1. ‘ಡೆಲ್ಟಾ ಪ್ಲಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ’
ದೇಶದಲ್ಲಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ಕೊರೊನಾ ರೂಪಾಂತರ ಪ್ರಕರಣಗಳು ಏಕಾಏಕಿ ಏರಿಕೆಯಾಗಿರುವುದು ಆತಂಕ ಸೃಷ್ಟಿಸಿದೆ. ಈ ಮಧ್ಯೆ ಡೆಲ್ಟಾ ಪ್ಲಸ್‌ನಿಂದ ಕೊರೊನಾ ಮೂರನೇ ಅಲೆಯ ಸಂಭವವಿಲ್ಲ. ಯಾಕಂದ್ರೆ, 2ನೇ ಅಲೆಯಲ್ಲೇ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದೆ ಅಂತ ಐಜಿಐಬಿ ನಿರ್ದೇಶಕ ಡಾ. ಅನುರಾಗ್ ಅಗರ್​​ವಾಲ್​​​ ಮಾಹಿತಿ ನೀಡಿದ್ದಾರೆ. ಡೆಲ್ಟಾ ಪ್ಲಸ್​​​​ ಬಗ್ಗೆ 3,500 ಸ್ಯಾಂಪಲ್​​ಗಳ ಪರೀಕ್ಷೆ ಮಾಡಲಾಗಿದೆ. ಏಪ್ರಿಲ್, ಮೇ ತಿಂಗಳ ಪರೀಕ್ಷೆಯಲ್ಲೇ ಡೆಲ್ಟಾ ಪ್ಲಸ್​​ ಪತ್ತೆಯಾಗಿದೆ. ಹೀಗಾಗಿ ಡೆಲ್ಟಾ ಪ್ಲಸ್​​​​ 3ನೇ ಅಲೆಯನ್ನು ಸೃಷ್ಟಿಸುತ್ತೆ ಅನ್ನೋದಕ್ಕೆ ಸಾಕ್ಷ್ಯವಿಲ್ಲ ಅಂತ ಅನುರಾಗ್ ಹೇಳಿದ್ದಾರೆ.

2. ‘ಡೆಲ್ಟಾಗೆ ಅಸ್ಟ್ರಾಜೆನಕಾ ಲಸಿಕೆ ಪರಿಣಾಮಕಾರಿ’
ಭಾರತದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ಹೊಸ ಮಾದರಿಯ ಡೆಲ್ಟಾ ವೈರಸ್‌ಗೆ ಅಸ್ಟ್ರಾಜೆನಕಾ/ಕೋವಿಶೀಲ್ಡ್​ ಲಸಿಕೆ ಪರಿಣಾಮಕಾರಿ ಎಂದು ಅಧ್ಯಯನವೊಂದು ತಿಳಿಸಿದೆ. ಕೆಲ ದಿನಗಳ ಹಿಂದಷ್ಟೇ ಡೆಲ್ಟಾ ವೈರಸ್​ ಬಹಳ ಗಂಭೀರವಾದದ್ದು ಅಂತಾ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕೋವಿಶೀಲ್ಡ್​ ಲಸಿಕೆ ಹಾಕಿಸಿಕೊಂಡ ಜನರ ರಕ್ತದಲ್ಲಿನ ಪ್ರತಿಕಾಯಗಳ ಸಾಮರ್ಥ್ಯದ ಕುರಿತು ಅಧ್ಯಯನ ನಡೆಸಿ ಈ ಅಭಿಪ್ರಾಯ ನೀಡಿದೆ. ಕಳೆದ ವಾರ ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಸಂಸ್ಥೆ ಕೂಡ ಡೆಲ್ಟಾ ರೂಪಾಂತರಿಗೆ ಆಸ್ಟ್ರಾಜೆನಿಕಾ ಲಸಿಕೆ ಪರಿಣಾಮಕಾರಿ ಅಂತಾ ಹೇಳಿತ್ತು.

