1. ಸುತ್ತೂರು ಮಠಕ್ಕೆ ಇಂದು ರಮೇಶ್ ಜಾರಕಿಹೊಳಿ ಭೇಟಿ
ಸಿ.ಡಿ ಬಯಲು ಪ್ರಕರಣದ ಬಳಿಕ ಸಚಿವ ಸ್ಥಾನ ಕಳೆದುಕೊಂಡಿರೋ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನಕ್ಕೇರಲು ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಇಂದು ಸುತ್ತೂರು ಮಠಕ್ಕೆ ರಮೇಶ್ ಜಾರಕಿಹೊಳಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಮಾತುಕತೆ ನಡೆಸಿ ತಮ್ಮ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಳಗಾವಿಯಿಂದ ವಿಶೇಷ ವಿಮಾನದ ಮೂಲಕ ಸುತ್ತೂರು ಮಠಕ್ಕೆ ಆಗಮಿಸಲಿದ್ದಾರೆ. ರಮೇಶ್ ಜಾರಕಿಹೋಳಿಗೆ ಸಹೋದರ ಲಖನ್ ಜಾರಕಿಹೊಳಿ, ಅಳಿಯ ಅಂಬಿರಾವ್ ಪಾಟೀಲ್ ಸಾಥ್ ನೀಡಲಿದ್ದಾರೆ.

2. ಮಗನಿಗೆ ಸಿದ್ದರಾಮಯ್ಯ ಅಂತಾ ಹೆಸರಿಟ್ಟ ಅಭಿಮಾನಿ
ಸದ್ಯ ರಾಜ್ಯ ರಾಜಕಾರಣ ಅಷ್ಟೇ ಅಲ್ಲ, ಕರ್ನಾಟಕದಾದ್ಯಂತ ಸಿದ್ದು ನೆಕ್ಸ್ಟ್ ಸಿಎಂ ಅನ್ನೋ ಸುದ್ದಿಯೇ ಸಖತ್ ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯರ ಕಟ್ಟಾ ಅಭಿಮಾನಿಯೊಬ್ಬ ತಮ್ಮ ಮಗನಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾನೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ್‌ ಮುರಡಿ, ತಮ್ಮ ಪುತ್ರನಿಗೆ ಸಿದ್ದರಾಮಯ್ಯ ಅಂತಾ ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮೇಲಿನ ಅಪಾರ ಅಭಿಮಾನದಿಂದ ನಾಮಕರಣ ಮಾಡಿದ್ದಾಗಿ ಅಭಿಮಾನಿ ಮಂಜುನಾಥ್‌ ತಿಳಿಸಿದ್ದಾನೆ. ಮಗ ಜನಿಸಿದ 21 ದಿನಗಳ ಬಳಿಕ ಶಾಸ್ತ್ರೋಕ್ತವಾಗಿ ಸಿದ್ದರಾಮಯ್ಯ ಅಂತಾ ನಾಮಕರಣ ಮಾಡಲಾಗಿದೆ.

3. ವಿಶ್ವವಿಖ್ಯಾತ ಹಂಪಿಗೆ ಪ್ರವಾಸಿಗರ ದಂಡು
ವಿಜಯನಗರ ಜಿಲ್ಲೆಯಲ್ಲಿ ಅನ್‌ಲಾಕ್ ಆಗಿದ್ದು, ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಕೊರೊನಾ 2ನೇ ಅಲೆ ಹೆಚ್ಚಾದ ಬೆನ್ನಲ್ಲೇ ಕಳೆದ ಏ.15 ರಂದು ಹಂಪಿ ವೀಕ್ಷಿಸಲು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದ್ರೀಗ ಕೊರೊನಾ ಕಡಿಮೆಯಾದ ಹಿನ್ನಲೆ ಸ್ಮಾರಕಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ‌. ಹೀಗಾಗಿ ಬೆಳಗ್ಗೆಯಿಂದಲೇ ಹಂಪಿ ವೀಕ್ಷಣೆ ಮಾಡಲು ಜನ ಬರ್ತಿದ್ದಾರೆ. ಮುಂಜಾನೆ 6 ಗಂಟೆಯಿಂದ ಸಂಜೆ 5ವರೆಗೂ ಪ್ರವಾಸಿಗರ ಭೇಟಿಗೆ ಅವಕಾಶ ಮಾಡಿ ಕೊಡಲಾಗಿದೆ‌‌. ಇನ್ನೂ ಪ್ರವಾಸಿಗರು ಆಫ್ ಲೈನ್ ಸೇರಿದಂತೆ ಆಫ್‌ಲೈನ್​ನಲ್ಲಿಯೂ ಟಿಕೆಟ್ ಪಡೆದು ಹಂಪಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

