ಉತ್ತರಾಖಂಡ್​ನಲ್ಲಿ ಮೇ 1ರಿಂದ 14ರವರೆಗೆ 1,618 ಮಕ್ಕಳಲ್ಲಿ ಕೊರೊನಾ ದೃಢ

ಉತ್ತರಾಖಂಡ್​ನಲ್ಲಿ ಮೇ 1ರಿಂದ 14ರವರೆಗೆ 1,618 ಮಕ್ಕಳಲ್ಲಿ ಕೊರೊನಾ ದೃಢ

ಡೆಹ್ರಾಡೂನ್: ಕೊರೊನಾ ಎರಡನೇ ಅಲೆಗೆ ಜನರು ತತ್ತರಿಸಿದ್ದಾರೆ. ಇನ್ನು 3ನೇ ಅಲೆ ಕೂಡ ಬರುವ ಸಂಭವವಿದ್ದು, ಈ ಅಲೆಯಲ್ಲಿ ಹೆಚ್ಚಾಗಿ ಮಕ್ಕಳಿಗೆ ಸೋಂಕು ಬಾಧಿಸಲಿದೆ ಅಂತ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಹೀಗಿರುವಾಗಲೇ ಉತ್ತರಾಖಂಡ್​​ನಲ್ಲಿ ಕಳೆದ 10 ದಿನಗಳಲ್ಲಿ 9 ವರ್ಷಕ್ಕಿಂತ ಕೆಳಗಿನ ಸುಮಾರು ಒಂದು ಸಾವಿರ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದ್ದು, ಎಚ್ಚರಿಕೆಯ ಗಂಟೆ ಬಾರಿಸಿದೆ.

ಕಳೆದ 10 ದಿನಗಳಲ್ಲಿ 1000 ಮಕ್ಕಳಿಗೆ ಸೋಂಕು ತಗುಲಿದೆ ಎಂದು ಸ್ವತಃ ಅಲ್ಲಿನ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ. ಕೆಲವು ಮಕ್ಕಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ಒಂದು ವರ್ಷದಿಂದ ಉತ್ತರಾಖಂಡ್​​ನಲ್ಲಿ ಒಟ್ಟಾರೆ 2,132 ಮಕ್ಕಳಿಗೆ ಸೋಂಕು ತಗುಲಿದೆ. ಅದ್ರಲ್ಲಿ ಕಳೆದ ಏಪ್ರಿಲ್​​​​ 1ರಿಂದ 15ರ ನಡುವೆಯೇ 264 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಏಪ್ರಿಲ್ 16ರಿಂದ 30ನೇ ತಾರೀಖಿನವರೆಗೆ 1053 ಕೇಸ್​ಗಳು ಹಾಗೂ ಮೇ 1 ರಿಂದ 14ನೇ ತಾರೀಖೀನವರೆಗೆ ಬರೋಬ್ಬರಿ 1618 ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ರಾಜ್ಯದಲ್ಲಿ ಪ್ರತಿ 1 ಲಕ್ಷ ಜನರಿಗೆ 771 ಸಕ್ರಿಯ ಕೊರೊನಾ ಪ್ರಕರಣಗಳಿವೆ. ರಾಜ್ಯ ಸರ್ಕಾರ ಕೊರೊನಾ ಪರೀಕ್ಷೆಗಳನ್ನ ನಡೆಸುವಲ್ಲಿ ಹಾಗೂ ಮರಣ ಪ್ರಮಾಣ ತಗ್ಗಿಸುವಲ್ಲಿ ವಿಫಲವಾಗಿದೆ ಎಂದು ಸೋಶಿಯಲ್ ಡೆವಲಪ್​ಮೆಂಟ್​ ಫಾರ್​ ಕಮ್ಯೂನಿಟೀಸ್​ ಫೌಂಡೇಷನ್​ನ ಅಧ್ಯಕ್ಷ ಅನೂಪ್ ನೌಟಿಯಾಲ್ ಆರೋಪಿಸಿದ್ದಾರೆ .

ಅಂದ್ಹಾಗೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಉತ್ತರಾಖಂಡ್​ನಲ್ಲಿ ಪ್ರಸ್ತುತ 79, 379 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ರಾಜ್ಯದಲ್ಲಿ 4426 ಸೋಂಕಿತರು ಮೃತಪಟ್ಟಿದ್ದಾರೆ.

ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಅಪಾಯವಿರೋದ್ರಿಂದ ಪೋಷಕರು ಆದಷ್ಟು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಿದೆ. ಮಕ್ಕಳಿಗೆ ಕರೊನಾ ಬಗ್ಗೆ ಅರಿವು ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನ ಪಾಲಿಸುವಂತೆ ಉತ್ತೇಜಿಸಬೇಕು ಅಂದ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ರೂಪಾಂತರಿ ವೈರಸ್​​ನಿಂದ ಮಕ್ಕಳನ್ನ ರಕ್ಷಿಸಿಕೊಳ್ಳೋದು ಹೇಗೆ? ಇಲ್ಲಿದೆ ತಜ್ಞರ ಸಲಹೆ

The post ಉತ್ತರಾಖಂಡ್​ನಲ್ಲಿ ಮೇ 1ರಿಂದ 14ರವರೆಗೆ 1,618 ಮಕ್ಕಳಲ್ಲಿ ಕೊರೊನಾ ದೃಢ appeared first on News First Kannada.

Source: newsfirstlive.com

Source link