1. ‘ವೆಲ್ ಡನ್ ಇಂಡಿಯಾ’ ಎಂದ ಮೋದಿ
ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ನಿನ್ನೆ ದಾಖಲೆ ಬರೆದಿದ್ದು, ಬರೋಬ್ಬರಿ 80 ಲಕ್ಷದ 95 ಸಾವಿರದ 314 ಮಂದಿಗೆ ವ್ಯಾಕ್ಸಿನೇಷನ್‌ ಆಗಿದೆ. ಈ ಪೈಕಿ ಮಧ್ಯಪ್ರದೇಶ ಮೊದಲನೇ ಸ್ಥಾನದಲ್ಲಿದ್ದು, 15 ಲಕ್ಷದ 42 ಸಾವಿರದ 632 ಜನರಿಗೆ ವ್ಯಾಕ್ಸಿನ್‌ ನೀಡಲಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಇಂದಿನ ಲಸಿಕೆ ಅಭಿಯಾನದ ಸಂಖ್ಯೆ ದಾಖಲೆಗಳನ್ನ ಮುರಿದಿರುವುದು ಸಂತಸ ತಂದಿದೆ. ಕೋವಿಡ್ 19 ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ. ಲಸಿಕೆ ಪಡೆದ ಎಲ್ಲಾ ಜನರಿಗೂ ಹಾಗೂ ಹಲವು ನಾಗರಿಕರಿಗೆ ಲಸಿಕೆ ನೀಡುತ್ತಿರುವ ಫ್ರಂಟ್ ಲೈನ್‌ ವಾರಿಯರ್ಸ್‌ಗಳಿಗೆ ಅಭಿನಂದನೆಗಳು. ವೆಲ್ ಡನ್ ಇಂಡಿಯಾ ಅಂತ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

2. ಲಸಿಕೆ ನೀಡಿದ ನಗರಗಳಲ್ಲಿ ರಾಜ್ಯ ರಾಜಧಾನಿಗೆ ಅಗ್ರ ಸ್ಥಾನ
ದೇಶದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 80 ಲಕ್ಷದ 95 ಸಾವಿರದ 314 ಮಂದಿಗೆ ವ್ಯಾಕ್ಸಿನೇಷನ್‌ ಆಗಿದೆ. ಲಸಿಕೆ ನೀಡೋದ್ರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ನಿನ್ನೆ 10 ಲಕ್ಷದ 67 ಸಾವಿರದ 734 ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ. ಇನ್ನು ಲಸಿಕೆ ವಿತರಣೆಯಲ್ಲಿ ಬೆಂಗಳೂರು ದಾಖಲೆ ಬರೆದಿದೆ. ನಿನ್ನೆಯ ವ್ಯಾಕ್ಸಿನೇಷನ್ನಲ್ಲಿ ದೇಶದಲ್ಲೇ ಅತಿಹೆಚ್ಚು ಲಸಿಕೆ ನೀಡಿದ ನಗರಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ರಾಜ್ಯ ರಾಜಧಾನಿಯಲ್ಲಿ 2 ಲಕ್ಷದ 14 ಸಾವಿರದ 709 ಜನರಿಗೆ ವ್ಯಾಕ್ಸಿನ್‌ ನೀಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷದ 72 ಸಾವಿರದ 713 ಜನರಿಗೆ ಲಸಿಕೆ ನೀಡಲಾಗಿದೆ.

3. ಅಶ್ಲೀಲ ಮೆಸೇಜ್ ಮಾಡ್ತಿದ್ದವನಿಗೆ ಮಹಿಳೆ ಗೂಸಾ
ಫೇಸ್ಬುಕ್​​ನಲ್ಲಿ ಪರಿಚಯವಾಗಿದ್ದ ಯುವಕನಿಗೆ ಮಹಿಳೆಯೊಬ್ಬಳು ನಡುರಸ್ತೆಯಲ್ಲಿ ಥಳಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಆರೋಪಿ ಆಶ್ರಫ್ ಎಂಬಾತ ಮಹಿಳೆಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು, ನಂತರ ಭೇಟಿಯಾಗ್ಬೇಕು ಅಂತ ಕೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಆಕೆಗೆ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನ ಕಳಿಸಿದ್ದಾನೆ. ಇನ್ನು ಈತನಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿದ ಮಹಿಳೆ, ಮಡಿಕೇರಿ ಬಸ್ ನಿಲ್ದಾಣದ ಬಳಿ ಸಿಗುವಂತೆ ಹೇಳಿದ್ದಾಳೆ. ಆಕೆಯ ಮಾತಿನಂತೆ ಆರೋಪಿ ಆಶ್ರಫ್ ಬಸ್ ನಿಲ್ದಾಣದ ಬಳಿ ಬಂದಾಗ, ಸ್ಥಳದಲ್ಲೆ ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾಳೆ.

