ಟಾಪ್ 10 ಸುದ್ದಿಗಳ ಸಂಕ್ಷಿಪ್ತ ಹೂರಣ ಇಲ್ಲಿದೆ

1. ಮತ್ತೆ ಲಾಕ್​ಡೌನ್​ ಸುಳಿವು ನೀಡಿದ ಡಿಸಿಎಂ
ಕೊರೊನಾ ತಡೆಗೆ ಲಾಕ್​ಡೌನ್​​ ಅಗತ್ಯವಾಗಿದ್ದು, ಇದನ್ನ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ ಕೊರೊನಾದ ಚೈನ್​ ಲಿಂಕ್ ತಪ್ಪಿಸಲು ಸಂಚಾರ ಸ್ತಬ್ಧವಾಗಬೇಕಿದೆ. ಜನರ ಅನಾವಶ್ಯಕ ಓಡಾಟ, ಸಭೆ, ಸಮಾರಂಭಗಳನ್ನ ಬಂದ್ ಮಾಡಬೇಕಿದೆ ಎಂದರು. ಸಾಮಾಜಿಕ ಅಂತರ ಪಾಲನೆ ಹಾಗೂ ಕಡ್ಡಾಯವಾಗಿ ಮಾಸ್ಕ್​ ಧರಿಸುವುದರೊಂದಿಗೆ ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

2. ಚಿಕ್ಕಬಳ್ಳಾಪುರ ಸೋಂಕಿತರಿಗೆ ಬೆಂಗಳೂರಿನಲ್ಲಿ ಬೆಡ್
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಬರುವ ಕೋವಿಡ್-19 ರೋಗಿಗಳಿಗೆ ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಬ್ಯಾಪ್ಟಿಸ್ಟ್ ಆಸ್ಪತ್ರೆ ಹಾಗೂ ಸಹಕಾರ ನಗರದ ಆಸ್ಟರ್ ಸಿಎಂಸಿ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾದಡಿ ಶೇ 15ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಈ ಆದೇಶದ ಪ್ರತಿಯನ್ನ ಟ್ವಿಟರ್​​ನಲ್ಲಿ ಪೋಸ್ಟ್​​ ಮಾಡಿದ್ದು ಆರೋಗ್ಯ ಸಚಿವರ ಕ್ಷೇತ್ರಕ್ಕೆ ಮಾತ್ರ ವಿಶೇಷ ವ್ಯವಸ್ಥೆಯೇ ಎಂದು ಚರ್ಚೆಗೆ ಕಾರಣವಾಗಿದೆ.

3. ಪೊಲೀಸ್​ ಸಿಬ್ಬಂದಿಗಾಗಿ ಕೋವಿಡ್ ಕೇರ್ ಸೆಂಟರ್
ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್, ಬೆಡ್, ಆಕ್ಸಿಜನ್, ಸೂಕ್ತ ಸಮಯದಲ್ಲಿ ಸಿಗದೇ ಕೊರೊನಾ ಸೊಂಕಿತರು ನರಳಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅದೆಷ್ಟೋ ಜನ ಚಿಕಿತ್ಸೆ ಸಿಗೋ ಮುನ್ನವೇ ಮೃತಪಟ್ಟಿದ್ದಾರೆ. ಹೀಗಾಗಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಪೊಲೀಸ್​ ಸಿಬ್ಬಂದಿಗಾಗಿ ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಪೊಲೀಸರಿಂದ ಕೊವಿಡ್ ಸೆಂಟರ್ ತೆರೆಯಲಾಗಿದೆ. ಕಾಡುಗೋಡಿಯ ನೂತನ ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ಕೊವಿಡ್ ಕೇರ್ ಸೆಂಟರ್ ನಿರ್ಮಾಣವಾಗಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಉದ್ಘಾಟನೆ ಮಾಡಿದ್ರು. ಸೊಂಕಿತ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗಾಗಿ ಇದನ್ನ ನಿರ್ಮಿಸಲಾಗಿದ್ದು, ಸುಮಾರು 50 ಬೆಡ್​ಗಳ ವ್ಯವಸ್ಥೆ ಇದೆ. ಸ್ಮೈಲ್ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ರೋಗಿಗಳ ಆರೋಗ್ಯದ ಮೇಲೆ ನಿಗಾ ಮಾಡಲಿದ್ದಾರೆ.

4. ಇಂದಿನ ಲಸಿಕೆ ಅಭಿಯಾನಕ್ಕೆ ಬ್ರೇಕ್​​
ಇವತ್ತು ಮೂರನೇ ಹಂತದ ಲಸಿಕೆ ಅಭಿಯಾನ ಶುರುವಾಗಲಿದೆ. ಆದರೆ ಲಸಿಕೆ ಅಭಾವ ಎದುರಾದ ಕಾರಣ 3ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ಸಿಗೋದು ಬಹುತೇಕ ಡೌಟ್. ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ.‌ ಅದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಇವತ್ತಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿಕೊಳ್ಳಲು ಸಮ್ಮತಿ ನೀಡಿದೆ. ಲಸಿಕೆ ಪಡೆಯಲು 2.45 ಕೋಟಿಗೂ ಅಧಿಕ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಲಸಿಕೆ ಕೊರತೆ ಉಂಟಾಗಿರೋದ್ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಿಸೋಕೆ ವಿಳಂಬವಾಗ್ತಿದೆ.

