1. ‘ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ’
ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೂ ಲಸಿಕೆ ಸಿಗುವ ನಿರೀಕ್ಷೆ ಇದೆ ಅಂತಾ ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. 2 ಮತ್ತು 3ನೇ ಹಂತದ ಪ್ರಯೋಗಗಳು ಪೂರ್ಣಗೊಂಡ ನಂತರ ಮಕ್ಕಳ ಮೇಲೆ ಕೋವ್ಯಾಕ್ಸಿನ್​ ಲಸಿಕೆ ಪರಿಣಾಮ ಗೊತ್ತಾಗಲಿದೆ. ಸೆಪ್ಟೆಂಬರ್​ ವೇಳೆಗೆ ಪ್ರಯೋಗದ ದತ್ತಾಂಶಗಳು ಲಭ್ಯವಾಗಲಿದ್ದು, ದತ್ತಾಂಶಗಳನ್ನು ಅಧರಿಸಿ ಲಸಿಕೆ ಬಳಕೆಗೆ ಅನುಮೋದನೆಯನ್ನು ನೀಡಲಾಗುತ್ತೆ ಎಂದಿದ್ದಾರೆ. ಇನ್ನು ಅಮೆರಿಕಾದ ಫೈಜರ್ ಲಸಿಕೆ ಬಳಕೆಗೆ ಭಾರತದಲ್ಲಿ ಅನುಮತಿ ಸಿಕ್ಕಿದ್ರೆ ಆ ಲಸಿಕೆಯನ್ನು ಮಕ್ಕಳಿಗೆ ನೀಡಬಹುದು ಅಂತಾ ಗುಲೇರಿಯಾ ತಿಳಿಸಿದ್ದಾರೆ.

2. ‘ರಾಜ್ಯಗಳಿಕೆ ಲಸಿಕೆ ಪೂರೈಕೆ ಬಾಕಿ ಉಳಿಸಿಕೊಂಡಿಲ್ಲ’
ರಾಜ್ಯಗಳಿಗೆ ಪೂರೈಸಬೇಕಾಗಿದ್ದ ನಿಗದಿತ ಪ್ರಮಾಣದ ಕೊರೊನಾ ಲಸಿಕೆಗಳನ್ನು ಜೂನ್ 21ರೊಳಗೆ ಸರಬರಾಜು ಮಾಡಲಾಗಿದ್ದು, ಯಾವುದೇ ಬಾಕಿ ಉಳಿದಿಲ್ಲ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 18 ವರ್ಷದಿಂದ 44 ವರ್ಷದೊಳಗಿನ ವಯಸ್ಸಿನವರಿಗೆ ಉಚಿತ ಲಸಿಕೆಗಳನ್ನು ಹಾಕಲು ದೆಹಲಿಗೆ ಕೇಂದ್ರ ಸರ್ಕಾರವು ಲಸಿಕೆ ಸರಬರಾಜು ಮಾಡಿಲ್ಲ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ, ಜೂನ್ 21ರೊಳಗೆ ಲಸಿಕೆ ತಯಾರಿಕಾ ಸಂಸ್ಥೆಗಳು ನೇರ ಖರೀದಿಯ ಮೂಲಕ ದೆಹಲಿಗೆ 5.6 ಲಕ್ಷ ಡೋಸ್‌ ಲಸಿಕೆಗಳನ್ನು ಪೂರೈಸಿವೆ ಎಂದು ಸ್ಪಷ್ಟಪಡಿಸಿದೆ.

