ಟಾಪ್ 10 ಸುದ್ದಿಗಳ ಸಂಕ್ಷಿಪ್ತ ಹೂರಣ ಇಲ್ಲಿದೆ.

1. ಪ್ರಾಣವಾಯು ಸಿಗದೇ ಸೋಂಕಿತರ ಪರದಾಟ
ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅಲ್ಲದೆ ಆಕ್ಸಿಜನ್, ಬೆಡ್​​ ಸಿಗದೇ ಕೆಲ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇದರ ನಡುವೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ. ಮೊನ್ನೆ ರಾತ್ರಿಯಿಂದ ಆಕ್ಸಿಜನ್​​ ಸಿಲಿಂಡರ್ ಖಾಲಿಯಾಗಿದ್ದು, ಇನ್ನೂ ಕೂಡ ಪೂರೈಕೆಯಾಗಿಲ್ಲ. ಇದರಿಂದ ಆಕ್ಸಿಜ‌ನ್​ ಸಿಗದೆ ಕೊರೊನಾ ಸೋಂಕಿತರಲ್ಲದೆ, ಕೋವಿಡೇತರ ರೋಗಿಗಳು ಕೂಡ ಪರದಾಟ ನಡೆಸುತ್ತಿದ್ದಾರೆ. ಇತ್ತ ಮೂವರು ಕೊರೊನಾ ಸೋಂಕಿತರು ಕೂಡ ಸಾವನ್ನಪ್ಪಿದ್ದು, ಸೂಕ್ತ ಕಾರಣ ತಿಳುದುಬಂದಿಲ್ಲ, ಆದ್ರೆ ಮೃತರ ಸಂಬಂಧಿಕರು ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆಂದು ಆರೋಪ ಮಾಡುತ್ತಿದ್ದಾರೆ.

2. ಜಯದ ನಿರೀಕ್ಷೆಯಲ್ಲಿದ್ದ ಪ್ರಮುಖ ನಾಯಕರಿಗೆ ಸೋಲು
ನಿನ್ನೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಜಯದ ನಿರೀಕ್ಷೆಯಲ್ಲಿದ್ದ ಪ್ರಮುಖ ನಾಯಕರು ಸೋಲನ್ನಪ್ಪಿದ್ದಾರೆ. ಪ್ರಮುಖವಾಗಿ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪಕ್ಷ ಟಿಎಂಸಿ ಭರ್ಜರಿ ಗೆಲುವು ದಾಖಲಿಸಿದ್ರೂ ಸ್ವತಃ ಮಮತಾ ಬ್ಯಾನರ್ಜಿ ಅವರೇ ಸೋತಿರುವುದು ಅಚ್ಚರಿ ಮೂಡಿಸಿದೆ. ಕರ್ನಾಟಕ ಸಿಂಗಂ ಖ್ಯಾತಿಯ ಅಣ್ಣಾಮಲೈ ಚುನಾವಣೆಯಲ್ಲಿ ಸೋಲಿನ ಶಾಕ್​ಗೆ ಒಳಗಾಗಿದ್ದಾರೆ. ಹೊಸ ಬದಲಾವಣೆ ತರುವ ವಿಶ್ವಾಸ ಮೂಡಿಸಿದ್ದ ನಟ ಕಮಲ್ ಹಾಸನ್ ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಆಂಧ್ರ ಪ್ರದೇಶದ ತಿರುಪತಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಕೂಡ ಸೋತಿದ್ದಾರೆ. ಕೇರಳದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಭಾರೀ ನಿರೀಕ್ಷೆ ಮೂಡಿಸಿದ್ದ ಮೆಟ್ರೋ ಮ್ಯಾನ್ ಶ್ರೀಧರನ್‌ಗೆ ಸೋಲಾಗಿದೆ. ನಟಿ ಖುಷ್ಬೂ ಕೂಡ ಸೋತಿದ್ದಾರೆ.

3. ಜೈಲಲ್ಲಿದ್ದುಕೊಂಡೇ ಬಿಜೆಪಿ ವಿರುದ್ಧ ಗೆದ್ದ ರೈತ ಮುಖಂಡ
ಜೈಲಿನಲ್ಲಿದ್ದುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿವೋರ್ವ ಇದೀಗ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಸ್ಸಾಂ ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ ನಡೆದಿದ್ದ ವೇಳೆ ರೈತ ಮುಖಂಡ ಅಖಿಲ್​ ಗೊಗೊಯ್​ ಬಂಧಿಸಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಸಿಬ್ಸಾಗರ್​ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಇವರು ಒಂದೇ ಒಂದು ದಿನ ಪ್ರಚಾರ ನಡೆಸಿಲ್ಲ. ಆದರೂ 57 ಸಾವಿರದ 173 ಮತ ಪಡೆದು ಬಿಜೆಪಿ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿದ್ದಾರೆ.

