1. ರಾಜ್ಯದಲ್ಲಿ ಅನ್ಲಾಕ್ 2.0 ಆರಂಭ
ರಾಜ್ಯದಲ್ಲಿ ಇಂದಿನಿಂದ ಅನ್ಲಾಕ್-2 ಜಾರಿಯಾಗ್ತಿದೆ. ಶೇ.5% ಗಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ 16 ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸದ್ಯ ಜಾರಿಯಲ್ಲಿರೋ ನಿಯಮಗಳು ಕಂಟಿನ್ಯೂ ಆಗ್ತಿದ್ದು, ರಾಜ್ಯಾದ್ಯಂತ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂವನ್ನು ವಿಸ್ತರಿಸಲಾಗಿದೆ. ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಎ.ಸಿ. ಇಲ್ಲದೆ ಹೋಟೆಲ್‌, ಕ್ಲಬ್ಸ್‌, ರೆಸ್ಟೋರೆಂಟ್‌ನಲ್ಲಿ ಕುಳಿತು ತಿನ್ನಲು ಅವಕಾಶ ಕೊಡಲಾಗಿದೆ.

2. ಮೆಟ್ರೋ, ಬಸ್ ಸಂಚಾರ ಪುನರಾರಂಭ
ಇಂದಿನಿಂದ ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸಂಚಾರ ಪ್ರಾರಂಭವಾಗಿದೆ. ಎರಡನೇ ಹಂತದ ಅನ್ಲಾಕ್ನಲ್ಲಿ ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಇನ್ನು ಮೈಸೂರು ಹಾಗೂ ದಕ್ಷಿಣ ಕನ್ನಡ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಜೊತೆಗೆ ಇಂದಿನಿಂದ ಮೆಟ್ರೋ ಸಂಚಾರ ಸಹ ಪುನರಾರಂಭವಾಗಿದೆ. ಮೆಟ್ರೋ ಕಾರ್ಡ್ ಇದ್ದವರಿಗೆ ಮಾತ್ರ ಮೆಟ್ರೋದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ

3. ಬೃಹತ್ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು 7 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಲಸಿಕಾ ಮೇಳಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಾಂಕೇತಿಕವಾಗಿ ಚಾಲನೆ ನೀಡಲಿದ್ದು, ರಾಜ್ಯದ ಬಳಿ ಸದ್ಯ 14 ಲಕ್ಷ ಕೋವಿಶೀಲ್ಡ್ ಲಸಿಕೆಗಳ ದಾಸ್ತಾನಿದೆ ಅಂತ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಇಂದು ಒಂದೇ ದಿನ 5 ರಿಂದ 7 ಲಕ್ಷ ಲಸಿಕೆಯನ್ನು ರಾಜ್ಯಾದ್ಯಂತ ನೀಡಬೇಕು ಅಂತ ಸರ್ಕಾರ ತಿಳಿಸಿದೆ.

4. ‘ಮೇಕೆದಾಟು ಜಲಾಶಯ ನಿರ್ಮಾಣ ತಡೆಗೆ ಷಡ್ಯಂತ್ರ’
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಬಾರದು ಅಂತ ಕೇಂದ್ರಕ್ಕೆ ತಮಿಳುನಾಡಿನ ಮಾಜಿ ಸಿಎಂ ಕೆ.ಪಳನಿಸ್ವಾಮಿ ಒತ್ತಾಯಿಸಿದ್ದಾರೆ ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಟ್ವೀಟ್ ಮಾಡುವ ಮೂಲಕ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ತಂದು ನನ್ನ ಸರ್ಕಾರ ಧೈರ್ಯ ಪ್ರದರ್ಶಿಸಿತ್ತು. ಪರಿಸರ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಅನುಮತಿ ಸಿಕ್ಕಿಲ್ಲ. ಇತ್ತ, ಯೋಜನೆ ವಿರುದ್ಧ ಅರ್ಜಿಗಳು ಸಲ್ಲಿಕೆಯಾಗುತ್ತಾ ಬಂದಿದೆ. ಇದೆಲ್ಲವನ್ನು ಗಮನಿಸಿದ್ರೆ ಯೋಜನೆ ತಡೆಯಲು ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಷಡ್ಯಂತ್ರ ಹೆಣೆದಿದೆ ಎಂಬ ಅನುಮಾನ ವ್ಯಕ್ತವಾಗ್ತಿದೆ ಅಂತ ತಿಳಿಸಿದ್ದಾರೆ.

5. ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ಮಾತು
ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6.30ಕ್ಕೆ ವರ್ಚುವಲ್ ಮೂಲಕ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ರು. ಯೋಗ ದಿನಾಚರಣೆಯ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ಕೊರೊನಾ ಕಾರಣದಿಂದ ಬೃಹತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗ್ತಿಲ್ಲ. ಕೊರೊನಾ ಇದ್ರೂ ಯೋಗ ಮಾಡೋಕೆ ನಮ್ಮ ಉತ್ಸಾಹ ಕಡಿಮೆಯಾಗಿಲ್ಲ ಅಂತ ತಿಳಿಸಿದ್ರು. ಜೊತೆಗೆ ಯೋಗ ಮಾಡುವುದರಿಂದ ಏನೆಲ್ಲಾ ಲಾಭವಿದೆ ಅಂತ ಹೇಳಿದ್ದು, ಈ ವೇಳೆ ತಿರುವಳ್ಳುವರ್ ಅವರ ಮಾತನ್ನು ನೆನೆಪಿಸಿಕೊಂಡರು. ಯೋಗದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ವಾಸ್ತ್ಯ ಕಾಪಾಡಿಕೊಳ್ಳಬಹುದು ಅಂತ ತಿಳಿಸಿದ್ರು. ಉತ್ತಮ ಆರೋಗ್ಯಕ್ಕೆ ಯೋಗವೇ ಮೂಲಮಂತ್ರ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು.

6. ಯೋಗ ಕಲಿಕೆಗೆ ದೆಹಲಿ ಸರ್ಕಾರದಿಂದ ಡಿಪ್ಲೋಮಾ ಕೋರ್ಸ್
ಇಂದು ದೇಶಾದ್ಯಂತ ಯೋಗ ದಿನಾಚರಣೆಯ ಹಿನ್ನೆಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಯೋಗವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಧ್ಯಾನ ಮತ್ತು ಯೋಗ ವಿಜ್ಞಾನದ ಹೆಸರಿನಲ್ಲಿ ಅರವಿಂದ್ ಕೇಜ್ರಿವಾಲ್ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಘೋಷಿಸಿದ್ದು, ಈಗಾಗಲೇ 450 ಅಭ್ಯರ್ಥಿಗಳು ಇದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ದೆಹಲಿಯ ವಿವಿಧ ಭಾಗಗಳಲ್ಲಿ ಇವರೆಲ್ಲಾ ಉಚಿತ ಯೋಗಾಭ್ಯಾಸ ಕಲಿಸಲಿದ್ದಾರೆ ಅಂತ ಟ್ವೀಟ್ ಮಾಡಿ ಹೇಳಿದ್ದಾರೆ. ಜೊತೆಗೆ ಯೋಗ ಕಲಿಯಬೇಕು ಅಂತ ಬರುವ ಜನರಿಗೆ ಸರ್ಕಾರದಿಂದಲೇ ಉಚಿತ ತರಬೇತುದಾರರನ್ನು ನೀಡ್ತೇವೆ ಅಂತ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

7. ‘ಕಣಿವೆ ನಾಡಿಗೆ ರಾಜ್ಯದ ಸ್ಥಾನಮಾನ ನೀಡಿ’
ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಿ, ಬಳಿಕ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣ್ದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ. ಜೂನ್ 24ಕ್ಕೆ ಪ್ರಧಾನಿ ನರೇಂದ್ರ ಮೋದಿ ಜಮ್ಮು–ಕಾಶ್ಮೀರದ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಲು ಮುಂದಾಗಿರುವ ಬೆನ್ನಲ್ಲೇ ಕಾಂಗ್ರೆಸ್ನಿಂದ ಈ ಆಗ್ರಹ ವ್ಯಕ್ತವಾಗಿದೆ. ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಿ, ಪ್ರಜಾಪ್ರಭುತ್ವ ಹಕ್ಕುಗಳ ಸಂಪೂರ್ಣ ಮರು ಸ್ಥಾಪನೆ ಮಾಡಬೇಕು ಅಂತ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