3. 3ನೇ ಅಲೆ ಎದುರಿಸಲು ಕೇಂದ್ರಕ್ಕೆ ರಾಹುಲ್ ಸಲಹೆ
ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ರೆ ತಜ್ಞರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಈ ನಿಟ್ಟಿನಲ್ಲಿ ಕೊರೊನಾ 3ನೇ ಅಲೆ ಎದುರಿಸಲು ಕಾಂಗ್ರೆಸ್‌ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ. ಎಲ್ಲಿ ತಪ್ಪಾಗಿದೆಯೆಂಬುದನ್ನು ಅರ್ಥ ಮಾಡಿಕೊಳ್ಳುವುದು. ಇದಕ್ಕಾಗಿ ಒಂದು ಆಯೋಗವನ್ನ ರಚಿಸಿ ಸಮಸ್ಯೆಗಳ ಬಗ್ಗೆ ಅವರಿಂದ ಮಾಹಿತಿ ಪಡೆದು ಸರಿಪಡಿಸಿಕೊಳ್ಳುವುದು. ಆಕ್ಸಿಜನ್‌ನಂಥಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು. ಆರ್ಥಿಕ ನೆರವು ಪ್ಯಾಕೇಜ್ ಘೋಷಿಸುವುದು ಹೀಗೆ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಲಹೆಗಳನ್ನು ನೀಡಿದ್ದಾರೆ.

4. ಪ್ರವಾಸಿಗರಿಲ್ಲದೆ ವ್ಯಾಪಾರಿಗಳ ಬದುಕು ಅತಂತ್ರ
ಲಾಕ್​ಡೌನ್​ ಎಫೆಕ್ಟ್​ನಿಂದ ಪ್ರವಾಸಿಗರಿಲ್ಲದೆ ಮಡಿಕೇರಿಯ ಅಬ್ಬಿ ಫಾಲ್ಸ್​ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಅಬ್ಬಿ ಫಾಲ್ಸ್​ ನೋಡೋಕೆ ಜನಸಾಗರವೇ ಹರಿದುಬರುತ್ತಿತ್ತು. ಆದ್ರೆ, ಈ ಬಾರಿ ಕೋವಿಡ್​ ನಿರ್ಬಂಧಗಳಿಂದ ಪ್ರವಾಸಿಗರ ಭೇಟಿಗೆ ಬ್ರೇಕ್​ ಬಿದ್ದಿದೆ. ಇದರಿಂದಾಗಿ ಅಬ್ಬಿ ಫಾಲ್ಸ್​ ಅಕ್ಕಪಕ್ಕ ಅಂಗಡಿಗಳನ್ನ ತೆರಿದಿದ್ದ ವ್ಯಾಪಾರಸ್ಥರು ಪ್ರವಾಸಿಗರಿಲ್ಲದೇ ಕಂಗಾಲಾಗಿದ್ದಾರೆ. ಒಂದೂವರೆ ವರ್ಷದಿಂದ ಅಬ್ಬಿ ಫಾಲ್ಸ್ ಗೆ ಬೀಗ ಹಾಕಲಾಗಿದ್ದು, ಅಂಗಡಿಗಳನ್ನ ನಂಬಿ ಬದುಕುತ್ತಿದ್ದವರ ಪರಿಸ್ಥಿತಿ ಅತಂತ್ರವಾಗಿದೆ. ಹೀಗಾಗಿ, ಜ‌ನಪ್ರತಿನಿಧಿಗಳು ನಮ್ಮ ಕಡೆ ಗಮನ ಹರಿಸಿ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.

5. ಹಣದ ಜೊತೆ ಬೈಕ್​ ದೋಚಿ ಎಸ್ಕೇಪ್​ ಆದ ಕಳ್ಳ
ಲಾಕ್​ಡೌನ್​ ಮುಗಿಯುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿವೆ. ಗಿರಿನಗರ ಠಾಣಾ ವ್ಯಾಪ್ತಿಯ ದ್ವಾರಕಾನಗರದಲ್ಲಿ ಫುಡ್​ ಡೆಲಿವರಿ ಬಾಯ್​ ಬೈಕ್​ನಲ್ಲಿ ಕಲೆಕ್ಷನ್​ ಹಣ ಇಟ್ಟಿದ್ದನ್ನ ಗಮನಿಸಿದ್ದ ಕಳ್ಳನೊಬ್ಬ ಒಂದು ಲಕ್ಷ ಹಣ ಹಾಗೂ ಬೈಕ್​ ಸಮೇತ ಎಸ್ಕೇಪ್​ ಆಗಿದ್ದಾನೆ. ಸದ್ಯ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸ್ರು ಆರೋಪಿ ಪತ್ತೆಗಾಗಿ ಬಲೆಬೀಸಿದ್ದಾರೆ.