5. ಇಂದು ದೇಶಕ್ಕೆ ಬರಲಿದೆ ಸ್ಪುಟ್ನಿಕ್​-ವಿ ಲಸಿಕೆ
ದೇಶದಲ್ಲಿ ಲಸಿಕೆ ಕೊರತೆ ಕಾಡುತ್ತಿರುವುದರ ನಡುವೆಯೇ ಇಂದು ರಷ್ಯಾದ ಸ್ಪುಟ್ನಿಕ್- ವಿ ವ್ಯಾಕ್ಸಿನ್​ನ ಮೊದಲ ಬ್ಯಾಚ್ ಭಾರತಕ್ಕೆ ಬರಲಿದೆ. ಮೇ ಅಂತ್ಯದೊಳಗೆ ಒಟ್ಟು 3 ಲಕ್ಷ ಡೋಸ್ ಲಸಿಕೆ ದೇಶಕ್ಕೆ ಬರಲಿದೆ ಎಂದು ಭಾರತೀಯ ರಾಯಭಾರಿ ವೆಂಕಟೇಶ್ ವರ್ಮಾ ಮಾಹಿತಿ ನೀಡಿದ್ದಾರೆ. ದೇಶದಲ್ಲಿ 3ನೇ ಹಂತದ ವ್ಯಾಕ್ಸಿನೇಷನ್​ನಲ್ಲಿ ಸ್ಪುಟ್ನಿಕ್ ಲಸಿಕೆ ಸಹ ಬಳಸಲಾಗುತ್ತದೆ. ದೇಶಿಯ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಜತೆಗೆ ಸ್ಪುಟ್ನಿಕ್​ ಕೂಡ ಮಹಾಮಾರಿ ವಿರುದ್ಧ ಹೋರಾಡಲಿವೆ. ಸ್ಪುಟ್ನಿಕ್ ವಿ ಭಾರತದಲ್ಲಿನ ಲಸಿಕೆ ಕೊರತೆ ನೀಗಿಸುತ್ತಾ ಅನ್ನೋದು ಪ್ರಶ್ನೆಯಾಗಿದೆ.

6. 1 ನಿಮಿಷಕ್ಕೆ 2 ಸಾವು, ಪ್ರತಿ ಸೆಕೆಂಡ್​ಗೆ 4 ಕೇಸ್
ಕೊರೊನಾ 2ನೇ ಅಲೆ ಭಾರತದಲ್ಲಿ ಆತಂಕವನ್ನು ಮೂಡಿಸಿದೆ. ಹೊಸ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಜನರಲ್ಲಿ ಭಯವ ಉಂಟು ಮಾಡಿದ್ದು ಪ್ರತಿ ನಿಮಿಷಕ್ಕೆ ಭಾರತದಲ್ಲಿ ಇಬ್ಬರು ಸೋಂಕಿತರು ಸಾವನಪ್ಪಿದ್ರೆ , ಸುಮಾರು 270 ಮಂದಿಯಲ್ಲಿ ಸೋಂಕು ದೃಢವಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಪ್ರತಿ ಸೆಕೆಂಡ್‌ಗೆ 4 ಹೊಸ ಕೋವಿಡ್ ಪ್ರಕರಣ ದಾಖಲಾಗುತ್ತಿದೆ ಎಂದು ಹೇಳಿದೆ. ಕೊರೊನಾ ಹೊಸ ಪ್ರಕರಣಗಳು ಮಾತ್ರವಲ್ಲದೇ ಕೋವಿಡ್‌ ಸೋಂಕಿನಿಂದ ಮೃತಪಡುವ ಪ್ರಕರಣಗಳು ಸಹ ಹೊಸ ದಾಖಲೆ ಬರೆಯುತ್ತಿದ್ದು. ಅಲ್ಲದೆ ಪ್ರತಿ ಸಕೆಂಡ್​ಗೆ 4 ಪ್ರಕರಣಗಳು ದಾಖಲಾಗುತ್ತಿವೆ.

