‘ಉಚಿತ ಅಂಗಾಂಗ ಕಸಿ ಯೋಜನೆ ಮೂಲಕ ಕರ್ನಾಟಕ ಬೇರೆಲ್ಲಾ ರಾಜ್ಯಗಳಿಗಿಂತ ಮುಂದಿದೆ’; ಕೇಂದ್ರ ಸಚಿವ ಮಾಂಡವೀಯ ಶ್ಲಾಘನೆ | Karnataka is the leading state in country for free Organ transplant surgery says Union health minister Mansukh Mandaviya in Bengaluru

‘ಉಚಿತ ಅಂಗಾಂಗ ಕಸಿ ಯೋಜನೆ ಮೂಲಕ ಕರ್ನಾಟಕ ಬೇರೆಲ್ಲಾ ರಾಜ್ಯಗಳಿಗಿಂತ ಮುಂದಿದೆ’; ಕೇಂದ್ರ ಸಚಿವ ಮಾಂಡವೀಯ ಶ್ಲಾಘನೆ

ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ (ಸಂಗ್ರಹ ಚಿತ್ರ)

ಬೆಂಗಳೂರು: ಉಚಿತವಾಗಿ ಅಂಗಾಂಗ ಕಸಿ ಚಿಕಿತ್ಸೆ ನೀಡುವ ಮೂಲಕ ಕರ್ನಾಟಕ ಸರ್ಕಾರ ಎಲ್ಲಾ ರಾಜ್ಯಗಳಿಗಿಂತ ಮುಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​​ಸುಖ್ ಮಾಂಡವೀಯ ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ & ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡವರಿಗೆ ಅಂಗಾಂಗ ಕಸಿ ಮಾಡಿಸಿಕೊಳ್ಳುವುದು ಕಷ್ಟ. ಶ್ರೀಮಂತರಿಗೆ ಖಾಯಿಲೆ ಬಂದರೆ ಆಪರೇಷನ್ ಮಾಡಿಸಿಕೊಳ್ಳುತ್ತಾರೆ. ಆದರೆ ಬಡವರಿಗೆ ಬಂದಾಗ ಅದರ ನಿರ್ವಹಣೆ ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಕಡು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದೆ. ಈ ಮೂಲಕ ಎಲ್ಲಾ ರಾಜ್ಯಗಳಿಗಿಂತ ಮುಂದಿದೆ. ಪ್ರಧಾನಮಂತ್ರಿಗಳ ಯೋಜನೆಯನ್ನ ಕರ್ನಾಟಕ ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಆರೋಗ್ಯ ಸ್ವಾಸ್ಥ್ಯ ಯೋಜನೆ, ಅಂತ್ಯೋದಯ ಯೋಜನೆ ಮೂಲಕ ಬಡವರಿಗಾಗಿ ಕೆಲಸ ಮಾಡುತ್ತಿದೆ ಮಾಂಡವೀಯ ನುಡಿದಿದ್ದಾರೆ.

ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ & ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ 120 ಬೆಡ್ ಸೌಲಭ್ಯವಿದ್ದು, ಅದು ಇಂದು(ಭಾನುವಾರ) ಲೋಕಾರ್ಪಣೆಗೊಂಡಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮಾಂಡವೀಯ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಸುಧಾಕರ್ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಸಚಿವ ಮಾಂಡವೀಯ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

ಮಾಂಡವೀಯ ಅವರಲ್ಲಿ ರಾಜ್ಯಕ್ಕೆ 1 ಕೋಟಿ ಕೊವಿಡ್ ಲಸಿಕೆ ಕೇಳಿದ್ದಕ್ಕೆ 1.5 ಕೋಟಿ ಪೂರೈಕೆ ಮಾಡಲಾಗಿದೆ. ಪ್ರಧಾನಿಯವರು 2 ಮಹತ್ವದ ಖಾತೆಗಳನ್ನು ನೀಡಿದ್ದು, ಅವೆರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಲಸಿಕೆ, ಯೂರಿಯಾ ಕೊರತೆ ಆಗದಂತೆ ಕೆಲಸ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಮಾಂಡವೀಯ ಅವರನ್ನು ಕಾರ್ಯಕ್ರಮದಲ್ಲಿ ಹೊಗಳಿದ್ದಾರೆ.

ರಾಜ್ಯದಲ್ಲಿ ಅಂಗಾಂಗ ದಾನ ಮಾಡುವ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ; ಸಚಿವ ಡಾ.ಸುಧಾಕರ್:
ರಾಜ್ಯದಲ್ಲಿ ಉಚಿತ ಅಂಗಾಂಗ ಕಸಿ ಯೋಜನೆ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ನಮ್ಮ ದೇಶದಲ್ಲಿ ಅಂಗಾಗ ದಾನ ಮಾಡೋರ ಪ್ರಮಾಣ ಕಡಿಮೆ ಇದೆ. ಭಾರತದಲ್ಲಿ 0.36% ಜನ ಮಾತ್ರ ಅಂಗಾಗ ದಾನ ಮಾಡುತ್ತಿದ್ದಾರೆ. ಅಮೆರಿಕಾ ವಿಶ್ವಕ್ಕೆ ಅಂಗಾಗ ದಾನ ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅಂಗಾಗ ದಾನ ಮಾಡುವ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಉಚಿತ ಅಂಗಾಗ ಕಸಿ ಮಾಡುವ ಯೋಜನೆ ಜಾರಿಗೆ ತರಲಾಗಿದೆ. ಲಿವರ್ ಸೇರಿದಂತೆ ಯಾವುದೇ ಅಂಗಾಗ ಕಸಿ ಮಾಡಿದರೂ SC-ST, OBC ವರ್ಗಕ್ಕೆ ಉಚಿತವಾಗಿ ಮಾಡಲಾಗುತ್ತಿದೆ. ಕಲಬುರಗಿ, ಹುಬ್ಬಳ್ಳಿ, ಮೈಸೂರು ಸೇರಿದಂತೆ ಪ್ರಾದೇಶಿಕ ವಲಯಗಳಲ್ಲಿ ಅಂಗಾಗ ಸ್ಟೋರ್ ಮಾಡುವ ಸಂಸ್ಥೆ ಪ್ರಾರಂಭ ಮಾಡಲಾಗುತ್ತಿದೆ. ಅಂಗಾಗ ದಾನ ಮಾಡುವ ಬಗ್ಗೆ ಸಿಎಂ ವಿಶೇಷ ಜಾಗೃತಿ ಮೂಡಿಸಲು ಯೋಜನೆ ರೂಪಿಸಿದ್ದಾರೆ’’ ಎಂದು ಸುಧಾಕರ್ ನುಡಿದಿದ್ದಾರೆ.

ಇದನ್ನೂ ಓದಿ:

Coronavirus cases in India ಭಾರತದಲ್ಲಿ 18,166 ಹೊಸ ಕೊವಿಡ್ ಪ್ರಕರಣ ಪತ್ತೆ, 24 ಮಂದಿ ಸಾವು

ಎದೆ ಜಲ್ಲ್ ಅನ್ನುತ್ತೆ ಡೆಡ್ಲಿ ಬೈಕ್ ವ್ಹೀಲಿಂಗ್! ವಿಡಿಯೋ ಇದೆ

TV9 Kannada

Leave a comment

Your email address will not be published. Required fields are marked *