ಉತ್ತರಾಖಂಡ್​​ನಲ್ಲಿ ಪ್ರಧಾನಿ ಮೋದಿ V/S ರಾಹುಲ್ ಗಾಂಧಿ; ಚುನಾವಣಾ ಪ್ರಚಾರದ ಹೊತ್ತಲ್ಲಿ ಬಿಪಿನ್​ ರಾವತ್​ರನ್ನು ಸ್ಮರಿಸಿದ ಪ್ರಧಾನಮಂತ್ರಿ | PM Modi and Rahul Gandhi addressed rally in Uttarakhand ahead of Assembly Election 2022


ಉತ್ತರಾಖಂಡ್​​ನಲ್ಲಿ ಪ್ರಧಾನಿ ಮೋದಿ V/S ರಾಹುಲ್ ಗಾಂಧಿ; ಚುನಾವಣಾ ಪ್ರಚಾರದ ಹೊತ್ತಲ್ಲಿ ಬಿಪಿನ್​ ರಾವತ್​ರನ್ನು ಸ್ಮರಿಸಿದ ಪ್ರಧಾನಮಂತ್ರಿ

ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ

ಫೆ.14ರಂದು ಉತ್ತರಾಖಂಡ್​ನಲ್ಲಿ ವಿಧಾನಸಭೆ ಚುನಾವಣೆ (Uttarakhand Election 2022) ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿ ಚುನಾವಣಾ ಪ್ರಚಾರ ನಡೆಸಿದರು, ಉತ್ತರಾಖಂಡ್​​ನ ಶ್ರೀನಗರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಲಿಕಾಪ್ಟರ್​ ದುರಂತದಲ್ಲಿ ಮಡಿದ ಸಿಡಿಎಸ್ ಬಿಪಿನ್​ ರಾವತ್​ರನ್ನು ನೆನಪಿಸಿಕೊಂಡರು. ಹಾಗೇ, ಪ್ರತಿಪಕ್ಷ ಕಾಂಗ್ರೆಸ್​ ಬಿಪಿನ್​ ರಾವತ್ ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಅದಕ್ಕೆ ತಕ್ಕ ಶಾಸ್ತಿ ಮಾಡಬೇಕು. ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್​ಗೆ ಪಾಠ ಕಲಿಸಬೇಕು ಎಂದು ಹೇಳಿದರು. 

ಹಿಂದೆ ಬಿಪಿನ್​ ರಾವತ್​ ನೇತೃತ್ವದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಕಾಂಗ್ರೆಸ್ ಅದನ್ನು ಅನುಮಾನಿಸಿತ್ತು. ಈ ಮೂಲಕ ಬಿಪಿನ್​ ರಾವತ್​ರಿಗೆ ಅವಮಾನ ಮಾಡಿತ್ತು.  ಆದರೆ ಈಗ ಅವರ ಹೆಸರು ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದ ಪ್ರಧಾನಿ ಮೋದಿ,  ಸಿಡಿಎಸ್ ಆಗಿದ್ದ ರಾವತ್​ ಅವರು ಪೌರಿ ಗರ್ವಾಲ್​​ನ ಧೀರ ಪುತ್ರ.  ಉತ್ತರಾಖಂಡ್​ ಜನರಿಗೆ ಪರ್ವತದಷ್ಟು ಧೈರ್ಯ ಮಾತ್ರವಲ್ಲ, ಹಿಮಾಲಯದಷ್ಟು ಉನ್ನತವಾದ ಚಿಂತನೆಯನ್ನು ಹೊಂದಿರುತ್ತಾರೆ ಎಂದು ತೋರಿಸಿಕೊಟ್ಟವರು ಎಂದು ಹೇಳಿದರು. ಹಾಗೇ, ಉತ್ತರಾಖಂಡ್ ಅಭಿವೃದ್ಧಿಗಾಗಿ ಕೇಂದ್ರ ಬಿಜೆಪಿ ಮತ್ತು ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದರು.

ನನಗೆ ಪ್ರಧಾನಿ ಮೋದಿಯವರ ಬಗ್ಗೆ ಯಾವ ಭಯವೂ ಇಲ್ಲ: ರಾಹುಲ್ ಗಾಂಧಿ

ಇನ್ನೊಂದೆಡೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಇಂದು ಉತ್ತರಾಖಂಡ್​ನಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಹರಿದ್ವಾರ ಜಿಲ್ಲೆಯ ಮಂಗಳೌರ್​​ನಲ್ಲಿ ರ್ಯಾಲಿ ನಡೆಸಿದ ರಾಹುಲ್ ಗಾಂಧಿ,  ಪ್ರಧಾನಿ ಮೋದಿಯವರು ಇತ್ತೀಚೆಗೆ ಒಂದು ಸಂದರ್ಶನ ಕೊಟ್ಟಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿಯವರು ಮಾತು ಕೇಳುವುದಿಲ್ಲ ಎಂದಿದ್ದಾರೆ. ನಾನ್ಯಾಕೆ ಅವರ ಮಾತು ಕೇಳಬೇಕು. ನಾನು ಅವರ ಮಾತನ್ನು ಕೇಳುವುದಿಲ್ಲ ಎಂಬುದು ಸತ್ಯ ಕೂಡ. ನನಗೆ ಅವರ ಬಗ್ಗೆಯಾಗಲೀ, ಅವರು ಉಪಯೋಗಿಸುವ ಅಸ್ತ್ರಗಳಾದ ಸಿಬಿಐ, ಇಡಿ ಬಗ್ಗೆಯಾಗಲೀ ಯಾವ ಭಯವೂ ಇಲ್ಲ ಎಂದರು ಹೇಳಿದರು. ಅಲ್ಲದೆ, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಮುಖ್ಯ ಕಾರಣ, ರೈತರ ಹೋರಾಟ ಮತ್ತು ಕಾಂಗ್ರೆಸ್ ಎಂದು ರಾಹುಲ್​ ಗಾಂಧಿ ಹೇಳಿದರು.

TV9 Kannada


Leave a Reply

Your email address will not be published.