4. ಅಡುಗೆ ಮನೆಗೆ ನುಗ್ಗಿ ಆಹಾರ ಹುಡುಕಿದ ಒಂಟಿ ಸಲಗ
ಸಾಮಾನ್ಯವಾಗಿ ಕಾಡಾನೆಗಳು ನಾಡಿಗೆ ಬರೋದೇ ಅಪರೂಪ, ಅಂಥದ್ರಲ್ಲಿ ಇಲ್ಲೊಂದು ಕಾಡಾನೆ ನಾಡಿಗೆ ಬಂದಿದಲ್ಲದೆ ಮನೆಯ ಅಡುಗೆ ಮನೆಗೆ ನುಗ್ಗಿ ವಸ್ತುಗಳನೆಲ್ಲ ಚೆಲ್ಲಾ ಪಿಲ್ಲಿ ಮಾಡಿರುವ ಘಟನೆ ಥಾಯ್ಲೆಂಡ್​​ನ ಹುವಾಹಿನ್ನಲ್ಲಿ ನಡೆದಿದೆ. ಅಡುಗೆ ಮನೆಯ ಗೋಡೆಯನ್ನ ಸಂಪೂರ್ಣವಾಗಿ ಒಡೆದು ಹಾಕಿದ ಒಂಟಿ ಸಲಗ, ಸೊಂಡಿಲು ಒಳಗೆ ಹಾಕಿ ಅಲ್ಲಿನ ವಸ್ತುಗಳನ್ನ ಎತ್ತಿ ಹೊರಗೆ ಹಾಕಿದೆ. ಜೊತೆಗೆ ಆಹಾರಕ್ಕಾಗಿ ಹುಡುಕಾಟ ನಡೆಸಿ ಸಿಕ್ಕ ಆಹಾರವನ್ನ ತಿಂದು ಮುಗಿಸಿದೆ. ಈ ವಿಡಿಯೋವನ್ನ ಮನೆಯ ಮಾಲೀಕರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ

5. ಕೋವ್ಯಾಕ್ಸಿನ್ ಲಸಿಕೆ 3ನೇ ಹಂತದ ಟ್ರಯಲ್ ವರದಿ ಸಲ್ಲಿಕೆ
ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ ವರದಿಯನ್ನ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಸಲ್ಲಿಸಿದೆ. ಈ ಬಗ್ಗೆ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಭಾರತದಲ್ಲಿ ಒಟ್ಟು ಮೂರು ಲಸಿಕೆಗಳನ್ನ ನೀಡಲಾಗ್ತಿದ್ದು, ಅದ್ರಲ್ಲಿ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್ ಕೂಡ ಒಂದಾಗಿದೆ. ಈ ಹಿಂದೆ ಏಪ್ರಿಲ್​ನಲ್ಲಿ, ಕೊವ್ಯಾಕ್ಸಿನ್ ಲಸಿಕೆ ಮೊದಲನೇ ಮತ್ತು ಎರಡನೇ ಕ್ಲಿನಿಕಲ್ ಟ್ರಯಲ್ನಲ್ಲಿ ಶೇಕಡ 78ರಷ್ಟು ಪರಿಣಾಮಕಾರಿ ಅಂತ ವರದಿಯಾಗಿತ್ತು.

