ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಸಿ.ಪಿ. ಯೋಗೇಶ್ವರ್‌, ಸಿ.ಟಿ. ರವಿ ದೆಹಲಿ ಯಾತ್ರೆ
ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್​​ ದಿಢೀರ್​​ ದೆಹಲಿಗೆ ತೆರಳಿದ್ದಾರೆ. ನಿನ್ನೆ ರಾತ್ರಿ 8.30ಕ್ಕೆ ವಿಮಾನ ಮೂಲಕ ಯೋಗೇಶ್ವರ್ ದೆಹಲಿಗೆ ಪ್ರಯಾಣಿಸಿದ್ದಾರೆ. ಇಂದು ಕೇಂದ್ರ ನಾಯಕರ ಭೇಟಿಗೆ ಯೋಗೇಶ್ವರ್‌ ಕಾಲಾವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ಇನ್ನು ನಿನ್ನೆ ರಾತ್ರಿಯೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡಾ ದೆಹಲಿಯನ್ನ ತಲುಪಿದ್ದಾರೆ. ಹೀಗಾಗಿ ಬಿಜೆಪಿಯ ಇಬ್ಬರೂ ನಾಯಕರ ದೆಹಲಿ ಯಾತ್ರೆ ತೀವ್ರ ಕುತೂಹಲ ಮೂಡಿಸಿದೆ.

2. ವೀಕೆಂಡ್​ ಕರ್ಫ್ಯೂನಲ್ಲೂ ಕೆಎಸ್​ಆರ್​ಟಿಸಿ ಸಂಚಾರ
ರಾಜ್ಯದಲ್ಲಿ ಇಂದು ಮತ್ತು ನಾಳೆ ವಾರಾಂತ್ಯ ಕರ್ಫ್ಯೂ ಇದ್ದರೂ ಕೂಡ ಕೆಎಸ್​ಆರ್​ಟಿಸಿ ಬಸ್​ಗಳು ಕಾರ್ಯನಿರ್ವಹಿಸಲಿದೆ ಅಂತ ಕೆಎಸ್​ಆರ್​ಟಿಸಿ ಕಚೇರಿ ಮಾಹಿತಿ ನೀಡಿದೆ. ಕರ್ಫ್ಯೂ ಸಮಯದಲ್ಲಿ ಬಹಳಷ್ಟು ಚಟುವಟಿಕೆಗಳು ನಿಷೇಧಿಸಿರುವುದರಿಂದ, ಅವಶ್ಯಕತೆಗೆ ತಕ್ಕಂತೆ ಮಾತ್ರ ಬಸ್ ಗಳು ಸಂಚರಿಸಲಿವೆ ಅಂತ ಸಂಸ್ಥೆ ಮಾಹಿತಿ ನೀಡಿದೆ. ಇನ್ನು ಬಸ್​ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್​, ಸ್ಯಾನಿಟೈಸರ್​ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ.

3. ವಿಪತ್ತು ನಿರ್ವಹಣೆಗೆ ಸಜ್ಜಾದ ಕಾಫಿನಾಡು
ಮಳೆ ಅನಾಹುತಗಳನ್ನ ತಡೆಯಲು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಗೆ ತತ್ತರಿಸಿದ್ದ ಜಿಲ್ಲಾಡಳಿತ ಈ ಬಾರಿ ಮುಂಚಿತವಾಗಿಯೇ ವಿಪತ್ತು ನಿರ್ವಹಣೆಗೆ ತಯಾರಿ ನಡೆಸಿದೆ. ಭದ್ರಾ, ತುಂಗಾ, ಹೇಮಾವತಿ ನದಿ ಪಾತ್ರದ ಗ್ರಾಮಗಳಲ್ಲಿ ಅಲರ್ಟ್​ ಮಾಡಲಾಗಿದೆ. ಅಲ್ಲದೇ 158 ಭೂ ಕುಸಿತ ಸ್ಥಳಗಳನ್ನ ಗುರುತಿಸಲಾಗಿದೆ. 40 ಪ್ರವಾಹಪೀಡಿತ ಗ್ರಾಮಗಳ ಮಾಹಿತಿ ಸಂಗ್ರಹಿಸಿದ್ದು, 463 ಸಹಾಯಕರು, 290 ಹೋಂ ಗಾರ್ಡ್, 70 ಈಜು ತಜ್ಞರು ಹಾಗೂ 16 ಎನ್.ಜಿ.ಓಗಳು, ರಕ್ಷಣಾ ತಂಡಗಳನ್ನ ರಚಿಸಲಾಗಿದೆ.