8. ನೇಪಾಳ ಪ್ರವಾಹದಲ್ಲಿ ಈವರೆಗೂ 18 ಮಂದಿ ಸಾವು
ನೇಪಾಳದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಪ್ರವಾಹದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ 21 ಜನರು ನಾಪತ್ತೆಯಾಗಿದ್ದಾರೆ ಅಂತ ನೇಪಾಳದ ಪೊಲೀಸರು ತಿಳಿಸಿದ್ದಾರೆ. ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಕಾರ್ಯಚರಣೆ ಮುಂದುವರೆದಿದೆ. ಕಠ್ಮಂಡುವಿನಿಂದ ಪೂರ್ವಕ್ಕೆ 30 ಕಿಲೋಮೀಟರ್ ದೂರದಲ್ಲಿರುವ ಸಿಂಧುಪಾಲ್ ಚೌಕ್ ಜಿಲ್ಲೆಯಲ್ಲಿ ನಾಲ್ವರು ಹಾಗೂ ದೋತಿಯಲ್ಲಿ ಮೂವರು ಮೃತಪಟ್ಟಿದ್ರೆ, ಸಪ್ತಾರಿ, ಕಾವ್ರೆ, ಗೂರ್ಖಾ, ಕಾಸ್ಕಿ, ಅರ್ಘಾಚಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

9. ‘ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ’
ಭಾರತೀಯ ಅಥ್ಲೀಟ್ ದಿವಂಗತ ಮಿಲ್ಖಾ ಸಿಂಗ್​ರನ್ನ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನೆನಪಿಸಿಕೊಂಡಿದ್ದಾರೆ. ಮಿಲ್ಖಾ ಸಿಂಗ್​ ಅವರ ಆತ್ಮಕಥೆ ದಿ ರೇಸ್ ಆಫ್ ಮೈ ಲೈಫ್ ಪುಸ್ತಕದಲ್ಲಿನ ಕೊನೆಯ ಪುಟವನ್ನ ಅಮಿತಾಭ್ ಹಂಚಿಕೊಂಡಿದ್ದಾರೆ. ಇದರಲ್ಲಿ, ಕ್ರೀಡಾಪಟುವಾಗಿ ಜೀವನ ಕಠಿಣವಾಗಿದೆ, ಆದ್ರೆ ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ ಅಂತ ಮಿಲ್ಖಾ ಸಿಂಗ್ ಹೇಳಿರುವ ಮಾತು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಅಂತ ಬಿಗ್ ಬಿ ಹೇಳಿದ್ದಾರೆ. ಈ ಮೂಲಕ ಎಲ್ಲರಿಗೂ ಕಷ್ಟಪಟ್ಟು ದುಡಿಯಿರಿ ಅನ್ನೋ ಸಂದೇಶ ನೀಡಿದ್ದಾರೆ ಅಂತ ಬಿಗ್ ಬಿ ಮಿಲ್ಖಾ ಸಿಂಗ್​​ರನ್ನ ಸ್ಮರಿಸಿದ್ದಾರೆ.

10. ಕುಣಿಯುವ ಜೋಶ್​​ನಲ್ಲಿ ವರನನ್ನೇ ಕೆಳಗೆ ಬೀಳಿಸಿದ್ರು
ಮದುವೆ ಮನೆ ಎಂದ್ರೆ ಸಂಭ್ರಮದ ಆಗರ. ಇನ್ನು ಮದುವೆ ಸಮಾರಂಭದಲ್ಲಿ ಮದುಮಗನನ್ನು ಹೆಗಲ ಮೇಲೆ ಹೊತ್ತು ಕುಣಿಯುವುದು ಹಲವಾರು ಕಡೆ ವಾಡಿಕೆ. ಆದ್ರೆ ಜೋಶ್​ನಲ್ಲಿ ವರನನ್ನು ಎತ್ತಿಕೊಂಡು ಕುಣಿಯುತ್ತಿದ್ದ ಯುವಕ, ಆತನನ್ನು ಕೆಳಗೆ ಬೀಳಿಸಿರುವ ದೃಶ್ಯ ನೆಟ್ಟಿಗರನ್ನ ನಗೆಗಡಲಲ್ಲಿ ತೇಲಿಸಿದೆ. ವರನನ್ನು ದಿಬ್ಬಣದ ಮೇಲೆ ಕೂರಿಸಿ ಮದುವೆ ಮನೆಗೆ ಕರೆತರುವ ಯುವಕರ ಪೈಕಿ, ಒಬ್ಬ ಯುವಕ ವರನನ್ನ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಜೋಶ್​​ನಿಂದ ಕುಣಿಯಲಾರಂಭಿಸ್ತಾನೆ. ಆದ್ರೆ ಬ್ಯಾಲೆನ್ಸ್ ಮಾಡಲು ಆಗದೇ ವರನ ಸಮೇತ ತಾನು ಕೆಳಗೆ ಕುಸಿದು ಬೀಳುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link