6. ಸಿಂಹಗಳಿಗೂ ವಕ್ಕರಿಸಿದ ಡೆಲ್ಟಾ ವೈರಸ್ ತಳಿ
ಕೊರೊನಾ ಸೋಂಕಿಗೆ ಕೇವಲ ಮಾನವರಷ್ಟೇ ಅಲ್ಲದೇ ಎರಡು ಸಿಂಹಗಳು ಜೀವ ಕಳೆದುಕೊಂಡಿದೆ. ಚೆನ್ನೈನ ಅರಿಗ್ನರ್ ಜೈನಿಕ ಉದ್ಯಾನವನದಲ್ಲಿ ಸೋಂಕು ತಗುಲಿ ಎರಡು ಸಿಂಹಗಳು ಮೃತಪಟ್ಟ ಬೆನ್ನಲ್ಲೇ ಮೃಗಾಲಯದ ಹಲವು ಸಿಂಹಗಳಿಗೂ ಸೋಂಕು ಹರಡಿರುವುದು ದೃಢಪಟ್ಟಿತ್ತು. ಈಗ ಮೃಗಾಯಲದ 4 ಸಿಂಹಗಳಲ್ಲಿ ಡೆಲ್ಟಾ ತಳಿ ಕಾಣಿಸಿಕೊಂಡಿದೆ ಅಂತ ಕೊರೊನಾ ಪರೀಕ್ಷೆ ಮಾಡುವ ವೇಳೆ ತಿಳಿದುಬಂದಿದೆ. ಉದ್ಯಾನವನದಲ್ಲಿ ಕಳೆದೊಂದು ವಾರದಿಂದ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುತ್ತಿದ್ರೂ, ಸೀಮಿತ ಚೌಕಟ್ಟಿನಲ್ಲಿ ಬಂಧಿಯಾಗಿದ್ದ ಸಿಂಹಗಳಿಗೆ ರೂಪಾಂತರಿ ತಳಿ ಹೇಗೆ ವಕ್ಕರಿಸಿದೆ ಎಂಬ ಅನುಮಾನದ ಜೊತೆಗೆ ಕಳವಳವೂ ಹೆಚ್ಚಾಗಿದೆ ಅಂತ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

7. ಶೀಘ್ರದಲ್ಲೇ ಲಸಿಕೆ ಸಾಗಿಸಲು ಡ್ರೋನ್ ಬಳಕೆ?
ದೇಶದಲ್ಲಿ ಶೀಘ್ರವೇ ಡ್ರೋನ್‌ಗಳನ್ನು ಬಳಕೆ ಮಾಡಿಕೊಂಡು ಕೊರೊನಾ ಲಸಿಕೆ ಸಾಗಿಸುವ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ. ಕೊರೊನಾ ಲಸಿಕೆಗಳನ್ನು ದೂರದ ಪ್ರದೇಶಗಳಿಗೆ ಅಥವಾ ಕುಗ್ರಾಮಗಳಿಗೆ ಅತಿ ವೇಗವಾಗಿ ತಲುಪಿಸಲು ಡ್ರೋನ್‌‌ಗಳ ಬಳಕೆ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ICMR ಸಹಯೋಗದೊಂದಿಗೆ ಅಧ್ಯಯನ ನಡೆಸಲಾಗಿದೆ. ಇದಕ್ಕೆ ಕೆಲವು ಮಾನದಂಡಗಳನ್ನು ಸೂಚಿಸಿದ್ದು, ಈ ಮಾನದಂಡಗಳ ಪಾಲನೆಯಾದ್ರೆ ಡ್ರೋನ್ಗಳ ಮೂಲಕ ಲಸಿಕೆ ಸಾಗಣೆ ಪ್ರಾರಂಭವಾಗುತ್ತದೆ.