4. ರೇಣುಕಾಚಾರ್ಯರನ್ನ ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ಬಾಲಕಿ
ಕೋವಿಡ್​ನಿಂದ ಗುಣಮುಖವಾದ ಬಾಲಕಿಯೊಬ್ಬಳು ಕೋವಿಡ್ ​ಸೆಂಟರ್​ನಿಂದ ಹೊರಡುವಾಗ ಬಿಕ್ಕಿ ಬಿಕ್ಕಿ ಅತ್ತ ಹೃದಯಸ್ಪರ್ಶಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಳು. ಕೋವಿಡ್​ನಿಂದ ಗುಣಮುಖರಾದ 32 ಜನರಿಗೆ ಶಾಸಕ ರೇಣುಕಾಚಾರ್ಯ ಹೂಮಳೆ ಸುರಿಸಿ ಬಿಳ್ಕೋಡುಗೆ ಕೊಡುತ್ತಿದ್ರು. ಈ ವೇಳೆ ಬಾಲಕಿ ಶಾಸಕರನ್ನ ಅಪ್ಪಿಕೊಂಡು ಅಳಲು ಶುರುಮಾಡಿದ್ದಳು. ಅಳುತ್ತಿದ್ದ ಬಾಲಕಿಯನ್ನ ಶಾಸಕರು ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ರು. ಇನ್ನು ಬಾಲಕಿಯ ಪ್ರೀತಿ ಕಂಡು ಶಾಸಕ ರೇಣುಕಾಚಾರ್ಯ ಕೂಡ ಭಾವುಕರಾದ್ರು.

5. ಪ್ರಾಮಾಣಿಕತೆ ಮೆರೆದ ಆ್ಯಂಬುಲೆನ್ಸ್ ಸಿಬ್ಬಂದಿ
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಅವರ ಬಳಿಯಿದ್ದ ಬೆಲೆಬಾಳುವ ವಸ್ತುಗಳನ್ನ ಹಿಂದುರಿಗಿಸೋ ಮೂಲಕ ಆ್ಯಂಬುಲೆನ್ಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ರಾಯಚೂರಿನ ಬೊಮ್ಮನಾಳ ಕ್ರಾಸ್​ ಬಳಿ ಓಮ್ನಿಯೊಂದು ಮರಕ್ಕೆ ಡಿಕ್ಕಿಯಾಗಿ ಶಾಂತಮ್ಮ ಎಂಬುವವರು ಗಾಯಗೊಂಡಿದ್ರು. ಈ ವೇಳೆ 108 ಆ್ಯಂಬುಲೆನ್ಸ್​ ಸಿಬ್ಬಂದಿ ಇಸಾಕ್ ರಾಜ್ ಹಾಗೂ ಚಾಲಕ ಹುಸೇನ್ ಸಾಬ್ ಶಾಂತಮ್ಮರನ್ನ ಆಸ್ಪತ್ರೆಗೆ ಸೇರಿಸಿದ್ರು. ಅಲ್ಲದೇ ಅಪಘಾತವಾದ ಕಾರಿನಲ್ಲಿ ಸಿಕ್ಕ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನವನ್ನ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