3. ಶೀಘ್ರವೇ ಭಾರತಕ್ಕೆ ಫೈಜರ್ ಲಸಿಕೆ?
ಅಮೆರಿಕ ಮೂಲದ ಫೈಜರ್ ಕೊರೊನಾ ಲಸಿಕೆ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಫೈಜರ್ ಲಸಿಕೆಯ ಅನುಮೋದನೆ ಪ್ರಕ್ರಿಯೆಯು ಅಂತಿಮ ಹಂತದಲ್ಲಿರುವುದಾಗಿ ಅಮೆರಿಕಾದ ಔಷಧ ತಯಾರಿಕಾ ಸಂಸ್ಥೆ ಮಾಹಿತಿ ನೀಡಿದೆ. ಭಾರತದಲ್ಲಿ ಫೈಜರ್ ಲಸಿಕೆ ಅನುಮೋದನೆ ಪಡೆಯುವ ಅಂತಿಮ ಹಂತದಲ್ಲಿದೆ. ಶೀಘ್ರವೇ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಸಿಇಒ ಆಲ್ಬರ್ಟ್ ಬೌರ್ಲಾ ಭರವಸೆ ವ್ಯಕ್ತಪಡಿಸಿದ್ದಾರೆ. ಜರ್ಮನಿಯ ಬಯೋಂಟೆಕ್ ಜೊತೆಗೂಡಿ ಅಮೆರಿಕಾದ ಸಂಸ್ಥೆ ಈ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು ಕೊರೊನಾ ಸೋಂಕಿನ ವಿರುದ್ಧ ಈ ಲಸಿಕೆ 90% ಪರಿಣಾಮಕಾರಿ ಎಂದು ವರದಿಗಳು ತಿಳಿಸಿವೆ.

4. ರೋಹಿಣಿ ಸಿಂಧೂರಿ ವಿರುದ್ಧ ಡಿ. ರೂಪಾ ಕಿಡಿ
ಮೈಸೂರು ಡಿ.ಸಿ ಬಂಗಲೆಯಲ್ಲಿ ಸ್ವಿಮ್ಮಿಂಗ್​ ಪೂಲ್ ನಿರ್ಮಾಣ​ ವಿಚಾರಕ್ಕೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪ ಕಿಡಿಕಾರಿದ್ದಾರೆ. ರೋಹಿಣಿ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರೋ ಡಿ. ರೂಪ, ಕೊರೊನಾದಿಂದ ಜನರು ಆರ್ಥಿಕ ಸಂಕಟ ಎದುರಿಸುತ್ತಿದ್ದಾರೆ. ಜನರ ದುಡ್ಡಲ್ಲಿ ಸ್ವಿಮ್ಮಿಂಗ್​ ಪೂಲ್​ ನಿರ್ಮಾಣ ಸರಿಯಲ್ಲ. ಇದು ರೋಹಿಣಿ ಸಿಂಧೂರಿ ಅವರ ನೈತಿಕ ಅಧಃಪತನವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

5. ಇಂದು ಕಾರವಾರಕ್ಕೆ ರಾಜನಾಥ್​ ಸಿಂಗ್​ ಭೇಟಿ
ಇಂದು ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಕಾರವಾರ ಹಾಗೂ ಕೊಚ್ಚಿಗೆ ಭೇಟಿ ನೀಡಲಿದ್ದಾರೆ. ಕಾರವಾರದಲ್ಲಿ ನಡೆಯುತ್ತಿರುವ ‘ಪ್ರಾಜೆಕ್ಟ್ ಸೀಬರ್ಡ್’ ಯೋಜನೆ ಹಾಗೂ ಕೊಚ್ಚಿಯಲ್ಲಿನ ವಿಮಾನವಾಹಕ ನೌಕೆಯ ನಿರ್ಮಾಣದ ಪ್ರಗತಿ ಬಗ್ಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಪರಿಶೀಲಿಸಲಿದ್ದಾರೆ. ಇನ್ನು ರಾಜನಾಥ್​ ಸಿಂಗ್​ಗೆ ಅವರಿಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್​ ನೀಡಲಿದ್ದಾರೆ.

6. ಮತ್ತೆ ಪವಾರ್‌ ಭೇಟಿಯಾದ ಪ್ರಶಾಂತ್ ಕಿಶೋರ್
ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್​ರನ್ನು ಪುನಃ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಹದಿನೈದು ದಿನಗಳ ಅಂತರದಲ್ಲಿ ಈ ನಾಯಕರ ಮಧ್ಯೆ ನಡೆದ ಮೂರನೇ ಭೇಟಿ ಇದಾಗಿದೆ. ಪವಾರ್‌ ಅವರ ನಿವಾಸದಲ್ಲಿ ಮಂಗಳವಾರ ಎಂಟು ವಿರೋಧ ಪಕ್ಷಗಳ ನಾಯಕರ ಸಭೆ ನಡೆದಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಪವಾರ್‌ ಅವರೇ ವಹಿಸಿದ್ದರು. ಮತ್ತೆ ನಡೆದ ಈ ಭೇಟಿಯು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಪವಾರ್‌– ಕಿಶೋರ್‌ ಅವರ ಈ ಮಾತುಕತೆಗಳು, ವಿರೋಧಪಕ್ಷಗಳನ್ನು ಒಗ್ಗೂಡಿಸಿ, ಬಿಜೆಪಿಯ ವಿರುದ್ಧ ಬಲಿಷ್ಠವಾದ ತೃತೀಯ ರಂಗದ ರಚನೆಯ ಪ್ರಯತ್ನಗಳಾಗಿವೆ ಎಂದು ಹೇಳಲಾಗುತ್ತಿದೆ.