4. ಕೋಟಿ ಒಡೆಯನನ್ನ ಸೋಲಿಸಿದ ಮನೆ ಕೆಲಸದಾಕೆ
ಪಶ್ಚಿಮ ಬಂಗಾಳದಲ್ಲಿ ಮನೆ ಕೆಲಸದಾಕೆ ತನ್ನ ಎದುರಾಳಿ ಕೋಟ್ಯಾಧಿಪತಿಯನ್ನೂ ಸೋಲಿಸಿ ಅಚ್ಚರಿ ಮೂಡಿಸಿದ್ದಾರೆ. ಪಶ್ಚಿಮ ಬಂಗಾಳದ ಸಾಲ್ತೋರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಂದನಾ ಬೌರಿ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ವಿರುದ್ಧ ಗೆದ್ದಿದ್ದಾರೆ. ಬಾಂಕೂರಾ ಜಿಲ್ಲೆಯ ಸಾಲ್​ತೋರಾ ಎಸ್​ಸಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಚಂದನಾ ಬೌರಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆದ್ರೆ ಇದೀಗ ದಿನಗೂಲಿ ಕಾರ್ಮಿಕನ ವ್ಯಕ್ತಿಯ ಪತ್ನಿ ಕೋಟ್ಯಾಧಿಪತಿಯ ವಿರುದ್ಧ ಗೆಲುವು ಸಾಧಿಸಿರುವುದು ಅಪರೂಪದಲ್ಲಿ ಅಪರೂಪವಾಗಿದೆ.

5. ಸುವೇಂದು ಅಧಿಕಾರಿ ಕಾರಿನ ಮೇಲೆ ಕಲ್ಲೆಸೆತ
ತೃಣಮೂಲ ಕಾಂಗ್ರೆಸ್​ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ರೋಚಕ ಗೆಲುವು ಸಾಧಿಸಿದ್ದಾರೆ. ಇದಕ್ಕೇ ಹತಾಶರಾದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸುವೇಂದು ಕಾರಿನತ್ತ ಕಲ್ಲು ಎಸೆದಿದ್ದಾರೆ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿಗೆ ಪ್ರತಿಸ್ಪರ್ಧಿ ಯಾಗಿದ್ದ ಸುವೇಂದು ಕೊನೆಯ ಹಂತದಲ್ಲಿ ಕಡಿಮೆ ಮತಗಳ ಅಂತರದಲ್ಲಿ ದೀದಿಯನ್ನು ಸೋಲಿಸಿದ್ದಾರೆ. ನಂದಿಗ್ರಾಮದಲ್ಲಿ ಮಮತಾಗೆ ಸೋಲಾದ್ದರಿಂದ ಟಿಎಂಸಿ ಕಾರ್ಯಕರ್ತರು ತೀವ್ರ ಬೇಸರಗೊಂಡಿದ್ದರು. ಹೀಗಾಗಿ ಚುನಾವಣಾಧಿಕಾರಿಯ ಕಚೇರಿಯಿಂದ ಸುವೇಂದು ಅಧಿಕಾರಿ ಹೊರಡುತ್ತಿದ್ದಂತೆ ಅವರ ಕಾರಿನತ್ತ ಕಲ್ಲುಗಳನ್ನು ಎಸೆದಿದ್ದಾರೆ.

6. ಮದುವೆ ಅರ್ಧಕ್ಕೆ ನಿಲ್ಲಿಸಿದ್ದ ಡಿ.ಸಿ ಸಸ್ಪೆಂಡ್​​​
ತ್ರಿಪುರ ರಾಜ್ಯದ ಅಗರ್ತಲಾದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಮದುವೆ ಅರ್ಧಕ್ಕೆ ನಿಲ್ಲಿಸಿದ್ದ ಜಿಲ್ಲಾಧಿಕಾರಿಯನ್ನ ತ್ರಿಪುರ ಸರ್ಕಾರ ಅಮಾನತು ಮಾಡಿದೆ. ಅನೇಕ ಶಾಸಕರು ಹಾಗೂ ಬಿಜೆಪಿ ನಾಯಕರು ಡಿಸಿಯನ್ನು ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದರು. ಈ ಬಗ್ಗೆ ತ್ರಿಪುರ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಅವರಿಗೆ ಪತ್ರವನ್ನೂ ಬರೆದಿದ್ದರು. ಅದರಂತೆ ಜಿಲ್ಲಾಧಿಕಾರಿ ಸೈಲೇಶ್ ಕುಮಾರ್ ಅವರನ್ನ ಅಮಾನತು ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.