6. ‘ಗರ್ಭಿಣಿಯರು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದು’
ಗರ್ಭಿಣಿಯರು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದು ಅಂತಾ ಕೇಂದ್ರಾ ಆರೋಗ್ಯ ಸಚಿವಾಲಯ ಹೇಳಿದೆ. ಗರ್ಭಿಣಿಯರು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಲಸಿಕೆ ತೆಗೆದುಕೊಳ್ಳಬಹುದು. ಅದು ಅವರ ಹಕ್ಕಾಗಿದೆ. ಲಸಿಕೆ ಪಡೆದುಕೊಳ್ಳಲು ಹಾಲುಣಿಸುವ ಮಹಿಳೆಯರು ಕೂಡ ಅರ್ಹರು. ಹೀಗಾಗಿ ಗರ್ಭಿಣಿಯರಿಗೂ ಲಸಿಕೆ ನೀಡಬೇಕು ಅಂತಾ ಐಸಿಎಂಆರ್‌ನ ಪ್ರಧಾನ ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ತಿಳಿಸಿದ್ದಾರೆ. ಇನ್ನು ಗರ್ಭಿಣಿಯರಿಗೆ ಲಸಿಕೆ ನೀಡುವ ಕುರಿತು ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದೆ.

7. ‘ಕಾಂಗ್ರೆಸ್ ಹೊರತಾದ ರಾಜಕೀಯ ರಂಗ ಅಸಾಧ್ಯ’
ಕಾಂಗ್ರೆಸ್ ಹೊರತಾಗಿ ದೇಶದಲ್ಲಿ ಪರ್ಯಾಯ ರಾಜಕೀಯ ರಂಗ ರಚನೆ ಅಸಾಧ್ಯ ಅಂತಾ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಬಿಜೆಪಿಗೆ ಪರ್ಯಾಯವಾಗಿ ದೇಶದಲ್ಲಿ ಯಾವುದೇ ರಾಜಕೀಯ ರಂಗ ರಚನೆಯಾದರೂ ಕಾಂಗ್ರೆಸ್‌ ಅನ್ನು ಆ ಮೈತ್ರಿಕೂಟದಿಂದ ಹೊರಗಿಡುವ ಮಾತೇ ಇಲ್ಲ. ಪವಾರ್‌ ಮತ್ತು ಟಿಎಂಸಿ ನಾಯಕ ಯಶವಂತ್‌ ಸಿನ್ಹಾ ಇತ್ತೀಚೆಗೆ ನಡೆಸಿದ ಪ್ರತಿಪಕ್ಷ ನಾಯಕರ ಸಭೆ ಕುರಿತಂತೆ ಕಾಂಗ್ರೆಸ್‌ ಅಸಮಾಧಾನ ಹೊಂದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಇನ್ನು ಇದೇ ವೇಳೆ ಮಹಾರಾಷ್ಟ್ರದಲ್ಲಿನ ಮಹಾವಿಕಾಸ ಅಘಾಡಿ ಮೈತ್ರಿಕೂಟಕ್ಕೆ ಯಾವುದೇ ಸಮಸ್ಯೆ ಇಲ್ಲ ಅಂತಾನೂ ಪವಾರ್ ತಿಳಿಸಿದ್ದಾರೆ