8. ಹುಟ್ಟುಹಬ್ಬಕ್ಕೆ ‘ಬೀಸ್ಟ್’ ಗಿಫ್ಟ್ ನೀಡಿದ ದಳಪತಿ ವಿಜಯ್
ತಮಿಳಿನ ಸೂಪರ್ ಸ್ಟಾರ್ ವಿಜಯ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಅವರ ಅಭಿಮಾನಿಗಳಿಗೆ ದೊಡ್ಡ ಸಪ್ರೈಸ್ ಒಂದನ್ನ ನೀಡಿದ್ದು, ತಮ್ಮ ಮುಂದಿನ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಬೀಸ್ಟ್ ಎಂಬ ಸಿನಿಮಾದ ಮೂಲಕ ವಿಜಯ್ ಮತ್ತೆ ಅಭಿಮಾನಿಗಳನ್ನ ರಂಜಿಸಲಿದ್ದು, ಕೈಯಲ್ಲಿ ಗನ್ ಹಿಡಿದು ರಗಡ್ ಲುಕ್​ನಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಇದು ವಿಜಯ್ ಅವರ 65ನೇ ಸಿನಿಮಾ ಆಗಿದೆ.

9. ಒಲಿಂಪಿಕ್ಸ್​ಗೆ ಆಯ್ಕೆಯಾದ ಮೊದಲ ತೃತೀಯ ಲಿಂಗಿ
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ತೃತೀಯ ಲಿಂಗಿಯೊಬ್ಬರು ಭಾಗವಹಿಸಲು  ಅವಕಾಶ ಮಾಡಿಕೊಡಲಾಗಿದೆ. ನ್ಯೂಜಿಲೆಂಡ್​ನ 43 ವರ್ಷದ ವೇಟ್ಲಿಫ್ಟರ್ ಲಾರೆಲ್ ಹುಬ್ಬಾರ್ಡ್, ಮಹಿಳೆಯರ 87 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ವಿಶೇಷವೆಂದ್ರೆ ಲಾರೆಲ್ ಪುರುಷ ಕ್ರೀಡಾಪಟುವಾಗಿ ವೇಟ್ಲಿಫ್ಟ್ ವೃತ್ತಿಜೀವನಕ್ಕೆ ಕಾಲಿಟ್ಟಿದ್ದು, ತಮ್ಮ 35ನೇ ವಯಸ್ಸಿಗೆ ಲಿಂಗ ಬದಲಾವಣೆ ಮಾಡಿಕೊಂಡರು. ಈಗ ಮಹಿಳೆಯರ ವಿಭಾಗದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಹಾಗೂ ಐಒಸಿ ಸಮಿತಿ ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನ ಲಾರೆಲ್ ಯಶಸ್ವಿಯಾಗಿ ಮುಗಿಸಿದ್ದಾರೆ.

10. 4ನೇ ದಿನದ ಟೆಸ್ಟ್ ಪಂದ್ಯಕ್ಕೂ ಮಳೆ ಅಡ್ಡಿ
ಭಾರತ- ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟ ಮಳೆಯಿಂದ ಮತ್ತೆ ರದ್ದಾಗಿದೆ. 4 ನೇ ದಿನದಾಟವನ್ನು ಆರಂಭಿಸೋ ಮೊದಲೇ ವರುಣನ ಎಂಟ್ರಿಯಾಗಿದ್ದು, ಸೌತ್ ಹ್ಯಾಂಪ್ಟನ್ ಭಾಗದಲ್ಲಿ ಬಿಡದೇ ಮಳೆ ಸುರಿಯುತ್ತಿದೆ. ನಾಲ್ಕನೇ ದಿನದಾಟವನ್ನು ಸಂಪೂರ್ಣ ರದ್ದು ಮಾಡಲಾಗಿದ್ದು, ಮೊದಲ ದಿನದ ಪಂದ್ಯವೂ ಕೂಡ ಮಳೆಯ ಕಾರಣಕ್ಕೆ ರದ್ದಾಗಿತ್ತು. 2ನೇ ದಿನದಾಟ ಮಂದ ಬೆಳಕಿನ ಕಾರಣ ಬೇಗ ಮುಕ್ತಾಯವಾದ್ರೆ, 3ನೇ ದಿನವೂ ಮಳೆಯ ಕಾರಣಕ್ಕೆ ಅರ್ಧ ಗಂಟೆ ತಡವಾಗಿ ಆರಂಭವಾಯಿತು, ಆದ್ರೆ ಬ್ಯಾಡ್ ಲೈಟ್ ಇದ್ದ ಕಾರಣ ಬೇಗನೇ ಮುಕ್ತಾಯವಾಯ್ತು.
========

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link