4. ಎತ್ತುಗಳ ಕಾಲಿಗೆ ಸಿಲುಕಿದ ಯುವಕ ಪಾರು
ಕಾರಹುಣ್ಣಿಮೆ ಹಿನ್ನೆಲೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಎತ್ತಿನ ಓಟದ ಸ್ಪರ್ಧೆ ಏರ್ಪಿಡಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೊರೊನಾದ ನಡುವೆ ಕೂಡ ಎತ್ತಿನ ಓಟದ ಸ್ಪರ್ಧೆ ನಡೆಸಿ ಹಳ್ಳಿಗಳಲ್ಲಿ ಹಬ್ಬ ಆಚರಿಸಲಾಯ್ತು. ಈ ವೇಳೆ ಹಲವೆಡೆ ಅವಘಡಗಳು ನಡೆದ್ವು ವೇಗವಾಗಿ ಓಡಿ ಬರುತ್ತಿದ್ದ ಎತ್ತುಗಳ ಕಾಲಿಗೆ ಸಿಲುಕಿ ಯುವಕನೊಬ್ಬ ಕೆಳಗೆ ಬಿದ್ದ ಘಟನೆ ಕೊಪ್ಪಳ ತಾಲೂಕು ತಿಗರಿ ಗ್ರಾಮದಲ್ಲಿ ಜರುಗಿದೆ. ಅದೃಷ್ಟ ವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

5. ಕೆನರಾ ಬ್ಯಾಂಕ್​ನಲ್ಲಿ ಕಣ್ಮರೆಯಾದ ಕನ್ನಡ
ಕೋಲಾರದಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್​ನಿಂದ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಮುಳಬಾಗಿಲು ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್​ನಲ್ಲಿ ಕನ್ನಡದ ಬದಲಿಗೆ ತೆಲುಗು ಹಾಗೂ ಹಿಂದಿಯಲ್ಲಿ ಹಣ ಜಮಾ ರಸೀದಿ ನೀಡಿದ್ದಾರೆ. ಅಲ್ಲದೆ ಹಣ ಜಮಾ ರಸೀದಿ ಖಾಲಿಯಾಗಿದೆ, ಆಂಧ್ರದಿಂದ ತರಿಸಬೇಕು ಎಂದು ಸಬೂಬು ಹೇಳಿದ್ದಾರೆ. ಬ್ಯಾಂಕ್ ವ್ಯವಹಾರ ಕೂಡ ತೆಲುಗು ಮಯವಾಗುತ್ತಿರುವ ಆತಂಕದಲ್ಲಿ ಜನರಿದ್ದಾರೆ. ಬ್ಯಾಂಕ್​ನ ಈ ವರ್ತನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಬ್ಯಾಂಕ್ ಸಿಬ್ಬಂದಿ ತೆಲುಗಿನಲ್ಲೇ ಬೇಜವ್ದಾರಿ ಉತ್ತರ ಕೊಟ್ಟಿದ್ದಾರೆ.