8. ಇಳಿವಯಸ್ಸಿನಲ್ಲಿ ಪಿಹೆಚ್​ಡಿ ಪಡೆದ ವೃದ್ಧೆ
ವೃದ್ಧೆಯೊಬ್ಬರು ತಮ್ಮ 67ನೇ ವಯಸ್ಸಿನಲ್ಲಿ ಪಿಎಚ್​ಡಿ ಮುಗಿಸಿ ಸಾಧನೆಗೆ ವಯಸ್ಸು ಅಡಚಣೆಯಲ್ಲ ಅನ್ನೋದನ್ನ ಸಾಬೀತು ಪಡಿಸಿದ್ದಾರೆ. ಗುಜರಾತ್​ನ ವಡೋದರಾದ ವೃದ್ಧೆ ಉಷಾ ಲೊದಯ ಎಂಬುವವರು 20 ವರ್ಷ ವಯಸ್ಸಿದ್ದಾಗಲೇ ಕಾಲೇಜ್ ಬಿಟ್ಟು ವಿದ್ಯಾಭ್ಯಾಸ ನಿಲ್ಲಿಸಿದ್ದರು. ಇದೀಗ ವೃದ್ಧಾಪ್ಯದಲ್ಲಿ ಉಷಾ ಲೋದಯ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.ಜೈನಿಸಮ್ ವಿಷಯದಲ್ಲಿ ಸದ್ಯ ಉಷಾ ಲೊದಯ ಅವರು ಪಿಹೆಚ್​ಡಿ ಪಡೆದಿದ್ದು, ಉಷಾ ಅವರ ಸಾಧನೆಗೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

9. ಮಾಸ್ಕ್​ ಹಾಕದ ವ್ಯಕ್ತಿ ಕಾಲಿಗೆ ಗುಂಡೇಟು
ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಚ್ಚಿ ಬೀಳಿಸುವ ಕೃತ್ಯವೊಂದು ನಡೆದಿದ್ದು, ಮಾಸ್ಕ್​ ಹಾಕಿಲ್ಲ ಅನ್ನೋ ಆರೋಪಕ್ಕೆ ಗ್ರಾಹಕರೊಬ್ಬರಿಗೆ ಬ್ಯಾಂಕ್ ಭದ್ರತಾ ಸಿಂಬ್ಬಂದಿ ಶೂಟ್​ ಮಾಡಿದ್ದಾರೆ. ಗ್ರಾಹಕ ಬ್ಯಾಂಕ್​ ಬರುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್​​, ಮಾಸ್ಕ್​ ಎಲ್ಲಿ ಎಂದು ಕೇಳಿದ್ದಾನೆ. ನಂತರ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ಸಿಟ್ಟಿಗೆದ್ದ ಸೆಕ್ಯೂರಿಟಿ ಗಾರ್ಡ್​, ಆತನ ಕಾಲಿಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಸೆಕ್ಯೂರಿಟಿ ಗಾರ್ಡ್​​ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

10. ಕಿಸ್​ ಮಾಡಿದ್ರು, ಅಮೇಲೆ ಕ್ಷಮೆಯಾಚಿಸಿದ್ರು
ಕೋವಿಡ್​ ನಿಯಮ ಉಲ್ಲಂಘಿಸಿ ಸಹೋದ್ಯೋಗಿಯೋರ್ವಳಿಗೆ ಕಿಸ್ ಮಾಡಿದ್ದಕ್ಕೆ ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ ಕ್ಷಮೆಯಾಚಿಸಿದ್ದಾರೆ. ಮ್ಯಾಟ್ ಹ್ಯಾಂಕಾಕ್ ಅವರು ಸಹೋದ್ಯೋಗಿಯೋರ್ವಳಿಗೆ ಕಿಸ್ ಮಾಡಿದ್ದ ಸೀಕ್ರೆಟ್ ಫೋಟೋ ಅಂತಾರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಪ್ರಕಟವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮ್ಯಾಟ್ ಹ್ಯಾಂಕಾಕ್ , ಆರೋಗ್ಯ ಕಾರ್ಯದರ್ಶಿಯಾಗಿದ್ದುಕೊಂಡು ಕೋವಿಡ್ ನಿಯಮಗಳಲ್ಲೊಂದಾದ ಸೋಷಿಯಲ್ ಡಿಸ್ಟೆನ್ಸ್ ಉಲ್ಲಂಘಿಸಿ ತಪ್ಪು ಮಾಡಿದ್ದೇನೆ.. ನನ್ನನ್ನ ಕ್ಷಮಿಸಿ ಎಂದಿದ್ದಾರೆ

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link