7. ಭಾರತಕ್ಕೆ ಅಮೆರಿಕಾದಿಂದ ಸಹಾಯ ಹಸ್ತ
ರೆಮ್​ಡೆಸಿವಿರ್​ ಔಷಧಕ್ಕೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಇದೀಗ ಅಮೆರಿಕಾದಿಂದ 1 ಲಕ್ಷದ 25 ಸಾವಿರ ಡೋಸ್​ಗಳು ಭಾರತಕ್ಕೆ ಬಂದಿವೆ. ಕೆಲ ದಿನಗಳ ಹಿಂದೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನಿರಂತರ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದರು. ಅದರಂತೆ 1 ಲಕ್ಷದ 25 ಸಾವಿರ ರೆಮ್​ಡೆಸಿವಿರ್​ ಡೋಸ್​ಗಳು ಕಳುಹಿಸಿಕೊಟ್ಟಿದ್ದಾರೆ. ಇದರಿಂದ ಕೊರೊನಾ ಜೀವ ರಕ್ಷಕ ರೆಮ್​​ಡಿಸಿವಿರ್ ಔಷಧವನ್ನು ಎದುರು ನೋಡಿತ್ತಿದ್ದ ಜನರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ.

8. ದೇಶಕ್ಕೆ ಅಗತ್ಯವಿದೆ 122 ಕೋಟಿ ಲಸಿಕೆ ಡೋಸ್​​
ದೇಶದಲ್ಲಿ ಕೊರೊನಾ ಲಸಿಕೆ ಮೂರನೇ ಹಂತದ ಅಭಿಯಾನ ಶುರುವಾಗಿದ್ದು ಈಗ 18-45 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತಿದೆ. ಈ ಅಭಿಮಾನದಲ್ಲಿ ಸುಮಾರು 59 ಕೋಟಿ ಮಂದಿಗೆ ಲಸಿಕೆ ನೀಡುವುದಕ್ಕೆ 122 ಕೋಟಿ ಲಸಿಕೆ ಡೋಸ್ ಅಗತ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ. 2021 ರ ಮಧ್ಯ ವರ್ಷದ ವೇಳೆಗೆ 18-45 ವಯಸ್ಸಿನ 59 ಕೋಟಿ ಮಂದಿ ಇದ್ದಾರೆ. ಇವರಿಗೆ ಲಸಿಕೆ ನೀಡುವುದಕ್ಕೆ 122 ಕೋಟಿ ಲಸಿಕೆಯ ಅಗತ್ಯವಿದೆ ಅಂತ ತಿಳಿಸಿದೆ

9. ಪಂಜಾಬ್ ವಿರುದ್ಧ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 29ನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯಗಳಿಸಿದೆ. ಇನ್ನು 167 ರನ್‌ಗಳ ಬೆನ್ನತ್ತಿದ್ದ ಡೆಲ್ಲಿಕ್ಯಾಪಿಟಲ್ಸ್‌ಗೆ ಇದು ಸವಾಲೆನಿಸಲೇ ಇಲ್ಲ. ಶಿಖರ್‌ ಧವನ್‌ ಭರ್ಜರಿ ಬ್ಯಾಟಿಂಗ್​ನಿಂದ 17.4 ಓವರ್‌ಗಳಲ್ಲೇ ತಂಡ ಗೆಲುವಿನ ದಡ ತಲುಪಿದೆ.

10. ಕೊರೊನಾ ವಿರುದ್ಧ ಹೋರಡಲು ಆರ್​ಸಿಬಿ ನೆರವು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಾದಾಟ ನಡೆಸಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈವರೆಗೆ 26 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಬೆಂಗಳೂರು 12 ಪಂದ್ಯವನ್ನೂ ಗೆದ್ರೆ. ಕೋಲ್ಕತ್ತಾ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ವಿಶೇಷವೆಂದರೆ ಇಂದು ಆರ್​​ಸಿಬಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡುವ ಸಲುವಾಗಿ ನೀಲಿ ಬಣ್ಣದ ಜೆರ್ಸಿ ತೊಟ್ಟು ಆಡಲಿದೆ. ಪಂದ್ಯದ ಬಳಿಕ ಜರ್ಸಿಯನ್ನೂ ಹಾರಾಜು ಮಾಡಿ ಅದರಲ್ಲಿ ಬಂದ ಹಣದಲ್ಲಿ ಆರೋಗ್ಯ ಮೂಲ ಸೌಕರ್ಯ ಒದಗಿಸಲು ಸಹಾಯ ಮಾಡಲಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link