7. ಭಾರತದಿಂದ ಆಸ್ಟ್ರೇಲಿಯಾಗೆ ಹೋದ್ರೆ 5 ವರ್ಷ ಜೈಲು ಶಿಕ್ಷೆ
ಭಾರತದಲ್ಲಿ ಕೊರೋನಾ 2ನೇ ಅಲೆ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿತ್ಯ 3 ಲಕ್ಷಕ್ಕೂ ಹೆಚ್ಚು ಪಾಸಿಟಿವ್​ ಪ್ರಕರಣಗಳು ದಾಖಲಾಗುತ್ತಿವೆ. ಭಾರತದ ಕೊರೋನಾ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಹಲವು ದೇಶಗಳು ಭಾರತದೊಂದಿಗೆ ವಿಮಾನ ಸಂಪರ್ಕವನ್ನ ನಿಷೇಧ ಮಾಡಿವೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಸರ್ಕಾರ ಇನ್ನೂ ಕಠಿಣ ಕ್ರಮವನ್ನು ಕೈಗೊಂಡಿದೆ. ವಿದೇಶಗಳಿಂದ ಆಸ್ಟೇಲಿಯಾಕ್ಕೆ ಮರಳುವ ಪ್ರಜೆಗಳು 14 ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದರೆ ಅವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಮುಂದಾಗಿದೆ. 5 ವರ್ಷಗಳ ಜೈಲು ಶಿಕ್ಷೆ ಇಲ್ಲವೇ 48,90,000 ರೂಪಾಯಿ ದಂಡವಿಧಸಲು ಅಧಿಕಾರಿಗಳು ತಿಳಿಸಿದ್ದಾರೆ.

8. ಮರದ ಮೇಲೆ ಸಿಂಹ – ಚಿರತೆ ಫೈಟ್
ಪ್ರಾಣಿಗಳು ಆಹಾರಕ್ಕಾಗಿ ಹಾಗೂ ತನ್ನ ಮರಿಗಳನ್ನ ಕಾಪಾಡಿಕೊಳ್ಳುವ ಸಲುವಾಗಿ ಎಂತಹ ಸಾಹಸಕ್ಕೂ ಅಂಜುವುದಿಲ್ಲ. ಹೀಗಾಗಿ ಹೆಚ್ಚಿನ ಸಮಯದಲ್ಲಿ ಹೊಂಚು ಹಾಕಿ ಬೇಟೆಯಾಡುತ್ತವೆ, ಇದಕ್ಕೆ ಸಾಕ್ಷಿ ಎಂಬತೆ ಸಿಂಹವೊಂದು ಚಿರತೆಯನ್ನ ತಿನ್ನಲು ಮರ ಹತ್ತಿ ಫೈಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದಕ್ಷಿಣ ಆಪ್ರೀಕಾದ ಕ್ರೂಗರ್ ರಾಷ್ಟ್ರೀಯ ಉದ್ಯಾನದಲ್ಲಿ ಮರದ ಮೇಲೆ ಸಿಂಹ ಹಾಗೂ ಚಿರತೆ ಫೈಟ್ ಮಾಡಿಕೊಂಡಿವೆ. ಆದ್ರೆ ಕೆಲವೇ ಸಮಯದಲ್ಲಿ ಮರದ ಕೊಂಬೆ ತುಂಡಾಗಿ ಕೆಳಗೆ ಬಿದ್ದಿದೆ. ಹೀಗಾಗಿ ಚಿರತೆ ಸಿಂಹದ ಕೈಯಿಂದ ತಪ್ಪಿಸಿಕೊಂಡಿದೆ.

9. ಈ ಬಾರಿಯೂ ‘ಪಂಚಾಯ್ತಿ’ಗೆ ಬರಲ್ಲ ಕಿಚ್ಚ ಸುದೀಪ್
ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದ ಸುದೀಪ್‌ ಚೇತರಿಸಿಕೊಂಡಿದ್ದಾರೆ. ಆದ್ರೆ ಈ ವಾರವೂ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಸುದೀಪ್​ ಅವರು ಗೈರಾಗಲಿದ್ದಾರೆ. ಸದ್ಯ ಇರುವ ಸನ್ನಿವೇಶದಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ವಾಹಿನಿ ತಿಳಿಸಿದೆ.

10. ಆರ್​ಸಿಬಿ ವಿರುದ್ಧ ಕನ್ನಡಿಗನಿಗೆ ಭರ್ಜರಿ ಗೆಲುವು
ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್, ಹರ್‌ಪ್ರೀತ್‌ ಬ್ರಾರ್ ಮಾರಕ ಬೌಲಿಂಗ್ ನಿಂದ ಪಂಜಾಬ್ ತಂಡ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಹೈದರಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರು ಟೀಂ ಪಂಜಾಬ್ ಟೀಂನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತ್ತು. ಕನ್ನಡಿಗ ಕೆ. ಎಲ್​. ರಾಹುಲ್ ಭರ್ಜರಿ ಆಟದ ಫಲವಾಗಿ 20 ಓವರ್​ಗಳಲ್ಲಿ ಪಂಜಾಬ್ ಟೀಂ 5 ವಿಕೆಟ್​ ಕಳೆದುಕೊಂಡು 179 ರನ್ ಗಳಿಸಿತ್ತು. 180 ರನ್​ಗಳ ಬೆನ್ನಟ್ಟಿದ ಆರ್​ಸಿಬಿ ಗೆಲುವಿನ ದಡ ಮುಟ್ಟಲಾಗದೇ ಸೋಲೊಪ್ಪಿಕೊಂಡಿದೆ. ಪಂಜಾಬ್​ 34 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿತು.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link