7. ಯುಪಿ ಚುನಾವಣೆಯಲ್ಲಿ ‘ಸಮಾಜವಾದಿ’ ಏಕಾಂಗಿ ಸ್ಪರ್ಧೆ
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರೋ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಯೋಗಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ. ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಸ್ಫರ್ಧಿಸಲಿದೆ ಅಂತಾನೂ ಅಖಿಲೇಶ್ ತಿಳಿಸಿದ್ದಾರೆ.

8. ಓರ್ವ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ವೇಳೆ ಅಪರಿಚಿತ ಉಗ್ರನೊರ್ವನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಕ್ಷಿಣ ಕಾಶ್ಮೀರ ಜಿಲ್ಲೆಯ ಶಿರ್ಮಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು. ಈ ವೇಳೆ ಭದ್ರತಾ ಪಡೆಯನ್ನ ಕಂಡ ಉಗ್ರರು ಸೇನೆ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ಉಗ್ರನೋರ್ವ ಹತನಾಗಿದ್ದಾನೆ. ಹತ್ಯೆಗೀಡಾದ ಉಗ್ರನ ಗುರುತು ಮತ್ತು ಆತ ಯಾವ ಸಂಘಟನೆಗೆ ಸೇರಿದ್ದವನು ಎಂಬ ಮಾಹಿತಿಗಳನ್ನು ಪತ್ತೆಹಚ್ಚಲಾಗುತ್ತಿದೆ.

9. ಚಿನ್ನದ ಪದಕ ವಿಜೇತೆ ರಸ್ತೆ ಬದಿ ಚಿಪ್ಸ್ ಮಾರಾಟ
28 ಬಾರಿ ಚಿನ್ನದ ಪದಕ ವಿಜೇತೆ ಪ್ಯಾರಾ ಶೂಟರ್ ದಿಲ್ರಾಜ್ ಕೌರ್ ಈಗ ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಚಿಪ್ಸ್ ಮಾರುತ್ತಿದ್ದಾರೆ. ದಿಲ್ರಾಜ್ ಕೌರ್ ಅವರು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನ ರಸ್ತೆ ಬದಿಯಲ್ಲಿ ಚಿಪ್ಸ್ ಮತ್ತು ಬಿಸ್ಕತ್ ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ದಿಲ್​ರಾಜ್​ ಕೌರ್ ಪ್ರಸ್ತುತ ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಸಾಕಷ್ಟು ಬಾರಿ ಸರ್ಕಾರವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಅದೂ ಸಫಲವಾಗಿಲ್ಲ. ಹೀಗಾಗಿ ಕೌರ್ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡುತ್ತಿರೋದಾಗಿ ಹೇಳಿದ್ದಾರೆ.

10. ನ್ಯೂಜಿಲೆಂಡ್ ಮಡಿಲಿಗೆ ವಿಶ್ವ ಚಾಂಪಿಯನ್​ಶಿಪ್ ಟೆಸ್ಟ್
ನ್ಯೂಜಿಲೆಂಡ್​​ ತಂಡ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​​ ಪಟ್ಟ ಮುಡಿಗೇರಿಸಿಕೊಂಡಿದೆ. ರೋಚಕ ಘಟ್ಟ ತಲುಪಿದ್ದ ಪಂದ್ಯವನ್ನ ಕಿವೀಸ್​​​ 8 ವಿಕೆಟ್​​ಗಳಿಂದ ತನ್ನದಾಗಿಸಿಕೊಂಡಿದೆ. ಕೊನೆಯ ದಿನ 64 ರನ್​​​ಗಳೊಂದಿಗೆ ಆಟ ಆರಂಭಿಸಿದ ಟೀಮ್​​ ಇಂಡಿಯಾ, ನ್ಯೂಜಿಲೆಂಡ್​ ವೇಗಿಗಳ ದಾಳಿಗೆ ತತ್ತರಿಸಿತು. ಅಂತಿಮವಾಗಿ ಟೀಮ್​ ಇಂಡಿಯಾ, 2ನೇ ಇನ್ನಿಂಗ್ಸ್​​ನಲ್ಲಿ ಕೇವಲ 170 ರನ್​​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು. 139 ರನ್​​ಗಳ ಸವಾಲನ್ನ ಬೆನ್ನಟ್ಟಿದ ನ್ಯೂಜಿಲೆಂಡ್​​ ತಂಡ, ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಭರ್ಜರಿ ಜೊತೆಯಾಟದಿಂದ ಗೆಲುವಿನ ನಗೆ ಬೀರಿತು

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link