‘ಕೋರ್ಟ್ನ ಮಧ್ಯಂತರ ಆದೇಶ ಪಾಲಿಸಿ’
ಕೇಸರಿ ಮತ್ತು ಹಿಜಾಬ್ ಪ್ರಕರಣದ ಕುರಿತು ಅಂತಿಮ ತೀರ್ಪು ಪ್ರಕಟಿಸುವವರೆಗೂ ಶಾಲೆ ಮತ್ತು ಕಾಲೇಜುಗಳ ತರಗತಿಗಳಿಗೆ ಯಾವುದೇ ವಿದ್ಯಾರ್ಥಿ ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿಕೊಂಡು ಬರುವಂತಿಲ್ಲ ಅಂತ ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ. ಈ ಹಿನ್ನೆಲೆ, ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೋರ್ಟ್ ಮಧ್ಯಂತರ ಆದೇಶವನ್ನ ಪಾಲಿಸುವಂತೆ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಯೂಸೂಫ್ ಸವಣೂರ, ರಾಜ್ಯದ ಮುಸಲ್ಮಾನ ಬಾಂಧವರಲ್ಲಿ ಮನವಿ ಮಾಡಿದೆ.
ಆಯವ್ಯಯಕ್ಕೆ ಸಲಹೆ ಕೋರಿದ ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2022-23ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಪಡೆಯಲು ಉದ್ದೇಶಿಸಲಾಗಿದೆ. ನಗರದ ಸಾರ್ವಜನಿಕರು, ಸಂಘ-ಸಂಸ್ಥೆಗಳು ತಮ್ಮ ಸಲಹೆ, ಸೂಚನೆಗಳನ್ನು ಮಾರ್ಚ್ 3ರ ಒಳಗಾಗಿ ಸಲ್ಲಿಸಲು ಹಣಕಾಸು ವಿಭಾಗದ ಅಪರ ಆಯುಕ್ತ ನಾಗರಾಜ್ ಶೆರೇಗಾರ್ ಮನವಿ ಮಾಡಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ದ್ವಾರದ ಬಳಿ ಸಲಹೆಗಳ ಸ್ವೀಕೃತಿ ಎಂಬ ಬಾಕ್ಸ್ ಅನ್ನ ಸಹ ಇರಿಸಲಾಗಿದೆ.
ವಾಯುಗುಣಮಟ್ಟ, ಚಾಮರಾಜನಗರವೇ ನಂಬರ್ 1
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ದೇಶದ ಅತ್ಯುತ್ತಮ ವಾಯುಗುಣ ಪಟ್ಟಿಯಲ್ಲಿ ಚಾಮರಾಜನಗರ ಪ್ರಥಮ ಸ್ಥಾನವನ್ನ ಮುಡಿಗೇರಿಸಿಕೊಂಡಿದೆ. ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದ್ದರೂ, ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಅರಣ್ಯ ಪ್ರದೇಶ ಇರುವುದರಿಂದ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಪ್ರಥಮ ಸ್ಥಾನವನ್ನ ಪಡೆದಿದೆ.
ಮುಂಬೈ ಶ್ರೀಮಂತ ಕುಟುಂಬಗಳಲ್ಲಿ ನಂಬರ್ 1
ದೇಶದಲ್ಲಿ ಆಗರ್ಭ ಶ್ರೀಮಂತ ಕುಟುಂಬ ಹೊಂದಿರುವ ಸಂಖ್ಯೆಯಲ್ಲಿ ವಾಣಿಜ್ಯ ನಗರಿ ಮುಂಬೈ ಮೊದಲ ಸ್ಥಾನದಲ್ಲಿದೆ. ನಂತರ ದೆಹಲಿ ಎರಡು ಹಾಗೂ ಕೋಲ್ಕತ್ತಾ ಮೂರನೇ ಸ್ಥಾನದಲ್ಲಿವೆ. ಹುರುನ್ ಇಂಡಿಯಾ ವೆಲ್ತ್ ವರದಿ 2021 ರ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ, ಭಾರತದಲ್ಲಿ ಶ್ರೀಮಂತ ಕುಟುಂಬಗಳ ಸಂಖ್ಯೆ ಶೇಕಡಾ 11ರಷ್ಟು ಹೆಚ್ಚಾಗಿದೆ. ಈ ವರ್ಷ 4.58 ಲಕ್ಷ ಕುಟುಂಬಕ್ಕೆ ಏರಿಕೆಯಾಗಿದ್ದು, ಮುಂದಿನ ಐದು ವರ್ಷಗಳ ಶ್ರೀಮಂತ ಕುಟುಂಬಗಳ ಸಂಖ್ಯೆ ಶೇ.30ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿ ಅಂದಾಜಿಸಿದೆ.
