1. ಬಿಬಿಎಂಪಿ ಚುನಾವಣೆ 6 ತಿಂಗಳು ಮುಂದೂಡಿಕೆ

ಕೊರೊನಾ ಹಿನ್ನೆಲೆ ಬಿಬಿಎಂಪಿಯ ಚುನಾವಣೆಯನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆಗಳನ್ನ ಕೊರೊನಾ ಇರುವ ಕಾರಣ ಮುಂದೂಡಿಕೆ ಮಾಡಲಾಗಿದೆ. ಅಲ್ಲದೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯನ್ನು ಮುಂದೆ ಹಾಕಲಾಗಿದೆ ಅಂತ ರಾಜ್ಯ ಸರ್ಕಾರ ತಿಳಿಸಿದೆ. ಸಚಿವ ಸಂಪುಟ ತೀರ್ಮಾನದಂತೆ 6 ತಿಂಗಳ ಅವಧಿಗೆ ಮುಂದೂಡಲಾಗಿದೆ ಅಂತ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2. ಬೆಡ್​ ಬ್ಲಾಕಿಂಗ್​ ತನಿಖಾ ವರದಿ ಕೋರ್ಟ್​ಗೆ ಸಲ್ಲಿಕೆ

ಕೊರೊನಾ ವೇಳೆ ಬೆಡ್​ ಬ್ಲಾಕಿಂಗ್​ ಹಗರಣದ ಪ್ರಕರಣಗಳ ತನಿಖೆ ಮಾಡುತ್ತಿರುವ ಸಿಸಿಬಿ ತನಿಖಾ ಪ್ರಗತಿ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಸಿದೆ. ಮೂರು ಎಫ್​ಐಆರ್​ಗಳ ಅಡಿಯಲ್ಲಿ ತನಿಖೆ ನಡೆಯುತ್ತಿದ್ದು, ಹೆಚ್​ಎಸ್​ಆರ್​ ಲೇಔಟ್​, ಜಯನಗರ ಮತ್ತು ಸಿಸಿಬಿ ಎಫ್​ಐಆರ್​ಗಳ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಲಾಗಿದೆ ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​​ ತಿಳಿಸಿದ್ದಾರೆ. ಎರಡು ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಮತ್ತೊಂದು ಪ್ರಕರಣದಲ್ಲಿ ಚಾರ್ಜ್​ಶೀಟ್​ ಹಾಕಲಾಗಿದೆ. ಈ ತನಿಖಾ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಸಿದ್ದು, ಕೋರ್ಟ್​ ವರದಿಯನ್ನು ದಾಖಲಿಸಿಕೊಂಡಿದೆ.

3. ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ – ಎಣ್ಣೆಪ್ರಿಯರ ಮೀಟಿಂಗ್​

ಲಾಕ್​​ಡೌನ್ ಹಿನ್ನೆಲೆಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದರ ವಿರುದ್ಧ ಕೊಪ್ಪಳದಲ್ಲಿ ಮದ್ಯಪ್ರಿಯರು ತಿರುಗಿಬಿದ್ದಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ 30 ರೂಪಾಯಿಗೆ ಮಾರಾಟವಾಗ್ತಿದ್ದ ಮದ್ಯ ಈಗ 100 ರೂಪಾಯಿಗೆ ಮಾರುತ್ತಿರುವುದನ್ನು ಖಂಡಿಸಿ ಮದ್ಯಪ್ರಿಯರು ಸಭೆ ನಡೆಸಲು ನಿರ್ಧರಿಸಿದ್ದಾರೆ. ದುಪ್ಪಟ್ಟು ದರದ ವಿರುದ್ಧ ದನಿ ಎತ್ತಲು ಎಣ್ಣೆ ಪ್ರಿಯರು ಸಭೆಗೆ ಬರುವಂತೆ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. 100 ರೂಪಾಯಿಗೆ ಮಾರುತ್ತಿರುವುದನ್ನು ಗರಿಷ್ಠ 50 ರೂಪಾಯಿಗೆ ಮಾರಬೇಕು. ಇಲ್ಲವಾದಲ್ಲಿ ಬಡವರನ್ನು ಲೂಟಿ ಮಾಡುತ್ತಿರುವ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮದ್ಯಪ್ರಿಯರು ಒತ್ತಾಯಿಸಿದ್ದಾರೆ.

