ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ರಷ್ಯಾ ಮತ್ತು ಫ್ರಾನ್ಸ್ ಸಮ್ಮತಿ: ಶೀಘ್ರ ಪುಟಿನ್ ಮತ್ತು ಬೈಡೆನ್ ಭೇಟಿ | Ukraine Crisis Russia France Agree To Defuse tension Vladimir Putin and Joe Biden May Meet Soon


ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ರಷ್ಯಾ ಮತ್ತು ಫ್ರಾನ್ಸ್ ಸಮ್ಮತಿ: ಶೀಘ್ರ ಪುಟಿನ್ ಮತ್ತು ಬೈಡೆನ್ ಭೇಟಿ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಪ್ಯಾರಿಸ್: ಉಕ್ರೇನ್ ಬಿಕ್ಕಟ್ಟು ನಿವಾರಣೆಗಾಗಿ ಕದನ ವಿರಾಮ ಘೋಷಿಸುವ ಪ್ರಕ್ರಿಯೆ ಆರಂಭಿಸಲು ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮಾರ್ಕೊನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರ್ಧರಿಸಿದರು. ಮೂರೂ ತಾಸಿಗೂ ಹೆಚ್ಚು ಅವಧಿ ಎರಡೂ ದೇಶಗಳ ನಾಯಕರು ಪರಸ್ಪರ ಚರ್ಚಿಸಿದರು. ಬಿಕ್ಕಟ್ಟು ಶಮನಕ್ಕೆ ರಾಜತಾಂತ್ರಿಕ ಮಾರ್ಗದಲ್ಲಿ ಪರಿಹಾರ ಹುಡುಕಲು ಯತ್ನಿಸುವುದಾಗಿ ಪುಟಿನ್ ಭರವಸೆ ನೀಡಿದರು. ಫ್ರಾನ್ಸ್ ಮತ್ತು ರಷ್ಯಾದ ವಿದೇಶಾಂಗ ಸಚಿವರು ಶೀಘ್ರ ಭೇಟಿಯಾಗಿ ಬೆಲರೂಸ್ ಮತ್ತು ಉಕ್ರೇನ್ ಸುತ್ತಮುತ್ತಲ ದೇಶಗಳಿಂದ ರಷ್ಯಾದ ಪಡೆಗಳು ಹಿಂದಿರುಗುವ ಬಗ್ಗೆ ಚರ್ಚಿಸಲಿದ್ದಾರೆ. ರಷ್ಯಾ ಮಿಲಿಟರಿ ಕಾರ್ಯಾಚರಣೆ ಇನ್ನೂ ಕೆಲ ಸಮಯ ಮುಂದುವರಿಯಲಿದೆ ಎಂಬ ಬೆಲರೂಸ್ ಸರ್ಕಾರದ ಹೇಳಿಕೆಯ ಹಿನ್ನೆಲೆಯಲ್ಲಿ ರಷ್ಯಾದ ಕದನ ವಿರಾಮ ಪ್ರಯತ್ನದ ಘೋಷಣೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಉಕ್ರೇನ್ ಮತ್ತು ರಷ್ಯಾ ನಡುವಣ ಮಾತುಕತೆಗೆ ವೇದಿಕೆ ಒದಗಿಸು ಪ್ರಯತ್ನಕ್ಕೂ ಫ್ರಾನ್ಸ್ ಮುಂದಾಗಿದೆ. ರಷ್ಯಾ ಪರ ಬಂಡುಕೋರರು ಮತ್ತು ಉಕ್ರೇನ್ ಪಡೆಗಳು ಮುಖಾಮುಖಿಯಾಗಿರುವ ಪ್ರದೇಶದಲ್ಲಿ ಕದನ ವಿರಾಮ ಘೋಷಿಸಲು ನಡೆಸಬೇಕಾದ ಪ್ರತಿಕ್ರಿಯೆಯನ್ನು ನಿರ್ವಹಿಸಲು ಪುಟಿನ್ ಮತ್ತು ಮಾರ್ಕೊನ್ ಯತ್ನಿಸುತ್ತಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್​ನಲ್ಲಿ ಸತತ ಪ್ರಯತ್ನಗಳು ನಡೆಯಲಿವೆ. ರಷ್ಯಾ, ಉಕ್ರೇನ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು 2014ರ ಮಿನ್​ಸ್ಕ್ ಶಿಷ್ಟಾಚಾರದ ಪ್ರಕಾರ ಪೂರ್ವ ಉಕ್ರೇನ್​ನಲ್ಲಿ ಶಾಂತಿ ಕಾಪಾಡಲು ಪ್ರಯತ್ನ ಮುಂದುವರಿಸಲಿವೆ. ಯೂರೋಪ್​ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಉನ್ನತ ಮಟ್ಟದ ಸಭೆ ನಡೆಸಲು ರಷ್ಯಾ ಮತ್ತು ಫ್ರಾನ್ಸ್ ಸಮ್ಮತಿಸಿವೆ.

ಉಕ್ರೇನ್​ನಲ್ಲಿ ರಕ್ತಪಾತ ತಡೆಯುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಯಾವುದೇ ಸಂದರ್ಭದಲ್ಲಿ ಭೇಟಿಯಾಗಲು ಸಿದ್ಧರಾಗಿದ್ದಾರೆ. ಪಾಶ್ಚಾತ್ಯ ದೇಶಗಳ ಪ್ರಯತ್ನದ ನಡುವೆಯೂ ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಸಿದ್ಧತೆ ಅಂತಿಮಗೊಳಿಸಿದೆ. ಆಕ್ರಮಣಕ್ಕೆ ರಷ್ಯಾ ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಇದು ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ಪರಿಸ್ಥಿತಿ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಹೇಳಿದ್ದರು. ಉಕ್ರೇನ್ ಸುತ್ತಮುತ್ತ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳ ಪ್ರಯತ್ನಕ್ಕೆ ಪೂರಕವಾಗಿ ರಷ್ಯಾ ಸೇನೆ ಶೆಲ್ ದಾಳಿಯನ್ನು ಚುರುಕುಗೊಳಿಸಿತ್ತು.

ಯುದ್ಧ ಟ್ಯಾಂಕ್​ಗಳು ಉಕ್ರೇನ್ ಗಡಿ ಪ್ರವೇಶಿಸುವ ಮೊದಲು ಶಾಂತಿ ನೆಲೆಗೊಳಿಸಲು ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ಮಾಡುತ್ತೇವೆ. ಆದರೆ ದಾಳಿಗೆ ರಷ್ಯಾ ಸಿದ್ಧತೆ ಮಾಡಿಕೊಂಡಿರುವುದು ನಿಜ ಎಂದು ಅವರು ಹೇಳಿದರು.

TV9 Kannada


Leave a Reply

Your email address will not be published. Required fields are marked *