ಉಡುಪಿ: ಕೊರೊನಾ ಲಾಕ್‍ಡೌನ್ ಕಠಿಣ ನಿಯಮಗಳ ನಡುವೆ ಉಡುಪಿಯಲ್ಲೀಗ ಮೆಹಂದಿ ಕಾಟ ಶುರುವಾಗಿದೆ. ಕರಾವಳಿಯಲ್ಲಿ ಮದುವೆಗೆ ಮುನ್ನಾದಿನ ಮೆಹಂದಿ ಶಾಸ್ತ್ರ ಇರುತ್ತದೆ. ಇದರಲ್ಲಿ ಜನ ಸೇರುತ್ತಿರುವುದರಿಂದ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ ಹಾಗಾಗಿ ಮೆಹಂದಿ ಜಿಲ್ಲಾಡಳಿತಕ್ಕೆ ಮತ್ತು ಮದುವೆ ಆಗುವ ಕುಟುಂಬಗಳಿಗೆ ಟೆನ್ಷನ್ ತಂದಿಟ್ಟಿದೆ.

ಹೊಸ ನಿಯಮದ ಪ್ರಕಾರ 40 ಜನ ಇದ್ದು ಮದುವೆ ಆಗಬಹುದು. ಮದುವೆಗೆ ಮಾತ್ರ ಜಿಲ್ಲಾಡಳಿತ ಪರವಾನಿಗೆ ಕೊಡುತ್ತದೆ. ಪರವಾನಿಗೆ ಪಡೆದ ಕುಟುಂಬದವರು ಜನ ಸೇರಿಸಿ ಮೆಹಂದಿಯನ್ನು ಆಚರಿಸುತ್ತಿರುವುದು ಕಂಡುಬಂದಿದೆ. ಇದನ್ನು ಮನಗಂಡು ಕಟ್ಟುನಿಟ್ಟಿನ ಕ್ರಮಕ್ಕೆ ಉಡುಪಿ ಜಿಲ್ಲಾಡಳಿತ ಮುಂದಾಗಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಉಡುಪಿ ಡಿಸಿ ಜಿ. ಜಗದೀಶ್, ಮಹಂದಿಗೆ ಅನುಮತಿ ನೀಡಿಲ್ಲ. ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವೀಡಿಯೋ ಮತ್ತು ಫೊಟೋಗ್ರಾಫರ್ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಮೆಹಂದಿ ಆಚರಿಸಿದ್ದಕ್ಕೆ ಒಂದು ಎಫ್.ಐ.ಆರ್ ದಾಖಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕುಂದಾಪುರದ ಅಸೋಡಿಯಲ್ಲಿ ಏಳು ಯುವಕರು ಮಾಸ್ಕ್ ಧರಿಸದೆ ಹುಲಿ ಕುಣಿತ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೂರಾರು ಜನ ಸುತ್ತಮುತ್ತಲಿನ ಮನೆಯವರು ಸೇರಿ ಮೆಹಂದಿ ಆಚರಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹಲವಾರು ದೂರುಗಳು ಬಂದ ನಂತರ ತಹಶೀಲ್ದಾರರು, ಪಿಡಿಒಗಳಿಗೆ ಕ್ರಮ ಕೈಗೊಳ್ಳಲು ಅಧಿಕಾರ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

The post ಉಡುಪಿ ಜಿಲ್ಲಾಡಳಿತಕ್ಕೆ ಮೆಹಂದಿ ಟೆನ್ಷನ್ – ಮದುವೆ ಮನೆಗಳಿಗೆ ನಿಗಾ ಇಡಲು ಡಿಸಿ ಸೂಚನೆ appeared first on Public TV.

Source: publictv.in

Source link