6. ಹೆಚ್ಚು ಮಕ್ಕಳನ್ನು ಹೆತ್ತವರಿಗೆ ₹1 ಲಕ್ಷ ಬಹುಮಾನ
ಯಾರು ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೋ ಅಥವಾ ಹೆರುತ್ತಾರೋ ಅಂತಹ ಕುಟುಂಬದ ಪೋಷಕರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಅಂತ ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೋಮಾವಿಯಾ ರಾಯಟ್ಟೆ ಅವರು ಘೋಷಿಸಿದ್ದಾರೆ. ತಾವು ಪ್ರತಿನಿಧಿಸುವ ಐಜ್ವಾಲ್ ಪೂರ್ವ ಮತ ಕ್ಷೇತ್ರದ ಜನರಿಗೆ ಈ ರೀತಿಯ ಸಂದೇಶವನ್ನು ನೀಡಿದ್ದಾರೆ. ಮಿಜೋರಾಂನಲ್ಲಿ ಮಿಜೋ ಬುಡಕಟ್ಟು ಜನಾಂಗದ ಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗುತ್ತಿದೆ. ಇವರ ಸಂಖ್ಯೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಂಡಿದ್ದೇನೆ. ಹಣ ವೈಯಕ್ತಿಕವಾಗಿ ನೀಡುತ್ತೇನೆ ಅಂತ ರಾಬರ್ಟ್‌ ಹೇಳಿದ್ದಾರೆ.

7. 2 ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರದ ಸೌಲಭ್ಯ ರದ್ದು?
ಎರಡಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯದಂತೆ ತಡೆಯುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಕಾನೂನು ಆಯೋಗವು ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಅದನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತೆ ಎನ್ನಲಾಗ್ತಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ರಾಜ್ಯದ ಸಂಪನ್ಮೂಲಗಳ ಮೇಲೆ ಪ್ರಭಾವ ಬೀರಿದೆ. ಜನಸಂಖ್ಯೆ ಹೆಚ್ಚಳವು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಕಾನೂನು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಆದಿತ್ಯ ನಾಥ್ ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.

8. 2024ರ ಲೋಕಸಭಾ ಚುನಾವಣೆಗೆ ವಿಪಕ್ಷಗಳ ಸಿದ್ಧತೆ
ಮುಂಬರುವ ಲೋಕಸಭಾ ಚುನಾವಣೆಗೆ ಕಮಲಪಾಳಯಕ್ಕೆ ಠಕ್ಕರ್​ ಕೊಡೋಕೆ ವಿಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿವೆ. ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ನೇತೃತ್ವದಲ್ಲಿ ಸುಮಾರು 8 ಪಕ್ಷಗಳ ನಾಯಕರ ಸಭೆ ನಡೆದಿದ್ದು, ಮೋದಿಯನ್ನ ಮಣಿಸಲು ಚಕ್ರವ್ಯೂಹ ಸಿದ್ಧಪಡಿಸೋ ಕೆಲಸ ನಡೆದಿದೆ. ಆದರೆ ಸಭೆಯಿಂದ ಕಾಂಗ್ರೆಸ್ ನಾಯಕರನ್ನ ದೂರವಿಡಲಾಗಿದೆ. ಸಭೆಯಲ್ಲಿ ಟಿಎಂಸಿ, ಆಮ್​ಆದ್ಮಿ ಸೇರಿ 8 ಪಕ್ಷಗಳು ಭಾಗಿಯಾಗಿದ್ದು, ನ್ಯಾಷನಲ್​ ಕಾನ್ಫರೆನ್ಸ್​ ನಾಯಕ ಓಮರ್​ ಅಬ್ದುಲ್ಲಾ, ಎನ್​ಸಿಪಿಯ ವಂದನಾ ಚೌಹಾಣ್​, ಆರ್​ಎಲ್​ಡಿಯ ಜಯಂತ್​ ಚೌಧರಿ, ಸಮಾಜವಾದಿ ಪಕ್ಷದ ಘನಶ್ಯಾಮ್​ ತಿವಾರಿ, ಎಎಪಿಯ ಸುಶೀಲ್​ ಗುಪ್ತಾ ಸೇರಿ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

