1. ನಾಳೆಯಿಂದ ಅನ್ಲಾಕ್ 3.0 ಜಾರಿ
ರಾಜ್ಯದಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದ್ದಂತೆ ರಾಜ್ಯ ಸರ್ಕಾರ ನಾಳೆ ಯಿಂದ 3ನೇ ಹಂತದ ಲಾಕ್​ಡೌನ್ ಸಡಿಲಿಕೆ ಜಾರಿ ಮಾಡಿದೆ. ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯರು ಮತ್ತು ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಮಾರ್ಗಸೂಚಿಯಂತೆ ದೇವಾಲಯ, ಬಾರ್, ಮಾಲ್​​ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅಲ್ಲದೆ ರಾಜ್ಯದಲ್ಲಿ ಇದುವರೆಗೆ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂವನ್ನ ತೆಗೆದುಹಾಕಲಾಗಿದೆ. ಮತ್ತು ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕೈಗಾರಿಕೆಗಳಲ್ಲಿ ಶೇ 100ರಷ್ಟು ಉದ್ಯೋಗಿಗಳ ಕೆಲಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮೆಟ್ರೋ, ಬಸ್ ಗಳಲ್ಲಿ ಶೇ 100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಸಿನಿಮಾ ಥಿಯೇಟರ್ ಹೊರತುಪಡಿಸಿ ಮಾರ್ಕೆಟ್, ಮಾಲ್ ತೆರೆಯಲು ಅವಕಾಶ ಮಾಡಿಕೊಡಲಾಗಿದೆ.

2. ಇಂದು ಪುಲ್ವಾಮ ಹುತಾತ್ಮ ಯೋಧನ ಅಂತ್ಯಕ್ರಿಯೆ
ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಕಾಶಿರಾಮ ಬೋಮನಹಳ್ಳಿ ಅವರ ಪಾರ್ಥಿವ ಶರೀರವನ್ನ ಬೆಳಗಾವಿಗೆ ತರಲಾಗಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಮ್, ಉಗ್ರರ ದಾಳಿಯಿಂದ ಹುತಾತ್ಮರಾಗಿದ್ರು. ನಿನ್ನೆ ರಾತ್ರಿ ಯೋಧನ ಪಾರ್ಥಿವ ಶರೀರವನ್ನ ವಿಶೇಷ‌ ವಾಹನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಇಂದು ಯೋಧನ ಸ್ವಗ್ರಾಮದಲ್ಲಿ ಹುತಾತ್ಮ ಅಂತ್ಯಕ್ರಿಯೆ ನೆರವೇರಲಿದೆ.

3. ಬರ್ತ್ ಡೇ ಬಲೂನ್ ತೆಗೆಯಿತು ಪ್ರಾಣ
ಬರ್ತ್ ಡೇ ಪಾರ್ಟಿಗೆ ಸರ್ಪೈಸ್ ಕೊಡಲು ಹೋಗಿ ಬಲೂನ್ ಸಿಲಿಂಡರ್ ಬ್ಲಾಸ್ಟ್ ಆಗಿ ವ್ಯಕ್ತಿಯೊಬ್ಬ ಮೃತಪಟ್ಟಿರೋ ಘಟನೆ ಬೆಂಗಳೂರಿನಲ್ಲಿ ಅಶೋಕನಗರದ ಅಪಾರ್ಟ್ಮೆಂಟ್ ನಡೆದಿದೆ. ಬರ್ತ್ ಡೇ ಆಚರಣೆಗೆಂದು ಬಲೂನ್ ಗ್ಯಾಸ್ ಫಿಲ್ ಮಾಡಬೇಕಾದರೆ ಸ್ಪೋಟ ಸಂಭವಿಸಿ ಪರಪ್ಪನ ಅಗ್ರಹಾರ ನಿವಾಸಿಯಾದ ದಿನೇಶ್ ಸ್ಥಾಳದಲ್ಲೇ ಸಾವನಪ್ಪಿದ್ದಾರೆ. ದಿನೇಶ್ ತನ್ನ ಸ್ನೇಹಿತನ ಬರ್ತ್ ಡೇ ಪಾರ್ಟಿಗಾಗಿ ಬಲೂನ್​ಗಳನ್ನ ರೆಡಿ ಮಾಡಿಕೊಡಲು ಆರ್ಡರ್ ಕೊಟ್ಟಿದ್ದರು. ಹೀಗಾಗಿ ಅಪಾರ್ಟ್ಮೆಂಟ್ ಆವರಣದಲ್ಲಿ ನಿಂತು ಬಲೂನ್​​ಗೆ ಗ್ಯಾಸ್ ಫಿಲ್ ಮಾಡಲಾಗ್ತಿತ್ತು. ಈ ವೇಳೆ  ಗ್ಯಾಸ್ ತುಂಬುವ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

