನು ಚರ್ಚೆ ಮಾಡುವುದರ ಜೊತೆಗೆ, ಕೊರೊನಾ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಿದ್ದಾರೆ ಅಂತ ತಿಳಿಸಿದ್ದಾರೆ.

7. ಚೋಕ್ಸಿ ವಿಚಾರಣೆ ಜೂನ್ 25ಕ್ಕೆ ಮುಂದೂಡಿಕೆ
ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧದ ವಿಚಾರಣೆಯನ್ನು ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಜೂನ್ 25ಕ್ಕೆ ಮುಂದೂಡಿದೆ. ಈ ಮೊದಲು ಸೋಮವಾರದಂದು ಚೋಕ್ಸಿಯ ವಿಚಾರಣೆ ನಡೆಸಬೇಕಿತ್ತು. ಆದ್ರೆ ಚೋಕ್ಸಿ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾನೆ ಅಂತ ಡೊಮಿನಿಕಾದ ಚೀನಾ ಫ್ರೆಂಡ್ಶಿಪ್ ಆಸ್ಪತ್ರೆ ವೈದ್ಯರು ಕೋರ್ಟ್​​ಗೆ ವರದಿ ನೀಡಿದ್ದಾರೆ.

8. ಶ್ವಾನ ಆಮದಿಗೆ ಅಮೆರಿಕ ನಿರ್ಬಂಧ
ರೇಬಿಸ್‌ ರೋಗ ಹೆಚ್ಚಾಗಿರುವ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳಿಂದ ನಾಯಿಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳಬಾರದು ಅಂತ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಒಂದು ವರ್ಷಗಳ ಕಾಲ ನಾಯಿಗಳ ಆಮದಿಗೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ರೇಬಿಸ್ ಇರುವ ದೇಶಗಳಿಂದ ನಾಯಿಗಳನ್ನ ಆಮದು ಮಾಡಿಕೊಂಡರೆ ಅಂತಹ ನಾಯಿಗಳಿಗೆ ರೇಬೀಸ್ ಲಸಿಕೆ ಹಾಕಿಸಿರುವ ಬಗ್ಗೆ ದಾಖಲೆ ನೀಡಬೇಕು ಅಂತ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕಾಗೆ ಹೊರಗಿನ ದೇಶಗಳಿಂದ ನಾಯಿಯ ಮರಿಗಳನ್ನ ಆಮದು ಮಾಡಿಕೊಳ್ಳುತ್ತಿರೋದು ಹೆಚ್ಚಾಗಿದ್ದು, ರೇಬೀಸ್ ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತ ಅಮೆರಿಕಾದ ಆರೋಗ್ಯ ಸಚಿವಾಲಯ ತಿಳಿಸಿದೆ.

9. ಅಮೆರಿಕಾಗೆ ತೆರಳಿದ ತಲೈವಾ
ತಮಿಳಿನ ಸೂಪರ್ ಸ್ಟಾರ್ ತಲೈವಾ ರಜಿನಿಕಾಂತ್, ಅಮೆರಿಕಾಗೆ ತೆರಳಿದ್ದಾರೆ. ಆರೋಗ್ಯ ತಪಾಸಣೆಗಾಗಿ ರಜಿನಿ ಅಮೆರಿಕಾಗೆ ತೆರಳಿದ್ದು, ನೆಚ್ಚಿನ ನಟನ ಆರೋಗ್ಯದಲ್ಲಿ ಏರುಪೇರಾಗಿದ್ಯಾ ಅಂತ ಅಭಿಮಾನಿಗಳು ಕಳವಳಗೊಂಡಿದ್ದಾರೆ. ಆದ್ರೆ ನಿಯಮಿತವಾಗಿ ರಜನಿ ಆರೋಗ್ಯ ತಪಾಸಣೆ ಮಾಡಿಸಲು ಅಮೆರಿಕಾಗೆ ತೆರಳಿದ್ದು,ಕುಟುಂಬದ ಸಮೇತರಾಗಿ ಯುಎಸ್ನತ್ತ ಪಯಣ ಬೆಳೆಸಿದ್ದಾರೆ. ವಿಶ್ರಾಂತಿಯ ನಂತರ ಮತ್ತೆ ಭಾರತಕ್ಕೆ ಬರುತ್ತಾರೆ ಅಂತ ರಜನಿಕಾಂತ್ ಆಪ್ತ ವಲಯದಿಂದ ತಿಳಿದು ಬಂದಿದೆ.

10. ಕೋಕಾ-ಕೋಲಾ ಬೇಡ, ನೀರು ಕುಡಿಯಿರಿ
ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಸುದ್ದಿಗೋಷ್ಠಿಯಲ್ಲಿ ಕೋಕ್ ಬಾಟಲಿಗಳನ್ನು ದೂರ ಸರಿಸಿ ನೀರು ಕುಡಿಯಿರಿ ಎಂದು ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಹಂಗೇರಿ ವಿರುದ್ಧದ ಯುರೋ 2020 ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮೇಜಿನ ಮೇಲೆ ಕೊಕಾ-ಕೋಲಾ ಬಾಟಲಿಗಳನ್ನು ಇಟ್ಟಿದ್ದರು. ಇದನ್ನು ಕಂಡ ರೊನಾಲ್ಡೊ, ಬಾಟಲಿಗಳನ್ನು ದೂರ ಸರಿಸಿ ನಂತರ ನೀರಿನ ಬಾಟಲಿಗಳನ್ನು ಕೈಗೆತ್ತಿಕೊಂಡು ಎಲ್ಲರೂ ಕೋಲಾ ಬದಲಿಗೆ ನೀರು ಕುಡಿಯಿರಿ ಅಂತ ಹೇಳಿದ್ದಾರೆ. ಈ ಮುಂಚೆ ಕ್ರಿಸ್ಟಿಯಾನೋ ರೊನಾಲ್ಡೋ ಕೋಕಾ ಕೋಲಾ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಅವರೇ ಈ ರೀತಿ ಹೇಳಿರುವ ವಿಡಿಯೋ ಚರ್ಚೆಗೆ ಕಾರಣವಾಗಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link