ಉಡುಪಿ: ಡಾ. ವಿ‌ಎಸ್‌ ಆಚಾರ್ಯ ಹೆಸರಿನ ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ | Basavaraj Bommai inaugurates KSRTC Bus Stand in Udupi visits Krishna Mutt Narayana Guru Mandir


ಉಡುಪಿ: ಡಾ. ವಿ‌ಎಸ್‌ ಆಚಾರ್ಯ ಹೆಸರಿನ ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಉಡುಪಿ: ಮಾಜಿ ಸಚಿವ, ಬಿಜೆಪಿ ನಾಯಕ ಡಾ. ವಿಎಸ್ ಆಚಾರ್ಯ ಹೆಸರಿನ ಜಿಲ್ಲೆಯ ನೂತನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು (ಏಪ್ರಿಲ್ 11) ಉದ್ಘಾಟನೆ ಮಾಟಿದ್ದಾರೆ. ಡಾ. ವಿ‌ಎಸ್‌ ಆಚಾರ್ಯ ಹೆಸರಿನ ನೂತನ ಬಸ್ ನಿಲ್ದಾಣ ಉಡುಪಿಯಲ್ಲಿ ಉದ್ಘಾಟನೆಗೊಂಡಿದೆ. ಈ ಬಸ್ ನಿಲ್ದಾಣ ಸಮಯ ಮತ್ತು ಬದ್ದತೆಯ ಸೇವೆ ನೀಡಬೇಕು. ವಿದ್ಯಾರ್ಥಿ, ಆಸ್ಪತ್ರೆ, ಗ್ರಾಮೀಣ ಭಾಗಕ್ಕೆ ಉತ್ತಮ ಸೇವೆ ನೀಡಬೇಕು. ಕರಾವಳಿ ಸಾರಿಗೆ ವ್ಯವಸ್ಥೆ ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಈ ವೇಳೆ ತಿಳಿಸಿದ್ದಾರೆ.

ಸಾರ್ವಜನಿಕ ಬದುಕಿನ ಪ್ರಾಮಾಣಿಕತೆಗೆ ವಿಎಸ್ ಆಚಾರ್ಯ ಮಾದರಿ. ತಾವು ಕೆಲಸ ಮಾಡಿದ ಎಲ್ಲಾ ಇಲಾಖೆಯಲ್ಲಿ ಛಾಪು ಮೂಡಿಸಿದ್ದಾರೆ. ಅವರಷ್ಟೇ ಸ್ವಚ್ಚ ಮತ್ತು ದಕ್ಷವಾಗಿ ಬಸ್ ಸ್ಟಾಂಡ್ ಕೆಲಸ ಮಾಡಿ. ಬಸ್ ನಿಲ್ದಾಣದಲ್ಲಿ ಎರಡು‌ ಮಲ್ಟಿಪ್ಲೆಕ್ಸ್​ಗೆ ಶೀಘ್ರ ಅನುಮತಿ ನೀಡೋಣ. 250 ಬೆಡ್ ಆಸ್ಪತ್ರೆ ಆಗ್ತಾ ಇದೆ, ಶೀಘ್ರ ಮೆಡಿಕಲ್ ಕಾಲೇಜು ಆರಂಭಿಸಲು ಪ್ರಯತ್ನ ಮಾಡುತ್ತೇವೆ. ತಾಯಿ ಮಕ್ಕಳ ಆಸ್ಪತ್ರೆ ಸರ್ಕಾರ ನಿರ್ವಹಣೆ ಮಾಡಲಿದೆ. ಒಳಚರಂಡಿ ಯೋಜನೆ ಶೀಘ್ರ ಮಂಜೂರಾತಿ ಕೊಡ್ತೇವೆ. ದೊಡ್ಡ ಪ್ರಮಾಣದ ಬೀಚ್ ಟೆಂಪಲ್ ಟೂರಿಸಂಗೆ ಆದ್ಯತೆ ನೀಡಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಈ ವೇಳೆ ಮಾಹಿತಿ ನೀಡಿದ್ದಾರೆ.

ಸಿಎಂಗೆ ಕೃಷ್ಣ ದರ್ಶನ ಮಾಡಿಸಿದ ಕೃಷ್ಣಾಪುರ ಸ್ವಾಮೀಜಿ

ಇದೇ ವೇಳೆ, ಸಮೀಪದ ಬನ್ನಂಜೆ ನಾರಾಯಣಗುರು ಮಂದಿರಕ್ಕೆ ಬೊಮ್ಮಾಯಿ ಭೇಟಿ ಕೊಟ್ಟಿದ್ದಾರೆ. ಉಡುಪಿಯ ಬನ್ನಂಜೆಯಲ್ಲಿರುವ ನಾರಾಯಣಗುರು ಮಂದಿರಕ್ಕೆ ಭೇಟಿ ನೀಡಿ ನಾರಾಯಣಗುರು ಪುತ್ಥಳಿಗೆ ಸಿಎಂ ಬೊಮ್ಮಾಯಿ ಆರತಿ ಬೆಳಗಿದ್ದಾರೆ. ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ, ಶ್ರೀರಾಮುಲು ಸಾಥ್​ ನೀಡಿದ್ದಾರೆ. ಉಡುಪಿ ಶ್ರೀಕೃಷ್ಣಮಠಕ್ಕೆ ಕೂಡ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದಿದ್ದಾರೆ. ಸಿಎಂಗೆ ಕೃಷ್ಣಾಪುರ ಮಠದ ಶ್ರೀಗಳು ದರ್ಶನ ಮಾಡಿಸಿದ್ದಾರೆ.