4. ಮಾತೃಭಾಷೆ ಶಿಕ್ಷಣದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ
ದೇಶದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿ. ರಾಜ್ಯದಲ್ಲಿ ಶೇಕಡಾ 53ರಷ್ಟು ಮಂದಿ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಾರೆ ಎಂದು ಯೂನಿಫೈಡ್‌ ಡಿಸ್ಟ್ರಿಕ್ಟ್ ಇನ್ಫರ್ಮೇಷನ್‌ ಸಿಸ್ಟಂ ಫಾರ್‌ ಎಜುಕೇಷನ್‌ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ಕರ್ನಾಟಕದಲ್ಲಿ ಆಂಗ್ಲ ಶಾಲೆಗಳ ಪ್ರಮಾಣ ಶೇ. 20ರಷ್ಟು ಹೆಚ್ಚಾಗಿದ್ದರೂ ಮಾತೃಭಾಷೆಯಲ್ಲಿ ಕಲಿಯುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದು ಈ ವರದಿ ತಿಳಿಸಿದೆ. ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಅಲ್ಲಿ ತೆಲುಗು ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಶೇ. 25ಕ್ಕಿಂತ ಕಡಿಮೆ. ಶೇ. 73.8ರಷ್ಟು ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ ಎಂದು ತಿಳಿಸಿದೆ.

5. ‘ಚಿಯರ್ ಅಪ್ ಇಂಡಿಯಾ’ಗಾಗಿ ಸೆಲ್ಫಿ ಸ್ಪಾಟ್
ಚಿಯರ್ ಅಪ್ ಇಂಡಿಯಾ ಒಲಿಂಪಿಕ್ಸ್ ಅಭಿಯಾನಕ್ಕಾಗಿ ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನ ನಿರ್ಮಿಸಲಾಗಿದೆ. ಜುಲೈ 23ರಿಂದ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ರಾಜ್ಯದ ಕ್ರೀಡಾಪಟುಗಳ ಭಾಗವಹಿಸುವಿಕೆಯನ್ನ ಪ್ರೋತ್ಸಾಹಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಜಂಟಿಯಾಗಿ ಈ ಅಭಿಯಾನ ನಡೆಸ್ತಿದೆ. ಇನ್ನು ಈ ಅಭಿಯಾನದ ಭಾಗವಾಗಿ ಭಾರತೀಯ ರೈಲ್ವೆಯ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನ ಸ್ಥಾಪಿಸಲಾಗಿದೆ.

6. ‘ಭಾರತದಲ್ಲೂ ರಫೇಲ್ ಹಗರಣ ತನಿಖೆ ಮಾಡಿ’
ರೇಫಲ್ ಯುದ್ಧವಿಮಾನಗಳ ಒಪ್ಪಂದದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ ಅನ್ನೋ ಆರೋಪವನ್ನ ಕಾಂಗ್ರೆಸ್ ಮಾಡುತ್ತಿದೆ. ಅದ್ರಲ್ಲೂ 2019ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್​ನ ಪ್ರಮುಖ ಅಸ್ತ್ರವೇ ಇದಾಗಿತ್ತು. ಈಗ ಈ ಆರೋಪಕ್ಕೆ ಮತ್ತಷ್ಟು ಬಲ ಬಂದಿದೆ. ಫ್ರಾನ್ಸ್​​ ವೆಬ್​ಸೈಟ್ ಒಂದರಲ್ಲಿ ರಫೇಲ್ ಡೀಲ್​ನಲ್ಲಾಗಿರುವ ಹಗರಣದ ತನಿಖೆಗೆ ನ್ಯಾಯಾಧೀಶರನ್ನ ನೇಮಿಸಲಾಗಿದೆ ಅನ್ನೋ ಸುದ್ದಿ ವರದಿಯಾಗುತ್ತಿದ್ದಂತೆ, ಭಾರತದಲ್ಲೂ ತನಿಖೆಗೆ ಕಾಂಗ್ರೆಸ್ ಆಗ್ರಹಿಸುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಹ ಕೇಸ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

7. ಉತ್ತರಾಖಂಡ್​ನ ಅತೀ ಕಿರಿಯ ಸಿಎಂ ಪುಷ್ಕರ್‌ ಸಿಂಗ್‌ ಧಮಿ
ಉತ್ತರಾಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಪುಷ್ಕರ್‌ ಸಿಂಗ್‌ ಧಮಿ ಆಯ್ಕೆಯಾಗಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಸಿಎಂ ಹುದ್ದೆ ವಹಿಸಿಕೊಂಡ ನಾಲ್ಕೇ ತಿಂಗಳಿಗೆ ತೀರತ್‌ ಸಿಂಗ್‌ ರಾವತ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಹೀಗಾಗಿ 45 ವರ್ಷದ ಪುಷ್ಕರ್‌ ಸಿಂಗ್‌ ಧಮಿ ಉತ್ತರಾಖಂಡ್‌ನ ಅತಿ ಕಿರಿಯ ಹಾಗೂ 11ನೇ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಸದ್ಯ ಕೇಂದ್ರ ಶಿಕ್ಷಣ ಮಂತ್ರಿಯಾಗಿರುವ ರಮೇಶ್ ಪೋಖ್ರಿಯಾಲ್ ನಿಶಾಂಕ್​​​​ 49 ವಯಸ್ಸಿನಲ್ಲಿ ಉತ್ತರಾಖಂಡ್ ಸಿಎಂ ಹುದ್ದೆಗೇರಿದ್ದರು.