6. ಸ್ಫುಟ್ನಿಕ್ ವಿ ಲಸಿಕೆ ಅತಿ ಹೆಚ್ಚು ಸುರಕ್ಷಿತ ಎಂದ ಅಧ್ಯಯನ
ರಷ್ಯಾ ಮೂಲದ ಸ್ಫುಟ್ನಿಕ್ ವಿ ಲಸಿಕೆಯು ಎಲ್ಲಾ ಲಸಿಕೆಗಳಿಗಿಂತ ಸುರಕ್ಷಿತ ಎಂದು ಅರ್ಜೆಂಟಿನಾದ ಬ್ಯೂನೊಸ್ ಏರ್ಸ್ ಆರೋಗ್ಯ ಸಚಿವಾಲಯ ಅಧ್ಯಯನದಲ್ಲಿ ತಿಳಿದು ಬಂದಿದೆ. ಬ್ಯೂನೊಸ್ ಏರೆಸ್‌ ಪ್ರಾಂತ್ಯದಲ್ಲಿ ಬಳಸಲಾದ ಮಿಕ್ಕೆಲ್ಲಾ ಕೊರೊನಾ ಲಸಿಕೆಗಳಿಗಿಂತ ಸ್ಫುಟ್ನಿಕ್ ವಿ ಲಸಿಕೆ ಸುರಕ್ಷಿತ ಎಂದು ವರದಿಗಳಿಂದ ದೃಢಪಡಿಸಿದೆ. ಸ್ಫುಟ್ನಿಕ್ ವಿ ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಜ್ವರ, ತಲೆನೋವು, ಮೈಕೈ ನೋವಿನಂಥ ಸಣ್ಣಪುಟ್ಟ ಪರಿಣಾಮಗಳೂ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.

7. ಕೊರೊನಾದಿಂದ ಮಾದಕ ವಸ್ತು ಬಳಕೆ ಹೆಚ್ಚಳ
ಕೊರೊನಾ ಸಾಂಕ್ರಾಮಿಕ ರೋಗದಿಂದ ಹಲವು ಜನ ಮಾದಕವಸ್ತು ಸೇವನೆಯ ಚಟಕ್ಕೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಕೊರೋನ ಸೋಂಕಿನಿಂದ ಮಾದಕ ವಸ್ತುಗಳ ಉತ್ಪಾದನೆಗೆ ಉತ್ತೇಜನ ದೊರಕುವುದರ ಜತೆಗೆ, ಮುಂದಿನ ಹಲವು ವರ್ಷಗಳವರೆಗೆ ಇದರ ಪರಿಣಾಮ ಗೋಚರಿಸಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಕೊರೋನ ಸೋಂಕಿನಿಂದ ನಿರುದ್ಯೋಗ ಮತ್ತಿತರ ಸಮಸ್ಯೆಗಳು ಜಾಗತಿಕವಾಗಿ ಹೆಚ್ಚಿರುವುದರಿಂದ ಅಫೀಮು, ಗಾಂಜಾ ಬೆಳೆಗಳ ಅಕ್ರಮ ಉತ್ಪಾದನೆಯೂ ಹೆಚ್ಚಬಹುದು ಎಂದು ವಿಶ್ವಸಂಸ್ಥೆಯ ಮಾದಕವಸ್ತು ಮತ್ತು ಅಪರಾಧ ವಿಭಾಗ ವರದಿ ನೀಡಿದೆ.

8. ‘ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ’
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶಾಂಘೈ ಸಹಕಾರ ಒಕ್ಕೂಟ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಪಾಕಿಸ್ತಾನದ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಹಾಗೂ ಜೈಷ್‌-ಎ-ಮೊಹಮ್ಮದ್ ವಿರುದ್ಧ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ತಜಕಿಸ್ತಾನದಲ್ಲಿ ನಡೆದ ಎಸ್​ಸಿಒ ಸದಸ್ಯ ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಭೆಯಲ್ಲಿ ವಿಶ್ವಸಂಸ್ಥೆ ಗುರುತಿಸಿರುವ ಭಯೋತ್ಪಾದಕರು ಹಾಗೂ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮಕ್ಕೆ ದೋವಲ್ ಆಗ್ರಹಿಸಿದ್ದಾರೆ. ಭಯೋತ್ಪಾದಕ ಸಂಘಟನೆಗಳಿಗೆ ಲಭ್ಯವಾಗುತ್ತಿರುವ ಆರ್ಥಿಕ ನೆರವಿಗೆ ಕತ್ತರಿ ಹಾಕುವುದಕ್ಕೆ ಎಲ್ಲಾ ರಾಷ್ಟ್ರಗಳು ಮುಂದಾಗಬೇಕು ಅಂತಾ ದೋವಲ್ ಮನವಿ ಮಾಡಿದ್ದಾರೆ.