ಇದಕ್ಕೂ ಮೊದಲು, ಉಡುಪಿಯಲ್ಲಿ ಬಸವರಾಜ ಬೊಮ್ಮಾಯಿ, ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಗ್ರಂಥಾಲಯ ಲೋಕಾರ್ಪಣೆ ಮಾಡಿದ್ದಾರೆ.ತತ್ವಶಾಸ್ತ್ರ ವಿಭಾಗದ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಹವಾನಿಯಂತ್ರಿತ ಲೈಬ್ರರಿ ಇದ್ದು, ಅಜ್ಜರಕಾಡು ಪ್ರದೇಶದಲ್ಲಿ ಗೋವಿಂದಾಚಾರ್ಯ ಪುತ್ಥಳಿ ಕೂಡ ಅನಾವರಣ ಮಾಡಲಾಗಿದೆ. ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಕಾಣಿಯೂರು ವಿದ್ಯಾವಲ್ಲಭತೀರ್ಥ ಶ್ರೀ ಪಾದರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸಚಿವ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.

ನೇಕಾರರು, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ

ನೇಕಾರರು, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ಎಂದು ಇಲ್ಲಿನ ಉಚ್ಚಿನ ಮಹಾಲಕ್ಷ್ಮೀ ದೇಗುಲದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು (ಏಪ್ರಿಲ್ 11) ಘೋಷಣೆ ಮಾಡಿದ್ದಾರೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮೀ ದೇಗುಲದಲ್ಲಿ ಮಾತನಾಡಿದ ಅವರು ಸರ್ಕಾರಕ್ಕೆ ಸಮಸ್ಯೆಗಳಿಗೆ ಪರಿಹಾರ ಕೊಡುವ ಸಂಕಲ್ಪ ಬೇಕು. 3 ಜಿಲ್ಲೆಗಳಿಗೆ 5 ಸಾವಿರ ಮನೆ ನೀಡುತ್ತೇವೆ. ಎಲ್ಲಾ ಬಂದರುಗಳಲ್ಲಿ ಹೂಳೆತ್ತುವ ಕೆಲಸ ಮಾಡುತ್ತೇವೆ. ಉಚ್ಚಿಲ ಮಹಾಲಕ್ಷ್ಮೀ ದೇಗುಲ ಅಭಿವೃದ್ಧಿಗೆ 5 ಕೋಟಿ ಅನುದಾನ ನೀಡುತ್ತೇವೆ ಎಂದು ಮುಜರಾಯಿ ಇಲಾಖೆಯಿಂದ 5 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.

ಮೊಗವೀರ ಮಕ್ಕಳಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್ ನೀಡಲಾಗುತ್ತದೆ. ಮೀನುಗಾರರಿಗೆ 10 ತಿಂಗಳಿಗೆ ಎರಡು ಲಕ್ಷ ಲೀ. ಸಬ್ಸಿಡಿ ಡೀಸೆಲ್ ಕೊಡಲಾಗುತ್ತದೆ. ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಬ್ಯಾಂಕ್​ಗಳ ಜೊತೆ ಮಾತುಕತೆ ಮಾಡಿ ಈ ಯೋಜನೆ ರೂಪಿಸುತ್ತೇನೆ. ದುಡ್ಡೇ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ. ಮೀನುಗಾರರಿಗೆ ನನ್ನ ಮನೆ ಮನಸ್ಸಿನ ಬಾಗಿಲು ಸದಾ ತರೆದಿರುತ್ತದೆ. ನಾನು ಮೊಗವೀರ ಸಮುದಾಯದ ಜೊತೆ ಇದ್ದೇನೆ ಎಂದು ಉಡುಪಿಯ ಉಚ್ಚಿಲದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಉಚ್ಚಿಲ ಮಹಾಲಕ್ಷ್ಮಿ ದೇವಾಲಯಕ್ಕೆ ಸಿಎಂ ಭೇಟಿ ನೀಡಿ ಸಿಎಂ ಬಸವರಾಜ್ ಬೊಮ್ಮಾಯಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೂತನ ದೇವಾಲಯ ವೀಕ್ಷಣೆ ಮಾಡಿದ ಸಿಎಂಗೆ ಸಾರಿಗೆ ಸಚಿವ ‌ಶ್ರೀರಾಮಲು ಸಾಥ್ ಕೊಟ್ಟಿದ್ದಾರೆ.

TV9 Kannada


Leave a Reply

Your email address will not be published.