8. ಕೊರೊನಾ ಶೂನ್ಯ ಪ್ರಕರಣ ದಾಖಲಾಗುವುದು ಕಷ್ಟ
ದೇಶದಲ್ಲಿ ಮಾಹಾಮಾರಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದ್ರೂ ಸಹ ಸೋಂಕು ರೂಪಾಂತರಗೊಳ್ಳುತ್ತಿದೆ. ಹೀಗಾಗಿ ದೆಹಲಿಯಲ್ಲಿ ಶೂನ್ಯ ಪ್ರಕರಣಗಳು ದಾಖಲಾಗುವುದು ಕಷ್ಟ ಸಾಧ್ಯ ಎಂದು ದೆಹಲಿ ಸರ್ಕಾರಿ ಸ್ವಾಮ್ಯದ ಎಲ್‌ಎನ್ಜೆಪಿ ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಶೂನ್ಯ ಕೊರೊನಾ ಪ್ರಕರಣಗಳು ದಾಖಲಾಗುವುದು ಸಾಧ್ಯವಿಲ್ಲ. ಸೋಂಕು ರೂಪಾಂತರಗೊಳ್ಳುತ್ತಿದೆ. ಅದರ ಭವಿಷ್ಯದ ರೂಪಾಂತರವನ್ನು ಅಂದಾಜಿಸುವುದು ಕಷ್ಟ ಎಂದು ಡಾ. ಸುರೇಶ್ ಕುಮಾರ್ ಹೇಳಿದ್ದಾರೆ. ಈ ಕೊರೊನಾ ಜೀವಂತವಾಗಿ ಉಳಿಯುವುದಕ್ಕೆ ರೂಪಾಂತರಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ..

9. ‘2ನೇ ಅಲೆಯ ಅರ್ಧದಷ್ಟು ಪ್ರಕರಣಗಳು 3ನೇ ಅಲೆಯಲ್ಲಿ ಪತ್ತೆ’
ಮಹಾಮಾರಿ ಕೊರೊನಾದ 3ನೇ ಅಲೆ ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಅಪ್ಪಳಿಸಲಿದೆ ಅಂತಾ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ಕೊರೊನಾ ಸೋಂಕು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೋಂಕಿನ ಕುರಿತಾಗಿ ಎಚ್ಚರಿಕೆಯನ್ನ ಪಾಲಿಸದೇ ಹೋದಲ್ಲಿ ಮೂರನೇ ಅಲೆಯು ಖಚಿತವಾಗಿ ಎದುರಾಗಲಿದೆ. ಹಾಗೂ ಎರಡನೇ ಅಲೆಯ ತೀವ್ರತೆಯಲ್ಲಿ ಕಂಡುಬಂದ ಪ್ರಕರಣಗಳಿಗಿಂತ ಅರ್ಧದಷ್ಟು ಮೂರನೇ ಅಲೆಯಲ್ಲಿ ಪ್ರಕರಣಗಳು ಕಂಡುಬರಲಿವೆ ಅಂತಾ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಿಯೋಜಿಸಿದ್ದ ಸಮಿತಿಯು ವರದಿ ನೀಡಿದೆ.

10. ಹೊಸ ಮೈಲಿಗಲ್ಲು ಸೃಷ್ಟಿಸಿದ ಮಿಥಾಲಿ ರಾಜ್
ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಎಲ್ಲಾ ಫಾರ್ಮ್ಯಾಟ್​​ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಪ್ರಥಮ ಆಟಗಾರ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವರ್ಡ್ಸ್ ದಾಖಲೆಯನ್ನ ಮಿಥಾಲಿ ರಾಜ್ ಹಿಂದಿಕ್ಕಿ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಎಡ್ವರ್ಡ್ಸ್ ಎಲ್ಲಾ ಆವೃತ್ತಿಗಳು ಸೇರಿ ಒಟ್ಟಾರೆ 10,273 ರನ್ ಗಳಿಸಿದ್ರು. ಇವರನ್ನ ಹಿಂದಿಕ್ಕಲು ಮಿಥಾಲಿಗೆ ಕೇವಲ 12 ರನ್‌ಗಳ ಅಗತ್ಯವಿತ್ತು. ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿರುವ ಮೂಲಕ ಮಿಥಾಲಿ ರಾಜ್ ಈ ದಾಖಲೆ ಬರೆದಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link