ಮೋದಿ ಹತ್ಯೆಯ ಸಂಚು ಒಪ್ಪಿಕೊಂಡ ಉಗ್ರ
2008ರ ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ 38 ಅಪರಾಧಿಗಳಿಗೆ ಮರಣ ದಂಡನೆ ಹಾಗೂ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ಒಬ್ಬ ಅಪರಾಧಿ, ಅಂದಿನ ಗುಜರಾತ್ ಸಿಎಂ ಆಗಿದ್ದ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸ್ಥಳೀಯ ಶಾಸಕ ಪ್ರದೀಪ್ ಸಿನ್ಹಾ ಜಡೇಜಾ ಹತ್ಯೆಗೆ ಸಂಚು ರೂಪಿಸಿದ್ದಾಗಿ ಕೋರ್ಟ್ನಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸುಧೀರ್ ಬ್ರಹ್ಮಭಟ್ ತಿಳಿಸಿದ್ದಾರೆ. ಆದ್ರೆ, ಆ ಅಪರಾಧಿಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ವಕೀಲರು, ಆತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಅಂತ ಮಾತ್ರ ಹೇಳಿದ್ದಾರೆ. ಆತನಿಗೆ ಅಹಮದಾಬಾದ್, ವಡೋದರಾ, ಭರೂಚ್, ಸೂರತ್ ಹಾಗೂ ಪುಣೆಯಲ್ಲಿ ಬಾಂಬ್ ಇಡುವ ಬಗ್ಗೆ ಕೇರಳ ಮತ್ತು ಗುಜರಾತ್ನ ಕಾಡುಗಳಲ್ಲಿ ತರಬೇತಿ ನೀಡಲಾಗಿತ್ತು ಎಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ.
ಉಗ್ರರಿಗೆ ಮಾಹಿತಿ.. ಐಪಿಎಸ್ ಅಧಿಕಾರಿ ಬಂಧನ
ಪಾಕ್ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾಗೆ ಅತ್ಯಂತ ಸೂಕ್ಮ ಮಾಹಿತಿ ಸೋರಿಕೆ ಮಾಡಿರೋ ಆರೋಪದ ಮೇಲೆ ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿಯನ್ನ ಎನ್ಐಎ ಬಂಧಿಸಿದೆ. ಇವರು ಎನ್ಐಎ ತನಿಖಾಧಿಕಾರಿ ಆಗಿದ್ದಾಗ ಜಮ್ಮು- ಕಾಶ್ಮೀರದಲ್ಲಿದ್ದ ಲಷ್ಕರ್ ಉಗ್ರರ ಜೊತೆ ಸೂಕ್ಷ್ಮ ಮಾಹಿತಿ ಹಂಚಿಕೊಂಡಿರುವ ಆರೋಪ ಕೇಳಿ ಬಂದಿದೆ. 11 ವರ್ಷಗಳ ಕಾಲ ಎನ್ಐಎಯಲ್ಲಿ ಕೆಲಸ ಮಾಡಿದ್ದ ನೇಗಿ, ಸದ್ಯ ಶಿಮ್ಲಾ ಎಸ್ಪಿ ಆಗಿ ನಿಯೋಜನೆಗೊಂಡಿದ್ದರು. ಮೇಲ್ನೋಟಕ್ಕೆ ನೇಗಿ ಮೇಲಿನ ಆರೋಪ ಸಾಬೀತಾಗಿದ್ದು, ಐಪಿಎಸ್ ಅಧಿಕಾರಿಯೊಬ್ಬರನ್ನ ಭಯೋತ್ಪಾದನೆ ಆರೋಪದ ಮೇಲೆ ಎನ್ಐಎ ಬಂಧಿಸಿರೋದು ಇದೇ ಮೊದಲು. ಉಗ್ರರಿಗೆ ಆರ್ಥಿಕ ನೆರವು ಸೇರಿದಂತೆ ಹತ್ತಾರು ಪ್ರಮುಖ ಕೇಸ್ಗಳನ್ನ ನೇಗಿ ತನಿಖೆ ಮಾಡಿದ್ದರು.