4. ಮಾಸ್ಕ್​ನಿಂದ ತಯಾರಾಯ್ತು ಇಟ್ಟಿಗೆ

ಉಡುಪಿಯಲ್ಲಿ ಪರಿಸರ ಪ್ರೇವಿಯೊಬ್ಬರು ಎಸೆದ ಮಾಸ್ಕ್​ಗಳಿಂದಲೇ ಇಟ್ಟಿಗೆ ತಯಾರಿಸಿದ್ದಾರೆ. ಕಾರ್ಕಳದ ರಮಿತಾ ಶೈಲೇಂದ್ರ, ಬಳಸಿ ಬೀಸಾಡಿದ ಮಾಸ್ಕ್​ಗಳಿಂದ ಇಟ್ಟಿಗೆ ತಯಾರಿಸಿದ್ದಾರೆ. ಜನರು ಮಾಸ್ಕ್​ಗಳನ್ನು ಎಲ್ಲೆಂದರಲ್ಲಿ ಬಿಸಾಡಿ, ಪರಿಸರದ ಅಂದ ಚಂದ ಹಾಳು ಮಾಡುತ್ತಿದ್ದರು ಹೀಗಾಗಿ ರಮಿಕಾ ಶೈಲೇಂದ್ರ ಹೊಸ ಪ್ರಯತ್ನ ಮಾಡಿ ಇಟ್ಟಿಗೆ ತಯಾರು ಮಾಡಿದ್ದಾರೆ. ಅಲ್ಲದೆ ರಮಿಕಾ ಶೈಲೇಂದ್ರ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಲಾಕ್​​ಡೌನ್ ಸಮಯದಲ್ಲಿ ಅನೇಕ ಬಡವರಿಗೂ ಕಿಟ್ ವಿತರಣೆ ಮಾಡಿದ್ದಾರೆ.

5. 12 ಗಡಿ ರಸ್ತೆಗಳನ್ನು ಉದ್ಘಾಟಿಸಿದ ರಕ್ಷಣಾ ಸಚಿವ

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ 12 ಗಡಿ ರಸ್ತೆಗಳನ್ನ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ನಂತರ ಮಾತನಾಡಿದ ಸಚಿವ ರಾಜನಾಥ್​ ಸಿಂಗ್​, ಅರುಣಾಚಲ ಪ್ರದೇಶ ಮತ್ತು ಲಡಾಕ್​ ಗಡಿಗಳಲ್ಲಿ ರಸ್ತೆಯ ಮೂಲಸೌಕರ್ಯ ಒದಗಿಸುವುದು ಅತ್ಯವಶ್ಯಕವಾಗಿದೆ ಅಂತ ತಿಳಿಸಿದ್ರು. ಗಡಿ ಭಾಗದಲ್ಲಿ ರಸ್ತೆಗಳ ನಿರ್ಮಾಣದಿಂದ ಸಾಮಾಜಿಕ ಮತ್ತು ಆರ್ಥಿಕ ಮಹತ್ವವನ್ನು ಹೊಂದಿದ್ದು, ಈ ಗಡಿ ರಸ್ತೆಗಳ ಉದ್ಘಾಟನೆಯಿಂದ ನಮ್ಮ ಸೇನೆಗೆ ಬೇಕಾದ ಉಪಕರಣಗಳನ್ನ ಸಾಗಿಸಲು ಹಾಗೂ ಸೇನೆಯ ಸಿಬ್ಬಂದಿ ಸಂಚರಿಸಲು ಉಪಯುಕ್ತವಾಗುತ್ತದೆ ಅಂತ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದಾರೆ.

6. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ

ವೈದ್ಯರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಇಂದು ಭಾರತೀಯ ವೈದ್ಯಕೀಯ ಸಂಘ ದೇಶವ್ಯಾಪಿ ಪ್ರತಿಭಟನೆ ನಡೆಸಲಿದೆ. ಕೊರೊನಾ ಸಂಕಷ್ಟದ ಸಮಯಲ್ಲಿ ಜನರ ಸೇವೆಗೆ ನಿಂತ ವೈದ್ಯರ ಮೇಲೆ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಹಲ್ಲೆ ಖಂಡಿಸಿ ಇಂದು ಭಾರತೀಯ ವೈದ್ಯಕೀಯ ಸಂಘ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ರಕ್ಷಕರನ್ನು ರಕ್ಷಿಸಿ ಎಂಬ ಘೋಷ ವಾಕ್ಯದಡಿಯಲ್ಲಿ ಪ್ರತಿಭಟನೆ ನಡೆಯಲಿದೆ. ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಭಾರತೀಯ ವೈದ್ಯಕೀಯ ಸಂಘ ಕಪ್ಪು ಬ್ಯಾಡ್ಜ್, ಕಪ್ಪು ಮಾಸ್ಕ್, ಕಪ್ಪು ರಿಬ್ಬನ್ ಧರಿಸಿ ಪ್ರತಿಭಟಿಸುವಂತೆ ಸೂಚಿಸಿದೆ. ಐಎಂಎ ಪ್ರತಿಭಟನೆಗೆ ಕರ್ನಾಟಕ ವೈದ್ಯರ ಸಂಘ ಬೆಂಬಲ ಸೂಚಿಸಿದೆ.

7. ಯೋಗ ಗುರು ಬಾಬಾ ರಾಮ್‌ದೇವ್ ವಿರುದ್ಧ ಎಫ್​​ಐಆರ್​

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಯೋಗ ಗುರು ಬಾಬಾ ರಾಮ್‌ದೇವ್ ವಿರುದ್ಧ FIR ದಾಖಲಿಸಲಾಗಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​ನ ಚತ್ತೀಸ್‌ಘರ್​ನ ವಿಭಾಗದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಬಾಬಾ ರಾಮ್‌ದೇವ್ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದ್ದು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡಿದ್ದಾರೆ. ಅಲ್ಲದೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಆಡಳಿತಾತ್ಮಕ ಆದೇಶಗಳನ್ನು ಧಿಕ್ಕರಿಸಲಾಗಿದೆ ಎನ್ನಲಾಗಿದೆ. ರಾಯ್‌ಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಆರ್.ಕೆ.ಮಿಶ್ರಾ ಅವರು ಎಫ್‌ಐಆರ್ ದಾಖಲಿಸಿದ್ದಾರೆ.

8. ಭಾರತಕ್ಕೆ ಎಂಟ್ರಿ ಕೊಟ್ಟ ಬ್ಯಾಟಲ್​ಗ್ರೌಂಡ್ಸ್​ ​ಗೇಮ್​​

ಭಾರತ ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿದ್ದ ಪಬ್​ ಜೀ ಗೇಮ್​ ಈಗ ಬ್ಯಾಟಲ್​ ಗ್ರೌಂಡ್ಸ್​ ಮೊಬೈಲ್​ ಇಂಡಿಯಾ ಹೆಸರಲ್ಲಿ ಮತ್ತೆ ಲಭ್ಯವಾಗಿದೆ. ಸೌತ್​ ಕೊರಿಯಾ ಮೂಲದ ಗೇಮಿಂಗ್​ ಡೆವಲಪರ್​ ಕಂಪನಿಯಾದ ಕ್ರಾಫ್ಟಾನ್​, ಈ ಹೊಸ ರೂಪದ ಪಬ್​ ಜೀ ಗೇಮ್​ ಅನ್ನು ತಯಾರಿಸಿದ್ದು, ನಿನ್ನೆಯಿಂದ ಭಾರತದ ಮೊಬೈಲ್​ಗಳಲ್ಲಿ ಲಭ್ಯವಾಗಿದೆ. ಗ್ರಾಹಕರನ್ನು ಸೆಳೆಯಲು, ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಆರಂಭಿಕ ಬಳಕೆಗೆ ಅವಕಾಶ ನೀಡಿದ್ದು, ಫೈನಲ್​ ವರ್ಷನ್​ನಲ್ಲಿ ಸಿಗುವ ಗೇಮ್​ ಅನ್ನು ಇದೇ ತಿಂಗಳಲ್ಲಿ ಲಾಂಚ್​ ಮಾಡಲಾಗುವುದು ಅಂತ ಕ್ರಾಫ್ಟಾನ್​ ಕಂಪನಿ ಮಾಹಿತಿ ನೀಡಿದೆ.