9. ಉತ್ತರ ಕೊರಿಯಾಗೆ ಕಾಲಿಟ್ಟಿಲ್ವಂತೆ ಕೊರೊನಾ!
ನಮ್ಮ ದೇಶಕ್ಕೆ ಕೊರೊನಾ ಬಂದಿಲ್ಲ ಅಂತಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಉತ್ತರ ಕೊರಿಯಾದಲ್ಲಿ ಈವರೆಗೆ ಒಂದೇ ಒಂದು ಕೇಸ್ ಕೂಡ ಪತ್ತೆಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಗೆ ಉತ್ತರ ಕೊರಿಯಾ ನೀಡಿರುವ ಮಾಹಿತಿಯಲ್ಲಿ, ಈವರೆಗೆ 30 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಿದ್ರೂ ಒಂದೇ ಒಂದು ಕೇಸ್ ಪತ್ತೆಯಾಗಿಲ್ವಂತೆ! ಬರೋಬ್ಬರಿ ಹತ್ತಿರ ಹತ್ತಿರ 2.5 ಕೋಟಿಯಷ್ಟು ಜನಸಂಖ್ಯೆ ಇರುವ ಉ. ಕೊರಿಯಾದಲ್ಲಿ ಈವರೆಗೂ ಡೆಡ್ಲಿ ಕೊರೊನಾ ಸುಳಿವು ಸಿಕ್ಕಿಲ್ಲ ಎಂಬುದೇ ಹಾಸ್ಯಾಸ್ಪದ.

10. 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಆರಂಭಿಕ ಆಘಾತ
ಸೌತ್​ಹ್ಯಾಪ್ಟಂನ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ನ್ಯೂಜಿಲೆಂಡ್,​​​ 249 ರನ್​ ಗಳಿಗೆ ಆಲೌಟ್​ ಆಗಿದೆ. ಇದರೊಂದಿಗೆ ಪಂದ್ಯದಲ್ಲಿ ಕಿವೀಸ್ 32 ರನ್​​​ಗಳ ಮುನ್ನಡೆ ಕಾಯ್ದುಕೊಂಡಿದೆ. 2 ವಿಕೆಟ್​ ನಷ್ಟಕ್ಕೆ 101ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಕಿವೀಸ್​, ಭಾರತೀಯ ಬೌಲರ್​ಗಳ ಸಂಘಟಿತ ಹೋರಾಟದ ಮುಂದೆ ಮಂಕಾಯ್ತು. ಟೀಮ್​ ಇಂಡಿಯಾ ಪರ ಮೊಹಮದ್​ ಶಮಿ 4, ಇಶಾಂತ್​ 3, ಅಶ್ವಿನ್​ 2, ಜಡೇಜಾ 1 ವಿಕೆಟ್​ ಕಬಳಿಸಿದ್ರು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ರೋಹಿತ್‌ ಶರ್ಮಾ, ಶುಭ್‌ಮನ್ ಗಿಲ್‌ ವಿಕೆಟ್‌ ಕಳೆದುಕೊಂಡು 64 ರನ್ ಗಳಿಸಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link