ಯುಪಿಯಲ್ಲಿ ನಾಳೆ 3ನೇ ಹಂತದ ಮತದಾನ
ಉತ್ತರ ಪ್ರದೇಶದಲ್ಲಿ ನಾಳೆ ಮೂರನೇ ಹಂತದ ಮತದಾನ ನಡೆಯಲಿದೆ. 16 ಜಿಲ್ಲೆಗಳ 59 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಸಂಜೆ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ತೆರಳಲಿದ್ದಾರೆ. ಮೂರನೇ ಹಂತದಲ್ಲಿ ಕರ್ಹಾಲ್ ಕ್ಷೇತ್ರ ಎಲ್ಲರ ಕೇಂದ್ರ ಬಿಂದುವಾಗಿದೆ. ಕಾರಣ, ಈ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿಯ ಕೇಂದ್ರ ಸಚಿವ ಸಿಂಘ ಬಘೇಲ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇದೇ ಮೊದಲ ಬಾರಿಗೆ ಅಖಿಲೇಶ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಪಂಜಾಬ್ ಚುನಾವಣೆ.. ನಾಳೆಯೇ ಮತದಾನ
ಪಂಜಾಬ್ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ನಾಳೆಯೇ ಮತದಾನ ನಡೆಯಲಿದೆ. ಈ ಮಧ್ಯೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಕೇಜ್ರಿವಾಲ್ ನಿದ್ದೆಗೆಡಿಸಿದ್ದಾರೆ. ಮತದಾನಕ್ಕೆ ಕೌಂಟ್ಡೌನ್ ಶುರುವಾಗಿರೋ ಬೆನ್ನಲ್ಲೇ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪತ್ರ ವಿನಿಮಯವೂ ನಡೆದಿದೆ. ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ಹಾಗೂ ಆಮ್ ಆದ್ಮಿ ಪಾರ್ಟಿ ನಡುವೆ ನಂಟು ಇರುವ ಬಗ್ಗೆ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಗಂಭೀರ ಆರೋಪ ಮಾಡಿದ್ದಾರೆ. ಅದಲ್ದೇ, ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ತಿರುಮಲದಲ್ಲಿ ಖಾಸಗಿ ಹೋಟೆಲ್, ರೆಸ್ಟೋರೆಂಟ್ ಬಂದ್
ಇನ್ಮುಂದೆ ತಿರುಮಲದಲ್ಲಿ ಯಾವುದೇ ಖಾಸಗಿ ಹೋಟೆಲ್ ಹಾಗೂ ರೆಸ್ಟೋರೆಂಟ್ಗೆ ಅವಕಾಶ ಇಲ್ಲ. ವೆಂಕಟೇಶ್ವರ ಸ್ವಾಮಿ ಭಕ್ತರಿಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಅನ್ನ ಪ್ರಸಾದ ಛತ್ರ ಆರಂಭಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ನಿರ್ಧರಿಸಿದೆ. ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು, ಈ ಯೋಜನೆಗಾಗಿ ಟಿಟಿಡಿ ಬೋರ್ಡ್ ಸಭೆಯಲ್ಲಿ 3,096 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ, ಕೋವಿಡ್ನಿಂದ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿರುವ ಅರ್ಜಿತ ಸೇವೆ ಹಾಗೂ ದರ್ಶನಗಳನ್ನ ಪುನರ್ ಆರಂಭಿಸಲು ನಿರ್ಧರಿಸಲಾಗಿದೆ. ಬೆಟ್ಟದಲ್ಲಿ ಮಕ್ಕಳ ಆಸ್ಪತ್ರೆಯನ್ನೂ ನಿರ್ಮಿಸಲು ನಿರ್ಣಯಿಸಲಾಗಿದೆ.
ಹಾರುವ ಮೀನು ಬಲೆಗೆ..
ಮಂಗಳೂರಿನ ಮೀನುಗಾರರ ಬಲೆಗೆ ಅಪರೂಪದ ಹಾರುವ ಮೀನು ಬಿದ್ದಿದೆ. ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳು ಸಿಕ್ಕಿವೆ. ಆಂಗ್ಲ ಭಾಷೆಯಲ್ಲಿ ಫ್ಲೈಯಿಂಗ್ ಫಿಶ್ ಹಾಗೂ ತುಳುವಲ್ಲಿ ಪಕ್ಕಿಮೀನ್ ಎಂದು ಕರೆಯಲ್ಪಡುವ ಈ ಮೀನು ಹೆಚ್ಚಾಗಿ ಆಳಸಮುದ್ರದಲ್ಲಿರುವಂಥ ಮತ್ಸ್ಯ ಪ್ರಭೇದ. ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ ಎಗರಿ ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಹೊಂದಿವೆ. ಸುಮಾರು 15ರಿಂದ 45 ಸೆಂಟಿ ಮೀಟರ್ವರೆಗೆ ಉದ್ದವಾಗುವ ಈ ಮೀನುಗಳು ಬಲೆಗೆ ಬೀಳುವುದು ಬಲು ಅಪರೂಪ.