9. ನಿರ್ಮಾಪಕಿಯಾದ ನಟಿ ಆಲಿಯಾ ಭಟ್​

ಬಾಲಿವುಡ್​ ನಟಿ ಅಲಿಯಾ ಭಟ್ ಎಟರ್ನಲ್​ ಸನ್​ಶೈನ್​ ಪ್ರೊಡಕ್ಷನ್​ ಎಂಬ ಪ್ರೊಡಕ್ಷನ್​ ಹೌಸ್ ಅನ್ನು ಶುರು ಮಾಡಿದ್ದಾರೆ. ಈ ಬಗ್ಗೆ ಅಲಿಯಾ ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ ಮಾಡಿದ್ದಾರೆ. ಡಾರ್ಲಿಂಗ್ಸ್​ ಚಿತ್ರವನ್ನು ತಮ್ಮದೇ ಬ್ಯಾನರ್​ನಲ್ಲಿ ನಿರ್ಮಾಣ ಮಾಡ್ತಾ ಇದ್ದೇವೆ ಅಂತ ತಿಳಿಸಿದ್ದಾರೆ. ಇದಷ್ಟೇ ಅಲ್ಲದೇ ತಮ್ಮ ಪ್ರೊಡಕ್ಷನ್​ ಹೌಸ್​ನ ಲೋಗೋವನ್ನು ನಟಿ ಅಲಿಯಾ ಲಾಂಚ್​ ಮಾಡಿದ್ದಾರೆ. ಇನ್ಮುಂದೆ ಬಾಲಿವುಡ್​ನಲ್ಲಿ ಅಲಿಯಾ ನಿರ್ಮಾಪಕಿಯಾಗಿ ಬ್ಯುಸಿಯಾಗಲಿದ್ದಾರೆ.

10. ಟೆಸ್ಟ್​ ಚಾಂಪಿಯನ್​ಶಿಪ್​​​ ಫೈನಲ್​ಗೆ ಕ್ಷಣಗಣನೆ

ಟೆಸ್ಟ್​​ ಕ್ರಿಕೆಟ್ ಆರಂಭವಾಗಿ 144 ವರ್ಷಗಳಾದ ಬಳಿಕ, ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಇಂದು ಆರಂಭಗೊಳ್ಳಲಿದೆ. ಟೆಸ್ಟ್​ ಚಾಂಪಿಯನ್ ಪಟ್ಟಕ್ಕಾಗಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಗಳು ಸೆಣಸಲಿವೆ. 2019ರ ಜುಲೈಯಿಂದ ಆರಂಭಗೊಂಡು ಎರಡು ವರ್ಷಗಳ ಅವಧಿಯಲ್ಲಿ ಪಂದ್ಯಾವಳಿ ನಡೆದಿದೆ. ಈ ಪಂದ್ಯಾವಳಿಯಲ್ಲಿ 9 ತಂಡಗಳು 71 ಪಂದ್ಯಗಳನ್ನು ಆಡಿವೆ. ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡ ಫೈನಲ್​ಗೆ ಬಂದಿದ್ದು, ಫೈನಲ್‌ನಲ್ಲಿ ಗೆದ್ದ ತಂಡಕ್ಕೆ 1.6 ಮಿಲಿಯ ಡಾಲರ್ ನಗದು ಬಹುಮಾನ ಕೂಡ ನೀಡಲಾಗುತ್ತದೆ. ಸೋತ ತಂಡಕ್ಕೆ ಇದರ ಅರ್ಧದಷ್ಟು ಮೊತ್ತ ಸಿಗಲಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link