9. ‘ಲಸಿಕೆ ಹಾಕಿಸಿಕೊಳ್ಳಿ, ಇಲ್ಲದಿದ್ದರೆ ದೇಶ ಬಿಟ್ಟು ತೊಲಗಿ’
ಕೊರೊನಾ ಲಸಿಕೆ ಹಾಕಿಸಿಕೊಳ್ಳಿ, ಇಲ್ಲದಿದ್ದರೆ ಭಾರತ ಅಥವಾ ಅಮೆರಿಕಕ್ಕೆ ಹೋಗಿ ಎಂದು ಕೊರೊನಾ ಲಸಿಕೆ ವಿರೋಧಿಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಎಚ್ಚರಿಕೆ ನೀಡಿದ್ದಾರೆ. ಲಸಿಕೆ ಪಡೆಯದವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ನೀವೇ ದೇಶಬಿಟ್ಟು ಭಾರತ ಅಥವಾ ಅಮೆರಿಕಕ್ಕೆ ಹೊರಡಿ ಎಂದು ಹೇಳಿದ್ದಾರೆ. ಅಲ್ಲದೆ ಫಿಲಿಪೀನ್ಸ್‌ ನಿವಾಸಿಗಳೇ ದಯವಿಟ್ಟು ಕೇಳಿ. ನನ್ನ ಕೈಗಳಿಂದ ಈ ಕೆಲಸ ಮಾಡಲು ನೀವು ಬಲವಂತ ಮಾಡಬೇಡಿ. ನನಗೆ ಬಲವಾದ ತೋಳುಗಳಿವೆ. ಅದರೆ ಬಲ ಪ್ರಯೋಗ ಮಾಡಲು ನನಗೆ ಇಷ್ಟವಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಾಗಿ ಅನಿವಾರ್ಯವಾದರೆ ಖಂಡಿತ ಮಾಡುತ್ತೇನೆ. ಯಾರೂ ಅದನ್ನು ಇಷ್ಟಪಡುವುದಿಲ್ಲ. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ ಅಂತಾ ಹೇಳಿದ್ದಾರೆ.

10. ಕಂಚಿನ ಪದಕ ಗೆದ್ದ ಸೌರಭ್ ಚೌಧರಿ
ಕ್ರೋವೇಷಿಯಾದ ಒಸಿಜೆಕ್‌ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ವಿಶ್ವಕಪ್‌ ಕ್ರೀಡಾಕೂಟದಲ್ಲಿ ಭಾರತದ ಯುವ ಶೂಟರ್ ಸೌರಭ್ ತಿವಾರಿ ಕಂಚಿನ ಪದಕಕ್ಕೆ ಗುರಿಯಿಟ್ಟಿದ್ದಾರೆ. ಇದು ಭಾರತಕ್ಕೆ ಕ್ರೀಡಾಕೂಟದಲ್ಲಿ ಲಭಿಸುತ್ತಿರುವ ಚೊಚ್ಚಲ ಪದಕ. ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೌರಭ್ ಚೌಧರಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. 581 ಅರ್ಹತಾ ಅಂಕಗಳೊಂದಿಗೆ ಸ್ಪರ್ಧಿಸಿದ್ದ 19ರ ಹರೆಯದ ಚೌಧರಿ 220 ಪಾಯಿಂಟ್ಸ್‌ನೊಂದಿಗೆ ಕಂಚು ಗೆದ್ದಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್ appeared first on News First Kannada.

Source: newsfirstlive.com

Source link